ವ್ಯಾಪಾರ ನಡೆಸಲು ಸಹಾಯ ಮಾಡುವ 5 ಬೌದ್ಧ ತತ್ವಗಳು

How to 5 tips business

ಸಾಮಾನ್ಯವಾಗಿ ಬೌದ್ಧಧರ್ಮವನ್ನು ಧ್ಯಾನದೊಂದಿಗೆ ಸಂಬಂಧಿಸಲಾಗುತ್ತದೆ. ಆದರೆ ಇದು ಯಾವುದೇ ಕ್ಷೇತ್ರಕ್ಕೆ ಅನ್ವಯಿಸಬಹುದಾದ ಚಿಂತನೆಯ ವಿಧಾನಗಳ ಕುರಿತು, ಅನೇಕ ಒಳನೋಟಗಳನ್ನು ಹೊಂದಿರುತ್ತದೆ. ಯಾವುದೇ ಯೋಜನೆ ಅಥವಾ ವ್ಯಾಪಾರವನ್ನು ನಡೆಸಲು ನಮಗೆ ಸಹಾಯ ಮಾಡುವ ಕೆಲವು ಬೌದ್ಧ ತತ್ವಗಳನ್ನು ಇಲ್ಲಿ ನೋಡೋಣ. 

ಗುರಿಯನ್ನು ವ್ಯಾಖ್ಯಾನಿಸಿ 

ಬೌದ್ಧ ಆಚರಣೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಒಂದು ಗುರಿ ಮತ್ತು ನಿರ್ದೇಶನದ ಸ್ಪಷ್ಟ ತಿಳುವಳಿಕೆಯನ್ನು ಹೊಂದಲು ಬೌದ್ಧ ಧರ್ಮವು ಒತ್ತಿಹೇಳುತ್ತದೆ. ಇದರ ಉದ್ದೇಶವು, ಗೊಂದಲದ ಭಾವನೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಮತ್ತು ನಮ್ಮ ಮನಸ್ಸು ಮತ್ತು ಹೃದಯದ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವುದಾಗಿರುತ್ತದೆ. ಈ ಅಂತಿಮ ಸ್ಥಿತಿಯನ್ನು "ಜ್ಞಾನೋದಯ" ಎಂದು ಕರೆಯಲಾಗುತ್ತದೆ. 

ಅದೇ ರೀತಿ, ನಾವು ಯಾವುದೇ ಯೋಜನೆ ಅಥವಾ ವ್ಯಾಪಾರವನ್ನು ಪ್ರಾರಂಭಿಸುವಾಗ, ಗುರಿಯನ್ನು ವ್ಯಾಖ್ಯಾನಿಸುವುದು ಮುಖ್ಯವಾಗಿರುತ್ತದೆ. ಇದರಿಂದ ಲಾಭವಾಗುತ್ತದೆಯೇ? ಇದು ಗ್ರಾಹಕರಿಗೆ ಒಂದು ನಿರ್ದಿಷ್ಟ ಮೌಲ್ಯವನ್ನು ರಚಿಸುತ್ತಿದೆಯೇ ಅಥವಾ ಅವರ ಕೆಲವು ಕಷ್ಟಕರ ಸಮಸ್ಯೆಗಳನ್ನು ಪರಿಹರಿಸುತ್ತದೆಯೇ? ಗುರಿಯನ್ನು ಹೆಚ್ಚು ನಿಖರವಾಗಿ ವ್ಯಾಖ್ಯಾನಿಸಿದಷ್ಟು, ಅದರ ದಾರಿಯ ದಿಕ್ಕನ್ನು ಸುಲಭವಾಗಿ ಕಂಡುಹಿಡಿಯಬಹುದು, ಮತ್ತು ಆ ಗುರಿಯನ್ನು ತಲುಪುವ ಸಂಭವನೀಯತೆಯು ಹೆಚ್ಚಾಗುವುದು. 

