ಪರಮಪೂಜ್ಯ ದಲೈ ಲಾಮಾ ಅವರ 90 ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಮತ್ತು 21 ನೇ ಶತಮಾನಕ್ಕೆ ಅವರ ಆಧ್ಯಾತ್ಮಿಕ ಬೋಧನೆಗಳ ಪ್ರಸ್ತುತತೆಯ ಬಗ್ಗೆ ಇಂದು ನಿಮ್ಮೊಂದಿಗೆ ಮಾತನಾಡುವುದು ಒಂದು ಅತ್ಯಂತ ಗೌರವಾನ್ವಿತ ವಿಷಯವಾಗಿದೆ. ಅವರು ಮತ್ತೆ ಮತ್ತೆ ಹಿಂದಿರುಗುವ ಮೂರು ವಿಷಯಗಳಿಂದ ಪರಮಪೂಜ್ಯರವರು ಅತ್ಯಂತ ಮಹತ್ವವೆಂದು ಪರಿಗಣಿಸುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಇವು, ಮಾನವೀಯತೆಯ ಏಕತೆ, ಅವರ ದೈನಂದಿನ ಧ್ಯಾನದ ಎರಡು ಕೇಂದ್ರಬಿಂದುಗಳು ಮತ್ತು ಅವರ ನಾಲ್ಕು ಮಹಾನ್ ಬದ್ಧತೆಗಳಾಗಿವೆ. ವಿಜ್ಞಾನಿಗಳೊಂದಿಗಿನ ಅವರ ಚರ್ಚೆಗಳಂತಹ ಇನ್ನೂ ಅನೇಕ ಅಂಶಗಳನ್ನು ಉಲ್ಲೇಖಿಸಬಹುದು, ಆದರೆ ನಾನು ಈ ಮೂರು ವಿಷಯಗಳ ಮೇಲೆ ಮಾತ್ರ ಗಮನಹರಿಸಲು ಬಯಸುತ್ತೇನೆ. ಪರಮಪೂಜ್ಯರ ಅವರ ಆಲೋಚನೆಗಳು ಏನಿರಬಹುದು ಎಂದು ನನಗೆ ಊಹಿಸಲಾಗುವುದಿಲ್ಲ, ಆದರೆ ಅವರು ಸಾರ್ವಜನಿಕವಾಗಿ ಹಂಚಿಕೊಂಡದ್ದನ್ನು ಆಧರಿಸಿ, ನಾವು ಕೆಲವು ಅಂಶಗಳನ್ನು ಊಹಿಸಬಹುದು.
ಮೊದಲನೆಯದು ಮಾನವೀಯತೆಯ ಏಕತೆ - ಮತ್ತು ಹೆಚ್ಚು ವಿಶಾಲವಾಗಿ ಹೇಳುವುದಾದರೆ, ಸಮಯ ಮತ್ತು ಸ್ಥಳದಾದ್ಯಂತ ಎಲ್ಲಾ ಸಂವೇದನಾಶೀಲ ಜೀವಿಗಳ ಏಕತೆ. ಈ ಏಕತೆಯು, ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ ಮತ್ತು ಯಾರೂ ಬಳಲಲು ಬಯಸುವುದಿಲ್ಲ ಎಂಬ ಅಂಶವನ್ನು ಆಧರಿಸಿದೆ. ಜಗತ್ತು ಎದುರಿಸುತ್ತಿರುವ ಜಾಗತಿಕ ತಾಪಮಾನ ಏರಿಕೆಯಂತಹ ತೊಂದರೆಗಳು ಎಲ್ಲರ ಮೇಲೆ ಪರಿಣಾಮ ಬೀರುವುದರಿಂದ, ಅವುಗಳನ್ನು ನಿಭಾಯಿಸಲು ತೆಗೆದುಕೊಳ್ಳುವ ಯಾವುದೇ ಕ್ರಮಗಳು ಎಲ್ಲರ ಮೇಲೂ ಪರಿಣಾಮ ಬೀರುತ್ತವೆ. ಬುದ್ಧಿವಂತಿಕೆಯಿಂದ ಆಯ್ಕೆ ಮಾಡುವುದು ಎಲ್ಲಾ ಸಂವೇದನಾಶೀಲ ಜೀವನದ ಏಕತೆ ಮತ್ತು ಪರಸ್ಪರ ಸಂಬಂಧವನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ.
ಪರಮಪೂಜ್ಯರು ಆಗಾಗ್ಗೆ ಹೇಳುವ ಎರಡನೆಯ ಮಾತೆಂದರೆ ಅವರ ದೈನಂದಿನ ಅಭ್ಯಾಸವು ಬೋಧಿಚಿತ್ತ - ಎಲ್ಲಾ ಜೀವಿಗಳ ಹಿತದೃಷ್ಟಿಯಿಂದ ಜ್ಞಾನೋದಯವನ್ನು ಸಾಧಿಸುವ ಸಹಾನುಭೂತಿಯ ಬಯಕೆ - ಮತ್ತು ಶೂನ್ಯತೆಯ ದೃಷ್ಟಿಕೋನದ ಮೇಲೆ ಕೇಂದ್ರೀಕರಿಸಿರುತ್ತದೆ. ಬೋಧಿಚಿತ್ತವು ಜನರಿಗೆ ತಮ್ಮ ನ್ಯೂನತೆಗಳನ್ನು ನಿವಾರಿಸಲು ಮತ್ತು ಎಲ್ಲಾ ಜೀವಿಗಳಿಗೆ ಉತ್ತಮ ಸಹಾಯವಾಗುವಂತೆ ಅವರ ಸಾಮರ್ಥ್ಯಗಳನ್ನು ಅರಿತುಕೊಳ್ಳುವತ್ತ ಕೆಲಸ ಮಾಡಲು ಧೈರ್ಯ ಮತ್ತು ಉದ್ದೇಶವನ್ನು ನೀಡುತ್ತದೆ. ಅನಿಶ್ಚಿತ ಭವಿಷ್ಯದ ಸಂದರ್ಭದಲ್ಲಿ ಇದು ವಿಶೇಷವಾಗಿ ಮುಖ್ಯವಾಗಿದೆ. ಶೂನ್ಯತೆಯ ಸರಿಯಾದ ದೃಷ್ಟಿಕೋನದಿಂದ, ಜನರು ತಾವು, ಇತರರು ಮತ್ತು ಅವರು ಎದುರಿಸುವ ಸವಾಲುಗಳು ನಿಜವಾಗಿ ಹೇಗೆ ಅಸ್ತಿತ್ವದಲ್ಲಿವೆ ಎಂಬುದರ ಕುರಿತು ಹೊಂದಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತಾರೆ. ಪರಿಣಾಮವಾಗಿ, ಅವರು ಕಾರಣ ಮತ್ತು ಪರಿಣಾಮದ ಆಧಾರದ ಮೇಲೆ ಸ್ಪಷ್ಟತೆ, ಒಳನೋಟ ಮತ್ತು ಪರಿಣಾಮಕಾರಿ ಕ್ರಿಯೆಯೊಂದಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.
