Arrow left ಹಿಂದೆ
ಹೇಗೆ…
ಲೇಖನ 11 ರಲ್ಲಿ 11

ಭೌತವಾದವನ್ನು ಹೇಗೆ ನಿಭಾಯಿಸುವುದು

How deal with materialism

ಭೌತಿಕ ವಸ್ತುಗಳು ಕೇವಲ ದೈಹಿಕ ಸೌಕರ್ಯವನ್ನು ನೀಡುತ್ತವೆ, ಮಾನಸಿಕ ನೆಮ್ಮದಿಯನ್ನು ನೀಡುವುದಿಲ್ಲ. ಒಬ್ಬ ಭೌತವಾದಿ ವ್ಯಕ್ತಿಯ ಮೆದುಳು ಮತ್ತು ನಮ್ಮ ಮೆದುಳು ಒಂದೇ ಆಗಿರುತ್ತದೆ. ಆದ್ದರಿಂದ, ನಾವಿಬ್ಬರೂ ಮಾನಸಿಕ ನೋವು, ಒಂಟಿತನ, ಭಯ, ಅನುಮಾನ, ಅಸೂಯೆಯನ್ನು ಅನುಭವಿಸುತ್ತೇವೆ. ಅವು ಯಾರ ಮನಸ್ಸನ್ನು ಬೇಕಾದರೂ ಕದಡುತ್ತವೆ. ಅವುಗಳನ್ನು ಹಣದಿಂದ ತೆಗೆದುಹಾಕುವುದು ಅಸಾಧ್ಯ. ವಿಚಲಿತ ಮನಸ್ಸಿರುವ ಕೆಲವರು, ಅತಿಯಾದ ಒತ್ತಡದಿಂದ ಕೆಲವು ಔಷಧಿಗಳನ್ನು ಸೇವಿಸುತ್ತಾರೆ. ಅವು ತಾತ್ಕಾಲಿಕವಾಗಿ ಒತ್ತಡವನ್ನು ಕಡಿಮೆ ಮಾಡಬಹುದಾದರೂ, ಅವುಗಳಿಂದ ಅನೇಕ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ನೀವು ಮನಸ್ಸಿನ ಶಾಂತಿಯನ್ನು ಖರೀದಿಸಲು ಸಾಧ್ಯವಿಲ್ಲ. ಯಾರೂ ಅದನ್ನು ಮಾರುವುದಿಲ್ಲವಾದರೂ, ಪ್ರತಿಯೊಬ್ಬರೂ ಮನಸ್ಸಿನ ಶಾಂತಿಯನ್ನು ಬಯಸುತ್ತಾರೆ. ಎಷ್ಟೋ ಜನರು ಟ್ರ್ಯಾಂಕ್ವಿಲೈಜರ್‌ಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಒತ್ತಡವಿರುವ ಮನಸ್ಸಿಗಿರುವ ನಿಜವಾದ ಔಷಧವೆಂದರೆ ಸಹಾನುಭೂತಿ. ಆದ್ದರಿಂದ, ಭೌತಿಕ ಜನರಿಗೆ ಬೇಕಾಗಿರುವುದು ಸಹಾನುಭೂತಿ.  

ಉತ್ತಮ ಆರೋಗ್ಯಕ್ಕೆ ಮನಸ್ಸಿನ ಶಾಂತಿಯೇ ಅತ್ಯುತ್ತಮ ಮದ್ದು. ಇದು ಭೌತಿಕ ಅಂಶಗಳಿಗೆ ಹೆಚ್ಚಿನ ಸಮತೋಲನವನ್ನು ತರುತ್ತದೆ. ಸಾಕಷ್ಟು ನಿದ್ರೆ ಪಡೆಯುವುದರಿಂದಲೂ ಹೀಗಾಗುತ್ತದೆ. ನಾವು ಶಾಂತಿಯುತ ಮನಸ್ಸಿನೊಂದಿಗೆ ಮಲಗಿದರೆ, ನಮಗೆ ಯಾವುದೇ ತೊಂದರೆಗಳಿರುವುದಿಲ್ಲ ಮತ್ತು ನಾವು ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಬಹಳಷ್ಟು ಜನರು ಸುಂದರವಾದ ಮುಖವನ್ನು ಪಡೆಯಲು ಬಹಳಾ ಕಾಳಜಿ ವಹಿಸುತ್ತಾರೆ. ಆದರೆ ನೀವು ಕೋಪಗೊಂಡರೆ, ನಿಮ್ಮ ಮುಖಕ್ಕೆ ಎಷ್ಟೇ ಬಣ್ಣ ಬಳಿದರೂ ಅದರಿಂದ ಸಹಾಯವಾಗುವುದಿಲ್ಲ. ನೀವು ಕುರೂಪಿಯಾಗಿಯೇ ಕಾಣುತ್ತೀರಿ. ಆದರೆ ನಿಮ್ಮಲ್ಲಿ ಕೋಪವಿಲ್ಲದೆ, ನಗುಮೊಗವಿದ್ದರೆ, ನಿಮ್ಮ ಮುಖವು ಆಕರ್ಷಕವಾಗಿ, ಹೆಚ್ಚು ಲಕ್ಷಣವಾಗಿ ಕಾಣುತ್ತದೆ. 

