ಸೆರ್ಕಾಂಗ್ ರಿನ್‌ಪೋಚೆ ಅವರೊಂದಿಗಿನ ನನ್ನ ಮೊದಲ ಭೇಟಿ ಮತ್ತು ಅವರ ಆರಂಭಿಕ ಸಲಹೆ
ನಾನು ಜನವರಿ 1970 ರಲ್ಲಿ ಬೋಧ್ಗಯಾದಲ್ಲಿ ಮೊದಲ ಬಾರಿಗೆ ಸೆರ್ಕಾಂಗ್ ರಿನ್‌ಪೋಚೆ ಅವರನ್ನು ಭೇಟಿಯಾದೆ. ಗೆಶೆ ವಾಂಗ್ಯಾಲ್ ಅವರ ಮಾರ್ಗದರ್ಶನದಲ್ಲಿ ಅಮೆರಿಕದಲ್ಲಿ ಇಂಗ್ಲಿಷ್ ಅಧ್ಯಯನ ಮಾಡಿದ ಇಬ್ಬರು ಯುವ ಪುನರ್ಜನ್ಮ ಲಾಮಾಗಳಾದ ಶಾರ್ಪಾ ಮತ್ತು ಖಮ್ಲುಂಗ್ ರಿನ್‌ಪೋಚೆ ಅವರನ್ನು ನನಗೆ ಶಿಫಾರಸು ಮಾಡಿದ್ದರು. ಗುಹ್ಯಸಮಾಜ (ಗುಪ್ತ ಅಂಶಗಳ ಜೋಡಣೆ) ಅನ್ನು ಅಧ್ಯಯನ ಮಾಡಲು ಅತ್ಯಂತ ಸೂಕ್ತವಾದ ಗುರುವಿಗೆ ಸೆರ್ಕಾಂಗ್ ರಿನ್‌ಪೋಚೆ ನನ್ನನ್ನು ನಿರ್ದೇಶಿಸಲು ಸಾಧ್ಯವಾಯಿತು. ಪದವಿ ಸೆಮಿನಾರ್‌ನಲ್ಲಿನ ಮುಖ್ಯ ಪಠ್ಯದ ರಹಸ್ಯಮಯವಾದ ಒಂದು ಸಣ್ಣ ಭಾಗದ ಸಂಸ್ಕೃತ ಮತ್ತು ಟಿಬೆಟಿಯನ್ ಆವೃತ್ತಿಗಳನ್ನು ಹೋಲಿಸಿದ ನಂತರ ನಾನು ಈ ಸಂಕೀರ್ಣ ತಂತ್ರ ವ್ಯವಸ್ಥೆಯನ್ನು ನನ್ನ ಪಿಎಚ್‌ಡಿ ಪ್ರಬಂಧದ ವಿಷಯವಾಗಿ ಆರಿಸಿಕೊಂಡೆ.
ನನ್ನ ಭಾಷಾಶಾಸ್ತ್ರದ ಅಧ್ಯಯನಗಳು ಅಂತಹ ಮುಂದುವರಿದ ಅಧ್ಯಯನಕ್ಕೆ ನನ್ನನ್ನು ಸಂಪೂರ್ಣವಾಗಿ ಸಿದ್ಧಗೊಳಿಸದಿದ್ದರೂ, ಸೆರ್ಕಾಂಗ್ ರಿನ್‌ಪೋಚೆ ನನ್ನನ್ನು ಗಂಭೀರವಾಗಿ ಪರಿಗಣಿಸಿದರು. ಅವರು ಕೆಂಜುರ್ ಯೆಶೆ ಡೊಂಡ್ರಬ್ - ಇವರು ಹಲವು ವರ್ಷಗಳ ನಂತರ ಗೆಲುಗ್ ಸಂಪ್ರದಾಯದ ಮುಖ್ಯಸ್ಥರಾದರು – ಅವರನ್ನು ನನಗೆ ಸೂಚಿಸಿದರು. ರಿನ್‌ಪೋಚೆ ಅಂತಹ ಪ್ರಸಿದ್ಧ ಗುರುವನ್ನು ನನಗಾಗಿ ಆಯ್ಕೆ ಮಾಡಿಕೊಟ್ಟಿದ್ದಕ್ಕೆ ಅವರು ನನ್ನನ್ನು ಗೌರವಿಸಿದಂತೆ ಭಾಸವಾಯಿತು.
ಡಾಲ್ಹೌಸಿಯಲ್ಲಿ ಗೆಶೆ ನ್ಗಾವಾಂಗ್ ಧರ್ಗ್ಯೆ ಅವರೊಂದಿಗೆ ಅಧ್ಯಯನ
ಹಲವಾರು ತಿಂಗಳುಗಳ ನಂತರ, ಧರ್ಮಶಾಲಾದ ಬಳಿಯ ಪರ್ವತ ಗ್ರಾಮವಾದ ಡಾಲ್ಹೌಸಿಯ ಮೇಲಿರುವ ಅವರ ಸಣ್ಣ ಮಣ್ಣು ಮತ್ತು ಸಗಣಿಯ ಗುಡಿಸಲಿನಲ್ಲಿ ನಾನು ಮಠಾಧೀಶರನ್ನು ಭೇಟಿಯಾದೆ, ಅಲ್ಲಿ ಗ್ಯುಟೊ ಮಠವಿತ್ತು, ಆದ್ದರಿಂದ ನಾನು ಅಲ್ಲಿಯೇ ತಂಗಿದ್ದೆ. ಆ ವಿನಮ್ರ ವೃದ್ಧ ಸನ್ಯಾಸಿ ಸತತ ಎರಡು ಮೂರು ವರ್ಷಗಳ ಕಾಲ ಏಕಾಂತವಾಸದ ಧ್ಯಾನವನ್ನು ಪೂರ್ಣಗೊಳಿಸಿದ್ದರು. ನನಗೆ ಕಲಿಸುವಂತೆ ನಾನು ಅವರನ್ನು ಕೇಳಿಕೊಂಡಾಗ, ಮಠಾಧೀಶರು ತಕ್ಷಣವೇ ಒಪ್ಪಿಕೊಂಡರು. ನಾನು ಸರಿಯಾದ ಕ್ಷಣದಲ್ಲಿ ಬಂದಿದ್ದೇನೆ ಎಂದು ಅವರು ನನಗೆ ಹೇಳಿದರು. ಅವರು ಮರುದಿನ ಗುಹ್ಯಸಮಾಜ ವ್ಯವಸ್ಥೆಯಲ್ಲಿ ಮೂರು ವರ್ಷಗಳ ತೀವ್ರ ಏಕಾಂತವಾಸವನ್ನು ಪ್ರಾರಂಭಿಸಲಿದ್ದರು. ನಾನು ಅವರನ್ನು ಸೇರಲು ಬಯಸುವನೇ? ಎಂದು ಕೇಳಿದರು. ನಿಸ್ಸಂದೇಹವಾಗಿ ನಾನು ನಿರಾಕರಿಸಬೇಕಾಗಿತ್ತು, ಆದರೆ ರಿನ್‌ಪೋಚೆ ಶಾಸ್ತ್ರೀಯ ಬೌದ್ಧ ರೀತಿಯಲ್ಲಿ ಪ್ರಸ್ತುತಪಡಿಸಿದ ಪಾಠವನ್ನು ನಾನು ಕಲಿತೆ. ಸತ್ಯವನ್ನು ನಾನೇ ಅರಿತುಕೊಳ್ಳುವಂತೆ ರಿನ್‌ಪೋಚೆ ನನಗೆ ಸಂದರ್ಭಗಳನ್ನು ಸ್ಥಾಪಿಸಿದ್ದರು. ಈ ಅತ್ಯಂತ ಸುಧಾರಿತ ತಂತ್ರವನ್ನು ಅಧ್ಯಯನ ಮಾಡಲು ಮತ್ತು ಅಭ್ಯಾಸ ಮಾಡಲು, ನಾನು ಮೊದಲಯ ಹೆಜ್ಜಯಿಂದ ಪ್ರಾರಂಭಿಸಬೇಕಾಗಿತ್ತು.