ನಂತರ ನಾವು ಪರಮಪೂಜ್ಯರ ನಾಲ್ಕು ಮಹಾನ್ ಬದ್ಧತೆಗಳ ಬಗ್ಗೆ ಮಾತನಾಡೋಣ, ಅವುಗಳು, ಜಗತ್ತಿನಲ್ಲಿನ ಅವರ ಹೆಚ್ಚಿನ ಚಟುವಟಿಕೆಗಳನ್ನು ವ್ಯಾಖ್ಯಾನಿಸಿವೆ. ಮೊದಲನೆಯದು ಜಾತ್ಯತೀತ ನೀತಿಶಾಸ್ತ್ರವನ್ನು - ಅವುಗಳೆಂದರೆ, ದಯೆ, ಪ್ರಾಮಾಣಿಕತೆ ಮತ್ತು ಕ್ಷಮೆಯಂತಹ ಸಾರ್ವತ್ರಿಕ ಮೌಲ್ಯಗಳನ್ನು - ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಚಯಿಸುವ ಮೂಲಕ ಪ್ರಚಾರ ಮಾಡುವುದು. ಇಂದಿನ ಮಕ್ಕಳು ನಾಳೆಯ ಸವಾಲುಗಳ ಭಾರವನ್ನು ಎದುರಿಸಬೇಕಾಗುತ್ತದೆ. ಅವರ ನಿರ್ಧಾರಗಳನ್ನು ಮಾರ್ಗದರ್ಶನ ನೀಡಲು ಮತ್ತು ಹೆಚ್ಚು ಸಹಾನುಭೂತಿಯ ಜಗತ್ತನ್ನು ನಿರ್ಮಿಸಲು ಅವರಿಗೆ ಭೌತಿಕ ಮೌಲ್ಯಗಳಲ್ಲ, ಆಂತರಿಕ ಮೌಲ್ಯಗಳು ಬೇಕಾಗಿರುತ್ತವೆ.
ಎರಡನೆಯದು, ಬೌದ್ಧ ಸಂಪ್ರದಾಯಗಳಲ್ಲಿ ಮತ್ತು ವಿಶ್ವದ ಪ್ರಮುಖ ಧರ್ಮಗಳಲ್ಲಿ ಧಾರ್ಮಿಕ ಸಾಮರಸ್ಯಕ್ಕಾಗಿ ಇರುವ ಅವರ ಬದ್ಧತೆಯಾಗಿರುತ್ತದೆ. ಧರ್ಮದಲ್ಲಿ ಬೇರೂರಿರುವ ಸಂಘರ್ಷವು ಹಳೆಯದು ಎಂದು ಪರಮಪೂಜ್ಯರು ಆಗಾಗ್ಗೆ ಹೇಳುತ್ತಾರೆ. ಈ ಶತಮಾನದಲ್ಲಿ ನಿಜವಾದ ಪರಿಹಾರಗಳು ಸಂಭಾಷಣೆ, ಪರಸ್ಪರ ಗೌರವ ಮತ್ತು ರಾಜಿಯಿಂದ ಮಾತ್ರ ಬರುತ್ತವೆ.
ಮೂರನೆಯದಾಗಿ, ಪರಮಪೂಜ್ಯರು ಟಿಬೆಟಿಯನ್ ಸಂಸ್ಕೃತಿಯನ್ನು - ಅದರ ಭಾಷೆ, ಔಷಧ, ಪರಿಸರ ಮತ್ತು ನಳಂದ ಸಂಪ್ರದಾಯವನ್ನು - ಸಂರಕ್ಷಿಸಲು ಬದ್ಧರಾಗಿದ್ದಾರೆ. ಟಿಬೆಟಿಯನ್ ಸಂಸ್ಕೃತಿಯು ಬೌದ್ಧಧರ್ಮವನ್ನು ಆಧರಿಸಿದೆ ಮತ್ತು ಟಿಬೆಟಿಯನ್ ಬೌದ್ಧಧರ್ಮವು ನಳಂದ ಸಂಪ್ರದಾಯದಲ್ಲಿ ಅಡಕವಾಗಿರುವ ಭಾರತದಲ್ಲಿನ ಬೌದ್ಧಧರ್ಮದ ಸಂಪೂರ್ಣ ಬೆಳವಣಿಗೆಯನ್ನು ಸಂರಕ್ಷಿಸುವಲ್ಲಿ ವಿಶಿಷ್ಟವಾಗಿದೆ. ತರ್ಕ ಮತ್ತು ಚರ್ಚೆಯಲ್ಲಿ ಕಠಿಣ ತರಬೇತಿಯನ್ನು ಹೊಂದಿರುವ ಈ ಸಂಪ್ರದಾಯವು, ಇಂದಿನ ತಪ್ಪು ಮಾಹಿತಿ ಮತ್ತು ವಿರೂಪವನ್ನು ಎದುರಿಸಲು ಆಗಿರುವ ಸಾಧನವಾಗಿ, ವಿಶೇಷವಾಗಿ ಮುಖ್ಯವಾಗಿದೆ. ಟಿಬೆಟಿಯನ್ ಭಾಷೆಯು ಭಾರತೀಯ ಬೌದ್ಧ ಗ್ರಂಥಗಳ ಸಂಪೂರ್ಣ ಅನುವಾದಗಳನ್ನು ಹೊಂದಿದೆ. ಟಿಬೆಟಿಯನ್ ಔಷಧವು ಇತರ ವ್ಯವಸ್ಥೆಗಳು ವಿಫಲವಾದಾಗ ಆಯ್ಕೆಗಳನ್ನು ಒದಗಿಸುತ್ತದೆ. ಮತ್ತು ಟಿಬೆಟ್‌ನ ದುರ್ಬಲ ಪರಿಸರವನ್ನು ಸಂರಕ್ಷಿಸುವುದು ಏಷ್ಯಾದಾದ್ಯಂತ ಮುಖ್ಯವಾಗಿದೆ, ಏಕೆಂದರೆ ಅದರ ನದಿಗಳು ಖಂಡದ ಹೆಚ್ಚಿನ ಭಾಗಕ್ಕೆ ನೀರನ್ನು ಒದಗಿಸುತ್ತವೆ.
ನಾಲ್ಕನೆಯದು, ಮನಸ್ಸಿನ ಮೇಲಿನ ಭಾರತದ ಪ್ರಾಚೀನ ಬೋಧನೆಗಳನ್ನು, ಬೌದ್ಧ ಮತ್ತು ಬೌದ್ಧೇತರ, ಎರಡನ್ನೂ ಭಾರತದ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮರುಸಂಘಟಿಸಲು ಪರಮಪೂಜ್ಯರು ಮಾಡುತ್ತಿರುವ ಪ್ರಯತ್ನ. ಈ ಬೋಧನೆಗಳು ಮನಸ್ಸು ಮತ್ತು ಭಾವನೆಗಳ ಮತ್ತು ಅವುಗಳೊಂದಿಗೆ ಹೇಗೆ ಕೆಲಸ ಮಾಡುವುದು ಎಂಬುದರ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುತ್ತವೆ. ಇದನ್ನು ವಿದ್ಯಾರ್ಥಿಗಳಿಗೆ ಕಲಿಸುವುದರಿಂದ ಜೀವನದ ಸವಾಲುಗಳನ್ನು ಅರಿವು ಮತ್ತು ಜವಾಬ್ದಾರಿಯೊಂದಿಗೆ ಎದುರಿಸಲು ಅವರಿಗೆ ಸಾಧನಗಳು ಸಿಗುತ್ತವೆ. ಭಾರತದಲ್ಲಿ ಈ ಬೋಧನೆಗಳನ್ನು ಪುನರುಜ್ಜೀವನಗೊಳಿಸುವುದು ಕೃತಜ್ಞತೆಯ ಸೂಚಕವಾಗಿದೆ, ಏಕೆಂದರೆ ಶತಮಾನಗಳ ಹಿಂದೆ ಭಾರತವೇ ಟಿಬೆಟ್‌ಗೆ ಈ ಬುದ್ಧಿವಂತಿಕೆಯನ್ನು ನೀಡಿತ್ತು.