ನಾವು ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ಬಲು ಪ್ರಯತ್ನಿಸಿದರೆ, ನಮಗೆ ಕೋಪವೇರಿದಾಗ, ಅದು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತದೆ. ಇದು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವಂತಿರುತ್ತದೆ. ನಮಗೆ ವೈರಸೊಂದು ಆಕ್ರಮಿಸಿದಾಗ ಹೆಚ್ಚು ತೊಂದರೆ ಆಗುವುದಿಲ್ಲ. ಆದ್ದರಿಂದ, ನಮಗೆ ಸಮಗ್ರ ದೃಷ್ಟಿಕೋನ ಮತ್ತು ಸಹಾನುಭೂತಿ ಬೇಕು. ನಂತರ, ಪ್ರತಿಯೊಬ್ಬರ ಪರಸ್ಪರ ಸಂಬಂಧದ ಪರಿಚಿತತೆ ಮತ್ತು ವಿಶ್ಲೇಷಣೆಯ ಮೂಲಕ, ನಾವು ಹೆಚ್ಚಿನ ಶಕ್ತಿಯನ್ನು ಪಡೆಯಬಹುದು. 

ಒಳ್ಳೆಯತನವನ್ನು ಬೆಳೆಸಿಕೊಳ್ಳಲು ನಾವೆಲ್ಲರೂ ಒಂದೇ ರೀತಿಯ ಸಾಮರ್ಥ್ಯವನ್ನು ಹೊಂದಿದ್ದೇವೆ. ಆದ್ದರಿಂದ ಒಮ್ಮೆ ನಿಮ್ಮನ್ನು ನೀವೇ ನೋಡಿ. ನಿಮ್ಮಲ್ಲಿರುವ ಎಲ್ಲಾ ಸಕಾರಾತ್ಮಕ ಸಾಮರ್ಥ್ಯಗಳನ್ನು ನೋಡಿ. ನಕಾರಾತ್ಮಕವಾದವುಗಳೂ ಇವೆ, ಆದರೆ ಒಳ್ಳೆಯ ಕಾರ್ಯಗಳಿಗಾಗಿ ಬೇಕಾಗಿರುವ ಸಾಮರ್ಥ್ಯವೂ ಇದೆ. ಮೂಲಭೂತ ಮಾನವ ಸ್ವಭಾವವು ನಕಾರಾತ್ಮಕ್ಕಿಂತ ಹೆಚ್ಚು ಸಕಾರಾತ್ಮಕವಾಗಿರುತ್ತದೆ. ನಮ್ಮ ಜೀವನವು ಸಹಾನುಭೂತಿಯಿಂದ ಪ್ರಾರಂಭವಾಗುತ್ತದೆ. ಆದ್ದರಿಂದ, ಸಹಾನುಭೂತಿಯ ಬೀಜವು, ಕೋಪದ ಬೀಜಕ್ಕಿಂತ ಪ್ರಬಲವಾಗಿರುತ್ತದೆ. ಆದ್ದರಿಂದ, ನಿಮ್ಮನ್ನು ನೀವೇ ಹೆಚ್ಚು ಸಕಾರಾತ್ಮಕ ದೃಷ್ಟಿಯಲ್ಲಿ ನೋಡಿ. ಇದು ಹೆಚ್ಚಿದ ಶಾಂತ ಮನಸ್ಥಿತಿಯನ್ನು ತರುತ್ತದೆ. ನಂತರ ಸಮಸ್ಯೆಗಳು ಎದ್ದಾಗ, ಅವುಗಳನ್ನು ನಿಭಾಯಿಸುವುದು ಸುಲಭವಾಗುತ್ತದೆ. 

ನಾವು ಸಮಸ್ಯೆಯನ್ನು ಎದುರಿಸುತ್ತಿರುವಾಗ, ನಾವು ಅದನ್ನು ವಿಶ್ಲೇಷಿಸಿ, ಅದನ್ನು ತಪ್ಪಿಸಲು ಅಥವಾ ಅದನ್ನು ಜಯಿಸಲು ಮಾರ್ಗವನ್ನು ಕಂಡರೆ ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಮಹಾನ್ ಭಾರತೀಯ ಬೌದ್ಧ ಧರ್ಮಗುರು, ಶಾಂತಿದೇವ ಉಲ್ಲೇಖಿಸಿದ್ದಾರೆ. ಅದನ್ನು ನಮಗೆ ಜಯಿಸಲು ಸಾಧ್ಯವಾಗದಿದ್ದಲ್ಲಿ, ಅದರ ಬಗ್ಗೆ ಚಿಂತಿಸುವುದರಿಂದ ಯಾವುದೇ ಫಲವಿಲ್ಲ. ವಾಸ್ತವವನ್ನು ಒಪ್ಪಿಕೊಳ್ಳಿ. 

Top