ಶೀಘ್ರದಲ್ಲೇ ನಾನು ನನ್ನ ಪ್ರಬಂಧದ ವಿಷಯವನ್ನು ಹೆಚ್ಚು ಸಾಧಾರಣ ವಿಷಯಕ್ಕೆ ಬದಲಾಯಿಸಿದೆ - ಲ್ಯಾಮ್-ರಿಮ್‌ನ ಮೌಖಿಕ ಸಂಪ್ರದಾಯ, ಮಾರ್ಗದ ಕ್ರಮವಾದ ಹಂತಗಳು - ಮತ್ತು ಶಾರ್ಪಾ ಮತ್ತು ಖಮ್ಲುಂಗ್ ರಿನ್‌ಪೋಚೆ ಅವರ ಶಿಕ್ಷಕ ಗೆಶೆ ನ್ಗಾವಾಂಗ್ ಧರ್ಗ್ಯೆ ಅವರೊಂದಿಗೆ ಮೂಲಭೂತ ವಿಷಯಗಳನ್ನು ಅಧ್ಯಯನ ಮಾಡುವಂತೆ ವ್ಯವಸ್ಥೆ ಮಾಡಿದೆ. ಗೆಶೆ ಎಂಬುದು ಪಿಎಚ್‌ಡಿಗೆ ಸರಿಸುಮಾರು ಸಮಾನವಾದ ಸನ್ಯಾಸಿ ಪದವಿಯಾಗಿದೆ ಮತ್ತು ನುರಿತ ಗುರುವಾಗಿ ಗೆಶೆ ಧರ್ಗ್ಯೆ ಅವರ ಕೌಶಲ್ಯವು ಅವರಿಗೆ ಐದು ಹದಿಹರೆಯದ ಪುನರ್ಜನ್ಮ ಲಾಮಾಗಳಿಗೆ ಬೋಧಕ ಸ್ಥಾನವನ್ನು ಗಳಿಸಿಕೊಟ್ಟಿತು. ಆ ಸಮಯದಲ್ಲಿ, ಗೆಶೆ ಧರ್ಗ್ಯೆ ನೊಣಗಳಿಂದ ತುಂಬಿದ ಗೋಶಾಲೆಯೊಂದರಲ್ಲಿ ವಾಸಿಸುತ್ತಿದ್ದರು. ಅದು ತುಂಬಾ ಚಿಕ್ಕದಾಗಿದ್ದು, ಅವರ ಹಾಸಿಗೆ ಮಾತ್ರ ಹಾಸುವಷ್ಟು, ಮೂರು ಜನರು ನೆಲದ ಮೇಲೆ ಕಿಕ್ಕಿರಿದು ಕುಳಿತುಕೊಳ್ಳಲು ಸ್ಥಳಾವಕಾಶವಿತ್ತು. ಅವರು ವಾಸಿಸುತ್ತಿದ್ದ ಪರಿಸ್ಥಿತಿಗಳು ನನ್ನನ್ನು ದಂಗೆಬ್ಬಿಸಿದರೂ, ನಾನು ನನ್ನ ಅಧ್ಯಯನಕ್ಕಾಗಿ ತಂಗಿದೆ. ನಾನು ಆಧುನಿಕವಾದ ಮಾತಕತೆಯ ಟಿಬೆಟಿಯನ್ ಅನ್ನು ಸಹ ಕಲಿಯಬೇಕಾಗಿತ್ತು. ಹಾರ್ವರ್ಡ್‌ನಲ್ಲಿ, ನಾನು ಶಾಸ್ತ್ರೀಯ ಲಿಖಿತ ಭಾಷೆಯನ್ನು ಮಾತ್ರ ಅಧ್ಯಯನ ಮಾಡಿದ್ದೆ.
ಮುಂದಿನ ಬಾರಿ ನಾನು ಸೆರ್ಕಾಂಗ್ ರಿನ್‌ಪೋಚೆಯನ್ನು ಭೇಟಿಯಾದದ್ದು ಆ ವರ್ಷದ ಜೂನ್‌ನಲ್ಲಿ. ಆ ಪ್ರದೇಶದಲ್ಲಿ ಭೀಕರ ಕಾಲರಾ ಮತ್ತು ಟೈಫಾಯಿಡ್ ಸಾಂಕ್ರಾಮಿಕ ರೋಗ ಹರಡಿತ್ತು ಮತ್ತು ಪರಮಪೂಜ್ಯರು ರಿನ್‌ಪೋಚೆ ಅವರನ್ನು ಹಯಗ್ರೀವ ಸಬಲೀಕರಣವನ್ನು ನೀಡಲು ಡಾಲ್ಹೌಸಿಗೆ ಬರುವಂತೆ ಕೇಳಿಕೊಂಡಿದ್ದರು. ನೈರ್ಮಲ್ಯದೊಂದಿಗೆ, ಈ ಬಲಶಾಲಿ ಬುದ್ಧ-ಮೂರ್ತಿಯ ಅಭ್ಯಾಸವು ಜನರನ್ನು ಸೋಂಕಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿತು. ದೀಕ್ಷೆ ಪಡೆದ ಬೆರಳೆಣಿಕೆಯಷ್ಟು ಪಾಶ್ಚಿಮಾತ್ಯರಲ್ಲಿ ನಾನು ಒಬ್ಬನಾಗಿದ್ದರೂ, ರಿನ್‌ಪೋಚೆಯನ್ನು ಖಾಸಗಿಯಾಗಿ ಭೇಟಿಯಾಗಲು ಅವಕಾಶವಿರಲಿಲ್ಲ. ಈ ಸಬಲೀಕರಣವನ್ನು ನೀಡಲು ಅವರು ಬೇರೆ ಜಾಗಗಳಿಗೆ ಹೋಗಬೇಕಾಗಿತ್ತು ಮತ್ತು ಡಾಲ್ಹೌಸಿಯನ್ನು ಜಲ್ದಿಯಲ್ಲಿ ಬಿಟ್ಟರು.
ವಿಶ್ವವಿದ್ಯಾಲಯ ಪ್ರಾಧ್ಯಾಪಕರಾಗುವುದನ್ನು ತ್ಯಜಿಸಿ ಧರ್ಮಶಾಲಾಕ್ಕೆ ಸ್ಥಳಾಂತರ
ನಮ್ಮ ಮುಂದಿನ ಭೇಟಿಯ ಹೊತ್ತಿಗೆ, ಅನೇಕ ಬದಲಾವಣೆಗಳು ಸಂಭವಿಸಿದ್ದವು. 1971 ರ ಶರತ್ಕಾಲದಲ್ಲಿ, ಧರ್ಮಶಾಲಾದಲ್ಲಿ ಹೊಸದಾಗಿ ನಿರ್ಮಿಸಲಾದ ಲೈಬ್ರರಿ ಆಫ್ ಟಿಬೆಟಿಯನ್ ವರ್ಕ್ಸ್ & ಆರ್ಕೈವ್ಸ್‌ನಲ್ಲಿ ವಿದೇಶಿಯರಿಗೆ ಬೌದ್ಧಧರ್ಮವನ್ನು ಕಲಿಸುವಂತೆ ಪರಮಪೂಜ್ಯರು ಗೆಶೆ ಧರ್ಗ್ಯೆ ಅವರನ್ನು ಕೇಳಿದರು. ಶಾರ್ಪಾ ಮತ್ತು ಖಮ್ಲುಂಗ್ ರಿನ್‌ಪೋಚೆ ಅವರ ವ್ಯಾಖ್ಯಾನಕಾರರಾಗಿ ಸೇರಿಕೊಂಡರು. ನಾನು ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಬಹುದೇ, ಪಠ್ಯಗಳನ್ನು ಅನುವಾದಿಸಬಹುದೇ ಎಂದು ಕೇಳಿಕೊಂಡೆ ಮತ್ತು ಪರಮಪೂಜ್ಯರು ಒಪ್ಪಿದರು. ಮೊದಲು, ನಾನು ನನ್ನ ಪ್ರಬಂಧವನ್ನು ಸಲ್ಲಿಸಬೇಕು, ನನ್ನ ಡಾಕ್ಟರೇಟ್ ಪಡೆಯಬೇಕು ಮತ್ತು ನಂತರ ಹಿಂತಿರುಗಬೇಕಿತ್ತು. ಆಗ ತಾನೆ ಪಾಕಿಸ್ತಾನದೊಂದಿಗೆ ನೂರು ಮೈಲುಗಳಿಗಿಂತ ಕಡಿಮೆ ದೂರದಲ್ಲಿ ಭುಗಿಲೆದ್ದ ಗಡಿ ಯುದ್ಧವು ತಡಮಾಡದೆ ಹೊರಡುವಂತೆ ನನ್ನನ್ನು ಮನವೊಲಿಸಿತು. ನಾನು ಹಾರ್ವರ್ಡ್‌ಗೆ ಹಿಂತಿರುಗಿ ಪರಮಪೂಜ್ಯರ ಸಲಹೆಯನ್ನು ಪಾಲಿಸಿದೆ. ವಿಶ್ವವಿದ್ಯಾನಿಲಯದ ಬೋಧನಾ ವೃತ್ತಿಗೆ ಬೇಡ ಎಂದು ಹೇಳಿ - ಇದು ನನ್ನ ಪ್ರಾಧ್ಯಾಪಕರನ್ನು ಆಶ್ಚರ್ಯಗೊಳಿಸಿತು - ಕೆಲವು ತಿಂಗಳುಗಳ ನಂತರ, ಸೆಪ್ಟೆಂಬರ್ 1972 ರಲ್ಲಿ ನಾನು ಧರ್ಮಶಾಲಾಕ್ಕೆ ತೆರಳಿದೆ.
