ಸಂತೋಷದ ಮಾರ್ಗವಾಗಿ ಸಮಸ್ಯೆಗಳಿಂದ ಮುಕ್ತರಾಗಲು ನಿರ್ಧರಿಸಬೇಕು

ಮಾಹಿತಿ ಯುಗದ ಒತ್ತಡವನ್ನು ನಿಭಾಯಿಸಲು, ನಾವು ಇಂಟರ್ನೆಟ್ ಅನ್ನು ಅದರ ಸಾಮಾಜಿಕ ಮಾಧ್ಯಮ, ಸಂದೇಶ ಕಳುಹಿಸುವಿಕೆ ಇತ್ಯಾದಿಗಳೊಂದಿಗೆ ಬಳಸುವ ವಿಧಾನಗಳನ್ನು ಪರಿಶೀಲಿಸಬೇಕು. ನಮಗೆ ಮತ್ತಷ್ಟು ಒತ್ತಡವನ್ನು ಉಂಟುಮಾಡುವ ನಮ್ಮ ಸ್ವಯಂ-ಸೋಲಿನ ಅಭ್ಯಾಸಗಳನ್ನು ನಾವು ಗುರುತಿಸಿದ ನಂತರ, ನಮ್ಮ ಅತೃಪ್ತಿಯ ಮೂಲವು ನಮ್ಮ ಸ್ವಂತ ಮನಸ್ಸಿನಲ್ಲಿದೆ ಎಂದು ನಾವು ಗುರುತಿಸಬೇಕು. ಒತ್ತಡಕ್ಕೆ ಒಳಗಾಗಬಾರದು ಎಂಬ ದೃಢಸಂಕಲ್ಪ ಮತ್ತು ಸ್ವಯಂ-ಶಿಸ್ತು, ಏಕಾಗ್ರತೆ, ಸಾವಧಾನತೆ ಮತ್ತು ವಿವೇಚನಾತ್ಮಕ ಅರಿವಿನೊಂದಿಗೆ, ನಾವು ಆಧುನಿಕ ಜೀವನದ ಸವಾಲುಗಳನ್ನು ಹೆಚ್ಚು ಸ್ಪಷ್ಟತೆ ಮತ್ತು ಶಾಂತತೆಯಿಂದ ನಿಭಾಯಿಸಲು ಸಾಧ್ಯವಾಗುತ್ತದೆ.

ನಾವು ದೊಡ್ಡ ನಗರಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಅಥವಾ ಗ್ರಾಮಾಂತರದಲ್ಲಿ ವಾಸಿಸುತ್ತಿರಲಿ, ನಾವೆಲ್ಲರೂ ನಮ್ಮ ಆಧುನಿಕ ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತೇವೆ. ಹೆಚ್ಚಿನ ಜನರು ಅವುಗಳನ್ನು "ಒತ್ತಡ" ಎಂಬ ಪದದೊಂದಿಗೆ ಸಂಕ್ಷೇಪಿಸುತ್ತಾರೆ. ಮಾಹಿತಿ, ಚಲನಚಿತ್ರಗಳು, ಟಿವಿ ಕೇಂದ್ರಗಳು, ಸಂಗೀತ, ಸಾಮಾಜಿಕ ಮಾಧ್ಯಮ ಫೀಡ್‌ಗಳು, ತ್ವರಿತ ಸಂದೇಶಗಳು, ಆನ್‌ಲೈನ್ ಉತ್ಪನ್ನಗಳು ಮತ್ತು ಇನ್ನೂ ಹೆಚ್ಚಿನವುಗಳು ತಕ್ಷಣ ಲಭ್ಯವಾಗುತ್ತಿದ್ದಂತೆ ನಾವು ಇನ್ನೂ ಹೆಚ್ಚು ಹೆಚ್ಚು ಬಯಸುತ್ತೇವೆ. ಮೇಲ್ನೋಟಕ್ಕೆ ಅವು ನಮ್ಮ ಜೀವನವನ್ನು ಸುಧಾರಿಸುವಂತೆ ಕಾಣಿಸಬಹುದು, ಆದರೆ ಅವು, ಅವುಗಳನ್ನು ಹೆಚ್ಚು ಸಂಕೀರ್ಣ ಮತ್ತು ಒತ್ತಡದಾಯಕವಾಗಿಸುತ್ತವೆ, ವಿಶೇಷವಾಗಿ ಹಲವು ಆಯ್ಕೆಗಳಿರುವಾಗ. ಸುದ್ದಿ, ಇಮೇಲ್ ಅಥವಾ ತ್ವರಿತ ಸಂದೇಶದಂತಹ ಯಾವುದನ್ನಾದರೂ ನಾವು ಕಳೆದುಕೊಳ್ಳಲು ಬಯಸುವುದಿಲ್ಲ. ನಾವು ಹೊರಗುಳಿಯುತ್ತೇವೆ ಎಂಬ ಭಯದಲ್ಲಿರುತ್ತೇವೆ. ನಾವು ಯಾವುದೇ ಟಿವಿ ಕಾರ್ಯಕ್ರಮವನ್ನು ಆರಿಸಿಕೊಂಡರೂ, ನಾವು ಇನ್ನೂ ಉತ್ತಮವಾದದ್ದನ್ನು ವೀಕ್ಷಿಸುವುದನ್ನು ತಪ್ಪಿಸಿಕೊಂಡಿರಬಹುದು ಎಂಬ ಅನುಮಾನ ನಮ್ಮಲ್ಲಿ ತುಂಬಿರುತ್ತದೆ. 