ಪರಮಪೂಜ್ಯರು ಈ ಬದ್ಧತೆಗಳನ್ನು ಸ್ವತಃ ಅವಿಶ್ರಾಂತವಾಗಿ ಅನುಸರಿಸುವುದಲ್ಲದೆ, ನನ್ನನ್ನೂ ಒಳಗೊಂಡಂತೆ ನಮ್ಮಲ್ಲಿ ಅನೇಕರನ್ನು ಅವರ ಪ್ರಯತ್ನಗಳಲ್ಲಿ ಸೇರಲು ಪ್ರೇರೇಪಿಸುತ್ತಾರೆ ಮತ್ತು ಸಬಲಗೊಳಿಸುತ್ತಾರೆ. ಪರಮಪೂಜ್ಯರ ಆಧ್ಯಾತ್ಮಿಕ ಬೋಧನೆಗಳು ಕಾಲಾತೀತವಾಗಿವೆ, ಆದರೆ ಅವರ ಜಾಗತಿಕ ಬದ್ಧತೆಗಳು, ನಮ್ಮ ಪ್ರಸ್ತುತ ಶತಮಾನಕ್ಕೆ ವಿಶೇಷವಾಗಿ ಪ್ರಸ್ತುತವಾಗಿವೆ. ಅವರ 90 ನೇ ಹುಟ್ಟುಹಬ್ಬದ ಈ ಶುಭ ಸಂದರ್ಭದಲ್ಲಿ ನಾವು ಅವರಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ, ಅವರ ಪ್ರಯತ್ನಗಳಲ್ಲಿ ಅವರನ್ನು ಬೆಂಬಲಿಸಲು ನಾವು ಏನು ಬೇಕಾದರೂ ಮಾಡಲು ನಮ್ಮನ್ನು ಅರ್ಪಿಸಿಕೊಳ್ಳುವುದು. ಪರಮಪೂಜ್ಯರು ನಮಗೆ ದಾರಿ ತೋರಿಸಿದ್ದಾರೆ, ಈಗ ಅವರ ದಯೆಯನ್ನು ಮರುಪಾವತಿಸುವುದು ಮತ್ತು ಅವರ ಮಾರ್ಗವನ್ನು ಅನುಸರಿಸುವ ಹೊಣೆ ನಮ್ಮದು.
ಪರಮಪೂಜ್ಯರ ಭವಿಷ್ಯದ ದೃಷ್ಟಿಕೋನವು ದಶಕಗಳ ಹಿಂದಿನಿಂದಲೂ ಅವರ ಕಾರ್ಯಗಳಿಗೆ ಮಾರ್ಗದರ್ಶನ ನೀಡುತ್ತಿದೆ. ಇದನ್ನು ವಿವರಿಸಲು, ನಾನು ಕಂಡ, ಸಂಘಟಿಸಿದ ಅಥವಾ ಅನುವಾದಿಸಿದ ಕೆಲವು ಉದಾಹರಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಮಾನವೀಯತೆಯ ಏಕತೆ, ನೈಸರ್ಗಿಕ ವಿಕೋಪಗಳು ಎಲ್ಲೇ ಸಂಭವಿಸಿದರೂ, ಪರಮಪೂಜ್ಯರು ಪರಿಹಾರ ಕಾರ್ಯಗಳಿಗೆ ಉದಾರ ದೇಣಿಗೆಗಳನ್ನು ನೀಡಿದ್ದಾರೆ. ಸಾಮಾಜಿಕ ಕ್ರಾಂತಿಯ ಸಮಯಗಳಲ್ಲಿಯೂ ಅವರು ಸಹಾಯ ಮಾಡಿದ್ದಾರೆ. ಉದಾಹರಣೆಗೆ, ಕಮ್ಯುನಿಸಂ ಪತನದ ನಂತರ ಪರಿವರ್ತನೆಯನ್ನು ಮಾಡುವಲ್ಲಿ ಪೂರ್ವ ಯುರೋಪ್ ಮತ್ತು ಸೋವಿಯತ್ ಒಕ್ಕೂಟದ ನಾಯಕರು ಮತ್ತು ಜನರು ಎದುರಿಸಿದ ತೊಂದರೆಗಳ ಬಗ್ಗೆ ಅವರು ತೀವ್ರ ಕಳವಳ ಹೊಂದಿದ್ದರು. ಅಧ್ಯಕ್ಷ ವಾಕ್ಲಾವ್ ಹ್ಯಾವೆಲ್ ಅವರು ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳ ನಂತರ ಬಂದು ತಮ್ಮ ಹೊಸ ಜವಾಬ್ದಾರಿಗಳಲ್ಲಿ ಅವರು ಹೊಂದಿದ್ದ ಒತ್ತಡವನ್ನು ನಿವಾರಿಸಲು ಅವರಿಗೆ ಮತ್ತು ಅವರ ತಂಡಕ್ಕೆ ಧ್ಯಾನ ವಿಧಾನಗಳನ್ನು ಕಲಿಸಲು ಆಹ್ವಾನಿಸಿದಾಗ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಜೆಕೊಸ್ಲೊವಾಕಿಯಾಕ್ಕೆ ಪ್ರಯಾಣ ಬೆಳೆಸಿದರು. ಅದೇ ರೀತಿ, ಬೋರಿಸ್ ಯೆಲ್ಟ್ಸಿನ್ ಅವರ ಮೊದಲ ಉಪನಾಯಕನ ಕೋರಿಕೆಯ ಮೇರೆಗೆ, ರಷ್ಯಾ ಸೋವಿಯತ್ ಒಕ್ಕೂಟದಿಂದ ತನ್ನ ಸ್ವಾತಂತ್ರ್ಯವನ್ನು ಪ್ರತಿಪಾದಿಸಲು ಪ್ರಾರಂಭಿಸಿದಾಗ ಒತ್ತಡದಿಂದ ಬಳಲುತ್ತಿದ್ದ ರಷ್ಯಾದ ಸಂಸದರಿಗೆ ಸಹಾಯ ಮಾಡಲು ಪರಮಪೂಜ್ಯರು ಟಿಬೆಟಿಯನ್ ವೈದ್ಯರನ್ನು ಕಳುಹಿಸಿದರು.