ರಿನ್ಪೋಚೆ ಅವರ ಶಿಷ್ಯನಾಗುವುದು
ಆಗ ತಾನೆ ಸೆರ್ಕಾಂಗ್ ರಿನ್‌ಪೋಚೆ ಅವರು ಎರಡು ವರ್ಷಗಳ ಕಾಲ ನೇಪಾಳದಲ್ಲಿ ಹೊಸದಾಗಿ ನಿರ್ಮಿಸಲಾದ ಕೆಲವು ಮಠಗಳಿಗೆ ಸಬಲೀಕರಣ ಮತ್ತು ಮೌಖಿಕ ಪ್ರಸರಣಗಳನ್ನು ನೀಡಲೆಂದು ತೆರಳಿದ್ದರು. 1974 ರ ಶರತ್ಕಾಲದಲ್ಲಿ ಅವರು ಧರ್ಮಶಾಲಾಕ್ಕೆ ಹಿಂದಿರುಗಿದಾಗ, ಕೊನೆಗೂ ಅವರೊಂದಿಗೆ ನೇರವಾಗಿ ಸಂವಹನ ನಡೆಸುವಷ್ಟು ಚೆನ್ನಾಗಿ ಟಿಬೆಟಿಯನ್ ಭಾಷೆಯನ್ನು ನಾನು ಮಾತನಾಡಬಹುದಾಗಿತ್ತು. ಮೊದಲಿಗೆ ನನಗೆ ಅದರ ಅರಿವಿಲ್ಲದಿದ್ದರೂ, ಅವರ ಅನುವಾದಕನಾಗಲು ನನಗೆ ಕರ್ಮ ಸಂಬಂಧವಿದೆ ಎಂದು ರಿನ್‌ಪೋಚೆಗೆ ತಿಳಿದಿರುವಂತಿತ್ತು. ಅವರು ನನ್ನನ್ನು ಆಗಾಗ್ಗೆ ಭೇಟಿ ಮಾಡಲು ಮತ್ತು ವಿವಿಧ ಜನರನ್ನು ಭೇಟಿಯಾಗುವಾಗ ಪಕ್ಕದಲ್ಲಿ ಕುಳಿತುಕೊಳ್ಳಲು ಪ್ರೋತ್ಸಾಹಿಸುವ ಮೂಲಕ ಇದನ್ನು ಸೂಚಿಸಿದರು. ಅಪಾಯಿಂಟ್‌ಮೆಂಟ್‌ಗಳ ನಡುವೆ, ರಿನ್‌ಪೋಚೆ ನನ್ನೊಂದಿಗೆ ಮಾತನಾಡುತ್ತಿದ್ದರು ಮತ್ತು ಸಂಭಾಷಣೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಖಚಿತಪಡಿಸಿಕೊಳ್ಳಲು ಟಿಬೆಟಿಯನ್ ಭಾಷೆಯಲ್ಲಿ ವಿಭಿನ್ನ ಪದಗಳನ್ನು ವಿವರಿಸುತ್ತಿದ್ದರು.
ಸ್ವಲ್ಪ ಸಮಯದ ನಂತರ, ರಿನ್ಪೋಚೆ ಅವರು ಸ್ಪಿತಿಯ ಜನರು ಅವರಿಗೆ ಆಗ ತಾನೆ ನೀಡಿದ್ದ ಬಿಳಿ ಮಂಜುಶ್ರೀ, ಬಿಳಿ ಸರಸ್ವತಿ ಮತ್ತು ಬಿಳಿ ತಾರಾ ಅವರ ಮೂರು ಭವ್ಯವಾದ ಸುರುಳಿ-ವರ್ಣಚಿತ್ರಗಳ ಗುಂಪನ್ನು ಉಡುಗೊರೆಯಾಗಿ ನನಗೆ ನೀಡಿದರು. ಈ ಬುದ್ಧ-ಆಕೃತಿಗಳು ಬಾಲ್ಯದಿಂದಲೂ ಅವರ ವೈಯಕ್ತಿಕ ಬೆಳವಣಿಗೆ ಮತ್ತು ಧ್ಯಾನ ಅಭ್ಯಾಸದ ಕೇಂದ್ರಬಿಂದುವಾಗಿದ್ದವು. ಕ್ರಮವಾಗಿ, ಅವು ಇತರರಿಗೆ ಸಹಾಯ ಮಾಡುವ ಮನಸ್ಸಿನ ಸ್ಪಷ್ಟತೆ, ಸ್ಪಷ್ಟ ಮತ್ತು ಸೃಜನಶೀಲ ಸಾಹಿತ್ಯ ಅಭಿವ್ಯಕ್ತಿಗೆ ಅದ್ಭುತ ಒಳನೋಟ ಮತ್ತು ದೀರ್ಘ ಮತ್ತು ಫಲದಾಯಕ ಜೀವನಕ್ಕೆ ಬೇಕಾದ ಪ್ರಮುಖ ಶಕ್ತಿಯನ್ನು ಒಳಗೊಂಡಿವೆ. ಈ ಆಳವಾದ ಪ್ರಸ್ತುತವು ನಮ್ಮ ಸಂಬಂಧವನ್ನು ದೃಢಪಡಿಸಿತು. ನಾನು ರಿನ್‌ಪೋಚೆ ಅವರನ್ನು ಅವರ ಶಿಷ್ಯನಾಗಬಹುದೇ ಎಂದು ಕೇಳಿದಾಗ, ಸ್ಪಷ್ಟವಾಗಿರುವುದನ್ನು ಮೌಖಿಕವಾಗಿ ಹೇಳಬೇಕಾದ ನನ್ನ ಪಾಶ್ಚಿಮಾತ್ಯ ಅಭ್ಯಾಸವನ್ನು ನೋಡಿ ಅವರು ತಾಳ್ಮೆಯಿಂದ ಮುಗುಳ್ನಕ್ಕರು.
ಅನುವಾದಕ ಮತ್ತು ಶಿಕ್ಷಕನಾಗಲು ನನ್ನ ತರಬೇತಿ
ನಂತರ ರಿನ್ಪೋಚೆ ಅವರು ಎಂದಿಗೂ ಮೌಖಿಕವಾಗಿ ಹೇಳದೆ, ಅನುವಾದಕರಾಗಲು ವ್ಯವಸ್ಥಿತವಾಗಿ ನನಗೆ ತರಬೇತಿ ನೀಡಲು ಪ್ರಾರಂಭಿಸಿದರು. ಮೊದಲು, ಅವರು ನನ್ನ ಸ್ಮರಣೆಯ ಮೇಲೆ ಕೆಲಸ ಮಾಡಿದರು. ನಾನು ಭೇಟಿ ನೀಡಿದಾಗಲೆಲ್ಲಾ, ಅನಿರೀಕ್ಷಿತ ಕ್ಷಣಗಳಲ್ಲಿ ರಿನ್‌ಪೋಚೆ ಅವರು ಹೇಳಿದ್ದನ್ನು ಪದಕ್ಕೆ ಪದ ಪುನರಾವರ್ತಿಸಲು ನನ್ನನ್ನು ಕೇಳುತ್ತಿದ್ದರು. ಅದೇ ರೀತಿ, ನಾನು ಹೇಳಿದ್ದನ್ನು ಪುನರಾವರ್ತಿಸಲು ಅವರು ನನ್ನನ್ನು ಕೇಳುತ್ತಿದ್ದರು. 1975 ರ ಶರತ್ಕಾಲದಲ್ಲಿ ನಾನು ಅವರಿಗಾಗಿ ಅರ್ಥೈಸಲು ಪ್ರಾರಂಭಿಸಿದಾಗ, ಯಾವುದೇ ತಪ್ಪುಗಳು, ಸೇರ್ಪಡೆಗಳು ಅಥವಾ ಲೋಪಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಿನ್‌ಪೋಚೆ ತಮ್ಮ ಪದಗಳನ್ನು ಟಿಬೆಟಿಯನ್ ಭಾಷೆಗೆ ಅನುವಾದಿಸುವಂತೆ ನನ್ನನ್ನು ಕೇಳುತ್ತಿದ್ದರು. ನಾನು ಅವರ ಅನುವಾದಕನಾಗಿ ಸೇವೆ ಸಲ್ಲಿಸಿದ ಎಂಟು ವರ್ಷಗಳಲ್ಲಿ, ರಿನ್‌ಪೋಚೆ ನನ್ನನ್ನು ಈ ರೀತಿ ಭಾಷಾಂತರಿಸುವಂತೆ ಕೇಳಿದಾಗಲೆಲ್ಲಾ, ಅವರು ಹೇಳಿದ್ದನ್ನು ನಾನು ಯಾವಾಗಲೂ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೆ ಎಂದು ನನಗೆ ಅನಿಸುತ್ತಿತ್ತು. ನಾನು ತಪ್ಪು ಮಾಡುವ ಕ್ಷಣಗಳು ರಿನ್‌ಪೋಚೆ ಅವರಿಗೆ ತಿಳಿದಿರುವಂತೆ ತೋರುತ್ತಿತ್ತು.
ನಂತರ ರಿನ್ಪೋಚೆ ಅವರು ಅವಧಿಗಳ ಕೊನೆಯಲ್ಲಿ ಅವರ ಬೋಧನೆಗಳ ಐದು ನಿಮಿಷಗಳ ಸಾರಾಂಶವನ್ನು ನೀಡಲು ಪ್ರಾರಂಭಿಸಿದರು, ನಂತರ ಸಾರಾಂಶ ನೀಡುವ ಸರದಿ ನನ್ನದಾಗಿದೆ ಎಂದು ಹೇಳುತ್ತಿದ್ದರು. ಈ ರೀತಿಯಾಗಿ, ಅವರು ನನಗೆ ಬಹಳ ದೀರ್ಘ ಭಾಷಣಗಳನ್ನು ಅನುವಾದಿಸಲು ಮಾತ್ರವಲ್ಲದೆ ಕಲಿಸಲು ಸಹ ತರಬೇತಿ ನೀಡಲು ಪ್ರಾರಂಭಿಸಿದರು. ಕೆಲವೊಮ್ಮೆ, ನಾನು ನನ್ನ ಸಾರಾಂಶಗಳನ್ನು ಮಾಡುವಾಗ ಅವರು ತಮ್ಮ ಸಹಾಯಕರೊಂದಿಗೆ ಮಾತನಾಡುತ್ತಿದ್ದರು, ನನ್ನ ಏಕಾಗ್ರತೆಯ ಸಾಮರ್ಥ್ಯಗಳನ್ನು ಪ್ರಶ್ನಿಸುತ್ತಿದ್ದರು. ಒಬ್ಬ ಒಳ್ಳೆಯ ಶಿಕ್ಷಕ ಹೊರಗಿನ ಶಬ್ದದಿಂದ ವಿಚಲಿತನಾಗಬಾರದು ಅಥವಾ ನರಳಬಾರದು.