ನಾವು ಸಮಾಜಕ್ಕೆ, ಸ್ನೇಹಿತರ ಗುಂಪಿಗೆ ಸೇರಲು ಬಯಸುತ್ತೇವೆ; ನಾವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಯಾವುದೇ ಪೋಸ್ಟ್‌ಗೆ "ಲೈಕ್‌ಗಳು" ಬಯಸುತ್ತೇವೆ, ಇದರಿಂದ ನಾವು ಸ್ವೀಕರಿಸಲ್ಪಟ್ಟಿದ್ದೇವೆ ಎಂದು ನಮಗೆ ಅನಿಸುತ್ತದೆ. ನಾವು ಶಾಂತವಾಗಿರುವುದಿಲ್ಲ, ಮತ್ತು ನಾವು ಪಡೆಯುವ "ಲೈಕ್‌ಗಳ" ಸಂಖ್ಯೆಯಿಂದ ಅಥವಾ ಇಂಟರ್ನೆಟ್‌ನಲ್ಲಿ ನಾವು ಓದುವ ಮಾಹಿತಿಯಿಂದ ನಾವು ಎಂದಿಗೂ ತೃಪ್ತರಾಗುವುದಿಲ್ಲ. ನಮ್ಮ ಫೋನ್ ನಮಗೆ ಸಂದೇಶ ಬಂದಿದೆ ಎಂದು ಸೂಚಿಸಿದಾಗ ಅಥವಾ ನಮಗೆ ಹೆಚ್ಚಿನ ಲೈಕ್‌ಗಳು ಬಂದಿವೆಯೇ ಎಂದು ನೋಡಲು ನಮ್ಮ ಫೇಸ್‌ಬುಕ್ ಅನ್ನು ಪರಿಶೀಲಿಸುವಾಗ ಅಥವಾ ಸುದ್ದಿ ವ್ಯಸನಿಯಾಗಿ, ಹೊಸದೇನಾದರೂ ಸಂಭವಿಸಿದೆಯೇ ಎಂದು ನೋಡಲು ಮತ್ತೊಮ್ಮೆ ಸುದ್ದಿಗಳನ್ನು ನೋಡುವಾಗ ನಾವು ನಿರೀಕ್ಷೆಯಿಂದ ಉತ್ಸುಕರಾಗುತ್ತೇವೆ. ನಾವು ಏನನ್ನೂ ಕಳೆದುಕೊಳ್ಳಲು ಬಯಸುವುದಿಲ್ಲ, ಆದರೆ ಅದು ಎಂದಿಗೂ ತೃಪ್ತಿಪಡಿಸುವುದಿಲ್ಲ ಮತ್ತು ನಾವು ಇನ್ನೂ ಹೆಚ್ಚಿನದನ್ನು ಬಯಸುತ್ತೇವೆ. 

