ಬೌದ್ಧಧರ್ಮದ ವಿಧಗಳು

02:45
ಬುದ್ಧನ ಬೋಧನೆಗಳು ಏಷ್ಯಾದ ವಿವಿಧ ನೆಲೆಗಳಿಗೆ ಮತ್ತು ಸಂಸ್ಕೃತಿಗಳಿಗೆ ಹರಡಿದಂತೆ, ಸ್ಥಳೀಯ ಜನರು ತಮ್ಮ ಸ್ಥಳೀಯ ನಂಬಿಕೆಗಳೊಂದಿಗೆ ಸಾಮರಸ್ಯದಿಂದ ಪ್ರತಿಧ್ವನಿಸುವ ಅದರ ಅಂಶಗಳನ್ನು ಅಳವಡಿಸಿಕೊಂಡರು. ಹೀಗಾಗಿ, ಬೌದ್ಧಧರ್ಮದ ಹಲವು ರೂಪಗಳು ಅಭಿವೃದ್ಧಿಗೊಂಡವು, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ವಿಧಾನ ಮತ್ತು ಶೈಲಿಯನ್ನು ಹೊಂದಿದೆ, ಆದರೆ ಎಲ್ಲವೂ, ಬೋಧನೆಗಳ ಅತ್ಯಂತ ಅಗತ್ಯ ಲಕ್ಷಣಗಳನ್ನು ಉಳಿಸಿಕೊಂಡಿವೆ. ತಮ್ಮ ಶಿಷ್ಯರ ಮನಸ್ಥಿತಿಗೆ ಸರಿಹೊಂದುವಂತೆ ತಮ್ಮ ಸಂದೇಶವನ್ನು ಗ್ರಾಹಕೀಯಗೊಳಿಸುವ ಬುದ್ಧನ ನೀತಿಬೋಧಕ ವಿಧಾನಕ್ಕೆ ಇದು ಅನುಗುಣವಾಗಿತ್ತು.

ಇಂದು, ಅಸ್ತಿತ್ವದಲ್ಲಿರುವ ಪ್ರಮುಖ ವ್ಯವಸ್ಥೆಗಳ ಪ್ರತಿನಿಧಿಯಾದ ಬೌದ್ಧಧರ್ಮದ ಥೆರವಾದ, ಚೀನಿ ಮತ್ತು ಟಿಬೆಟಿನ ರೂಪಗಳ ಕೆಲವು ವಿಶಿಷ್ಟ ಲಕ್ಷಣಗಳನ್ನು ನೋಡೋಣ. 

ಥೆರವಾದ 

ಆಗ್ನೇಯ ಏಷ್ಯಾದಲ್ಲಿ ಅನುಸರಿಸುವ ಥೆರವಾದವು, ಸಾವಧಾನತೆಯ ಧ್ಯಾನದ ಅಭ್ಯಾಸಕ್ಕೆ ಪ್ರಾಧಾನ್ಯ ನೀಡುತ್ತದೆ. ನಾವು ಕುಳಿತಿರುವಾಗ ನಮ್ಮ ಉಸಿರು ಮತ್ತು ದೇಹದಲ್ಲಿನ ಸಂವೇದನೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ಮತ್ತು ಬಹಳಾ ನಿಧಾನವಾಗಿ ನಡೆಯುವಾಗ, ನಮ್ಮ ಚಲನೆಗಳು ಮತ್ತು ಉದ್ದೇಶಗಳ ಮೇಲೆ ಕೇಂದ್ರೀಕರಿಸುವ ಮೂಲಕ ಇದನ್ನು ಅನಸುರಿಸಲಾಗುತ್ತದೆ. ಪ್ರತಿ ಕ್ಷಣದ ಏರಿಳಿತಗಳ ಬಗ್ಗೆ ಸಾವಧಾನತೆಯಿಂದಿರುವಾಗ, ನಾವು ನಶ್ವರತೆಯ ಅನುಭವದ ಸಾಕ್ಷಾತ್ಕಾರವನ್ನು ಪಡೆಯತ್ತೇವೆ. ಒಬ್ಬರ ಎಲ್ಲಾ ಅನುಭವವನ್ನು ವಿಶ್ಲೇಷಿಸಲು ಈ ತಿಳುವಳಿಕೆಯನ್ನು ಅನ್ವಯಿಸಿದಾಗ, ಎಲ್ಲದರಿಂದ ಮತ್ತು ಎಲ್ಲರಿಂದಲೂ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವ ಶಾಶ್ವತವಾದ, ಬದಲಾಗದ ‘ಸ್ವಯಂ’ ಎನ್ನುವುದು ಇರುವುದಿಲ್ಲ ಎಂದು ಒಬ್ಬರು ಅರಿತುಕೊಳ್ಳುತ್ತಾರೆ. ಎಲ್ಲವೂ ಕ್ಷಣಿಕ ಬದಲಾವಣೆಗಳಾಗಿವೆ. ಈ ರೀತಿಯಾಗಿ, ಒಬ್ಬ ವ್ಯಕ್ತಿಯು ವಾಸ್ತವದ ತಿಳುವಳಿಕೆಯನ್ನು ಪಡೆಯುತ್ತಾನೆ, ಅದು ಸ್ವಯಂ-ಕೇಂದ್ರಿತ ಕಾಳಜಿಯಿಂದ ಮತ್ತು ಅದರಿಂದ ಸಿಗುವ ಅಸಂತೋಷದಿಂದ ವಿಮೋಚನೆಗೊಳ್ಳುತ್ತಾನೆ.  

