ಶಾಂತಗೊಳಿಸುವ ಆಲೋಚನೆಗಳು

05:19
ಪರಿಕಲ್ಪನಾತ್ಮಕ ಚಿಂತನೆ ಅತ್ಯವಶ್ಯಕ. ಅದು ಇಲ್ಲದಿದ್ದರೆ, ಅಂಗಡಿಯಲ್ಲಿ ಸೇಬು ಮತ್ತು ಪೇರ್ಗಳನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ, “ದಯವಿಟ್ಟು ಪ್ರದರ್ಶನಕ್ಕಾಗಿ ಎರಡು ಟಿಕೆಟ್ ನೀಡಿ” ಎಂಬ ವಾಕ್ಯವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದು. ದೈನಂದಿನ ಬದುಕಿನಲ್ಲಿ ಪರಿಕಲ್ಪನಾತ್ಮಕ ಚಿಂತನೆ ಅನಿವಾರ್ಯವಾದರೂ, ಕೆಲ ಸಂದರ್ಭಗಳಲ್ಲಿ ಅದು ಅಡ್ಡಿಯಾಗಬಹುದು. ಉದಾಹರಣೆಗೆ, ಧ್ಯಾನದಲ್ಲಿ ಏಕಾಗ್ರತೆಯನ್ನು ಪಡೆಯಲು, ನಾವು ಅನುಭವಿಸುವ ಎಲ್ಲಾ ಮಾನಸಿಕ ವಟಗುಟ್ಟುವಿಕೆಗಳು ಮತ್ತು ಪೂರ್ವಕಲ್ಪನೆಗಳನ್ನು ಶಮನಗೊಳಿಸಬೇಕಾಗುತ್ತದೆ.

ಮನಸ್ಸನ್ನು ಶಾಂತಗೊಳಿಸುವುದು

ಏಕಾಗ್ರತೆಯನ್ನು ಪಡೆಯಲು ನಾವು ಮನಸ್ಸನ್ನು ಶಾಂತಗೊಳಿಸಿಕೊಳ್ಳಬೇಕು. ಕೆಲವು ಧ್ಯಾನ ಸೂಚನೆಗಳು ವಿವರಿಸುವಂತೆ, ಅದರಿಂದ ನಾವು ಹೆಚ್ಚು ನೈಸರ್ಗಿಕ ಮನೋಸ್ಥಿತಿಯನ್ನು ತಲುಪುತ್ತೇವೆ. ಸ್ಪಷ್ಟವಾಗಿ ಹೇಳಬೇಕಾದರೆ, ನಮ್ಮ ಗುರಿಯು ಜಾಂಬಿಯಂತಯ ಸಂಪೂರ್ಣ ಖಾಲಿಯಾದ ಮನಸ್ಸಲ್ಲ; ಆಫ್ ಮಾಡಿರುವ ರೇಡಿಯೋವಿನಂತೆಯೂ ಅಲ್ಲ. ಹಾಗೆ ಇದ್ದರೆ, ನಿದ್ರೆಯೇ ಒಳ್ಳೆಯದು! ನಮ್ಮ ಉದ್ದೇಶವೆಂದರೆ ಎಲ್ಲ ಗೊಂದಲಮಯ ಮನೋಸ್ಥಿತಿಗಳನ್ನು ಶಮನಗೊಳಿಸುವುದು. ಕೆಲ ಭಾವನೆಗಳು ತೀವ್ರವಾಗಿ ಅಶಾಂತಿಕಾರಕವಾಗಿರುತ್ತವೆ; ಉದಾಹರಣೆಗೆ ದುರ್ಬಲತೆ, ಚಿಂತೆ, ಅಥವಾ ಭಯ. ನಮ್ಮ ಧ್ಯೇಯ ಇವುಗಳನ್ನು ಶಾಂತಗೊಳಿಸುವುದೇ.

ನಾವು ಮನಸ್ಸನ್ನು ಶಾಂತಗೊಳಿಸಿದಾಗ ಅದರ ಸ್ಥಿತಿ ಸ್ಪಷ್ಟ ಮತ್ತು ಎಚ್ಚರವಾಗಿರುತ್ತದೆ. ಆ ಸ್ಥಿತಿಯಲ್ಲಿ, ಸ್ವಲ್ಪ ಪ್ರೀತಿ ಮತ್ತು ತಿಳುವಳಿಕೆಯನ್ನು ಹುಟ್ಟುಹಾಕಲು ಅಥವಾ ನಮ್ಮಲ್ಲಿರುವ ನೈಸರ್ಗಿಕ, ಮಾನವೀಯ ಹೃತ್ಪೂರ್ವತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕೇವಲ ದೇಹದ ಸ್ನಾಯುಗಳು ಮಾತ್ರವಲ್ಲ, ಮನಸ್ಸು ಮತ್ತು ಭಾವನೆಗಳ ಬಿಗಿತವೂ ಆಳವಾದ ವಿಶ್ರಾಂತಿಗೆ ಒಳಗಾಗಬೇಕು. ಇಲ್ಲವಾದರೆ, ಆ ಬಿಗಿತವೇ ಮನಸ್ಸಿನ ನೈಸರ್ಗಿಕ ಹೃತ್ಪೂರ್ವತೆ ಮತ್ತು ಸ್ಪಷ್ಟತೆಯನ್ನು, ಕೆಲವೊಮ್ಮೆ ಯಾವುದನ್ನೂ ಅನುಭವಿಸುವ ಸಾಮರ್ಥ್ಯವನ್ನೇ ತಡೆಯಬಹುದು.