1990 ರಲ್ಲಿ, ಸೋವಿಯತ್ ಆರೋಗ್ಯ ಸಚಿವಾಲಯವು ಚೆರ್ನೋಬಿಲ್ ದುರಂತದ ಬಲಿಪಶುಗಳಿಗೆ ಚಿಕಿತ್ಸೆ ನೀಡುವಂತೆ ಟಿಬೆಟಿಯನ್ ವೈದ್ಯರನ್ನು ವಿನಂತಿಸಿತು. ಪರಮಪೂಜ್ಯರು ಸಹಾನುಭೂತಿಯಿಂದ ಒಪ್ಪಿದರು ಮತ್ತು ಅವರ ವೈಯಕ್ತಿಕ ವೈದ್ಯ ಡಾ. ಟೆನ್ಜಿನ್ ಚೋಡ್ರಾಕ್ ಅವರನ್ನು ಕಳುಹಿಸಿದರು. ದುರದೃಷ್ಟವಶಾತ್, ಪೈಲಟ್ ಪ್ರಯೋಗಗಳ ಯಶಸ್ಸಿನ ಹೊರತಾಗಿಯೂ, ಸೋವಿಯತ್ ಒಕ್ಕೂಟವು ವಿಭಜನೆಯಾದ ನಂತರ, ರಷ್ಯಾ, ಉಕ್ರೇನ್ ಮತ್ತು ಬೆಲಾರಸ್ ಸಹಕಾರವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಕಾರಣ ವೈದ್ಯಕೀಯ ಯೋಜನೆಯನ್ನು ನಿಲ್ಲಿಸಬೇಕಾಯಿತು. ಆದಾಗ್ಯೂ, ಸಹಾನುಭೂತಿಯ ಕ್ರಿಯೆಯ ಈ ಉದಾಹರಣೆಯು, ಧ್ಯಾನದಲ್ಲಿ ಅವರ ಮುಖ್ಯ ಗಮನವು ಎಂದಿಗೂ ಖಾಸಗಿ ಅಭ್ಯಾಸದ ವಿಷಯಗಳಾಗಿರಲಿಲ್ಲ, ಬದಲಿಗೆ ಯಾವಾಗಲೂ ಅವರ ಚಟುವಟಿಕೆಗಳ ಸಕ್ರಿಯ ಮಾರ್ಗದರ್ಶಿ ತತ್ವಗಳಾಗಿದ್ದವು ಎಂಬುದನ್ನು ತೋರಿಸುತ್ತದೆ. ಶೂನ್ಯತೆ ಮತ್ತು ಅವರು ಮಾಡುವ ಎಲ್ಲದರ ಬಗೆಗಿನ ಅವರ ಆಳವಾದ ತಿಳುವಳಿಕೆಯು, ಶೂನ್ಯತೆಯ ಕುರಿತಾದ ಅವರ ಆಳವಾದ ಬೋಧನೆಗಳಲ್ಲಿ ಮಾತ್ರವಲ್ಲದೆ, ಆರಾಧಿಸುವ ಜನಸಮೂಹದ ಮುಂದೆ ವಿನಮ್ರರಾಗಿ ಉಳಿಯುವ ಮತ್ತು ಹೆಚ್ಚಿನ ಸಂಖ್ಯೆಯ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯದಲ್ಲಿಯೂ ಸ್ಪಷ್ಟವಾಗಿ ಕಾಣುತ್ತದೆ.
ಮಕ್ಕಳಿಗಾಗಿ ಜಾತ್ಯತೀತ ನೀತಿಶಾಸ್ತ್ರದ ಬೋಧನೆಯನ್ನು ಸೇರಿಸಲು ಶಾಲಾ ಪಠ್ಯಕ್ರಮವನ್ನು ವಿಸ್ತರಿಸುವ ಅವರ ಬದ್ಧತೆಗೆ ಸಂಬಂಧಿಸಿದಂತೆ, ಎಮೋರಿ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ, ಭಾವನಾತ್ಮಕ ಮತ್ತು ನೈತಿಕ (SEE) ಕಲಿಕಾ ಕಾರ್ಯಕ್ರಮದ ಅಭಿವೃದ್ಧಿಯನ್ನು ಪರಮಪೂಜ್ಯರು ಪ್ರಾರಂಭಿಸಿದ್ದಾರೆ. 24 ಭಾಷೆಗಳಿಗೆ ಇದನ್ನು ಅನುವಾದಿಸಲಾಗಿದೆ ಮತ್ತು 41 ಕ್ಕೂ ಹೆಚ್ಚು ದೇಶಗಳಲ್ಲಿ ಶಾಲಾ ಪಠ್ಯಕ್ರಮದಲ್ಲಿ ಇದನ್ನು ಸೇರಿಸಲಾಗಿದೆ.
ಪರಮಪೂಜ್ಯರು ಎರಡನೇ ದೊಡ್ಡ ಬದ್ಧತೆಯಾದ ಅಂತರ್ಧರ್ಮೀಯ ಸಾಮರಸ್ಯವನ್ನು ಬೆಳೆಸಲು ಯಾವಾಗಲೂ ಬಲವಾದ ಒತ್ತು ನೀಡಿದ್ದಾರೆ. ಭಾರತಕ್ಕೆ ಬಂದ ನಂತರ ಅವರ ಮೊದಲ ಅಂತರರಾಷ್ಟ್ರೀಯ ಭೇಟಿ 1967 ರಲ್ಲಿ ಜಪಾನ್ ಮತ್ತು ಥೈಲ್ಯಾಂಡ್‌ನಲ್ಲಿರುವ ಬೌದ್ಧ ನಾಯಕರನ್ನು ಭೇಟಿ ಮಾಡುವುದಾಗಿತ್ತು, ಮತ್ತು ಯುರೋಪ್‌ನಲ್ಲಿ ಅವರ ಮೊದಲ ನಿಲ್ದಾಣವು ವ್ಯಾಟಿಕನ್‌ನಲ್ಲಿ ಪೋಪ್ ಪಾಲ್ VI ಅವರನ್ನು ಭೇಟಿ ಮಾಡುವುದಾಗಿತ್ತು. ನಂತರದ ವರ್ಷಗಳಲ್ಲಿ, ಅವರು ಅನೇಕ ಕ್ರಿಶ್ಚಿಯನ್ ಮತ್ತು ಯಹೂದಿ ನಾಯಕರೊಂದಿಗೆ ಹಲವಾರು ಅಂತರ್ಧರ್ಮೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು, ಸಾರ್ವಜನಿಕ ಪ್ರಾರ್ಥನಾ ಸಭೆಗಳಿಗಿಂತ ಪ್ರೀತಿಯನ್ನು ಬೆಳೆಸಲು ಅವರ ಬೋಧನೆಗಳು ಮತ್ತು ಧ್ಯಾನ ವಿಧಾನಗಳ ಖಾಸಗಿ ಚರ್ಚೆಗಳಿಗೆ ಯಾವಾಗಲೂ ಆದ್ಯತೆ ನೀಡಿದರು. ಈ ನಿಟ್ಟಿನಲ್ಲಿ, ಅವರು 1990 ರಲ್ಲಿ ಧರ್ಮಶಾಲಾಕ್ಕೆ ಯಹೂದಿ ಆಧ್ಯಾತ್ಮಿಕ ನಾಯಕರ ಗುಂಪನ್ನು ಆಹ್ವಾನಿಸಿದರು. 1994 ರಲ್ಲಿ ಗಿನಿಯಾದ ಆನುವಂಶಿಕ ಸೂಫಿ ನಾಯಕ ಡಾ. ತಿರ್ಮಿಜಿಯೊ ಡಿಯಲ್ಲೊ ಅವರಂತಹ ಮುಸ್ಲಿಂ ನಾಯಕರನ್ನು ಸಹ ಇದೇ ರೀತಿಯ ಚರ್ಚೆಗಳಿಗೆ ಆಹ್ವಾನಿಸಿದರು. ಎರಡೂ ಕಡೆಯ ಪ್ರೇಕ್ಷಕರು ಬಹಳಾ ಭಾವನಾತ್ಮಕರಾಗಿದ್ದರು.