ನನ್ನ ಸ್ಮರಣೆಯ ತರಬೇತಿ
ರಿನ್‌ಪೋಚೆ ನನಗೆ ಖಾಸಗಿಯಾಗಿ ಕಲಿಸಿದಾಗ, ಅವರು ನನಗೆ ಯಾವುದೇ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಎಂದಿಗೂ ಬಿಡುತ್ತಿರಲಿಲ್ಲ. ನಾನು ಎಲ್ಲವನ್ನೂ ನೆನಪಿಟ್ಟುಕೊಂಡು, ನಂತರ ಬರೆಯಬೇಕಾಗಿತ್ತು. ತದನಂತರ, ರಿನ್‌ಪೋಚೆ ನನ್ನ ಪಾಠಗಳ ನಂತರವೇ ಅಸಂಖ್ಯಾತ ಕಾರ್ಯಗಳನ್ನು ಮುಗಸುವಂತೆ ಹೇಳುತ್ತಿದ್ದರು, ಇದರಿಂದ ನನ್ನ ಟಿಪ್ಪಣಿಗಳನ್ನು ರಾತ್ರಿ ಹೊತ್ತು, ಎಲ್ಲಾ ಮುಗಿದ ನಂತರ ಮಾತ್ರವೇ ಬರೆಯಲು ಸಾಧ್ಯವಾಯಿತು. ಕೊನೆಯಲ್ಲಿ, ನಾನು ಭಾಷಾಂತರಿಸುತ್ತಿದ್ದ ಬೋಧನೆಯ ಸಮಯದಲ್ಲಿ ರಿನ್‌ಪೋಚೆ ಕೆಲವೊಮ್ಮೆ ವಿರಾಮಗೊಂಡು ಅದರ ಜೊತೆಗೆ, ಸಂಪೂರ್ಣವಾಗಿ ವಿಭಿನ್ನವಾದ ವಿಷಯದ ಕುರಿತು ಖಾಸಗಿಯಾಗಿ ವಿವರಿಸುತ್ತಿದ್ದರು. ನಂತರ, ಅವರ ಮಾತುಗಳ ಬಗ್ಗೆ ಯೋಚಿಸಲು ಅಥವಾ ಬರೆಯಲು ನನಗೆ ಒಂದು ಕ್ಷಣದ ಅವಕಾಶವೂ ನೀಡದೆ, ಅವರು ತಮ್ಮ ಮೂಲ ಬೋಧನೆಯನ್ನು ಪುನರಾರಂಭಿಸುತ್ತಿದ್ದರು.
ನಾನು ರಿನ್‌ಪೋಚೆಗೆ ಅವರಿಗೆ ಹಿಂದೆ ನನಗೆ ಹೇಳಿದ್ದ ಯಾವುದಾದರೂ ವಿಷಯದ ಬಗ್ಗೆ ಪ್ರಶ್ನೆಯನ್ನು ಕೇಳಿದರೆ, ನನ್ನ ನೆನಪಿನ ಕೊರತೆಗಾಗಿ ಅವರು ನನ್ನನ್ನು ತೀವ್ರವಾಗಿ ಗದರಿಸುತ್ತಿದ್ದರು. ಒಮ್ಮೆ ಅವರಿಗೆ ಒಂದು ಪದದ ಅರ್ಥವನ್ನು ಕೇಳಿದಾಗ ರಿನ್‌ಪೋಚೆ ತೀಕ್ಷ್ಣವಾಗಿ ಉತ್ತರಿಸಿದರ ನೆನಪಿದೆ, "ಏಳು ವರ್ಷಗಳ ಹಿಂದೆ ನಾನು ಆ ಪದವನ್ನು ನಿನಗೆ ವಿವರಿಸಿದ್ದೆ! ನನಗೆ ಅದು ಸ್ಪಷ್ಟವಾಗಿ ನೆನಪಿದೆ. ನಿನಗೆ ಏಕಿಲ್ಲ?”. ವಾಸ್ತವದಲ್ಲಿ ಅವರಿಗೆ ವಯಸ್ಸಾದಂತೆಲ್ಲ, ಅವರ ಮನಸ್ಸು ಸ್ಪಷ್ಟವಾಗುತ್ತದೆ ಎಂದು ಅವರು ಒಮ್ಮೆ ನನಗೆ ಹೇಳಿದ್ದರು.
ಹೆಚ್ಚು ನಿಖರವಾದ ಅನುವಾದಿತ ಪದಗಳನ್ನು ಹುಡುಕುವಲ್ಲಿ ನನ್ನೊಂದಿಗೆ ಕೆಲಸ ಮಾಡುವುದು
ಸೆರ್ಕಾಂಗ್ ರಿನ್‌ಪೋಚೆ ನನ್ನ ಉತ್ತಮ ಸ್ಮರಣಶಕ್ತಿಯನ್ನು ಬೆಳೆಸುವಲ್ಲಿ ಮಾತ್ರವಲ್ಲದೆ, ನನ್ನ ನಿಖರವಾದ ಅನುವಾದದಲ್ಲಿಯೂ ಆಸಕ್ತಿ ಹೊಂದಿದ್ದರು. ಪಾಶ್ಚಾತ್ಯರಿಗೆ ಕಲಿಸುವಲ್ಲಿನ ಅವರ ಅನುಭವದಿಂದ, ಅವರ ಹೆಚ್ಚಿನ ತಪ್ಪು ತಿಳುವಳಿಕೆಯು, ಕೆಲವು ತಾಂತ್ರಿಕ ಪದಗಳ ತಪ್ಪುದಾರಿಗೆಳೆಯುವ ಅನುವಾದಗಳಿಂದ ಬರುತ್ತದೆ ಎಂದು ಅವರು ಅರಿತುಕೊಂಡರು. ಪರಿಣಾಮವಾಗಿ, ಅವರು ಇಂಗ್ಲಿಷ್‌ನಲ್ಲಿ ಹೊಸ ಪರಿಭಾಷೆಯನ್ನು ಅಭಿವೃದ್ಧಿಪಡಿಸಲು ನನ್ನೊಂದಿಗೆ ಕೆಲಸ ಮಾಡಿದರು. ಅವರು ಪ್ರತಿ ಟಿಬೆಟಿಯನ್ ಪದದ ಅರ್ಥವನ್ನು ತಾಳ್ಮೆಯಿಂದ ವಿವರಿಸುತ್ತಿದ್ದರು, ನಂತರ ಅರ್ಥವನ್ನು ಹೊಂದಿಸಲು ಪ್ರಯತ್ನಿಸಲು ಸಂಭವನೀಯ ಇಂಗ್ಲಿಷ್ ಸಮಾನಾರ್ಥಕಗಳ ಪರಿಣಾಮಗಳ ಬಗ್ಗೆ ಕೇಳುತ್ತಿದ್ದರು. ಅವರು ಯಾವಾಗಲೂ ಹೊಸ ಪದಗಳನ್ನು ಪ್ರಯೋಗಿಸಲು ಮತ್ತು ಅಸಮರ್ಪಕ ಸಂಪ್ರದಾಯಗಳಿಗೆ ಗುಲಾಮನಾಗದಂತಿರಲು ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಸಂಸ್ಕೃತದಿಂದ ಬೌದ್ಧ ಗ್ರಂಥಗಳನ್ನು ಭಾಷಾಂತರಿಸಲು ಬಳಸುವ ಪ್ರಮಾಣಿತ ಟಿಬೆಟಿಯನ್ ಪರಿಭಾಷೆಯು ಶತಮಾನಗಳಲ್ಲಿ ಕ್ರಮೇಣವಾಗಿ ವಿಕಸನಗೊಂಡಿತು. ಪಾಶ್ಚಾತ್ಯ ಭಾಷೆಗಳಿಗೆ ಭಾಷಾಂತರಿಸುವಾಗ ಇದೇ ರೀತಿಯ ಪರಿಷ್ಕರಣಾ ಪ್ರಕ್ರಿಯೆ ಸಂಭವಿಸುವುದು ಸಹಜ.