ಮತ್ತೊಂದೆಡೆ, ನಮ್ಮ ಸುತ್ತಲಿನ ಪರಿಸ್ಥಿತಿಯಿಂದ ನಾವು ಅತಿಯಾಗಿ ಬಳಲುತ್ತೇವೆ, ಆದ್ದರಿಂದ ನಾವು ಸುರಂಗಮಾರ್ಗದಲ್ಲಿ ಪ್ರಯಾಣಿಸುವಾಗ ಅಥವಾ ನಡೆಯುವಾಗ, ನಮ್ಮ ಮೊಬೈಲ್ ಸಾಧನಗಳನ್ನು ನೋಡುವ ಮತ್ತು ಸಂಗೀತವನ್ನು ಕೇಳುವ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ಸುತ್ತಲಿನ ವಾಸ್ತವತೆಯನ್ನು ಮುಚ್ಚಿ ನಮ್ಮ ಖಾಸಗಿ, ಕಾಲ್ಪನಿಕ ಪ್ರಪಂಚಕ್ಕೆ ತಪ್ಪಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ನಾವು ಯಾವಾಗಲೂ ಮನರಂಜನೆ ಪಡೆಯುವ ಪ್ರಚೋದಿತ ಅಗತ್ಯವನ್ನು ಸಹ ಅನುಭವಿಸುತ್ತೇವೆ. ಒಂದೆಡೆ, ನಾವು ಶಾಂತಿ ಮತ್ತು ಮೌನಕ್ಕಾಗಿ ಹಂಬಲಿಸುತ್ತೇವೆ, ಮತ್ತೊಂದೆಡೆ ಮಾಹಿತಿ, ಸಂಗೀತ ಇತ್ಯಾದಿಗಳ ಅನುಪಸ್ಥಿತಿಯ ನಿರ್ವಾತದ ಬಗ್ಗೆ ನಾವು ಭಯಪಡುತ್ತೇವೆ. ಬಾಹ್ಯ ಪ್ರಪಂಚದ ಒತ್ತಡದಿಂದ ಮುಕ್ತರಾಗಲು ನಾವು ದೃಢನಿಶ್ಚಯ ಹೊಂದಿರುತ್ತೇವೆ, ಆದ್ದರಿಂದ ನಾವು ಅದನ್ನು ತ್ಯಜಿಸಿ ಇಂಟರ್ನೆಟ್‌ನ ವರ್ಚುವಲ್ ಜಗತ್ತಿಗೆ ಹಿಂದಿರುಗುತ್ತೇವೆ. ಆದರೆ ಅಲ್ಲಿಯೂ ಸಹ, ನಾವು ಸಾಮಾಜಿಕ ಮಾಧ್ಯಮದಲ್ಲಿ ನಮ್ಮ "ಸ್ನೇಹಿತರು" ಎಂದು ಕರೆಯಲ್ಪಡುವವರ ಸಹವಾಸ ಮತ್ತು ಅನುಮೋದನೆಯನ್ನು ಬಯಸುತ್ತೇವೆ ಮತ್ತು ನಾವು ಎಂದಿಗೂ ಸುರಕ್ಷಿತವಾಗಿರುವುದಿಲ್ಲ. ಆದರೆ, ನಮ್ಮ ಮೊಬೈಲ್ ಸಾಧನಗಳಿಗೆ ಹಿಂದಿರುಗುವುದು ಪರಿಹಾರವೇ? 

ಈ ಅಭ್ಯಾಸದ ದಿನಚರಿಗಳಲ್ಲಿ ಸಿಲುಕಿಕೊಂಡಾಗ ನಾವು ಅನುಭವಿಸುವ ಅತೃಪ್ತಿಯನ್ನು ಗುರುತಿಸಬೇಕು ಮತ್ತು ಅದರ ಮೂಲಗಳನ್ನು ಗುರುತಿಸಬೇಕು. ನಂತರ ನಾವು ಈ ಅತೃಪ್ತಿಯಿಂದ ಮುಕ್ತರಾಗುವ ದೃಢನಿಶ್ಚಯವನ್ನು, ಅದರ ಮೂಲಗಳನ್ನು ನಿವಾರಿಸುವ ವಿಧಾನಗಳನ್ನು ತಿಳಿದುಕೊಂಡು, ಅವು ಕಾರ್ಯನಿರ್ವಹಿಸುತ್ತವೆ ಎಂಬ ವಿಶ್ವಾಸವನ್ನು ಆಧರಿಸಿ ಬೆಳೆಸಿಕೊಳ್ಳಬೇಕು. ಆದರೆ ನಾವು ಏನೂ ಅಲ್ಲದ ಜೋಂಬಿಯಂತೆ ಇರಲು ಬಯಸುವುದಿಲ್ಲ; ನಾವು ಸಂತೋಷವಾಗಿರಲು ಬಯಸುತ್ತೇವೆ. ಸಂತೋಷವೆಂದರೆ ಕೇವಲ ಅತೃಪ್ತಿಯ ಅನುಪಸ್ಥಿತಿಯಲ್ಲ; ಅದು ಅತೃಪ್ತಿಯಿಂದ ಮುಕ್ತವಾಗುವ ತಟಸ್ಥ, ಭಾವನಾತ್ಮಕವಲ್ಲದ ಸ್ಥಿತಿಯ ಜೊತೆಗೆ ಬರುವ ವಿಷಯ. 