ಕೆಲವರು ಧ್ಯಾನವೆಂದರೆ ಯೋಚನೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಧ್ಯಾನವು ಯೋಚನೆಯನ್ನು ನಿಲ್ಲಿಸುವುದಲ್ಲ, ಅನಗತ್ಯ ಮತ್ತು ಬಾಹ್ಯ ಚಿಂತನೆಗಳನ್ನು ಶಮನಗೊಳಿಸುವುದಾಗಿದೆ. ಉದಾಹರಣೆಗೆ, ಭವಿಷ್ಯದ ಬಗ್ಗೆ “ನಾನು ಊಟಕ್ಕೆ ಏನು ತಿನ್ನಲಿದ್ದೇನೆ?” ಎಂಬ ಅಲೆಯುವ ಆಲೋಚನೆಗಳು, ಅಥವಾ “ನೀನು ನಿನ್ನೆ ನನ್ನೊಂದಿಗೆ ತುಂಬಾ ಕ್ರೂರವಾಗಿ ವರ್ತಿಸಿದ್ದೀಯ, ನೀನು ಭಯಾನಕ ವ್ಯಕ್ತಿ!” ಎಂಬ ನಕಾರಾತ್ಮಕ ಚಿಂತನೆಗಳು; ಇವೆಲ್ಲವೂ ಮಾನಸಿಕ ಅಲೆದಾಟ ಮತ್ತು ಗೊಂದಲಕಾರಿ ಆಲೋಚನೆಗಳ ವರ್ಗಕ್ಕೆ ಸೇರುತ್ತವೆ.

ಆದರೆ, ಶಾಂತ ಮನಸ್ಸು ಕೇವಲ ಒಂದು ಸಾಧನ, ಅದು ಅಂತಿಮ ಗುರಿಯಲ್ಲ. ಮನಸ್ಸು ಶಾಂತವಾಗಿದ್ದು, ಸ್ಪಷ್ಟವಾಗಿದ್ದು, ಹೆಚ್ಚು ಮುಕ್ತವಾಗಿದ್ದಾಗ, ಅದನ್ನು ನಾವು ಸೃಜನಾತ್ಮಕವಾಗಿ ಬಳಸಬಹುದು. ಅದನ್ನು ದೈನಂದಿನ ಜೀವನದಲ್ಲಿಯೂ ಉಪಯೋಗಿಸಬಹುದು; ಧ್ಯಾನದಲ್ಲಿ ಕುಳಿತುಕೊಂಡು ನಮ್ಮ ಜೀವನಪರಿಸ್ಥಿತಿಯನ್ನು ಆಳವಾಗಿ ಗ್ರಹಿಸಲು ಪ್ರಯತ್ನಿಸಬಹುದು. ಗೊಂದಲಮಯ ಭಾವನೆಗಳು ಮತ್ತು ಬಾಹ್ಯ ಆಲೋಚನೆಗಳಿಂದ ಮುಕ್ತವಾದ ಮನಸ್ಸಿನೊಂದಿಗೆ, “ನನ್ನ ಜೀವನದಲ್ಲಿ ನಾನು ಏನು ಮಾಡುತ್ತಿದ್ದೇನೆ? ಈ ಮಹತ್ವದ ಸಂಬಂಧದಲ್ಲಿ ನಿಜವಾಗಿ ಏನು ನಡೆಯುತ್ತಿದೆ? ಇದು ಆರೋಗ್ಯಕರವೇ ಅಥವಾ ಅನಾರೋಗ್ಯಕರವೇ?” ಎಂಬ ಪ್ರಶ್ನೆಗಳ ಬಗ್ಗೆ ನಾವು ಹೆಚ್ಚು ಸ್ಪಷ್ಟವಾಗಿ ಯೋಚಿಸಬಹುದು. ನಾವು ವಿಶ್ಲೇಷಣಾತ್ಮಕರಾಗಬಹುದು, ಅದನ್ನೇ ಆತ್ಮಾವಲೋಕನ ಎಂದು ಕರೆಯಲಾಗುವುದು. ಇಂತಹ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಫಲಪ್ರದ ಆತ್ಮಾವಲೋಕನಕ್ಕೆ, ಸ್ಪಷ್ಟತೆ ಅವಶ್ಯಕ. ನಮಗೆ ಶಾಂತ, ಸ್ಥಿರ ಮನಸ್ಸು ಬೇಕು, ಮತ್ತು ಧ್ಯಾನವೇ ನಮ್ಮನ್ನು ಆ ಸ್ಥಿತಿಗೆ ಕರೆದೊಯ್ಯಬಲ್ಲ ಸಾಧನ.