ಅಂದಿನಿಂದ, ಪರಮಪೂಜ್ಯರು ಅನೇಕ ಮುಸ್ಲಿಂ ನಾಯಕರನ್ನು ಭೇಟಿ ಮಾಡಿದ್ದಾರೆ ಮತ್ತು ನಮ್ಮ ಸ್ಟಡಿ ಬುದ್ಧಿಸಂ ವೆಬ್‌ಸೈಟ್‌ನ ವಿಷಯವನ್ನು ಎಲ್ಲಾ ಪ್ರಮುಖ ಇಸ್ಲಾಮಿಕ್ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲು ಬರ್ಜಿನ್ ಆರ್ಕೈವ್ಸ್‌ನಲ್ಲಿ ನಮ್ಮನ್ನು ವಿನಂತಿಸಿದ್ದಾರೆ, ನಾವು ಅದನ್ನು ಪೂರೈಸಿದ್ದೇವೆ. ತಪ್ಪುಗ್ರಹಿಕೆಗಳು ಹೆಚ್ಚಾಗಿ ಮಾಹಿತಿಯ ಕೊರತೆಯಿಂದ ಉದ್ಭವಿಸುವುದರಿಂದ, ನಾವು ಪರಮಪೂಜ್ಯರ ಕೋರಿಕೆಯ ಮೇರೆಗೆ ವಿಸ್ತರಿಸಿದ್ದೇವೆ ಮತ್ತು ನಮ್ಮ ವಿಷಯವನ್ನು ಹೀಬ್ರೂ ಮತ್ತು ಎಲ್ಲಾ ಏಷ್ಯನ್ ಬೌದ್ಧ ದೇಶಗಳ ಭಾಷೆಗಳಿಗೆ ಅನುವಾದಿಸಿದ್ದೇವೆ.
ಟಿಬೆಟಿಯನ್ ಸಂಸ್ಕೃತಿಯನ್ನು ಸಂರಕ್ಷಿಸುವ ಅವರ ಪ್ರಯತ್ನಗಳು, ಅಂದರೆ ಅವರ ಮೂರನೇ ಮಹಾನ್ ಬದ್ಧತೆ, ಭಾರತಕ್ಕೆ ಬಂದ ಸ್ವಲ್ಪ ಸಮಯದ ನಂತರವೇ ಪ್ರಾರಂಭವಾಯಿತು. 1960 ರ ಧರ್ಮಶಾಲಾದಲ್ಲಿ, ಅವರು ಮೊದಲ ಟಿಬೆಟಿಯನ್ ಮಕ್ಕಳ ಗ್ರಾಮವನ್ನು ತೆರೆದರು. 1961 ರಲ್ಲಿ, ಅವರು ‘ಮೈ ಲ್ಯಾಂಡ್ ಅಂಡ್ ಮೈ ಪೀಪಲ್ (ನನ್ನ ನೆಲ ಮತ್ತು ನನ್ನೆ ಜನ)’ ಅನ್ನು ಬರೆದರು ಮತ್ತು ಮುಂದಿನ ವರ್ಷ ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದರು. ಮುಂದಿನ ಹಂತವಾಗಿ, 1962 ರಲ್ಲಿ, ಅವರು ಹದಿಹರೆಯದವರಾದ ಶಾರ್ಪಾ ಮತ್ತು ಖಮ್ಲುಂಗ್ ರಿನ್‌ಪೋಚೆಸ್, ಜೊತೆಗೆ ಗೆಶೆ ಸೋಪಾ ಮತ್ತು ಲಾಮಾ ಕುಂಗಾ ಅವರನ್ನು ನ್ಯೂಜೆರ್ಸಿಗೆ ಕಲ್ಮಿಕ್ ಮಂಗೋಲ್ ಗೆಶೆ ವಾಂಗ್ಯಾಲ್ ಅವರ ಮಾರ್ಗದರ್ಶನದಲ್ಲಿ ಇಂಗ್ಲಿಷ್ ಕಲಿಯಲು ಮತ್ತು ಧರ್ಮದ ಅನುವಾದಕರಾಗಲು ಕಳುಹಿಸಿದರು.
1965 ರಲ್ಲಿ ನವದೆಹಲಿಯಲ್ಲಿ, ಮೊದಲ ಟಿಬೆಟ್ ಹೌಸ್ ಅನ್ನು ಟಿಬೆಟಿಯನ್ ಸಾಂಸ್ಕೃತಿಕ ಕೇಂದ್ರವಾಗಿ ತೆರೆಯಲು ಮತ್ತು 1966 ರಿಂದ ಪ್ರಾರಂಭಿಸಿ, ದಕ್ಷಿಣ ಭಾರತದಲ್ಲಿ ಲಾಸಾದ ಮುಖ್ಯ ಮಠಗಳನ್ನು ಪುನಃ ಸ್ಥಾಪಿಸುವಂತೆ ಪರಮಪೂಜ್ಯರು ವ್ಯವಸ್ಥೆ ಮಾಡಿದರು. ನಂತರ 1967 ರಲ್ಲಿ, ಅವರು ಸಾರನಾಥದಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್ ಅನ್ನು ಉದ್ಘಾಟಿಸಿದರು.
ನನಗೆ ತಿಳಿದಿರುವಂತೆ, ಪರಮಪೂಜ್ಯರು 1969 ರಲ್ಲಿ ಬೌದ್ಧ ಪಠ್ಯದ ಅನುವಾದಗಳನ್ನು ನಿಯೋಜಿಸಲು ಪ್ರಾರಂಭಿಸಿದರು, ನಾನು ಹಾರ್ವರ್ಡ್‌ನಲ್ಲಿ ನನ್ನ ಪಿಎಚ್‌ಡಿ ಪ್ರಬಂಧಕ್ಕಾಗಿ ಸಂಶೋಧನೆ ಮಾಡಲು ಭಾರತಕ್ಕೆ ಬಂದಾಗ ಅವರೊಂದಿಗಿನ ನನ್ನ ಮೊದಲ ಸಭೆಯ ಸಮಯದಲ್ಲಿ ಶಾರ್ಪಾ ಮತ್ತು ಖಮ್ಲುಂಗ್ ರಿನ್‌ಪೋಚೆಸ್ ಅವರೊಂದಿಗೆ ಭಾಷಾಂತರಿಸಲು ಒಂದನ್ನು ನನಗೆ ನೀಡಿದರು. ಇಬ್ಬರು ರಿನ್‌ಪೋಚೆಸ್ ಹಿಂದಿನ ವರ್ಷ ಭಾರತಕ್ಕೆ ಮರಳಿದ್ದರು ಮತ್ತು ನಾನು ಗೆಶೆ ವಾಂಗ್ಯಾಲ್ ಮೂಲಕ ಅವರೊಂದಿಗೆ ಸಂಪರ್ಕವನ್ನು ಹೊಂದಿದ್ದೆ. ರಿನ್‌ಪೋಚೆಸ್ ಅವರ ಶಿಕ್ಷಕ ಗೆಶೆ ನ್ಗಾವಾಂಗ್ ಧರ್ಗ್ಯೆ ಅವರ ಮಾರ್ಗದರ್ಶನದಲ್ಲಿ ನಾವು ಪಠ್ಯವನ್ನು ಅನುವಾದಿಸಿದೆವು. ಅಂತಿಮವಾಗಿ, ನಮ್ಮ ಒಟ್ಟಾರೆ ಕೆಲಸವು, ಲೈಬ್ರರಿ ಆಫ್ ಟಿಬೆಟಿಯನ್ ವರ್ಕ್ಸ್ & ಆರ್ಕೈವ್ಸ್‌ನಲ್ಲಿ ಅನುವಾದ ವಿಭಾಗವಾಗಿ ವಿಕಸನಗೊಂಡಿತು.