ನನಗೆ ಸಾಮಾಜಿಕ ಕೌಶಲ್ಯ ಮತ್ತು ನಮ್ರತೆಯನ್ನು ಕಲಿಸುವುದು
ನಾನು ಮೊದಲು ರಿನ್‌ಪೋಚೆ ಅವರನ್ನು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಕೇಳಿದಾಗ, ನಾನು ವಿಶೇಷವಾಗಿ ಕೌಶಲ್ಯಪೂರ್ಣ ವಿಧಾನಗಳನ್ನು ಕಲಿಸುವಂತೆ ವಿನಂತಿಸಿದೆ - ಇತರರಿಗೆ ಸಹಾನುಭೂತಿಯಿಂದ ಮತ್ತು ಬುದ್ಧಿವಂತಿಕೆಯಿಂದ ಹೇಗೆ ಸಹಾಯ ಮಾಡುವುದು ಎಂಬುದು. ನಾನು ಯಾವಾಗಲೂ ಶ್ರೇಷ್ಠತೆ ಹೊಂದಿದ್ದ ಗಣ್ಯ ಶೈಕ್ಷಣಿಕ ಹಿನ್ನೆಲೆಯಿಂದ ಬಂದಿರುವುದರಿಂದ, ನನ್ನ ವೈಯಕ್ತಿಕ ಬೆಳವಣಿಗೆಯು ಏಕಪಕ್ಷೀಯವಾಗಿತ್ತು. ನಾನು ಸಾಮಾಜಿಕ ಕೌಶಲ್ಯ ಮತ್ತು ನಮ್ರತೆಯನ್ನು ಕಲಿಯಬೇಕಾಗಿತ್ತು. ಪರಿಣಾಮವಾಗಿ, ರಿನ್‌ಪೋಚೆ ನನ್ನನ್ನು "ಡಮ್ಮಿ" ಎಂಬ ಒಂದೇ ಹೆಸರಿನಿಂದ ಕರೆದರು ಮತ್ತು ನಾನು ಹೇಳಿದ ಅಥವಾ ಮಾಡಿದ ಮೂರ್ಖತನದ ವಿಷಯ ಅಥವಾ ತಪ್ಪು ವಿಷಯವನ್ನು ತಪ್ಪದೆ ಎತ್ತಿ ತೋರಿಸಿದರು. ಉದಾಹರಣೆಗೆ, ನಾನು ಅನುವಾದಿಸುವಾಗ, ರಿನ್‌ಪೋಚೆ ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದರು. ನಾನು ಎಡವಿ ಬಿದ್ದಾಗಲೆಲ್ಲಾ, ಅದು ಎಷ್ಟು ಸಮಯ ತೆಗೆದುಕೊಂಡಿತು ಅಥವಾ ಅವರು ನನ್ನನ್ನು ಮೂರ್ಖ ಎಂದು ಕರೆದಾಗ ನನಗೆ ಎಷ್ಟು ಮುಜುಗರವಾಯಿತು ಎಂಬುದು ಮುಖ್ಯವಲ್ಲ. ಅವರು ಯಾವುದೇ ಪದವನ್ನು ಸರಿಯಾಗಿ ಅನುವಾದಿಸದೆ ಮತ್ತು ನನ್ನ ತಿಳುವಳಿಕೆಯಿಲ್ಲದೆ ಹಾದುಹೋಗಲು ಬಿಡುತ್ತಿರಲಿಲ್ಲ. ಕಡಿಮೆ ಸ್ವಾಭಿಮಾನದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಅಂತಹ ವಿಧಾನಗಳು ಸೂಕ್ತವಲ್ಲದಿದ್ದರೂ, ಅವರ ರಾಜಿಯಾಗದ ವಿಧಾನವು ನನಗೆ ಸಂಪೂರ್ಣವಾಗಿ ಹೊಂದಿಕೆಯಾಯಿತು.
ಒಮ್ಮೆ, ಫ್ರಾನ್ಸ್‌ನ ಲಾವರ್‌ನಲ್ಲಿ, ರಿನ್‌ಪೋಚೆ ಸಂಕೀರ್ಣ ಪಠ್ಯವೊಂದರ ವ್ಯಾಖ್ಯಾನದ ಕುರಿತು ಪ್ರವಚನ ನೀಡುತ್ತಿದರು. ನಾನು ಅನುವಾದಿಸಲು ಕುಳಿತಾಗ, ವ್ಯಾಖ್ಯಾನದ ಹಲವಾರು ಆವೃತ್ತಿಗಳನ್ನು ಹೋಲಿಸಲು ಮತ್ತು ನಾವು ಮುಂದುವರಿದಂತೆ ಪಠ್ಯವನ್ನು ತಿದ್ದುಪಡಿಗೊಳಿಸುವಂತೆ ರಿನ್‌ಪೋಚೆ ನನ್ನನ್ನು ಕೇಳಿದರು. ನನ್ನ ಬಳಿ ಪೆನ್ನು ಇರಲಿಲ್ಲ, ಆದರೆ ನನ್ನ ಮುಂದೆ ಒಬ್ಬ ಮಹಿಳೆ ಅದ್ಭುತವಾಗಿ ಬಣ್ಣ ಬಳಿದ ಕೆಂಪು ಕೂದಲನ್ನು ಧರಿಸಿ, ಅದ್ದೂರಿಯಾಗಿ ಕೆಂಪು ಲಿಪ್‌ಸ್ಟಿಕ್ ಹಚ್ಚಿಕೊಂಡು, ಬೋಧನೆಯ ಉದ್ದಕ್ಕೂ ಕೆಂಪು ಗುಲಾಬಿಯೊಂದನ್ನು ತನ್ನ ಹಲ್ಲುಗಳಲ್ಲಿ ಹಿಡಿದಿದ್ದಳು. ಯಾರ ಬಳಿಯಾದರೂ ನಾನು ಎರವಲು ಪಡೆಯಬಹುದಾದ ಬಿಡಿ ಪೆನ್ನು ಇದೆಯೇ ಎಂದು ನಾನು ಕೇಳಿದೆ ಮತ್ತು ಅವಳು ನನಗೆ ಅವಳ ಪೆನ್ನು ಕೊಟ್ಟಳು. ಪ್ರವಚನ ಮುಗಿಯುವಷ್ಟರಲ್ಲಿ ನಾನು ಸಂಪೂರ್ಣವಾಗಿ ದಣಿದಿದ್ದೆ. ನಾನು ಎದ್ದು ನಿಂತಾಗ, ಆ ಮಹಿಳೆ ಒಂದು ಮಾತನ್ನೂ ಆಡದೆ ತನ್ನ ಕೈಚಾಚಿದಳು. ನಾನು ನನ್ನಲ್ಲಿಯೇ ಮಗ್ನನಾದ್ದರಿಂದ, ಚೆನ್ನಾಗಿ ಮಾಡಿದ ಕೆಲಸಕ್ಕಾಗಿ ನನ್ನನ್ನು ಅಭಿನಂದಿಸಲು ಅವಳು ನನ್ನ ಕೈ ಕುಲುಕಲು ಬಯಸಿದ್ದಾಳೆಂದು ನಾನು ಭಾವಿಸಿದೆ. ನಾನು ಪ್ರತಿಯಾಗಿ ನನ್ನ ಕೈ ಚಾಚಿದಾಗ, ರಿನ್‌ಪೋಚೆ, "ಡಮ್ಮಿ, ಅವಳ ಪೆನ್ನನ್ನು ಹಿಂತಿರುಗಿಸು!" ಎಂದು ಘರ್ಜಿಸಿದರು.
ಯಾವುದೇ ಹೊಗಳಿಕೆ ಅಥವಾ ಉಡುಗೊರೆಯನ್ನು ಬಯಸದೆ, ಇತರರಿಗೆ ಸಹಾಯ ಮಾಡುವ ಬಗ್ಗೆ ಮಾತ್ರ ಕಾಳಜಿ ವಹಿಸಲು ನನಗೆ ತರಬೇತಿ ನೀಡುವುದು
ನನ್ನ ಸ್ವಾರ್ಥವನ್ನು ತಗ್ಗಿಸಲು, ರಿನ್‌ಪೋಚೆ ಇತರರಿಗಾಗಿ ಮಾತ್ರ ಕೆಲಸಗಳನ್ನು ಮಾಡುವಂತೆ ನನಗೆ ಕಲಿಸಿದರು. ನಾನು ನನಗಾಗಿ ವಿನಂತಿಸಿದ ಯಾವುದೇ ಬೋಧನೆ ಅಥವಾ ಸಬಲೀಕರಣವನ್ನು ನೀಡಲು ಎಂದಿಗೂ ಒಪ್ಪದ ಮೂಲಕ ಅವರು ಹೀಗೆ ಮಾಡಿದರು. ಬೇರೆ ಯಾರಾದರೂ ವಿನಂತಿಸಿದರೆ ಮತ್ತು ನಾನು ಅನುವಾದಕನಾಗಿದ್ದರೆ ಮಾತ್ರ ಅವರು ಒಪ್ಪುತ್ತಿದ್ದರು. ರಿನ್‌ಪೋಚೆ ನನಗೆ ಕಲಿಯಲು ಮುಖ್ಯವೆಂದು ಭಾವಿಸಿದ ವಿಷಯಗಳನ್ನು ಮಾತ್ರ ವೈಯಕ್ತಿಕವಾಗಿ ಕಲಿಸಿದರು.