ಪರಿಕಲ್ಪನಾತ್ಮಕ ಮತ್ತು ಪರಿಕಲ್ಪನೇತರ ಮನಸ್ಸಿನ ಸ್ಥಿತಿಗಳು

ಅನೇಕ ಧ್ಯಾನಗ್ರಂಥಗಳು ನಮ್ಮನ್ನು ಪರಿಕಲ್ಪನಾತ್ಮಕ ಆಲೋಚನೆಗಳಿಂದ ದೂರವಿಟ್ಟು, ಪರಿಕಲ್ಪನಾರಹಿತ ಸ್ಥಿತಿಯಲ್ಲಿ ನೆಲೆಗೊಳ್ಳುವಂತೆ ಸೂಚಿಸುತ್ತವೆ. ಮೊದಲನೆಯದಾಗಿ, ಈ ಸೂಚನೆ ಎಲ್ಲಾ ಧ್ಯಾನಗಳಿಗೆ ಅನ್ವಯಿಸುವುದಿಲ್ಲ, ಅದು ವಾಸ್ತವದ ಮೇಲೆ ಕೇಂದ್ರೀಕರಿಸುವ ಉತ್ತುಂಗ ಧ್ಯಾನಕ್ಕೆ ಸಂಬಂಧಿಸಿದೆ. ಆದರೂ, ಎಲ್ಲ ರೀತಿಯ ಧ್ಯಾನಗಳಲ್ಲಿಯೂ ತೊಡೆದುಹಾಕಬೇಕಾದ ಒಂದು ವಿಧದ ಪರಿಕಲ್ಪನಾ ಸ್ವರೂಪವಿರುತ್ತದೆ. ಆದರೆ ಧ್ಯಾನಗ್ರಂಥಗಳಲ್ಲಿ ಉಲ್ಲೇಖಿಸಲಾದ ಈ ಪರಿಕಲ್ಪನೆಯ ವಿವಿಧ ರೂಪಗಳನ್ನು ಅರ್ಥಮಾಡಿಕೊಳ್ಳಲು, ಮೊದಲು ಬೌದ್ಧಧರ್ಮದಲ್ಲಿ “ಪರಿಕಲ್ಪನಾ” ಎಂದರೆ ಏನೆಂದು ಅರ್ಥಮಾಡಿಕೊಳ್ಳಬೇಕು.

ಪರಿಕಲ್ಪನಾತ್ಮಕ ಚಿಂತನೆ ನಮ್ಮ ತಲೆಯೊಳಗಿನ ಧ್ವನಿಯನ್ನು ಮಾತ್ರ ಸೂಚಿಸುವುದಿಲ್ಲ

ಕೆಲವರು ಪರಿಕಲ್ಪನಾತ್ಮಕವಾಗಿರುವುದೆಂದರೆ ನಮ್ಮ ಮನಸ್ಸಿನಲ್ಲಿ ಹಾದುಹೋಗುವ ಸಾಮಾನ್ಯ ದೈನಂದಿನ ಮೌಖಿಕ ಆಲೋಚನೆಗಳು, ಅಂದರೆ “ನಮ್ಮ ತಲೆಯೊಳಗಿನ ಧ್ವನಿ” ಎಂದು ಭಾವಿಸುತ್ತಾರೆ. ಹಾಗೆಯೇ, ಪರಿಕಲ್ಪನಾತ್ಮಕವಲ್ಲದ ಸ್ಥಿತಿ ಎಂದರೆ ಆ ಧ್ವನಿಯನ್ನು ಸಂಪೂರ್ಣವಾಗಿ ಸುಮ್ಮನಾಗಿಸುವುದೆಂದು ಕಲ್ಪಿಸಿಕೊಳ್ಳುತ್ತಾರೆ. ಆದರೆ, ಆ ಧ್ವನಿಯನ್ನು ಸುಮ್ಮನಾಗಿಸುವುದು ಕೇವಲ ಆರಂಭವಷ್ಟೆ, ಬಹುಮುಖ್ಯವಾದ ಆರಂಭ, ಆದರೆ ಮೊದಲ ಹೆಜ್ಜೆ ಮಾತ್ರ. ಸ್ಪಷ್ಟ ಮತ್ತು ಶಾಂತ ಮನಸ್ಸನ್ನು ಪಡೆಯಲು, ಮನಸ್ಸನ್ನು ಬಾಹ್ಯ ಮತ್ತು ಗೊಂದಲಮಯ ಆಲೋಚನೆಗಳಿಂದ ಶಮನಗೊಳಿಸುವ ಪ್ರಕ್ರಿಯೆಯೊಂದೇ ಅದು. ಇನ್ನೂ ಕೆಲವರು ಏನನ್ನಾದರೂ ನಿಜವಾಗಿ ಅರ್ಥಮಾಡಿಕೊಳ್ಳಲು, ಅದು ಪರಿಕಲ್ಪನಾತ್ಮಕವಲ್ಲದ ರೀತಿಯಲ್ಲೇ ಆಗಬೇಕು ಎಂದು ನಂಬುತ್ತಾರೆ, ಮತ್ತು ಪರಿಕಲ್ಪನಾತ್ಮಕ ಚಿಂತನೆ ಹಾಗೂ ಸರಿಯಾದ ತಿಳುವಳಿಕೆ ಪರಸ್ಪರ ವಿರೋಧಿಗಳೆಂದು ಭಾವಿಸುತ್ತಾರೆ. ಆದರೆ, ಅದು ಸಹ ನಿಜವಲ್ಲ.