ಥೆರವಾದವು ಅಳೆಯಲಾಗದ ಪ್ರೀತಿ, ಸಹಾನುಭೂತಿ, ಸಮಚಿತ್ತತೆ ಮತ್ತು ಸಂತೋಷದ ಬಗ್ಗೆಗಿರುವ ಧ್ಯಾನಗಳನ್ನು ಸಹ ಕಲಿಸುತ್ತದೆಯಾದರೂ, ಕೇವಲ ಕಳೆದ ದಶಕಗಳಲ್ಲಿ ಮಾತ್ರ "ನಿರತವಾದ (ಎಂಗೇಜ್ಡ್) ಬೌದ್ಧಧರ್ಮ" ಎಂದು ಕರೆಯಲಾಗುವ ಚಳುವಳಿಯು ಥೈಲ್ಯಾಂಡ್‌ನಲ್ಲಿ ಪ್ರಾರಂಭವಾಗಿದ್ದು, ಅದು ಸಾಮಾಜಿಕ ಮತ್ತು ಪರಿಸರಕ್ಕೆ ಸಹಾಯವಾಗುವ ಕಾರ್ಯಕ್ರಮಗಳಲ್ಲಿ ಬೌದ್ಧರು ತಮ್ಮನ್ನು ತೊಡಗಿಸಿಕೊಳ್ಳುವುದಾಗಿದೆ. 

ಥೆರವಾದ ಸನ್ಯಾಸಿಗಳು ಸಾರ್ವಜನಿಕರಿಗಾಗಿ ಬೌದ್ಧ ಧರ್ಮಗ್ರಂಥಗಳನ್ನು ಅಧ್ಯಯನ ಮಾಡುತ್ತಾರೆ ಮತ್ತು ಪಠಿಸುತ್ತಾರೆ ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾರೆ. ಸನ್ಯಾಸಿಗಳು ಭಿಕ್ಷೆಗಾಗಿ ಪ್ರತಿನಿತ್ಯ ಮೌನವಾಗಿ ಭಿಕ್ಷೆ ಬೇಡುತ್ತಾರೆ ಮತ್ತು ಮನೆಯವರು ಆಹಾರವನ್ನು ನೀಡುವ ಮೂಲಕ ಉದಾರತೆಯನ್ನು ವ್ಯಕ್ತಪಡಿಸುತ್ತಾರೆ. 