ಕಾರಣ ಮತ್ತು ಪರಿಣಾಮದ ಸಿದ್ಧಾಂತವನ್ನು ಪಾಲಿಸಿ 

ಗುರಿಯನ್ನು ವ್ಯಾಖ್ಯಾನಿಸಿದ ನಂತರ, ಈ ಗುರಿಯನ್ನು ತಲುಪುವ ಕಾರಣಗಳ ಲೆಕ್ಕಾಚಾರವನ್ನು ನಾವು ಮಾಡಬೇಕಾಗುತ್ತದೆ. ಉದಾಹರಣೆಗೆ, ಜ್ಞಾನೋದಯಕ್ಕಾಗಿ, ನಮ್ಮ ವಿನಾಶಕಾರಿ ನಡವಳಿಕೆಯನ್ನು ನಿಲ್ಲಿಸಬೇಕು ಮತ್ತು ನಮ್ಮ ಮನಸ್ಸಿನ ಉತ್ತಮ ಗುಣಗಳನ್ನು ತರಬೇತುಗೊಳಿಸಬೇಕು, ಪ್ರಪಂಚವನ್ನು ಗ್ರಹಿಸುವ ಮತ್ತು ಅದರೊಂದಿಗೆ ವ್ಯವಹರಿಸುವ ರಚನಾತ್ಮಕ, ವಾಸ್ತವಿಕ ವಿಧಾನಗಳೊಂದಿಗೆ ನಮ್ಮನ್ನು ಪರಿಚಯಿಸಿಕೊಳ್ಳಬೇಕು. 

ವ್ಯಾಪಾರದ ಯೋಜನೆಯ ಸಂದರ್ಭದಲ್ಲಿ, ನಮ್ಮ ಅಂತಿಮ ಗುರಿಯತ್ತ ಕರೆದೊಯ್ಯುವ ಕಾರಣಗಳನ್ನು ಕಂಡುಹಿಡಿಯಲು ನಾವು ತರ್ಕವನ್ನು ಬಳಸಬೇಕಾಗುತ್ತದೆ. ಈ ಪ್ರಕ್ರಿಯೆಯು ರಿವರ್ಸ್ ಎಂಜಿನಿಯರಿಂಗ್‌ನಂತಿದೆ. ಒಂದು ನಿರ್ದಿಷ್ಟ ಗುರಿಗೆ ಕಾರಣವಾಗುವ ಕ್ರಿಯೆಗಳ ತಾರ್ಕಿಕ ಅನುಕ್ರಮವನ್ನು ಪತ್ತೆಹಚ್ಚಲು ಪ್ರಾರಂಭಿಸುತ್ತೇವೆ. ಈ ಪ್ರಕ್ರಿಯೆಯು, ಗುರಿಯನ್ನು ಸಾಧಿಸಲು ಅಗತ್ಯವಿರುವ ಹಂತಗಳನ್ನು ವ್ಯಾಖ್ಯಾನಿಸಲು ಸಹಾಯ ಮಾಡುತ್ತದೆ ಮತ್ತು ಯೋಜನೆಯ ನಕ್ಷೆಗಾಗಿ ಉತ್ತಮವಾದ ಅಡಿಪಾಯವೊಂದನ್ನು ಒದಗಿಸುತ್ತದೆ. 

ಸಹಾನುಭೂತಿ: ಗ್ರಾಹಕರ ಸಮಸ್ಯೆಯನ್ನು ಪರಿಹರಿಸಿ 

ಸಹಾನುಭೂತಿಯು, ಪ್ರಮುಖ ಬೌದ್ಧ ತತ್ವಗಳಲ್ಲಿ ಒಂದಾಗಿದೆ. ಬುದ್ಧನ ಬೋಧನೆಗಳ ಪ್ರಕಾರ: 

ಸಹಾನುಭೂತಿಯು ಇತರರು ತಮ್ಮ ದುಃಖಗಳಿಂದ ದೂರವಾಗುವಂತೆ ಬಯಸುವುದಾಗಿದೆ.

ಅದಕ್ಕೂ ವ್ಯಾಪಾರಕ್ಕೂ ಏನು ಸಂಬಂಧ? ವ್ಯಾಪಾರವು ಗ್ರಾಹಕರ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ವ್ಯಾಪಾರದಿಂದ ಒದಗಿಸಲಾದ ಪರಿಹಾರವು ಇತರ ಪರಿಹಾರಗಳಿಗಿಂತ ಉತ್ತಮವಾಗಿದ್ದರೆ, ಅದು ಸ್ಪರ್ಧೆಯ ಓಟವನ್ನು ಗೆಲ್ಲುತ್ತದೆ. ಆದ್ದರಿಂದ, ನಮ್ಮ ಸಂಭಾವ್ಯ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರ ಬಗ್ಗೆ ಸಹಾನುಭೂತಿಯ ಮನೋಭಾವವನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ನಮ್ಮ ಗ್ರಾಹಕರು ತಮ್ಮ ಜೀವನದಲ್ಲಿ ಎದುರಿಸುತ್ತಿರುವ ಕೆಲವು ನೈಜ ಸಮಸ್ಯೆಗಳನ್ನು ನಾವು ಗುರುತಿಸಿ, ಅವನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಆ ತಿಳುವಳಿಕೆಯ ಆಧಾರದ ಮೇಲೆ ಆ ಸಮಸ್ಯೆಯನ್ನು ಆದಷ್ಟು ಅತ್ಯುತ್ತಮವಾದ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸಬೇಕು. ವ್ಯಾಪಾರದಲ್ಲಿ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವ ಅಥವಾ ಬಳಕೆದಾರ-ಕೇಂದ್ರಿತ ಮಾರ್ಗಕ್ಕೆ ಸಹಾನುಭೂತಿಯು ಅಡಿಪಾಯವಾಗಿದೆ. 