ಪರಿಕಲ್ಪನೆಗೆ ಸಂಬಂಧಿಸಿದ ಸಂಕೀರ್ಣತೆಗಳನ್ನು ಬಿಡಿಸಲು, ನಾವು ಮೊದಲು ನಮ್ಮ ಆಲೋಚನೆಗಳಲ್ಲಿ ಯಾವುದನ್ನಾದರೂ ಮೌಖಿಕವಾಗಿ ಹೇಳುವುದನ್ನು ಅದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರತ್ಯೇಕಿಸಬೇಕಾಗಿದೆ. ನಾವು ಯಾವುದನ್ನಾದರೂ ಅರ್ಥಮಾಡಿಕೊಂಡು ಅಥವಾ ಅರ್ಥಮಾಡಿಕೊಳ್ಳದೆ ಮನಸ್ಸಿನಲ್ಲಿ ಮೌಖಿಕವಾಗಿ ಹೇಳಬಹುದು. ಉದಾಹರಣೆಗೆ, ನಾವು ವಿದೇಶಿ ಭಾಷೆಯ ಪ್ರಾರ್ಥನೆಯನ್ನು ಮನಸ್ಸಿನಲ್ಲಿ ಪಠಿಸಬಹುದು, ಅದರ ಅರ್ಥವನ್ನು ತಿಳಿದುಕೊಂಡಿದ್ದರೂ ಅಥವಾ ತಿಳಿದುಕೊಳ್ಳದಿದ್ದರೂ. ಅದೇ ರೀತಿ, ಪ್ರೀತಿಯಲ್ಲಿರುವ ಅನುಭವದಂತೆ, ಕೆಲವೊಮ್ಮೆ ನಾವು ಯಾವುದನ್ನಾದರೂ ಪದಗಳಲ್ಲಿ ವಿವರಿಸಲು ಸಾಧ್ಯವಾಗದಿದ್ದರೂ, ಅದನ್ನು ಆಳವಾಗಿ ಅರ್ಥಮಾಡಿಕೊಂಡಿರಬಹುದು.

ಆದರೆ, ಧ್ಯಾನದಲ್ಲಿ ಪರಿಕಲ್ಪನಾತ್ಮಕ ಮತ್ತು ಪರಿಕಲ್ಪನಾತ್ಮಕವಲ್ಲದ ಸ್ಥಿತಿಗಳ ವಿಷಯವು ಏನನ್ನಾದರೂ ಅರ್ಥಮಾಡಿಕೊಳ್ಳುವ ಅಥವಾ ಅರ್ಥಮಾಡಿಕೊಳ್ಳದಿರುವ ಸಮಸ್ಯೆಯಲ್ಲ. ಧ್ಯಾನದಲ್ಲಿಯೂ ಹಾಗೆಯೇ ದೈನಂದಿನ ಜೀವನದಲ್ಲಿಯೂ, ನಾವು ಯಾವಾಗಲೂ ತಿಳುವಳಿಕೆಯನ್ನು ಕಾಪಾಡಿಕೊಳ್ಳಬೇಕು, ಅದು ಪರಿಕಲ್ಪನಾತ್ಮಕವಾಗಿರಲಿ ಅಥವಾ ಪರಿಕಲ್ಪನಾತ್ಮಕವಲ್ಲದಿರಲಿ, ಮತ್ತು ನಾವು ಅದನ್ನು ಮನಸ್ಸಿನಲ್ಲಿ ಮೌಖಿಕವಾಗಿ ಹೇಳುತ್ತೇವೆಯೇ ಅಥವಾ ಇಲ್ಲವೇ ಎಂಬುದರಿಂದ ಅದು ಬದಲಾಗುವುದಿಲ್ಲ. ಕೆಲವೊಮ್ಮೆ ಮೌಖಿಕವಾಗಿ ಹೇಳುವುದು ಸಹಾಯಕವಾಗುತ್ತದೆ; ಕೆಲವೊಮ್ಮೆ ಅದು ಅಗತ್ಯವಿಲ್ಲ; ಉಪಯುಕ್ತವೂ ಅಲ್ಲ. ಉದಾಹರಣೆಗೆ, ನಿಮ್ಮ ಬೂಟುಗಳನ್ನು ಕಟ್ಟುವುದು, ನೀವು ಹೇಗೆ ಕಟ್ಟಬೇಕೆಂದು ಅರ್ಥಮಾಡಿಕೊಂಡಿದ್ದೀರಿ, ಆದರೆ ಕಟ್ಟುವಾಗ “ಈ ಲೇಸ್ ಹೀಗೆ, ಆ ಲೇಸ್ ಹೀಗೆ” ಎಂದು ಮನಸ್ಸಿನಲ್ಲಿ ಮೌಖಿಕವಾಗಿ ಹೇಳುವುದಿಲ್ಲ. ನಿಜ ಹೇಳುವುದಾದರೆ, ನಮ್ಮಲ್ಲಿ ಹೆಚ್ಚಿನವರಿಗೆ ನಾವು ಬೂಟುಗಳನ್ನು ಹೇಗೆ ಕಟ್ಟುತ್ತೇವೆ ಎಂಬುದನ್ನೇ ಪದಗಳಲ್ಲಿ ವಿವರಿಸಲು ಕಷ್ಟವಾಗುತ್ತದೆ. ಆದರೂ, ನಮಗೆ ತಿಳುವಳಿಕೆ ಇದೆ. ಆ ತಿಳುವಳಿಕೆ ಇಲ್ಲದೆ, ನಾವು ಜೀವನದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ, ಬಾಗಿಲು ತೆರೆಯುವುದೂ ಸಹ.