ಪೂರ್ವ ಏಷ್ಯಾದ ಮಹಾಯಾನ 

ಚೀನಾದಿಂದ ಪಡೆದ ಪೂರ್ವ ಏಷ್ಯಾದ ಮಹಾಯಾನ ಸಂಪ್ರದಾಯಗಳಲ್ಲಿ ಎರಡು ಮುಖ್ಯ ಅಂಶಗಳಿವೆ: ಪರಿಶುದ್ಧ ಭೂಮಿ (ಪ್ಯೂರ್ ಲ್ಯಾಂಡ್) ಮತ್ತು ಜಪಾನ್‌ನಲ್ಲಿ ಝೆನ್ ಎಂದು ಕರೆಯಲ್ಪಡುವುದು. 

  • ಪರಿಶುದ್ಧ ಭೂಮಿ ಸಂಪ್ರದಾಯವು, ಅನಂತ ಬೆಳಕಿನ ಬುದ್ಧರಾದ ಅಮಿತಾಭನ ಹೆಸರನ್ನು ಪಠಿಸುವುದಕ್ಕೆ ಪ್ರಾಧಾನ್ಯತೆ ನೀಡಿದ್ದು, ಇದು ಅವರ ಶುದ್ಧವಾದ, ಸಂತೋಷವಾದ ರಾಜ್ಯಕ್ಕೆ ಹೋಗುವ ವಿಧಾನವಾಗಿರುತ್ತದೆ, ಇದು ಬುದ್ಧನಾಗಲು ಸಂಪೂರ್ಣವಾಗಿ ಅನುಕೂಲಕರವಾಗಿರುವ ಸ್ವರ್ಗವಾಗಿರುತ್ತದೆ. 
  • ಝೆನ್ ಕಟ್ಟುನಿಟ್ಟಾದ ಧ್ಯಾನಕ್ಕೆ ಪ್ರಾಧಾನ್ಯತೆ ನೀಡಿದ್ದು, ಇಲ್ಲಿ ಒಬ್ಬರು ಎಲ್ಲಾ ರೀತಿಯ ಪರಿಕಲ್ಪನಾ ಚಿಂತನೆಗಳಿಂದ ತಮ್ಮ ಮನಸ್ಸನ್ನು ಶಾಂತಗೊಳಿಸುತ್ತಾರೆ, ಇದರಿಂದ ಮನಸ್ಸಿನ ಶುದ್ಧ ಸ್ವಭಾವವು ಸಹಾನುಭೂತಿ ಮತ್ತು ಬುದ್ಧಿವಂತಿಕೆಯಿಂದ ಕೂಡಿರುತ್ತದೆ. 

ಎರಡೂ ಸಂಪ್ರದಾಯಗಳಲ್ಲಿನ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು, ಧರ್ಮಗ್ರಂಥಗಳನ್ನು ಪಠಿಸುತ್ತಾರೆ ಮತ್ತು ಕನ್ಫ್ಯೂಷಿಯನ್ ಸಂಸ್ಕೃತಿಗೆ ಅನುಗುಣವಾಗಿ, ಸಾಮಾನ್ಯ ಜನರ ಸಮುದಾಯದಲ್ಲಿ ನಿಧನರಾದ ಪೂರ್ವಜರಿಗೆ ಸಮಾರಂಭಗಳನ್ನು ನಡೆಸಿಕೊಡುತ್ತಾರೆ. 