ಟಿಬೆಟಿಯನ್ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಟಿಬೆಟ್‌ನಿಂದ ತಂದ ಧರ್ಮಗ್ರಂಥಗಳನ್ನು ಇರಿಸಲು, ಪರಮಪೂಜ್ಯರು ಜೂನ್ 1970 ರಲ್ಲಿ ಗ್ರಂಥಾಲಯಕ್ಕೆ ಅಡಿಪಾಯ ಇರಿಸಿದರು. ನವೆಂಬರ್ 1971 ರಲ್ಲಿ ಅದರ ಉದ್ಘಾಟನೆಗೆ ಸ್ವಲ್ಪ ಮೊದಲು, ಪಾಶ್ಚಿಮಾತ್ಯರಿಗೆ ಬೌದ್ಧ ತತ್ವಶಾಸ್ತ್ರ ಮತ್ತು ಧ್ಯಾನ ತರಗತಿಗಳನ್ನು ನೀಡುವುದರ ಪ್ರಯೋಜನವನ್ನು ಅರಿತುಕೊಂಡು, ಗೆಶೆ ನ್ಗಾವಾಂಗ್ ಧರ್ಗ್ಯೆ ಅವರನ್ನು ಶಿಕ್ಷಕರಾಗಿ ಮತ್ತು ಇಬ್ಬರು ರಿನ್‌ಪೋಚೆ ಅವರನ್ನು ಅನುವಾದಕರಾಗಿ ನೇಮಿಸಿದರು. 1972 ರಲ್ಲಿ ಹಾರ್ವರ್ಡ್‌ನಲ್ಲಿ ನನ್ನ ಪದವಿಯನ್ನು ಪೂರ್ಣಗೊಳಿಸಿದ ನಂತರ ಅವರೊಂದಿಗೆ ಸೇರಲು ಮತ್ತು ಅವರ ಸೇವೆಗೆ ನನ್ನ ಜೀವನವನ್ನು ಮುಡಿಪಾಗಿಡಲು ಅವರು ನನಗೆ ಅವಕಾಶ ಮಾಡಿಕೊಟ್ಟರು.
ಅದೇ ವರ್ಷ, ನಳಂದ ಸಂಪ್ರದಾಯದ ಪಠ್ಯಗಳನ್ನು ಸಂರಕ್ಷಿಸುವ ಮತ್ತು ಅನುವಾದಿಸುವುದರ ಪ್ರಾಮುಖ್ಯತೆಯನ್ನು ಕಂಡ ಪರಮಪೂಜ್ಯರು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಗೆಶೆ ವಾಂಗ್ಯಾಲ್ ಅವರೊಂದಿಗೆ ಅಮೇರಿಕನ್ ಇನ್‌ಸ್ಟಿಟ್ಯೂಟ್ ಆಫ್ ಬೌದ್ಧ ಅಧ್ಯಯನವನ್ನು ಸ್ಥಾಪಿಸಿದರು ಮತ್ತು ಆ ಪಠ್ಯಗಳನ್ನು ಒಳಗೊಂಡಿರುವ ಟೆಂಗ್ಯೂರ್ ಅನ್ನು ಭಾಷಾಂತರಿಸುವಂತೆ ನಿಯೋಜಿಸಿದರು.
ಇದೇ ರೀತಿ, ಭವಿಷ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಅವರು ಪರಿಗಣಿಸುವ ಕಾಲಚಕ್ರ ದೀಕ್ಷೆಯನ್ನು ಪಡೆಯಲಾಗುವಂತೆ ಪರಮಪೂಜ್ಯರು ಆರಂಭಿಕ ಕ್ರಮಗಳನ್ನು ತೆಗೆದುಕೊಂಡರು. ಅವರ ಕಾಲಚಕ್ರ ಶಿಕ್ಷಕರಲ್ಲಿ ಒಬ್ಬರಾದ ತ್ಸೆನ್ಶಾಪ್ ಸೆರ್ಕಾಂಗ್ ರಿನ್‌ಪೋಚೆ ಅವರು ಅದನ್ನು ತಮಗಾಗಿ ಭಾಷಾಂತರಿಸಲು ನನಗೆ ತರಬೇತಿ ನೀಡಿದರು. ಪಾಶ್ಚಿಮಾತ್ಯರು ಕಾಲಚಕ್ರ ಅಭ್ಯಾಸದಲ್ಲಿ ಹೊಂದಿದ್ದ ಬಲವಾದ ಆಸಕ್ತಿಯನ್ನು ಪರಮಪೂಜ್ಯರು ಶೀಘ್ರದಲ್ಲೇ ನೋಡಿದರು, ಆದ್ದರಿಂದ ಅವರು ತಮ್ಮ ಅಭ್ಯಾಸಕ್ಕಾಗಿ ಭಾಷಾಂತರಿಸಲು ಶ್ರೇಣೀಕೃತವಾದ ಮೂರು ಸಾಧನಗಳನ್ನು ಆರಿಸಿಕೊಂಡರು. ನಂತರ, ಈ ದೀಕ್ಷೆಗಳಿಗೆ ಜನರನ್ನು ಸಿದ್ಧಪಡಿಸಲು ಸಹಾಯ ಮಾಡಲು, ಪರಮಪೂಜ್ಯರು ವೈಯಕ್ತಿಕವಾಗಿ ಏನು ವಿವರಿಸಬೇಕು ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಮಾರ್ಗಸೂಚಿಗಳನ್ನು ನೀಡಿದರು.