ಅತೃಪ್ತಿಯ ಮೂಲವಾದ ನಮ್ಮದೇ ಮನಸ್ಸುಗಳು 

ಬಾಹ್ಯ ವಸ್ತುಗಳು ಮತ್ತು ಸನ್ನಿವೇಶಗಳು ನಾವು ಅನುಭವಿಸುವ ಅತೃಪ್ತಿ, ಸಂಕಟ ಮತ್ತು ಒತ್ತಡದ ಮೂಲವಲ್ಲ; ಇಲ್ಲದಿದ್ದರೆ ಅವುಗಳನ್ನು ಎದುರಿಸುವ ಪ್ರತಿಯೊಬ್ಬರೂ ಅವುಗಳನ್ನು ಅದೇ ರೀತಿಯಲ್ಲಿ ಅನುಭವಿಸಬೇಕಾಗಿತ್ತು. 

ನಮ್ಮ ಅತೃಪ್ತಿಯ ಮೂಲವು ನಮ್ಮ ಸ್ವಂತ ಮನಸ್ಸುಗಳು, ಅದರ ವರ್ತನೆಗಳು ಮತ್ತು ಭಾವನೆಗಳು ಮತ್ತು ಆಧುನಿಕ ಜೀವನದ ವಾಸ್ತವಗಳನ್ನು ನಿರ್ವಹಿಸುವ ನಮ್ಮ ಗೊಂದಲಮಯ ವಿಧಾನಗಳು. 

ನಮ್ಮಲ್ಲಿ ಸ್ವಯಂ-ವಿನಾಶಕಾರಿ ನಡವಳಿಕೆಯ ಬಲವಾದ ಅಭ್ಯಾಸಗಳಿವೆ, ಇದು ಅಭದ್ರತೆ, ಬಾಂಧವ್ಯ, ನಿವಾರಣೆ, ಭಯ ಇತ್ಯಾದಿಗಳಂತಹ ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳಿಂದ ಉಂಟಾಗುತ್ತವೆ. ಅವು ನಮ್ಮನ್ನು ಹೆಚ್ಚು ಒತ್ತಡ ಮತ್ತು ಸಮಸ್ಯೆಗಳನ್ನು ತರುವ ರೀತಿಯಲ್ಲಿ ವರ್ತಿಸುವಂತೆ ಮಾಡುತ್ತವೆ, ಇದು ಪ್ರತಿಕ್ರಿಯೆಯ ಲೂಪ್‌ನಂತೆ, ನಮ್ಮ ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳನ್ನು ಮತ್ತಷ್ಟು ಬಲಪಡಿಸುತ್ತವೆ. 

ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳು ಅರಿವಿಲ್ಲದಿರುವುದನ್ನು ಆಧರಿಸಿರುತ್ತವೆ. ನಮ್ಮ ನಡವಳಿಕೆಯು ನಮ್ಮ ಮೇಲೆ ಬೀರುವ ಪರಿಣಾಮ ನಮಗೆ ತಿಳಿದಿಲ್ಲ ಮತ್ತು ನಾವು ಇರುವ ಸನ್ನಿವೇಶಗಳ ಬಗ್ಗೆ ವಾಸ್ತವಿಕವಾಗಿ ತಿಳಿದಿಲ್ಲ, ಅಥವಾ ಅವುಗಳ ಬಗ್ಗೆ ನಮಗೆ ತಪ್ಪು ತಿಳುವಳಿಕೆ ಇರುತ್ತದೆ. ಉದಾಹರಣೆಗೆ, ಹೆಚ್ಚಿನ "ಲೈಕ್ಗಳು" ಇರುವುದರಿಂದ ನಮಗೆ ಹೆಚ್ಚು ಸುರಕ್ಷಿತ ಭಾವನೆ ಬರುವುದಿಲ್ಲ ಎಂದು ನಮಗೆ ತಿಳಿದಿಲ್ಲ; ಇದಕ್ಕೆ ವಿರುದ್ಧವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಇದು ಹೆಚ್ಚಿನ "ಲೈಕ್ಗ”ಳಿಗಾಗಿ ಹಾತೊರೆಯುವ ಬಯಕೆಯನ್ನು, ನಮ್ಮಲ್ಲಿರುವ ಪ್ರಮಾಣವನ್ನು ನಿರಂತರವಾಗಿ ಪರಿಶೀಲಿಸುವ ಅಭದ್ರತೆಯನ್ನು ಮತ್ತು ಎಂದಿಗೂ ತೃಪ್ತರಾಗದ ಮತ್ತು ಮನಸ್ಸಿನ ಶಾಂತಿಯನ್ನು ಹೊಂದಿರದ ನೋವನ್ನು ತರುತ್ತದೆ. ಅಥವಾ ಕಂಪ್ಯೂಟರ್ ಆಟದ ವರ್ಚುವಲ್ ಜಗತ್ತಿಗೆ ತಪ್ಪಿಸಿಕೊಳ್ಳುವುದರಿಂದ ನಾವು ಜೀವನದಲ್ಲಿ ಎದುರಿಸಬೇಕಾದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಾವು ನಿಷ್ಕಪಟವಾಗಿ ಭಾವಿಸುತ್ತೇವೆ. ಈ ಎಲ್ಲಾ ಅರಿವಿಲ್ಲದಿರುವಿಕೆ ಮತ್ತು ಮುಗ್ಧತೆ, ಮತ್ತು ಅವು ತರುವ ಗೊಂದಲಮಯ ಭಾವನೆಗಳು, ಬಾಂಧವ್ಯ, ಸ್ವಯಂ-ವಿನಾಶಕಾರಿ ನಡವಳಿಕೆ ಮತ್ತು ಗೊಂದಲಮಯ ಮನಸ್ಸಿನ ಸ್ಥಿತಿಗಳ ನಮ್ಮ ನಕಾರಾತ್ಮಕ ಅಭ್ಯಾಸಗಳನ್ನು ಬಲಪಡಿಸುತ್ತವೆ. 