ಇದಲ್ಲದೆ, ರಿನ್‌ಪೋಚೆ ಎಂದಿಗೂ ನನ್ನ ಮುಖಕ್ಕೆ ನನ್ನನ್ನು ಹೊಗಳಲಿಲ್ಲ, ಆದರೆ ಯಾವಾಗಲೂ ನನ್ನನ್ನು ಗದರಿಸುತ್ತಿದ್ದರು. ಅವರು ಇದನ್ನು ವಿಶೇಷವಾಗಿ ಇತರರ ಮುಂದೆ ಮಾಡಿದರು, ಇದರಿಂದ ನಾನು ಟೀಕೆ ಮತ್ತು ಒತ್ತಡದಿಂದ ವಿಚಲಿತನಾಗುತ್ತಿರಲಿಲ್ಲ. ವಾಸ್ತವದಲ್ಲಿ, ನಮ್ಮ ಮೊದಲ ಪಾಶ್ಚಿಮಾತ್ಯ ಪ್ರವಾಸದ ಕೊನೆಯಲ್ಲಿ, ನನ್ನ ಸಹಾಯಕ್ಕಾಗಿ ರಿನ್‌ಪೋಚೆ ಒಮ್ಮೆ ಮಾತ್ರ ನನಗೆ ಧನ್ಯವಾದ ಹೇಳಿದ್ದು ನನಗೆ ನೆನಪಿದೆ. ಈ ಭಾವನಾತ್ಮಕವಾಗಿ ಶಕ್ತಿಯುತವಾದ ರೀತಿಯಲ್ಲಿ, ರಿನ್‌ಪೋಚೆ ನನ್ನನ್ನು ಹೊಗಳಿಕೆಯ ಬಯಕೆಯಿಂದ ಅಥವಾ ನನ್ನ ಶಿಕ್ಷಕರನ್ನು ಮೆಚ್ಚಿಸುವ ಬಯಕೆಯಿಂದ ಅಲ್ಲ, ಬದಲಿಗೆ ಇತರರಿಗೆ ಪ್ರಯೋಜನವನ್ನು ನೀಡುವ ಬಯಕೆಯಿಂದ ಪ್ರೇರಿತನಾಗುವಂತೆ ತರಬೇತಿ ನೀಡಿದರು. ಅವನ ಧನ್ಯವಾದಕ್ಕಾಗಿ ಕಾಯುವುದು ತಲೆಯನ್ನು ಸವರಲು ಕಾಯುವ ನಾಯಿಯಂತೆ ಎಂದು ನಾನು ನೋಡಿದಾಗ, ನಾನು ಯಾವುದೇ ಅನುಮೋದನೆಯ ಚಿಹ್ನೆಯನ್ನು ನಿರೀಕ್ಷಿಸುವುದನ್ನು ನಿಲ್ಲಿಸಿದೆ. ಅವರು ನನ್ನನ್ನು ಹೊಗಳಿದರೂ ಸಹ, ನನ್ನ ಬಾಲವನ್ನು ಅಲ್ಲಾಡಿಸುವುದನ್ನು ಬಿಟ್ಟು ನಾನು ಏನು ತಾನೆ ಮಾಡಲು ಸಾಧ್ಯ!
ಟಿಬೆಟಿಯನ್ ಭಾಷೆಯಲ್ಲಿ ಮಹಾನ್ ಪಠ್ಯಗಳನ್ನು ಓದಲು ನನ್ನನ್ನು ಪ್ರೋತ್ಸಾಹಿಸುವುದು
ರಿನ್‌ಪೋಚೆ ಯಾವಾಗಲೂ ಜನರು ಮಹಾನ್ ಧರ್ಮಗ್ರಂಥಗಳನ್ನು ಸ್ವತಃ ಓದಲು ಕಲಿಯುವಂತೆ ಪ್ರೋತ್ಸಾಹಿಸುತ್ತಿದ್ದರು. ಯಾರಿಗಾದರೂ ಅನುಮಾನಗಳು ಅಥವಾ ಪ್ರಶ್ನೆಗಳು ಬಂದಾಗಲೆಲ್ಲಾ, ರಿನ್‌ಪೋಚೆ ಆ ವ್ಯಕ್ತಿಯು ಅದನ್ನು ಹುಡುಕಿ ಪರಿಶೀಲಿಸುವಂತೆ ಮಾಡುತ್ತಿದ್ದರು. ಅವರು ಈ ಬೋಧನೆಗಳನ್ನು ರೂಪಿಸಿಲ್ಲವಾದರೂ, ಅವು ಮಾನ್ಯ ಮೂಲಗಳಿಂದ ಬಂದಿವೆ ಎಂದು ಅವರು ವಿವರಿಸಿದರು. ಲಾಮಾ ನಮಗೆ ಎಲ್ಲವನ್ನೂ ಕಲಿಸುತ್ತಾರೆ ಎಂದು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ರಿನ್‌ಪೋಚೆ ಹೇಳಿದರು. ಇದಲ್ಲದೆ, ಪಾಶ್ಚಿಮಾತ್ಯರಿಗೆ, ಮುಂದಿನ ಇನ್ನೂರು ವರ್ಷಗಳ ಕಾಲ ಬುದ್ಧನ ಬೋಧನೆಗಳ ಸಂಪೂರ್ಣ ವಿಸ್ತಾರವು ಟಿಬೆಟಿಯನ್ ಭಾಷೆಯಲ್ಲಿ ಮಾತ್ರ ಲಭ್ಯವಿರುತ್ತದೆ ಎಂಬ ಪರಮಪೂಜ್ಯರ ಹೇಳಿಕೆಯನ್ನು ಅವರು ಪುನರಾವರ್ತಿಸಿದರು. ಆದ್ದರಿಂದ, ಅವರು ತಮ್ಮ ಪಾಶ್ಚಿಮಾತ್ಯ ಶಿಷ್ಯರಿಗೆ ಟಿಬೆಟಿಯನ್ ಭಾಷೆಯನ್ನು ಕಲಿಯಲು ಬಲವಾಗಿ ಪ್ರೋತ್ಸಾಹಿಸಿದರು. ಟಿಬೆಟಿಯನ್ ಭಾಷೆಯ ಪ್ರತಿಯೊಂದು ಅಕ್ಷರವೂ ಅರ್ಥದಿಂದ ತುಂಬಿದೆ ಎಂದು ಅವರು ಹೇಳಿದರು. ಹೀಗಾಗಿ, ಬೋಧನೆ ಮಾಡುವಾಗ, ರಿನ್‌ಪೋಚೆ ಆಗಾಗ್ಗೆ ಟಿಬೆಟಿಯನ್ ತಾಂತ್ರಿಕ ಪದಗಳ ಅರ್ಥಗಳನ್ನು ವಿವರಿಸುತ್ತಿದ್ದರು.
ಈ ವಿಧಾನಕ್ಕೆ ಅನುಗುಣವಾಗಿ, ರಿನ್‌ಪೋಚೆ ಪಠ್ಯಗಳನ್ನು ಓದುವ ಮೂಲಕ ಮತ್ತು ಅವುಗಳ ಬಗ್ಗೆ ನನಗೆ ಇರುವ ಯಾವುದೇ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡುವ ಮೂಲಕ ನನ್ನ ಅಧ್ಯಯನವನ್ನು ಮುಂದುವರಿಸಲು ನನ್ನನ್ನು ಕೇಳಿದರು. ಈ ರೀತಿ ಮುಂದುವರಿಯುವುದರಿಂದ, ಶಿಷ್ಯರು ಅಂತಿಮವಾಗಿ ಬೌದ್ಧ ಸಾಹಿತ್ಯವನ್ನು ಎಲ್ಲಿ ಬೇಕಾದರೂ ಅಧ್ಯಯನ ಮಾಡಬಹುದು, ಉದಾಹರಣೆಗೆ ಸಾಗರದಲ್ಲಿ ಈಜುವಾಗ ಅಥವಾ ವಿಮಾನದಲ್ಲಿ ಹಾರುವಾಗ ಎಂದು ಅವರು ಹೇಳಿದರು. ಲಾಮಾಗಳು ಶಿಷ್ಯರಿಗೆ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಮತ್ತು ನಂತರ ಹಾರಲು ಕಲಿಸಬೇಕು ಎಂದು ವಿವರಿಸುತ್ತಾ, ಅವರು ಏನನ್ನು ಓದಬೇಕು ಮತ್ತು ಕಲಿಯಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ನಂತರ ತಮ್ಮ ಶಿಷ್ಯರನ್ನು ಗೂಡಿನಿಂದ ಹೊರಗೆ ತಳ್ಳಿ ಅವರ ಪಾಡಿಗೆ ಅವರನ್ನು ಬಿಡುತ್ತಿದ್ದರು.
ಅವರ ಮೇಲೆ ಅವಲಂಬಿತರಾಗದಂತೆ ನನಗೆ ಕಲಿಸಿದರು
ರಿನ್‌ಪೋಚೆ ಯಾವುದೇ ರೀತಿಯಲ್ಲಿ ಅವರ ಮೇಲೆ ಅವಲಂಬಿತರಾಗದಂತೆ ನನಗೆ ಕಲಿಸಲು ಅನೇಕ ವಿಧಾನಗಳನ್ನು ಬಳಸಿದರು. ಉದಾಹರಣೆಗೆ, ರಿನ್‌ಪೋಚೆ ಮತ್ತು ನಾನು ಅತ್ಯಂತ ನಿಕಟ ಸಂಬಂಧ ಹೊಂದಿದ್ದರೂ, ಎಲ್ಲಾ ಸಂದರ್ಭಗಳಲ್ಲಿಯೂ ನನಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂಬಂತೆ ಅವರು ಎಂದಿಗೂ ನಡೆದುಕೊಳ್ಳಲಿಲ್ಲ. ಒಮ್ಮೆ ನಾನು ಸಾಕಷ್ಟು ಅನಾರೋಗ್ಯದಿಂದ ಬಳಲುತ್ತಿದ್ದೆ ಮತ್ತು ನಾನು ತೆಗೆದುಕೊಳ್ಳುತ್ತಿದ್ದ ಔಷಧಿಯು ಯಾವುದೇ ಸಹಾಯ ಮಾಡಲಿಲ್ಲ. ಯಾವ ವೈದ್ಯಕೀಯ ವ್ಯವಸ್ಥೆ - ಪಾಶ್ಚಿಮಾತ್ಯ, ಟಿಬೆಟಿಯನ್ ಅಥವಾ ಭಾರತೀಯ - ಮತ್ತು ಯಾವ ವೈದ್ಯರನ್ನು ಅವಲಂಬಿಸುವುದು ಉತ್ತಮ ಎಂಬುದರ ಕುರಿತು ಭವಿಷ್ಯಜ್ಞಾನಕ್ಕಾಗಿ ನಾನು ರಿನ್‌ಪೋಚೆ ಅವರನ್ನು ಕೇಳಿದಾಗ, ಆ ಸಮಯದಲ್ಲಿ ಅವರ ಭವಿಷ್ಯಜ್ಞಾನವು ಸ್ಪಷ್ಟವಾಗಿಲ್ಲ ಎಂದು ರಿನ್‌ಪೋಚೆ ಹೇಳಿದರು. ಅವರು ನನ್ನನ್ನು ಇನ್ನೊಬ್ಬ ಮಹಾನ್ ಲಾಮಾ ಬಳಿಗೆ ಕಳುಹಿಸಿದರು, ಅವರು ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಹಿಡಿಯಲು ನನಗೆ ಸಹಾಯ ಮಾಡಿದರು. ನಾನು ಶೀಘ್ರದಲ್ಲೇ ಚೇತರಿಸಿಕೊಂಡೆ.