ಧರ್ಮವನ್ನು ಜಗತ್ತಿಗೆ ಇತರ ಹಲವು ವಿಧಗಳಲ್ಲಿ ಲಭ್ಯವಾಗುವಂತೆ ಮಾಡಲು ಪರಮಪೂಜ್ಯರು ಬಹಳ ಬೆಂಬಲ ನೀಡಿದ್ದಾರೆ. 1989 ರಲ್ಲಿ, ಪಶ್ಚಿಮದಲ್ಲಿ ಕಲಿಸಲು ಮತ್ತು ಅನುವಾದಿಸಲು ಯೋಜಿಸಿದ್ದ ಗೆಶೆಗಳು ಮತ್ತು ಸನ್ಯಾಸಿಗಳನ್ನು ಸಿದ್ಧಪಡಿಸಲು ಅವರು ನನ್ನನ್ನು ದಕ್ಷಿಣ ಭಾರತದ ಮಠಗಳಿಗೆ ಕಳುಹಿಸಿದರು. ವೈಯಕ್ತಿಕ ಕಾಳಜಿಯೊಂದಿಗೆ, ಸನ್ಯಾಸಿಗಳು ನನ್ನನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲು, ಸೂಟ್ ಮತ್ತು ಟೈ ಧರಿಸುವಂತೆ ಅವರು ನನಗೆ ಸೂಚಿಸಿದರು. ಇದು ಲಿಖಿತ ಅನುವಾದಗಳನ್ನು ಮಾಡಲು ಅಗತ್ಯವಾದ ಕೌಶಲ್ಯಗಳಲ್ಲಿ ಯುವ ಟಿಬೆಟಿಯನ್ನರಿಗೆ ತರಬೇತಿ ನೀಡಲು, 1994 ರಲ್ಲಿ ದೆಹಲಿಯಲ್ಲಿ ಡೊಬೂಮ್ ರಿನ್‌ಪೋಚೆ ಎಂಬ ಕಾರ್ಯಾಗಾರವನ್ನು ಆಯೋಜಿಸಲು ಕಾರಣವಾಯಿತು.
ಟಿಬೆಟಿಯನ್ನರಲ್ಲಿ ಬೌದ್ಧ ಬೋಧನೆಗಳ ಸಂರಕ್ಷಣೆಗಾಗಿ, ನಾಲ್ಕು ಟಿಬೆಟಿಯನ್ ಶಾಲೆಗಳ ನಡುವೆ ಮತ್ತು ಸ್ಥಳೀಯ ಬಾನ್ ಸಂಪ್ರದಾಯದೊಂದಿಗಿನ ಸಾಮರಸ್ಯವು ಸಂಪೂರ್ಣವಾಗಿ ಅತ್ಯಗತ್ಯ ಎಂದು ಪರಮಪೂಜ್ಯರು ಕಂಡುಕೊಂಡರು. ಆದ್ದರಿಂದ, 1988 ರಲ್ಲಿ ಐದು ಸಂಪ್ರದಾಯಗಳ ಪುನರ್ಜನ್ಮಗೊಂಡ ಲಾಮಾಗಳು ಮತ್ತು ಮಠಾಧೀಶರು ಅವರು ಸಹಕರಿಸಬಹುದಾದ ವಿಧಾನಗಳನ್ನು ಚರ್ಚಿಸಲು ಸಮ್ಮೇಳನವನ್ನು ಕರೆದರು.
ಟಿಬೆಟ್‌ನಲ್ಲಿಯೇ ಬೋಧನೆಗಳನ್ನು ಸಂರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು, ಚೀನೀ ಶಿಕ್ಷಣ ತಜ್ಞರ ಬೆಂಬಲವು ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಪರಮಪೂಜ್ಯರು ಭಾವಿಸಿದರು. ಆದ್ದರಿಂದ, ಟಿಬೆಟಿಯನ್ ಬೌದ್ಧಧರ್ಮದ ಬಗ್ಗೆ ಅವರಲ್ಲಿ ಆಸಕ್ತಿಯ ಮಟ್ಟವನ್ನು ನಿರ್ಣಯಿಸಲು, ಪರಮಪೂಜ್ಯರು 1994 ರಲ್ಲಿ ಬೀಜಿಂಗ್‌ಗೆ ಪ್ರಯಾಣಿಸಲು ಮತ್ತು ಬೌದ್ಧಧರ್ಮದ ಶೈಕ್ಷಣಿಕ ಅಧ್ಯಯನಕ್ಕೆ ಮೀಸಲಾಗಿರುವ ಸಂಶೋಧನಾ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಲು ನನ್ನನ್ನು ಕೇಳಿಕೊಂಡರು. ಪ್ರಾಧ್ಯಾಪಕರು ಮತ್ತು ವಿದ್ವಾಂಸರು ಟಿಬೆಟಿಯನ್ ಬೌದ್ಧಧರ್ಮದಲ್ಲಿ, ವಿಶೇಷವಾಗಿ ತಂತ್ರದಲ್ಲಿ ಪ್ರಾಮಾಣಿಕವಾಗಿ ಆಸಕ್ತಿ ಹೊಂದಿದ್ದರು ಮತ್ತು ಇನ್ನಷ್ಟು ತಿಳಿದುಕೊಳ್ಳಲು ಬಯಸಿದ್ದರು. ಪರಮಪೂಜ್ಯರು ಇದನ್ನು ಭವಿಷ್ಯಕ್ಕಾಗಿ ಇರುವ ಸಕಾರಾತ್ಮಕ ಸಂಕೇತವೆಂದು ಪರಿಗಣಿಸಿದರು.
ಬೌದ್ಧ ಸಂಸ್ಕೃತಿಯನ್ನು ಸಂರಕ್ಷಿಸುವ ಪರಮಪೂಜ್ಯರ ಬದ್ಧತೆಯು ಟಿಬೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಮಂಗೋಲಿಯಾ ಮತ್ತು ರಷ್ಯಾದ ಸಾಂಪ್ರದಾಯಿಕ ಬೌದ್ಧ ಪ್ರದೇಶಗಳಾದ ಕಲ್ಮಿಕಿಯಾ, ಬುರಿಯಾಟಿಯಾ ಮತ್ತು ತುವಾದಲ್ಲಿ ಬೌದ್ಧಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು. 1979 ಮತ್ತು 1982 ರಲ್ಲಿ ಭೇಟಿಗಳೊಂದಿಗೆ ಅವರು ಈ ಪುನರುಜ್ಜೀವನಕ್ಕೆ ಅಡಿಪಾಯ ಹಾಕಿದರು ಮತ್ತು ಕಮ್ಯುನಿಸಂ ಪತನಗೊಂಡ ನಂತರ, 1992 ರಲ್ಲಿ, ಅಲ್ಲಿ ವ್ಯಾಪಕವಾಗಿ ಬೋಧಿಸಿದರು.