ಹಲವು ದೃಷ್ಟಿಕೋನಗಳಿಂದ ನೋಡಿದರೆ, ಮೌಖಿಕೀಕರಣವು ವಾಸ್ತವವಾಗಿ ಸಹಾಯಕವಾಗಿದೆ; ಇತರರೊಂದಿಗೆ ಸಂವಹನ ನಡೆಸಲು ಅದೊಂದು ಅಗತ್ಯ ಸಾಧನ. ಆದರೆ, ನಮ್ಮ ಆಲೋಚನೆಗಳಲ್ಲಿ ಮೌಖಿಕೀಕರಣವು ಯಾವಾಗಲೂ ಅಗತ್ಯವಿಲ್ಲ; ಅದು ಸ್ವತಃ ತಟಸ್ಥ: ಅಂದರೆ, ಅದನ್ನು ಸಹಾಯಕವಾಗಿಯೂ ಅಥವಾ ವಿನಾಶಕಾರಿಯಾಗಿ ಬಳಸಬಹುದು. ವಾಸ್ತವವಾಗಿ, ಮೌಖಿಕೀಕರಣವನ್ನು ಒಳಗೊಂಡಿರುವ ಕೆಲವು ಉಪಯುಕ್ತ ಧ್ಯಾನ ವಿಧಾನಗಳಿವೆ. ಉದಾಹರಣೆಗೆ, ಮಾನಸಿಕವಾಗಿ ಪುನರಾವರ್ತಿಸುವ ಮಂತ್ರಗಳು ಮನಸ್ಸಿನಲ್ಲಿ ನಿರ್ದಿಷ್ಟ ರೀತಿಯ ಲಯ ಅಥವಾ ಕಂಪನವನ್ನು ಹುಟ್ಟುಹಾಕುವ ಮತ್ತು ಉಳಿಸುವ ಮೌಖಿಕೀಕರಣದ ಒಂದು ರೂಪವಾಗಿದೆ. ಮಂತ್ರದ ಆ ನಿಯಮಿತ ಲಯವು ತುಂಬಾ ಸಹಾಯಕ, ಅದು ನಿರ್ದಿಷ್ಟ ಮನಸ್ಸಿನ ಸ್ಥಿತಿಯ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಸಹಾನುಭೂತಿ ಮತ್ತು ಪ್ರೀತಿಯನ್ನು ಬೆಳೆಸುವಾಗ ನೀವು ಓಂ ಮಣಿ ಪದ್ಮೇ ಹಮ್ ಎಂಬ ಮಂತ್ರವನ್ನು ಪಠಿಸುತ್ತಿದ್ದರೆ, ಆ ಪ್ರೀತಿಯ ಸ್ಥಿತಿಯ ಮೇಲೆ ಗಮನಹರಿಸುವುದು ಸುಲಭವಾಗುತ್ತದೆ; ಆದರೆ, ಮಾನಸಿಕವಾಗಿ ಏನನ್ನೂ ಹೇಳದೆ ಕೂಡ ಪ್ರೀತಿಯ ಸ್ಥಿತಿಯಲ್ಲಿ ಕೇಂದ್ರೀಕರಿಸಬಹುದು. ಆದ್ದರಿಂದ, ಮೌಖಿಕೀಕರಣ ಸಮಸ್ಯೆಯಲ್ಲ. ಆದರೆ, ನಮ್ಮ ಮನಸ್ಸುಗಳು ವ್ಯರ್ಥವಾದ ಮಾತುಗಳಿಂದ ಹರಟೆ ಹೊಡೆಯಲು ಪ್ರಾರಂಭಿಸಿದಾಗ, ಅವುಗಳನ್ನು ಶಾಂತಗೊಳಿಸುವುದು ಅನಿವಾರ್ಯ.