ಪರಮಪೂಜ್ಯ ದಲೈ ಲಾಮಾ ಅವರಿಗೆ ಅನುವಾದಿಸಲು ನನ್ನನ್ನು ಸಿದ್ಧಪಡಿಸುವುದು
ಹಲವಾರು ವರ್ಷಗಳ ನಂತರ, ರಿನ್‌ಪೋಚೆ ಪರಮಪೂಜ್ಯರಿಗಾಗಿ ಅನುವಾದಿಸಲು ನನಗೆ ತರಬೇತಿ ನೀಡುತ್ತಿದ್ದಾರೆ ಎಂದು ನಾನು ಅರಿತುಕೊಂಡೆ. ಕೆಲವೊಮ್ಮೆ, ರಿನ್‌ಪೋಚೆ ನಾನು ಅವರಿಗಾಗಿ ಪ್ರಸ್ತುತಪಡಿಸಲು ತಯಾರಿಸುತ್ತಿರುವ ಉಡುಗೊರೆಯಂತೆ ಭಾಸವಾಗುತ್ತಿತ್ತು. ಆದಾಗ್ಯೂ, ಸರಿಯಾಗಿ ಸೇವೆ ಸಲ್ಲಿಸಲು, ನಾನು ಪರಮಪೂಜ್ಯರಿಗೆ ಎಂದಿಗೂ ಅಂಟಿಕೊಳ್ಳಬಾರದು ಅಥವಾ ಅವರ ಮೇಲೆ ಅವಲಂಬಿತನಾಗಬಾರದು. ಪರಮಪೂಜ್ಯರ ಅನುವಾದ ಅಗತ್ಯಗಳಿಗೆ ಸರಿಹೊಂದಲು ಆಯ್ಕೆ ಮಾಡಬಹುದಾದ ಅನೇಕ ಗಾಲ್ಫ್ ಕ್ಲಬ್‌ಗಳಲ್ಲಿ ಒಂದರಂತೆ ನಾನು ಆಗಬೇಕಿತ್ತು. ನಾನು ಅಗಾಧವಾದ ಒತ್ತಡವನ್ನು ಎದುರಿಸಬೇಕಾಗಬಹುದು ಮತ್ತು ನನ್ನ ಅಹಂಕಾರವನ್ನು ಜಯಿಸಬೇಕಾಗಿತ್ತು.
ಹೀಗಾಗಿ, ದಲೈ ಲಾಮಾಗೆ ಸೇವೆ ಸಲ್ಲಿಸುವಾಗ ಹೇಗೆ ಸರಿಯಾಗಿ ವರ್ತಿಸಬೇಕು ಎಂಬುದನ್ನು ರಿನ್‌ಪೋಚೆ ನನಗೆ ಕಲಿಸಿದರು. ಉದಾಹರಣೆಗೆ, ಪರಮಪೂಜ್ಯರ ಅನುವಾದಕರು ಎಂದಿಗೂ ನರ್ತಿಸುವಂತೆ ತಮ್ಮ ಕೈಗಳನ್ನು ಚಲಿಸಬಾರದು ಅಥವಾ ಮೃಗಾಲಯದಲ್ಲಿರುವಂತೆ ಅವರನ್ನು ದಿಟ್ಟಿಸಬಾರದು. ಬದಲಾಗಿ, ಅವರು ತಮ್ಮ ತಲೆಗಳನ್ನು ಕೆಳಕ್ಕೆ ಇಳಿಸಬೇಕು, ಸಂಪೂರ್ಣವಾಗಿ ಗಮನಹರಿಸಬೇಕು ಮತ್ತು ತಮ್ಮದೇ ಆದ ವ್ಯಕ್ತಿತ್ವಗಳನ್ನು ಸೇರಿಸಬಾರದು. ಅವರು ಜನರ ಪಟ್ಟಿ ತಯಾರಿಸಬೇಕು ಮತ್ತು ಪರಮಪೂಜ್ಯರು ಉಲ್ಲೇಖಿಸುವ ಕ್ರಮದಲ್ಲಿ ಅಂಶಗಳನ್ನು ಪಟ್ಟಿ ಮಾಡಬೇಕು, ಮತ್ತು ಪರಮಪೂಜ್ಯರು ಹೇಳುವ ಯಾವುದನ್ನೂ ಯಾವುದೇ ಅರ್ಥ ಅಥವಾ ಉದ್ದೇಶವಿಲ್ಲ ಎಂದು ಪರಿಗಣಿಸಿ ಬದಲಾಯಿಸಬಾರದು.
ಲಾಮಾಗಳ ಶೀರ್ಷಿಕೆಗಳನ್ನು ಪರಮಪೂಜ್ಯರು ಬಳಸುವಂತೆಯೇ ಸರಿಯಾಗಿ ಅನುವಾದಿಸಬೇಕು, ಮತ್ತು ವಿದೇಶಿಯರು ಬಹುತೇಕ ಎಲ್ಲಾ ಲಾಮಾಗಳನ್ನು "ಪರಮಪೂಜ್ಯರು" ಎಂದು ಕರೆಯುವ ರೀತಿಯಲ್ಲಿ ಅಲ್ಲ. ಈ ಲಾಮಾಗಳನ್ನು ಗೌರವಿಸುವ ಬದಲು, ಈ ಅಜ್ಞಾನಿ ಪಾಶ್ಚಿಮಾತ್ಯ ಪದ್ಧತಿಯು ದಲೈ ಲಾಮಾ ಅವರನ್ನು ಕೀಳಾಗಿ ನೋಡುತ್ತದೆ. ವಾಸ್ತವದಲ್ಲಿ, ವಿದೇಶಿಯರು ದಲೈ ಲಾಮಾ ಅವರ ಗೌರವಾರ್ಥಗಳೊಂದಿಗೆ ಅವರನ್ನು ಉಲ್ಲೇಖಿಸುತ್ತಿದ್ದಾರೆಂದು ಈ ಲಾಮಾಗಳಿಗೆ ತಿಳಿದರೆ ಅದು ಅವರನ್ನು ಭಯಭೀತಗೊಳಿಸುತ್ತದೆ. ಕ್ಯಾಥೋಲಿಕ್ ಚರ್ಚ್ ಮತ್ತು ರಾಜತಾಂತ್ರಿಕ ದಳದಲ್ಲಿರುವಂತೆಯೇ, ಟಿಬೆಟಿಯನ್ ಶಿಷ್ಟಾಚಾರ ಮತ್ತು ಅದರ ಶ್ರೇಣೀಕೃತ ಬಿರುದುಗಳ ಬಳಕೆಯು ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುತ್ತದೆ.
ನಾನು ಪರಮಪೂಜ್ಯರಿಗೆ ಭಾಷಾಂತರಿಸುವಾಗ, ಸೆರ್ಕಾಂಗ್ ರಿನ್‌ಪೋಚೆ ನನ್ನ ಎದುರು ಕುಳಿತುಕೊಳ್ಳುತ್ತಿದ್ದರು. ಅವರನ್ನು ನೋಡುವುದು, ಅವರ ತರಬೇತಿಯ ಮೇಲೆ ಗಮನ ಹರಿಸಲು ನನಗೆ ಸಹಾಯ ಮಾಡುತ್ತಿತ್ತು. ಉದಾಹರಣೆಗೆ, ಒಮ್ಮೆ ಧರ್ಮಶಾಲಾದಲ್ಲಿ, ನೂರು ಪಾಶ್ಚಿಮಾತ್ಯರು ಮತ್ತು ಹಲವಾರು ಸಾವಿರ ಟಿಬೆಟಿಯನ್ನರ ಪ್ರೇಕ್ಷಕರ ಮುಂದೆ ಅನುವಾದಿಸುವಾಗ, ಪರಮಪೂಜ್ಯರು ನನ್ನನ್ನು ನಿಲ್ಲಿಸಿ "ಅವನು ತಪ್ಪು ಮಾಡಿದ್ದಾನೆ!" ಎಂದು ಹೇಳಿ, ಹೊಟ್ಟೆ ಬಿರಿಯುವಂತೆ ನಕ್ಕರು. ಪರಮಪೂಜ್ಯರು ಇಂಗ್ಲಿಷ್ ಅನ್ನು ಬಹಳಾ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ನಾನು ನಾಚಿಕೆಯಿಂದ ಇರುವೆಯಂತೆ ಕಾರ್ಪೆಟ್ ಅಡಿಯಲ್ಲಿ ತೆವಳಲು ಬಯಸಿದ್ದರೂ, ನನ್ನ ದೃಷ್ಟಿಯಲ್ಲಿ ಕುಳಿತಿದ್ದ ರಿನ್‌ಪೋಚೆಯಿಂದ ಈ ಡಮ್ಮಿಯು ತನ್ನ ಶಾಂತತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು.