ಈ ರೋಗಲಕ್ಷಣಗಳನ್ನು ನಿಭಾಯಿಸಲು, ನಮ್ಮ ಸನ್ನಿವೇಶಗಳ ಬಗ್ಗೆ ನಮಗೆ ವಿವೇಚನಾತ್ಮಕ ಅರಿವು ಬೇಕು, ಉದಾಹರಣೆಗೆ ಒಂದು ಕಷ್ಟಕರವಾದ ಕೆಲಸವನ್ನು ನಾವು ಎದುರಿಸಬೇಕು. ನಾವು ಅದನ್ನು ನಿಭಾಯಿಸಬೇಕು, ಅದು ವಾಸ್ತವ; ಮತ್ತು ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಉತ್ತಮವಾಗಷ್ಟೇ ಮಾಡಬಹುದು. ನಮ್ಮ ಪರಿಸ್ಥಿತಿಯ ಈ ವಾಸ್ತವವನ್ನು ಮತ್ತು ನಮ್ಮ ಮಿತಿಗಳ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಈ ಪರಿಸ್ಥಿತಿಯು ಒಂದು ಭಯಾನಕ ದೈತ್ಯಾಕಾರದದ್ದಾಗಿದೆ ಮತ್ತು ನಾವು ಪರಿಪೂರ್ಣರಾಗಿರಬೇಕು ಎಂದು ನಾವು ಭಾವಿಸುವುದರಿಂದ ನಾವು ಅರ್ಹರಲ್ಲ ಎಂದು ಬಿಂಬಿಸುವುದನ್ನು ನಿಲ್ಲಿಸಬೇಕು. ನಂತರ ನಾವು ಎದುರಿಸುತ್ತಿರುವ ವಾಸ್ತವವನ್ನು ಅತಿಯಾಗಿ ಅಂದಾಜು ಮಾಡದೆ ಅಥವಾ ಕಡಿಮೆ ಅಂದಾಜು ಮಾಡದೆ, ಗಮನದಲ್ಲಿಟ್ಟುಕೊಳ್ಳಲು ಏಕಾಗ್ರತೆ ಮತ್ತು ಸತ್ಯಗಳ ಮೇಲೆ ನಮ್ಮ ಗಮನವನ್ನು ಕಳೆದುಕೊಂಡಾಗ ಅದನ್ನು ಪತ್ತೆಹಚ್ಚಲು ಜಾಗರೂಕತೆ ನಮಗೆ ಬೇಕಾಗುತ್ತದೆ. ಜೊತೆಗೆ, ಸ್ವಯಂ-ವಿನಾಶಕಾರಿ ಅಭ್ಯಾಸಗಳ ಮೇಲೆ ವರ್ತಿಸುವುದನ್ನು ತಡೆಯಲು ನಮಗೆ ಸ್ವಯಂ-ಶಿಸ್ತು ಬೇಕು. 