ಅಶಾಶ್ವತತೆ: ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಿ 

ಬೌದ್ಧ ವಿಶ್ಲೇಷಣೆಯು ವಾಸ್ತವದ ಬಗ್ಗೆ ನಮಗೆ ಮತ್ತೊಂದು ಅಮೂಲ್ಯವಾದ ಒಳನೋಟವನ್ನು ನೀಡುತ್ತದೆ: ಎಲ್ಲವೂ ನಿರಂತರವಾಗಿ ಬದಲಾಗುತ್ತಿರುತ್ತದೆ - ನಾವು, ಪರಿಸರ ಮತ್ತು ನಮ್ಮ ಸುತ್ತಲಿನ ಎಲ್ಲಾ ಜನರು. ಸ್ಪಷ್ಟವಾಗಿ ಮತ್ತು ಮಜಬೂತಾಗಿ ತೋರುವ ಒಂದು ಯೋಚನೆಯಲ್ಲಿ ಸಿಲುಕಿಹಾಕಿಕೊಳ್ಳುವುದು ಬಹಳಾ ಸುಲಭ; ಆದರೆ, ವೇಗವಾಗಿ ಬದಲಾಗುತ್ತಿರುವ ವರ್ತಮಾನದಲ್ಲಿ, ಇಂತಹ ಯೋಚನಾಕ್ರಿಯೆಯು ಸಂಕುಚಿತ ಚಿಂತನೆ, ಮೊಂಡುತನ ಮತ್ತು ನಮ್ಯತೆಗೆ ಕಾರಣವಾಗುತ್ತದೆ. 

ನೆಟ್‌ಫ್ಲಿಕ್ಸ್ನ ಉದಾಹರಣೆಯನ್ನು ತೆಗೆದುಕೊಳ್ಳೋಣ. ಇಂಟರ್ನೆಟ್ ಮಾಧ್ಯಮವು ವೀಕ್ಷಣೆಯ ಮಾದರಿಗಳನ್ನು ಬದಲಾಯಿಸಿದೆ ಎಂದು ಅವರು ಅರಿತುಕೊಂಡರು. ವೀಡಿಯೋವನ್ನು ನೋಡಲು ಹಳೆಯ ಕಾಲದ ಯೋಚನೆಯು ಒಂದೇ ಆಗಿರುವುದು: DVDಯನ್ನು ಬಾಡಿಗೆ ಪಡೆದುಕೊಳ್ಳುವುದು. ಆದರೆ ಹಾಗೆ ಮಾಡಲು ಸುಲಭವಾದ ಮಾರ್ಗವಿದೆ ಎಂದು ನೆಟ್‌ಫ್ಲಿಕ್ಸ್ ಅರಿತುಕೊಂಡಿತು - ವೀಡಿಯೊ ಸ್ಟ್ರೀಮಿಂಗ್. ಇಡೀ ಮಾಧ್ಯಮ ಬಳಕೆಯ ಉದ್ಯಮವು, ಮಾರುಕಟ್ಟೆ ಮತ್ತು ಬಳಕೆದಾರರ ಅಭ್ಯಾಸಗಳ ನಶ್ವರತೆಯನ್ನು ಅರಿತುಕೊಳ್ಳಲಿಲ್ಲ. ಆದರೆ ನೆಟ್‌ಫ್ಲಿಕ್ಸ್ ಅದನ್ನು ಮೊದಲು ಅರಿತುಕೊಂಡು, ಇಡೀ ಉದ್ಯಮವನ್ನೇ ಶಾಶ್ವತವಾಗಿ ಬದಲಾಯಿಸಿತು. 