ಪರಿಕಲ್ಪನಾತ್ಮಕ ಚಿಂತನೆ ಎಂದರೆ ವಿಷಯಗಳನ್ನು ಮಾನಸಿಕ ಪೆಟ್ಟಿಗೆಗಳಲ್ಲಿ ವರ್ಗೀಕರಿಸುವುದು

ಪರಿಕಲ್ಪನೆಯ ವಿಷಯವು ಮೌಖಿಕೀಕರಣ ಅಥವಾ ತಿಳುವಳಿಕೆಗೆ ಸಂಬಂಧಿಸಿದದ್ದಲ್ಲವಾದರೆ, ಅಲ್ಲಿನ ಸಮಸ್ಯೆ ಏನು? “ಪರಿಕಲ್ಪನಾತ್ಮಕ ಮನಸ್ಸು” ಎಂದರೆ ನಿಜವಾಗಿ ಏನು, ಮತ್ತು ಧ್ಯಾನ ಸೂಚನೆಗಳು ಅದರಿಂದ ಮುಕ್ತರಾಗಬೇಕೆಂದು ಹೇಳುವಾಗ ಅದರ ಅರ್ಥವೇನು? ಇಂತಹ ಸೂಚನೆಗಳು ಧ್ಯಾನದ ಎಲ್ಲಾ ಹಂತಗಳಿಗೆ ಮತ್ತು ದೈನಂದಿನ ಜೀವನಕ್ಕೂ ಅನ್ವಯಿಸುತ್ತವೆಯೇ? ಈ ಅಂಶಗಳನ್ನು ಸ್ಪಷ್ಟಗೊಳಿಸುವುದು ಅತ್ಯಂತ ಅಗತ್ಯ.

ಪರಿಕಲ್ಪನಾತ್ಮಕ ಮನಸ್ಸು ಎಂದರೆ “ಒಳ್ಳೆಯದು” ಅಥವಾ “ಕೆಟ್ಟದು”, “ಕಪ್ಪು” ಅಥವಾ “ಬಿಳಿ”, “ನಾಯಿ” ಅಥವಾ “ಬೆಕ್ಕು” ಎಂಬಂತಾಗಿ, ವಸ್ತುಗಳನ್ನು ವಿಭಿನ್ನ ಮಾನಸಿಕ ಪೆಟ್ಟಿಗೆಗಳಲ್ಲಿ ಹಾಕುವ ಮೂಲಕ ಯೋಚಿಸುವ ಕ್ರಮ.

ಈಗ, ನಾವು ಶಾಪಿಂಗ್‌ಗೆ ಹೋದಾಗ ಸೇಬು ಮತ್ತು ಕಿತ್ತಳೆ ಹಣ್ಣುಗಳ ನಡುವಿನ ವ್ಯತ್ಯಾಸವನ್ನೋ, ಅಥವಾ ಪಕ್ವವಲ್ಲದ ಹಣ್ಣು ಮತ್ತು ಪಕ್ವವಾದ ಹಣ್ಣಿನ ನಡುವಿನ ವ್ಯತ್ಯಾಸವನ್ನೋ ಸುಲಭವಾಗಿ ಗುರುತಿಸಬಹುದು. ಇಂತಹ ದೈನಂದಿನ ಸಂದರ್ಭಗಳಲ್ಲಿ ವರ್ಗಗಳಲ್ಲಿ ಯೋಚಿಸುವುದು ಸಮಸ್ಯೆಯಲ್ಲ. ಆದರೆ ಸಮಸ್ಯೆ ಉಂಟುಮಾಡುವ ಕೆಲವು ಬೇರೆ ರೀತಿಯ ವರ್ಗಗಳೂ ಇವೆ; ಅವುಗಳನ್ನೇ ನಾವು “ಪೂರ್ವಭಾವಿ ಕಲ್ಪನೆಗಳು” ಎಂದು ಕರೆಯುತ್ತೇವೆ.