ನಾವು ಸ್ವಯಂ-ಶಿಸ್ತಿನಿಂದ ಪ್ರಾರಂಭಿಸುತ್ತೇವೆ ಮತ್ತು ಸಣ್ಣ ವಿಷಯಗಳಿಂದ ಪ್ರಾರಂಭಿಸುತ್ತೇವೆ. ನಾವು ಒತ್ತಡಕ್ಕೊಳಗಾದಾಗ, ನಮ್ಮ ಕಾರ್ಟಿಸೋಲ್ ಮಟ್ಟ (ಒತ್ತಡದ ಹಾರ್ಮೋನ್) ಹೆಚ್ಚಾಗುತ್ತದೆ, ಆದ್ದರಿಂದ ನಾವು ಸ್ವಲ್ಪ ಪರಿಹಾರವನ್ನು ಬಯಸುತ್ತೇವೆ, ಉದಾಹರಣೆಗೆ ಸಿಗರೇಟ್ ಅಥವಾ ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸುವುದು ಅಥವಾ ಆಸಕ್ತಿದಾಯಕವಾದದ್ದಕ್ಕಾಗಿ ಇಂಟರ್ನೆಟ್‌ನಲ್ಲಿ ಸರ್ಫಿಂಗ್ ಮಾಡುವುದು. ಇದು ನಮ್ಮನ್ನು ಉತ್ತಮಗೊಳಿಸುತ್ತದೆ ಎಂಬ ನಿರೀಕ್ಷೆಯ ಉತ್ಸಾಹ ಮತ್ತು ಸಂತೋಷವನ್ನು ನಾವು ಅನುಭವಿಸುತ್ತೇವೆ, ಆದ್ದರಿಂದ ನಮ್ಮ ಡೋಪಮೈನ್ ಮಟ್ಟ (ಪ್ರತಿಫಲದ ನಿರೀಕ್ಷೆಯ ಹಾರ್ಮೋನ್) ಹೆಚ್ಚಾಗುತ್ತದೆ. ಆದರೆ ಸಿಗರೇಟ್ ಅಥವಾ ಇಂಟರ್ನೆಟ್ ಅನ್ನು ಪರಿಶೀಲಿಸಿದ ನಂತರ, ಅದು ತೃಪ್ತಿಪಡಿಸುವುದಿಲ್ಲ, ಆದ್ದರಿಂದ ನಮ್ಮ ಒತ್ತಡ ಮರಳುತ್ತದೆ. 

ಸಿಗರೇಟ್ ಸಮಸ್ಯೆಯನ್ನು ಪರಿಹರಿಸುತ್ತದೆ, ಅಥವಾ "ಲೈಕ್ಗಳು" ಸಮಸ್ಯೆಯನ್ನು ಪರಿಹರಿಸುತ್ತವೆ ಅಥವಾ ಇತ್ತೀಚಿನ ಸುದ್ದಿಗಳನ್ನು ಓದುವುದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂಬ ನಮ್ಮ ತಪ್ಪು ಕಲ್ಪನೆಯನ್ನು ನಂಬುವುದರಿಂದಾಗುವ ಅನಾನುಕೂಲಗಳನ್ನು ನಾವು ವಿವೇಚಿಸಬೇಕು. ಆಗ ನಾವು ಸ್ವತಂತ್ರರಾಗಿರಲು ದೃಢಸಂಕಲ್ಪ ಬೆಳೆಸಿಕೊಳ್ಳಬಹುದು. ಆದ್ದರಿಂದ ನಾವು ಸಿಗರೇಟ್‌ಗಳನ್ನು ಬಿಟ್ಟುಬಿಡುತ್ತೇವೆ, ಅಥವಾ ನಮ್ಮ ಇಮೇಲ್ ಮತ್ತು ಸಂದೇಶಗಳನ್ನು ಪರಿಶೀಲಿಸುವಾಗ ಅಥವಾ ನಾವು ಸುದ್ದಿ ಅಥವಾ ಸಾಮಾಜಿಕ ಮಾಧ್ಯಮವನ್ನು ಎಷ್ಟು ಬಾರಿ ಪರಿಶೀಲಿಸುತ್ತೇವೆ ಎಂಬುದನ್ನು ನಿಯಂತ್ರಿಸುತ್ತೇವೆ. ಸಿಗರೇಟ್ ಸೇದಲು ಅಥವಾ ಇಂಟರ್ನೆಟ್‌ಗೆ ಹೋಗಲು ಒತ್ತಾಯದ ಪ್ರಚೋದನೆ ಬಂದಾಗ ನಾವು ವರ್ತಿಸುವುದಿಲ್ಲ; ನಾವು ದೂರವಿರುತ್ತೇವೆ. 

ದೈಹಿಕ ಸ್ಥೂಲಕಾಯತೆಯನ್ನು ನಿವಾರಿಸಲು ನಾವು ಆಹಾರ ಪಥ್ಯವನ್ನು ಅನುಸರಿಸಬೇಕಾದಂತೆಯೇ, ಮಾನಸಿಕ ಸ್ಥೂಲಕಾಯತೆಯನ್ನು ನಿವಾರಿಸಲು ನಾವು ಮಾಹಿತಿ ಪಥ್ಯವನ್ನು ಅನುಸರಿಸಬೇಕು. 

ನಾವು ನಮ್ಮ ಆಹಾರ ಸೇವನೆಯನ್ನು ನಿರ್ಬಂಧಿಸಿದಂತೆ, ಮಾಹಿತಿ, ಸಂದೇಶಗಳು, ಸಂಗೀತ ಮತ್ತು ಮುಂತಾದವುಗಳ ಸೇವನೆಯನ್ನು ನಿರ್ಬಂಧಿಸಬೇಕು. 