ಟಿಬೆಟಿನ ಮಹಾಯಾನ 

ಮಧ್ಯ ಏಷ್ಯಾದಾದ್ಯಂತ ಕಂಡುಬರುವ ಮಹಾಯಾನ ಬೌದ್ಧಧರ್ಮದ ಟಿಬೆಟಿನ ರೂಪವು, ಭಾರತೀಯ ಬೌದ್ಧಧರ್ಮದ ಸಂಪೂರ್ಣವಾದ ಐತಿಹಾಸಿಕ ಬೆಳವಣಿಗೆಯನ್ನು, ವಿಶೇಷವಾಗಿ ನಳಂದದಂತಹ ಮಹಾನ್ ಸನ್ಯಾಸಿಗಳ ವಿಶ್ವವಿದ್ಯಾಲಯಗಳ ಸಂಪ್ರದಾಯಗಳನ್ನು ತನ್ನೊಳಗೆ ಜೀವಂತವಾಗಿರಿಸಿದೆ. ಹೀಗಾಗಿ, ಇದು ಮನಸ್ಸಿನ ಸ್ವಭಾವ, ಭಾವನೆಗಳು ಮತ್ತು ವಾಸ್ತವತೆಯ ಬಗ್ಗೆ ತರ್ಕ ಮತ್ತು ಚರ್ಚೆಯ ಮಾಧ್ಯಮದ ಮೂಲಕ ಅಧ್ಯಯನಕ್ಕೆ ಪ್ರಾಧಾನ್ಯ ನೀಡುತ್ತದೆ, ಜೊತೆಯಲ್ಲಿ ಈ ವಿಷಯಗಳ ಬಗ್ಗೆ ತೀವ್ರವಾದ ಧ್ಯಾನವನ್ನು ನಡೆಸಲಾಗುತ್ತದೆ. 

ಟಿಬೆಟ್ನಲ್ಲಿಈ ವಿಧಾನವನ್ನು, ಭಾರತೀಯ ಬೌದ್ಧ ಸಂಪ್ರದಾಯವಾದ ತಂತ್ರದ ಅಭ್ಯಾಸದೊಂದಿಗೆ ಸಂಯೋಜಿಸಲಾಗುತ್ತದೆ, ಇಲ್ಲಿ ನಾವು ಕಲ್ಪನೆಯ ಶಕ್ತಿಯನ್ನು ಬಳಸುತ್ತೇವೆ ಮತ್ತು ದೇಹದ ಸೂಕ್ಷ್ಮ ಶಕ್ತಿಗಳೊಂದಿಗೆ ನಮ್ಮನ್ನು ಬುದ್ಧನಾಗಿ ಪರಿವರ್ತಿಸಲು ಶ್ರಮಪಡುತ್ತೇವೆ. ಇದನ್ನು, ಶೂನ್ಯತೆ ಮತ್ತು ಸಹಾನುಭೂತಿಯ ಮೇಲೆ ಕೇಂದ್ರೀಕರಿಸುವ ಮೂಲಕ ಮಾಡಲಾಗುತ್ತದೆ, ಮತ್ತು ಆ ಸಂದರ್ಭದಲ್ಲಿ, ನಾವು ನಿರ್ದಿಷ್ಟ ಬುದ್ಧ-ರೂಪಕ್ಕೆ ಮಾರ್ಪಟ್ಟಿರುವಂತೆ ಕಲ್ಪಿಸಿಕೊಳ್ಳುವುದಾಗಿರುತ್ತದೆ. ಅಂತಹ ರೂಪಗಳನ್ನು ಕೆಲವೊಮ್ಮೆ "ಧ್ಯಾನ ದೇವತೆಗಳು" ಎಂದು ಕರೆಯಲಾಗಿದ್ದರೂ, ಅವು ಅರ್ಥ ಅಥವಾ ಕಾರ್ಯದಲ್ಲಿ ದೇವರಿಗೆ ಸಮಾನವಾಗಿರುವುದಿಲ್ಲ ಮತ್ತು ಬೌದ್ಧಧರ್ಮವು ಖಂಡಿತವಾಗಿಯೂ ಬಹುದೇವತಾ ಧರ್ಮವಾಗಿಲ್ಲ. ಪ್ರತಿ ಬುದ್ಧ-ರೂಪವು ಬುದ್ಧನ ಜ್ಞಾನೋದಯದ ಒಂದು ಅಂಶದ ಸಾಂಕೇತಿಕ ನಿರೂಪಣೆಯಾಗಿರುತ್ತದೆ, ಉದಾಹರಣೆಗೆ ಬುದ್ಧಿವಂತಿಕೆ ಅಥವಾ ಸಹಾನುಭೂತಿ. ಅಂತಹ ರೂಪದಲ್ಲಿ ತನ್ನನ್ನು ತಾನು ದೃಶ್ಯೀಕರಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಪವಿತ್ರ ಉಚ್ಚಾರಾಂಶಗಳನ್ನು (ಮಂತ್ರಗಳು) ಪಠಿಸುವುದರಿಂದ ಒಬ್ಬರ ಭ್ರಮೆಯ, ನಕಾರಾತ್ಮಕ ಸ್ವಯಂ-ಚಿತ್ರಣವನ್ನು ಜಯಿಸಲು ಮತ್ತು ಆ ವ್ಯಕ್ತಿಯಿಂದ ಸಾಕಾರಗೊಂಡ ಗುಣಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅಂತಹ ಅಭ್ಯಾಸಗಳು ಬಹಳ ಉನ್ನತಮಟ್ಟದ್ದಾಗಿದ್ದು, ಅವುಗಳಿಗೆ, ಸಂಪೂರ್ಣವಾಗಿ ಅರ್ಹರಾಗಿರುವ ಗುರುಗಳ ನಿಕಟ ಮೇಲ್ವಿಚಾರಣೆಯ ಅಗತ್ಯವಿರುತ್ತದೆ. 