ಪೂರ್ವಭಾವಿ ಕಲ್ಪನೆಯ ಒಂದು ಉದಾಹರಣೆಯೆಂದರೆ: “ನೀವು ಯಾವಾಗಲೂ ನನ್ನೊಂದಿಗೆ ಕೆಟ್ಟದಾಗಿ ವರ್ತಿಸುತ್ತೀರಿ. ನೀವು ಭಯಾನಕ ವ್ಯಕ್ತಿ, ಏಕೆಂದರೆ ಹಿಂದೆ ನೀವು ಹೀಗೆ ಮಾಡಿದ್ದೀರಿ, ಅದು ಮಾಡಿದ್ದೀರಿ, ಹಾಗಾಗಿ ಈಗಲೂ ನೀವು ಅದೇ ರೀತಿಯಲ್ಲಿ ನಡೆದುಕೊಳ್ಳುವಿರಿ” ಎಂಬ ನಂಬಿಕೆ. ನಾವು ಈಗಾಗಲೇ ಆ ವ್ಯಕ್ತಿ ಭಯಾನಕ ಮತ್ತು ನಮ್ಮೊಂದಿಗೆ ಯಾವಾಗಲೂ ಕೆಟ್ಟದಾಗಿ ವರ್ತಿಸುತ್ತಾನೆ ಎಂದು ನಿರ್ಣಯಿಸಿದ್ದೇವೆ, ಇದೇ ಪೂರ್ವಭಾವಿ ಕಲ್ಪನೆ. ಈ ರೀತಿಯಾಗಿ ಯೋಚಿಸುವಾಗ, ನಾವು ಆ ವ್ಯಕ್ತಿಯನ್ನು “ಭಯಾನಕ ವ್ಯಕ್ತಿ” ಎಂಬ ಮಾನಸಿಕ ಪೆಟ್ಟಿಗೆಯಲ್ಲಿ ಹಾಕುತ್ತೇವೆ. ಆ ನಂತರ, “ಅವನು ಕೆಟ್ಟವನು, ಅವನು ನನ್ನೊಂದಿಗೆ ಯಾವಾಗಲೂ ಭಯಾನಕವಾಗಿ ವರ್ತಿಸುತ್ತಾನೆ” ಎಂಬ ಆಲೋಚನೆಯನ್ನು ನಾವು ಅವನ ಮೇಲೆ ಪ್ರಕ್ಷೇಪಿಸಿದಾಗ, ನಮ್ಮ ಮತ್ತು ಆ ವ್ಯಕ್ತಿಯ ನಡುವಿನ ಸಂಬಂಧದಲ್ಲಿ ಒಂದು ಗೋಡೆ ನಿರ್ಮಾಣವಾಗುತ್ತದೆ. ಈ ಪೂರ್ವಭಾವಿ ಕಲ್ಪನೆಯೇ ನಮ್ಮ ಸಂಬಂಧದ ಸ್ವರೂಪವನ್ನು ನಿಗದಿಪಡಿಸುತ್ತದೆ. ಆದ್ದರಿಂದ, ಪೂರ್ವಭಾವಿ ಕಲ್ಪನೆ ಎನ್ನುವುದು ನಾವು ವಿಷಯಗಳನ್ನು ಅಥವಾ ವ್ಯಕ್ತಿಗಳನ್ನು ಮಾನಸಿಕ ವರ್ಗಗಳಲ್ಲಿ ಇರಿಸುವ ಮನಸ್ಸಿನ ಸ್ಥಿತಿಯಾಗಿರುತ್ತದೆ.

ಪರಿಕಲ್ಪನಾತ್ಮಕವಲ್ಲದಿರುವುದು

ಪರಿಕಲ್ಪನಾತೀತತೆಯ ಹಲವು ಹಂತಗಳಿವೆ, ಆದರೆ ಒಂದಾದ ಹಂತವೆಂದರೆ ಪರಿಸ್ಥಿತಿ ಉದ್ಭವಿಸಿದಾಗ ಅದಕ್ಕೆ ಮುಕ್ತವಾಗಿರುವುದು. ಇದರಲ್ಲಿ ಎಲ್ಲ ಪರಿಕಲ್ಪನಾ ತಿಳುವಳಿಕೆಯನ್ನು ಕೈಬಿಡಬೇಕೆಂದರ್ಥವಿಲ್ಲ. ಉದಾಹರಣೆಗೆ, ಅನೇಕ ಜನರನ್ನು ಕಚ್ಚಿದ ನಾಯಿ ಇದ್ದರೆ, “ಕಚ್ಚುವ ನಾಯಿ” ಎಂಬ ವರ್ಗದಲ್ಲಿ ಯೋಚಿಸುವುದರಿಂದ ನಾವು ಆ ನಾಯಿಯ ಸುತ್ತ-ಮುತ್ತ ಜಾಗರೂಕರಾಗಿರುತ್ತೇವೆ. ಪ್ರಾಣಿಗಳ ಸುತ್ತಲೂ ನಮಗೆ ಸೂಕ್ತವಾದ ಎಚ್ಚರಿಕೆ ಇರುತ್ತದೆ, ಆದರೆ “ಆ ನಾಯಿ ಖಂಡಿತವಾಗಿಯೂ ನನ್ನನ್ನು ಕಚ್ಚುತ್ತದೆ, ಆದ್ದರಿಂದ ನಾನು ಅದರ ಹತ್ತಿರವೇ ಹೋಗುವುದಿಲ್ಲ” ಎಂಬ ಪೂರ್ವಭಾವಿ ಭಾವನೆ ನಮಗಿಲ್ಲ. ಉದ್ಭವಿಸುತ್ತಿರುವ ಪರಿಸ್ಥಿತಿಯನ್ನು ಸ್ವೀಕರಿಸುವ ನಡುವಿನ ಸೌಮ್ಯ ಸಮತೋಲನವು ಇಲ್ಲಿದೆ, ಆದರೆ ಅದೇ ಸಮಯದಲ್ಲಿ, ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅನುಭವಿಸುವುದನ್ನು ತಡೆಯುವ ಪೂರ್ವಭಾವಿ ಭಾವನೆಗಳು ಇಲ್ಲ.

ಎಲ್ಲಾ ಧ್ಯಾನಗಳಲ್ಲಿ ಅಗತ್ಯವಿರುವ ಪರಿಕಲ್ಪನಾರಹಿತತೆಯ ಮಟ್ಟವೆಂದರೆ ಪೂರ್ವಾಗ್ರಹಗಳಿಂದ ಸಂಪೂರ್ಣವಾಗಿ ಮುಕ್ತವಾದ ಮನಸ್ಸು.