ನೀತಿಶಾಸ್ತ್ರ: ನಿಮ್ಮನ್ನು, ನಿಮ್ಮ ತಂಡವನ್ನು ಮತ್ತು ಗ್ರಾಹಕರನ್ನು ಗೌರವಿಸಿ 

ಬೌದ್ಧ ನೀತಿಶಾಸ್ತ್ರವು ಅಹಿಂಸೆಯ ತತ್ವವನ್ನು ಆಧರಿಸಿದೆ. ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ ಮತ್ತು ದುಃಖವನ್ನು ಬಯಸುವುದಿಲ್ಲ ಎಂದು ನಾವು ಅರಿತುಕೊಳ್ಳುತ್ತೇವೆ. ಈ ತಿಳುವಳಿಕೆಯ ಮೇಲೆ ನಾವು ನಮ್ಮ ಕ್ರಿಯೆಗಳನ್ನು ಆಧರಿಸಿದರೆ ಮತ್ತು ಇತರರಿಗೆ ಹಾನಿಯುಂಟುಮಾಡದಂತಿರಲು ಪ್ರಯತ್ನಿಸಿದರೆ, ನಾವು ಅವರ ಗೌರವ ಮತ್ತು ವಿಶ್ವಾಸವನ್ನು ಗಳಿಸುತ್ತೇವೆ. 

ನಾವು ನಮ್ಮ ಸಹೋದ್ಯೋಗಿಗಳನ್ನು ಗೌರವಿಸಿದರೆ, ಅದರಿಂದ ತಂಡದಲ್ಲಿ ವಿಶ್ವಾಸ ಮತ್ತು ತಿಳುವಳಿಕೆಯಿರುತ್ತದೆ. ನಾವು ಜನರ ಬೆನ್ನ ಹಿಂದೆ ಅಥವಾ ಅವರ ಮುಖಕ್ಕೆ ಅಸಹನೀಯವಾದ ಮಾತುಗಳನ್ನಾಡದೆ, ಅವರೊಂದಿಗೆ ಸ್ಪಷ್ಟವಾಗಿ ಮಾತುಕತೆ ನಡೆಸಲು ಪ್ರಯತ್ನಿಸುತ್ತೇವೆ. ಇದಲ್ಲದೆ, ನಮ್ಮ ಗ್ರಾಹಕರನ್ನು ಹೆಚ್ಚು ಗೌರವಿಸಿದಷ್ಟು, ಅವರಿಂದ ಅಷ್ಟೇ ವಿಶ್ವಾಸ ಮತ್ತು ನಿಷ್ಠೆಯನ್ನು ನಾವು ಮರಳಿ ಪಡೆಯುತ್ತೇವೆ. ಜಪ್ಪೋಸ್ (Zappos) ನಂತಹ ಉತ್ತಮ ಕಂಪನಿಗಳು ತಮ್ಮ ವ್ಯವಹಾರದ ಮಾದರಿಯನ್ನು, ಗ್ರಾಹಕರ ಅಗತ್ಯತೆ ಮತ್ತು ಕಾರ್ಮಿಕರ ನಡುವಿನ ಸಮಚಿತ್ತತೆ ಮತ್ತು ಪಾರದರ್ಶಕತೆಯನ್ನು ಆಧರಿಸಿವೆ. 

ಸಾರಾಂಶ 

ನಮ್ಮ ವ್ಯಾಪಾರವನ್ನು ಬಲಪಡಿಸಲು ನಾವು 5 ಬೌದ್ಧ ತತ್ವಗಳನ್ನು ಬಳಸಬಹುದು. ಇವುಗಳೆಂದರೆ: 

  • ಗುರಿಯನ್ನು ವ್ಯಾಖ್ಯಾನಿಸಿ 
  • ಕಾರಣ ಮತ್ತು ಪರಿಣಾಮದ ಸಿದ್ಧಾಂತವನ್ನು ಅವಲಂಬಿಸಿ 
  • ಗ್ರಾಹಕರ ಬಗ್ಗೆ ಅನುಭೂತಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಿ 
  • ಅಶಾಶ್ವತತೆಯ ಬಗ್ಗೆ ಜಾಗರೂಕರಾಗಿರಿ ಮತ್ತು ಹೊಂದಿಕೊಳ್ಳುವಂತಾಗಿರಿ ಮತ್ತು ನವೀನರಾಗಿರಿ 
  • ನೈತಿಕ ತತ್ವಗಳನ್ನು ಅನುಸರಿಸಿ ಮತ್ತು ಸಹೋದ್ಯೋಗಿಗಳಿಗೆ ಮತ್ತು ಗ್ರಾಹಕರಿಗೆ ಗೌರವವಿರಲಿ. 
Top