ಹಳೆಯ ಸ್ವಯಂ-ವಿನಾಶಕಾರಿ ಅಭ್ಯಾಸಗಳಿಂದ ದೂರವಿರುವುದು, ಮೊದಲಿಗೆ, ನಮ್ಮ ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಒತ್ತಡವನ್ನುಂಟು ಮಾಡುತ್ತದೆ, ಏಕೆಂದರೆ ಹಳೆಯ ನಕಾರಾತ್ಮಕ ಅಭ್ಯಾಸಗಳು ತುಂಬಾ ಬಲವಾಗಿರುತ್ತವೆ. ಇದು ಸಿಗರೇಟ್‌ಗಳಿಂದ ಅಥವಾ ಇಂಟರ್ನೆಟ್ ಮತ್ತು ಮೊಬೈಲ್‌ಗಳಿಂದ ಅಥವಾ ಸಂಗೀತದಿಂದ ಹಿಂತೆಗೆದುಕೊಳ್ಳುವಂತಿದೆ. ಆದರೆ ಹಿಂತೆಗೆದುಕೊಳ್ಳುವಿಕೆಯ ಒತ್ತಡವು ಅಂತಿಮವಾಗಿ ಕಡಿಮೆಯಾಗುತ್ತದೆ ಮತ್ತು ನಾವು ಮನಸ್ಸಿನ ಶಾಂತಿಯನ್ನು ಅನುಭವಿಸುತ್ತೇವೆ. ನಾವು ನಕಾರಾತ್ಮಕ ಅಭ್ಯಾಸಗಳನ್ನು ಸಕಾರಾತ್ಮಕ ಅಭ್ಯಾಸಗಳೊಂದಿಗೆ ಬದಲಾಯಿಸಿದರೆ - ನಾವು ಎಲ್ಲಾ ಮಾನವೀಯತೆಯ ಭಾಗವಾಗಿದ್ದೇವೆ ಮತ್ತು ನಾವೆಲ್ಲರೂ ಪರಸ್ಪರ ಸಂಬಂಧ ಹೊಂದಿದ್ದೇವೆ, ಆದ್ದರಿಂದ ನಮ್ಮ ಕಲ್ಯಾಣವು ಎಲ್ಲರ ಮೇಲೆ ಅವಲಂಬಿತವಾಗಿದೆ ಎಂದು ಅರಿತುಕೊಳ್ಳುವಂತಹವು - ಇದು ಇತರರೊಂದಿಗೆ ಸಂಪರ್ಕ ಮತ್ತು ಬಂಧದ ಭಾವನೆಯ ಅಗತ್ಯವನ್ನು ಪೂರೈಸುತ್ತದೆ, ಇದು ಇಂಟರ್ನೆಟ್ ಸಾಮಾಜಿಕ ನೆಟ್‌ವರ್ಕ್‌ನ ಭಾಗವಾಗಿರುವುದರಿಂದ ನಿಜವಾಗಿಯೂ ಸಿಗುವುದಿಲ್ಲ. ಆದ್ದರಿಂದ ನಮ್ಮ ಆಕ್ಸಿಟೋಸಿನ್ ಮಟ್ಟ (ಬಂಧನೆಯ ಹಾರ್ಮೋನ್) ಹೆಚ್ಚಾಗುತ್ತದೆ ಮತ್ತು ನಾವು ಹೆಚ್ಚು ಸಂತೋಷ ಮತ್ತು ಭದ್ರತೆಯ ಪ್ರಜ್ಞೆಯನ್ನು ಅನುಭವಿಸುತ್ತೇವೆ. 

ಸ್ವಯಂ-ವಿನಾಶಕಾರಿ ಅಭ್ಯಾಸಗಳಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳುವುದು 

ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ಸ್ವತಂತ್ರರಾಗುವ ದೃಢಸಂಕಲ್ಪವನ್ನು ಬೆಳೆಸಿಕೊಂಡ ನಂತರ, ಹಳೆಯ ನಕಾರಾತ್ಮಕ ಅಭ್ಯಾಸಗಳಿಂದ ನಮ್ಮನ್ನು ಮುಕ್ತಗೊಳಿಸಲು, ನಾವು ಸ್ವಯಂ-ಶಿಸ್ತು, ಏಕಾಗ್ರತೆ ಮತ್ತು ವಿವೇಚನಾತ್ಮಕ ಅರಿವಿನಲ್ಲಿ ನಮ್ಮನ್ನು ತರಬೇತಿ ಮಾಡಿಕೊಳ್ಳಬೇಕು, ಇವನ್ನು "ಮೂರು ತರಬೇತಿಗಳು" ಎಂದು ಕರೆಯಲ್ಪಡುತ್ತದೆ. ಈ ಮೂರು ಒಟ್ಟಿಗೆ ಕೆಲಸ ಮಾಡಬೇಕಾಗಿದೆ, ಆದರೆ ಅವುಗಳನ್ನು ಸರಿಯಾಗಿ ಅಭಿವೃದ್ಧಿಪಡಿಸಲು, ಅವುಗಳನ್ನು ತಡೆಯುವ ಅಂಶಗಳನ್ನು ನಮ್ಮಿಂದ ನಿವಾರಿಸಬೇಕು: 