ಯಾವುದೇ ನಿರೀಕ್ಷೆಗಳಿಲ್ಲದೆ ಮತ್ತು ಯಾವುದೇ ಚಿಂತೆಗಳಿಲ್ಲದೆ ಧ್ಯಾನ ಮಾಡುವುದು ಅತ್ಯಂತ ಸಾಮಾನ್ಯ ಸೂಚನೆಗಳಲ್ಲಿ ಒಂದಾಗಿದೆ. ಧ್ಯಾನ ಅವಧಿಯ ಸುತ್ತಲಿನ ಪೂರ್ವಭಾವಿ ಕಲ್ಪನೆಗಳು, ಉದಾಹರಣೆಗೆ, “ನನ್ನ ಧ್ಯಾನ ಅವಧಿ ಅದ್ಭುತವಾಗಿರಲಿದೆ” ಎಂಬ ನಿರೀಕ್ಷೆ, ಅಥವಾ “ನನ್ನ ಕಾಲುಗಳು ನೋಯುತ್ತವೆ” ಎಂಬ ಚಿಂತನೆ, ಅಥವಾ “ನಾನು ಯಶಸ್ವಿಯಾಗುವುದಿಲ್ಲ” ಎಂಬ ಆಲೋಚನೆ ಆಗಿರಬಹುದು. ಈ ನಿರೀಕ್ಷೆಗಳು ಮತ್ತು ಚಿಂತನೆಗಳು ಪೂರ್ವಭಾವಿ ಕಲ್ಪನೆಗಳಾಗಿವೆ, ನೀವು ಅವುಗಳನ್ನು ಮಾನಸಿಕವಾಗಿ ಮೌಖಿಕವಾಗಿ ಹೇಳುತ್ತೀರೋ ಇಲ್ಲವೋ ಎಂಬುದರಿಂದ ನಿರ್ಧಾರ ಬದಲಾಗುವುದಿಲ್ಲ. ಅಂತಹ ಆಲೋಚನೆಗಳು ನಿಮ್ಮ ಮುಂಬರುವ ಧ್ಯಾನ ಅವಧಿಯನ್ನು “ಅದ್ಭುತ ಅನುಭವ” ಅಥವಾ “ನೋವಿನ ಅನುಭವ” ಎಂಬ ಮಾನಸಿಕ ಪೆಟ್ಟಿಗೆಯಲ್ಲಿಗೆ ಹೊಂದಿಸುತ್ತವೆ. ಧ್ಯಾನಕ್ಕೆ ಪರಿಕಲ್ಪನಾತ್ಮಕವಲ್ಲದ ವಿಧಾನವೆಂದರೆ, ಸಂಭವಿಸುತ್ತಿರುವುದನ್ನು ಸ್ವೀಕರಿಸುವುದು ಮತ್ತು ಪರಿಸ್ಥಿತಿಯ ಬಗ್ಗೆ ತೀರ್ಪು ನೀಡದೆ ಧ್ಯಾನ ಸೂಚನೆಗಳ ಪ್ರಕಾರ ಅದನ್ನು ನಿಭಾಯಿಸುವುದಾಗಿರುತ್ತದೆ.

ಸಾರಾಂಶ

ವಿಭಿನ್ನ ರೀತಿಯ ಪರಿಕಲ್ಪನಾ ಚಿಂತನೆಯನ್ನು ಅರ್ಥಮಾಡಿಕೊಳ್ಳದೇ, ನಾವು ಇದನ್ನು ಎಲ್ಲಾ ಧ್ಯಾನ ಮತ್ತು ದೈನಂದಿನ ಜೀವನಕ್ಕೆ ಹಾನಿಕಾರಕವೆಂದು ತಪ್ಪಾಗಿ ಊಹಿಸಬಹುದು. ಹೆಚ್ಚಿನ ಧ್ಯಾನಗಳಲ್ಲಿ, ನಾವು ನಮ್ಮ ತಲೆಯಲ್ಲಿರುವ ಧ್ವನಿಯನ್ನು ಶಾಂತಗೊಳಿಸಬೇಕು ಮತ್ತು ಎಲ್ಲಾ ಪೂರ್ವಾಗ್ರಹಗಳನ್ನು ತ್ಯಜಿಸಬೇಕು. ಆದರೆ ಅತ್ಯಂತ ಮುಂದುವರಿದ ಸಾಧಕರನ್ನು ಹೊರತುಪಡಿಸಿ, ಧ್ಯಾನದೊಳಗೂ ಹೊರಗೂ ಏನನ್ನಾದರೂ ಅರ್ಥಮಾಡಿಕೊಳ್ಳಲು, ಅದನ್ನು ಪದಗಳಲ್ಲಿ ವ್ಯಕ್ತಪಡಿಸುತ್ತೇವೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಅದನ್ನು ಮನಸ್ಸಿನ ಮಾನಸಿಕ ವರ್ಗದಲ್ಲಿ ಇರಿಸಿಕೊಳ್ಳಬೇಕು.

Top