ನನ್ನ ಮೂರ್ಖತನದ ನಡವಳಿಕೆಯನ್ನು ಸರಿಪಡಿಸಲು ಬಲವಾದ ವಿಧಾನಗಳನ್ನು ಬಳಸುವುದು
ಆದರೆ ಕೆಲವೊಮ್ಮೆ, ನನಗೆ ನನ್ನ ಪಾಠಗಳ ಬಲವಾದ ಜ್ಞಾಪನೆಗಳು ಬೇಕಾಗಿದ್ದವು. ಉದಾಹರಣೆಗೆ, ನನ್ನ ಆರಂಭಿಕ ದಿನಗಳಲ್ಲಿ, ಬೋಧ್ಗಯಾದ ಬೋಧಿ ಮರದ ಕೆಳಗೆ ಸುಮಾರು ಹತ್ತು ಸಾವಿರ ಜನರಿಗೆ ಪರಮಪೂಜ್ಯರು ನೀಡಿದ ಪ್ರವಚನವನ್ನು ಅನುವಾದಿಸುತ್ತಿದ್ದೆ. ನನ್ನ ಮೈಕ್ರೊಫೋನ್ ವಿಫಲವಾಯಿತು, ಆದ್ದರಿಂದ ಪರಮಪೂಜ್ಯರು ತಮ್ಮ ಧ್ವನಿ ಉಪಕರಣಗಳನ್ನು ಹಂಚಿಕೊಳ್ಳಲು ನನ್ನನ್ನು ಪಠಣಕಾರರ ಮಡಿಲಿಗೆ ಹತ್ತಿಸಿದರು. ಇದು ಕೂಡ ಕೆಲಸ ಮಾಡುವುದನ್ನು ನಿಲ್ಲಿಸಿತು. ನಂತರ ಪರಮಪೂಜ್ಯರು ನನ್ನನ್ನು ತಮ್ಮ ಸಿಂಹಾಸನ ಮತ್ತು ಸೆರ್ಕಾಂಗ್ ರಿನ್‌ಪೋಚೆ ನಡುವಿನ ನೆಲದ ಮೇಲೆ ಕೂರಿಸಿದರು ಮತ್ತು ವಾಕ್ಯಗಳ ನಡುವೆ ತಮ್ಮ ಸ್ವಂತ ಮೈಕ್ರೊಫೋನ್ ಅನ್ನು ನನಗೆ ರವಾನಿಸಿದರು. ನಾನು ತುಂಬಾ ಆತಂಕಕ್ಕೊಳಗಾಗಿದ್ದೆ, ನನ್ನನ್ನು ನಾನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸಾಂಪ್ರದಾಯಿಕ ಗೌರವಯುತ ರೀತಿಯಲ್ಲಿ ಎರಡೂ ಕೈಗಳನ್ನು ಚಾಚುವ ಬದಲು, ನಾನು ಒಂದೇ ಕೈಯಿಂದ ಮೈಕ್ರೊಫೋನ್ ಅನ್ನು ಸ್ವೀಕರಿಸಿ ಪರಮಪೂಜ್ಯರಿಗೆ ಹಿಂತಿರುಗಿಸಿದೆ. ನಂತರ, ಬಾಳೆಹಣ್ಣನ್ನು ಹಿಡಿಯುವ ಕೋತಿಯಂತೆ ಮೈಕ್ರೊಫೋನ್ ಅನ್ನು ತೆಗೆದುಕೊಂಡಿದ್ದಕ್ಕಾಗಿ ರಿನ್‌ಪೋಚೆ ನನ್ನನ್ನು ಹೊಡೆಯಬಹುದಾದಷ್ಟು ಕೋಪಗೊಂಡಿದ್ದರು.
ಪರಮಪೂಜ್ಯ ದಲೈ ಲಾಮಾ ಅವರ ಬೋಧನೆಗಳಲ್ಲಿ ಸರಿಯಾದ ಶಿಷ್ಟಾಚಾರ
ಸಾಮಾನ್ಯವಾಗಿ, ಪಾಶ್ಚಿಮಾತ್ಯರು ತಮ್ಮನ್ನು ತಾವು ಪರಮಪೂಜ್ಯರ ಮುಂದೆ ಅತ್ಯುತ್ತಮವಾಗಿ ಪ್ರಸ್ತುತಪಡಿಸುವಂತೆ ರಿನ್‌ಪೋಚೆ ಕಾಳಜಿ ವಹಿಸಿದರು. ಪರಮಪೂಜ್ಯರ ಸಾರ್ವಜನಿಕ ಬೋಧನೆಗಳಲ್ಲಿ ಅವರ ನಡವಳಿಕೆಯು ಅವರನ್ನು ದಿಗಿಲುಗೊಳಿಸುತ್ತಿತ್ತು. ಪರಮಪೂಜ್ಯರು ಯಾರೆಂದು ಅರಿತುಕೊಳ್ಳುವುದು ಮುಖ್ಯ ಎಂದು ಅವರು ಹೇಳಿದರು. ಅವರು ಸಾಮಾನ್ಯವಾದ ಪುನರ್ಜನ್ಮಗೊಂಡ ಲಾಮಾ ಅಲ್ಲ. ಅವರ ಉಪಸ್ಥಿತಿಯಲ್ಲಿರಲು ವಿಶೇಷ ಗೌರವ ಮತ್ತು ನಮ್ರತೆ ಬೇಕು. ಉದಾಹರಣೆಗೆ, ದೀಕ್ಷೆ ಅಥವಾ ಪ್ರವಚನದ ಸಮಯದಲ್ಲಿ, ಚಹಾ ವಿರಾಮದ ಸಮಯದಲ್ಲಿ, ಪರಮಪೂಜ್ಯರ ದೃಷ್ಟಿ ಕ್ಷೇತ್ರದಲ್ಲಿ ಅವರು ಇಲ್ಲದಿರುವಂತೆ ನಿಂತು ಮಾತನಾಡುವುದು ಅತ್ಯಂತ ಅಸಭ್ಯವಾದ ವರ್ತನೆ. ಯಾವುದೇ ಸಂಭಾಷಣೆಗಾಗಿ ಹೊರಗೆ ಹೋಗುವುದು ಸರಿಯಾದ ಶಿಷ್ಟಾಚಾರ.
ಒಮ್ಮೆ ಪಾಶ್ಚಿಮಾತ್ಯ ಬೌದ್ಧ ಸಂಘಟನೆಯೊಂದು ಧರ್ಮಶಾಲಾದಲ್ಲಿ ಪರಮಪೂಜ್ಯರಿಗಾಗಿ ಪ್ರವಚನವೊಂದನ್ನು ಆಯೋಜಿಸಿದ್ದು, ನಾನು ಅದನ್ನು ಅನುವಾದಿಸುತ್ತಿದ್ದೆ. ಪರಮಪೂಜ್ಯರು ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾದರು. ಪ್ರತಿ ಅಧಿವೇಶನದ ನಂತರ, ರಿನ್‌ಪೋಚೆ ಮರುದಿನಕ್ಕಾಗಿ ಸಲ್ಲಿಸಲಾದ ಪ್ರಶ್ನೆಗಳನ್ನು ಓದಲು ನನ್ನನ್ನು ಕೇಳಿದರು ಮತ್ತು ಯಾವುದೇ ಮೂರ್ಖ ಅಥವಾ ಕ್ಷುಲ್ಲಕ ಪ್ರಶ್ನೆಗಳನ್ನು ನಿರ್ಣಾಯಕವಾಗಿ ತಿರಸ್ಕರಿಸಿದರು. ಆಗಾಗ್ಗೆ, ರಿನ್‌ಪೋಚೆ ನನ್ನಿಂದ ಪ್ರಶ್ನೆಗಳನ್ನು ಹೆಚ್ಚು ಆಳವಾಗಿಸುವಂತೆ ಮರುರೂಪಿಸಲು ಹೇಳುತ್ತಿದ್ದರು. ಅವುಗಳು ಪರಮಪೂಜ್ಯರ ಸಮಯವನ್ನು ಅಥವಾ ಅನೇಕ ಜನರು ಆ ಉತ್ತರದಿಂದ ಪ್ರಯೋಜನ ಪಡೆಯುವ ಅವಕಾಶವನ್ನು ವ್ಯರ್ಥ ಮಾಡಬಾರದು. ಹಲವಾರು ಬಾರಿ, ಪರಮಪೂಜ್ಯರು ಪ್ರಶ್ನೆಗಳು ಎಷ್ಟು ಅತ್ಯುತ್ತಮ ಮತ್ತು ಆಳವಾಗಿವೆ ಎಂದು ಉಲ್ಲೇಖಿಸಿದರು. ನಾನು ಪರಮಪೂಜ್ಯರೊಂದಿಗೆ ಪ್ರಯಾಣಿಸಿದಾಗಲೆಲ್ಲಾ ಈ ತಿದ್ದುಪಡಿ ಪ್ರಕ್ರಿಯೆಯನ್ನು ಅನುಸರಿಸಲು ಕಲಿತಿದ್ದೇನೆ.