ಟಿಬೆಟಿಯನ್ ಬೌದ್ಧಧರ್ಮದಲ್ಲಿ ಬಹಳಷ್ಟು ಪಠಣ ಮತ್ತು ಆಚರಣೆಗಳಿರುತ್ತವೆ, ಹೆಚ್ಚಾಗಿ ನಕಾರಾತ್ಮಕ ಶಕ್ತಿಗಳನ್ನು ಮತ್ತು ಹಸ್ತಕ್ಷೇಪವನ್ನು ತೊಡೆದುಹಾಕಲು, ಅವುಗಳನ್ನು ರಾಕ್ಷಸರ ರೂಪದಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಅಂತಹ ಆಚರಣೆಗಳನ್ನು ಆಚರಿಸುವಾಗ, ಕಷ್ಟಗಳನ್ನು ಜಯಿಸಲು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಪಡೆಯಲು ಒಬ್ಬರು ತಮ್ಮನ್ನು ಅತ್ಯಂತ ಶಕ್ತಿಯುತ ರೂಪವಾದ ಧ್ಯಾನದ ಸಾಧನವಾಗಿ ಕಲ್ಪಿಸಿಕೊಳ್ಳುತ್ತಾರೆ. ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಲು ಧ್ಯಾನ ತಂತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ, ದೃಶ್ಯೀಕರಣದ ಬಳಕೆಯನ್ನು ಸಹ ಇದು ಒಳಗೊಂಡಿರುತ್ತದೆ. 

ಸಾರಾಂಶ 

ಥೆರವಾದದ ಸಾವಧಾನತೆಯ ಅಭ್ಯಾಸಗಳಾಗಿರಬಹುದು, ಚೀನಾದಲ್ಲಿ ಅಮಿತಾಭ ಬುದ್ಧನ ಹೆಸರನ್ನು ಪಠಿಸುವುದಾಗಿರಬಹುದು ಅಥವಾ ಟಿಬೆಟ್‌ನಲ್ಲಿನ ಚರ್ಚೆ ಮತ್ತು ದೃಶ್ಯೀಕರಣದ ಅಭ್ಯಾಸಗಳಾಗಿಬಹುದು, ಎಲ್ಲಾ ಪ್ರಕಾರಗಳ ಬೌದ್ಧಧರ್ಮವು ಒಂದೇ ರೀತಿಯ ಸಂದರ್ಭದೊಳಗೆ ಕೂಡಿಸಬಹುದು. ಅವೆಲ್ಲವೂ ದುಃಖವನ್ನು ನಿವಾರಿಸಲು ಮತ್ತು ಒಬ್ಬರ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಪರಿಣಾಮಕಾರಿ ವಿಧಾನಗಳನ್ನು ಒದಗಿಸಿದ್ದು, ಇವು ಒಬ್ಬರ ಸ್ವಂತದ ಸಲುವಾಗಿ ಮಾತ್ರವಲ್ಲದೆ, ಇತರರಿಗೂ ಸಾಧ್ಯವಾದಷ್ಟು ಪ್ರಯೋಜನಕಾರಿಯಾಗುವಂತೆ ಇರುತ್ತವೆ.  

Top