ಮಂಗೋಲಿಯಾದಲ್ಲಿ ಬೌದ್ಧಧರ್ಮದ ಪುನರುಜ್ಜೀವನವನ್ನು ಉತ್ತೇಜಿಸಲು, 1997 ರಲ್ಲಿ ಪರಮಪೂಜ್ಯರು ಬಕುಲಾ ರಿನ್‌ಪೋಚೆ ಅವರ ಬೋಧನೆಗಳನ್ನು ಆಡುಮಾತಿನ ಮಂಗೋಲಿಯನ್ ಭಾಷೆಯಲ್ಲಿ ಸಂಕಲಿಸಿ ಪ್ರಕಟಿಸಲು ಒಂದು ಯೋಜನೆಯನ್ನು ನಿಯೋಜಿಸಿದರು. ಅಲ್ಲಿಯವರೆಗೆ, ಬೋಧನೆಗಳು ಶಾಸ್ತ್ರೀಯ ಮಂಗೋಲಿಯನ್ ಅಥವಾ ಟಿಬೆಟಿಯನ್ ಭಾಷೆಯಲ್ಲಿ ಮಾತ್ರ ಲಭ್ಯವಿದ್ದವು, ಅವುಗಳಲ್ಲಿ ಯಾವುದನ್ನೂ ಸಾಮಾನ್ಯ ಜನರಿಗೆ ಓದಲು ಸಾಧ್ಯವಿರಲಿಲ್ಲ. ಮಂಗೋಲಿಯಾಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಬಕುಲಾ ರಿನ್‌ಪೋಚೆ, ಅಲ್ಲಿ ಜನಪ್ರಿಯ ಶಿಕ್ಷಕರಾಗಿದ್ದರು. ಅವರ ಬೋಧನೆಗಳು ಮತ್ತು ಸನ್ಯಾಸಿ ಶಿಸ್ತಿನ ಸುಧಾರಣೆಗಳು ಮಂಗೋಲಿಯಾದಲ್ಲಿ ಬೌದ್ಧಧರ್ಮದ ಪ್ರಸ್ತುತ ಪ್ರವರ್ಧಮಾನಕ್ಕೆ ಅಡಿಪಾಯವಾಗಿವೆ.
ಭಾರತದ ಪ್ರಾಚೀನ ತಾತ್ವಿಕ ಬೋಧನೆಗಳನ್ನು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಚಯಿಸುವ ಅವರ ನಾಲ್ಕನೇ ಬದ್ಧತೆಯನ್ನು ಪೂರೈಸಲು, ಪರಮಪೂಜ್ಯರು 2017 ರಲ್ಲಿ ಟಿಬೆಟಿಯನ್ ಮಕ್ಕಳ ಗ್ರಾಮಗಳ ಶಾಲಾ ಪಠ್ಯಕ್ರಮದಲ್ಲಿ ತರ್ಕ ಮತ್ತು ಚರ್ಚೆಯ ಅಧ್ಯಯನವನ್ನು ಪರಿಚಯಿಸುವ ಮೂಲಕ ಪ್ರಾರಂಭಿಸಿದರು. ನಂತರ, 2023 ರಲ್ಲಿ, ಅವರು ಬೋಧ್ ಗಯಾದಲ್ಲಿ ದಲೈ ಲಾಮಾ ಸೆಂಟರ್ ಫಾರ್ ಟಿಬೆಟಿಯನ್ & ಇಂಡಿಯನ್ ಏನ್ಷಿಯಂಟ್ ವಿಸ್ಡಮ್‌ಗೆ ಅಡಿಪಾಯವಿಟ್ಟರು. ಇದು, ಇಂತಹ ವಿಷಯಗಳನ್ನು ಭಾರತೀಯ ಶಾಲೆಗಳಿಗೆ ತರುವ ಸಂಭಾವ್ಯ ತಂತ್ರಗಳನ್ನು ಅನ್ವೇಷಿಸಲು ಈ ವರ್ಷ, 2025 ರ ಏಪ್ರಿಲ್‌ನಲ್ಲಿ ತನ್ನ ಮೊದಲ ಶೈಕ್ಷಣಿಕ ಸಮ್ಮೇಳನವನ್ನು ನಡೆಸಿತು. ಯೋಜನೆಗೆ ಸೂಕ್ತವಾದ ಬೋಧನಾ ಸಾಮಗ್ರಿಗಳ ಅಗತ್ಯವನ್ನು ನಿರೀಕ್ಷಿಸಿ, ನಮ್ಮ ಸ್ಟಡಿ ಬುದ್ಧಿಸಂ ವೆಬ್‌ಸೈಟ್‌ನ ಹೆಚ್ಚಿನ ಭಾಗಗಳನ್ನು ಹತ್ತು ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ.
1987 ರಲ್ಲಿ ವಿಜ್ಞಾನಿಗಳೊಂದಿಗೆ ಮೈಂಡ್ & ಲೈಫ್ ಸಭೆಗಳ ಉದ್ಘಾಟನೆ, 2008 ರಲ್ಲಿ ಬೆಂಗಳೂರಿನಲ್ಲಿ ದಲೈ ಲಾಮಾ ಇನ್ಸ್ಟಿಟ್ಯೂಟ್ ಫಾರ್ ಹೈಯರ್ ಎಜುಕೇಶನ್ ಉದ್ಘಾಟನೆ ಮತ್ತು ತರ್ಕ ಮತ್ತು ಚರ್ಚೆಯನ್ನು ಕಲಿಸಲು ಮತ್ತು ಪಾಶ್ಚಿಮಾತ್ಯ ಧರ್ಮ ಕೇಂದ್ರಗಳಲ್ಲಿ ಅಧ್ಯಯನ ಕಾರ್ಯಕ್ರಮಗಳಲ್ಲಿ ಅವುಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ಕಲಿಸಲು, 2024 ರಲ್ಲಿ ಧರ್ಮಶಾಲಾದಲ್ಲಿ ಸೆರ್ಕಾಂಗ್ ಇನ್ಸ್ಟಿಟ್ಯೂಟ್ ಉದ್ಘಾಟನೆ ಮುಂತಾದವುಗಳಂತಹ, ಅವರ ಬದ್ಧತೆಗಳನ್ನು ಪೂರೈಸಲು ಸಹಾಯ ಮಾಡಲು ಇತರರನ್ನು ಸೇರಿಸಿಕೊಳ್ಳಲಾಗಿದೆ ಮತ್ತು ಪ್ರೇರೇಪಿಸಲಾಗಿದೆ ಎಂಬುದಕ್ಕೆ ಇನ್ನೂ ಅನೇಕ ಉದಾಹರಣೆಗಳನ್ನು ಉಲ್ಲೇಖಿಸಬಹುದು. ಈ ಶತಮಾನವು ತೆರೆದುಕೊಳ್ಳುತ್ತಿದ್ದಂತೆ, ನಮ್ಮ ಉದಾಹರಣೆಗಳು ಹೊಸ ಪೀಳಿಗೆಗಳು ಭವಿಷ್ಯಕ್ಕೆ ಯಾವುದು ಉತ್ತಮ ಪ್ರಯೋಜನವನ್ನು ನೀಡುತ್ತದೆ ಎಂಬುದರ ಕುರಿತು ಅವರ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಸಹಾಯ ಮಾಡಲು ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ಅವರಿಗಿಂತ ಬುದ್ಧಿವಂತ ಮತ್ತು ಹೆಚ್ಚು ಸಹಾನುಭೂತಿಯುಳ್ಳ ಮಾರ್ಗದರ್ಶಿ ಇಲ್ಲ, ಮತ್ತು ಇತರರಿಗೆ ಪ್ರಯೋಜನವನ್ನು ನೀಡುವ ನಮ್ಮ ಕಾರ್ಯಗಳಿಗಿಂತ ಅವರಿಗೆ ಉತ್ತಮ ಹುಟ್ಟುಹಬ್ಬದ ಉಡುಗೊರೆ ಇಲ್ಲ. ಧನ್ಯವಾದಗಳು.