  • ವಿಷಾದವು ನಮ್ಮ ಸ್ವಯಂ-ಶಿಸ್ತನ್ನು ಅಡ್ಡಿಪಡಿಸುತ್ತದೆ. ಉದಾಹರಣೆಗೆ, ನಾವು ಇಂಟರ್ನೆಟ್ ಅನ್ನು ಪರಿಶೀಲಿಸಲಿಲ್ಲ ಅಥವಾ ಸಂದೇಶ ಅಥವಾ ಇಮೇಲ್‌ಗೆ ತಕ್ಷಣ ಉತ್ತರಿಸಲಿಲ್ಲ ಎಂದು ವಿಷಾದಿಸುತ್ತೇವೆ. ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ಅಧಿಸೂಚನೆ ಅಲಾರಂ ಅಥವಾ ಸೂಚಕವನ್ನು ಆಫ್ ಮಾಡುವುದು ಮತ್ತು ನಿಗದಿತ ಅವಧಿಯಲ್ಲಿ ಮಾತ್ರ ಪರಿಶೀಲಿಸುವುದು ಮತ್ತು ನಾವು ಅವುಗಳನ್ನು ಓದಿದ ತಕ್ಷಣ ಪ್ರಮುಖವಾದವುಗಳಿಗೆ ಮಾತ್ರ ಉತ್ತರಿಸುವುದು ಸಹಾಯಕವಾದ ತಂತ್ರವಾಗಿದೆ. ನಾವು ಕಡಿಮೆ ಕಾರ್ಯನಿರತರಾಗಿರುವಾಗ ಅಥವಾ ದಿನದ ಒಂದು ನಿರ್ದಿಷ್ಟ ಸಮಯದಲ್ಲಿ ಸಂದೇಶಗಳಿಗೆ ಉತ್ತರಿಸಲು ನಿಯಮಿತವಾಗಿ ಮೀಸಲಿಟ್ಟಾಗ, ಇತರವುಗಳನ್ನು ಹಾಗೆಯೇ ಬಿಡಲು ನಮಗೆ ಸ್ವಯಂ ಶಿಸ್ತು ಬೇಕು. 
  • ನಿದ್ರಾಹೀನತೆ, ಮಾನಸಿಕ ಮಂದತೆ ಮತ್ತು ಚಂಚಲತೆ ನಮ್ಮ ಏಕಾಗ್ರತೆಗೆ ಅಡ್ಡಿಯಾಗುತ್ತದೆ. ಅವುಗಳಲ್ಲಿ ಯಾವುದಾದರೂ ಇದ್ದರೆ, ನಮ್ಮ ಸಂದೇಶಗಳನ್ನು ನಿರಂತರವಾಗಿ ಪರಿಶೀಲಿಸುವುದನ್ನು ತಡೆಯುವುದರಿಂದ ಜೀವನವು ಕಡಿಮೆ ಜಟಿಲವಾಗುತ್ತದೆ ಎಂಬ ಅಂಶದ ಬಗೆಗಿರುವ ಸಾವಧಾನತೆಯನ್ನು ನಾವು ಕಳೆದುಕೊಳ್ಳುತ್ತೇವೆ. 
  • ನಿರ್ಣಯವಿಲ್ಲದ ಹಿಂಜರಿಕೆಯು ನಮ್ಮ ವಿವೇಚನಾತ್ಮಕ ಅರಿವನ್ನು ಅಡ್ಡಿಪಡಿಸುತ್ತದೆ. ನಮ್ಮ ಸಂದೇಶಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಪರಿಶೀಲಿಸುವುದು ಸರಿಯಾದ ನಿರ್ಧಾರವೇ ಎಂಬುದರ ಬಗ್ಗೆ ನಾವು ಹಿಂದೆ-ಮುಂದೆ ನೋಡುತ್ತೇವೆ, ಹಿಂಜರಿಯುತ್ತೇವೆ. ಪರಿಶೀಲಿಸುವುದನ್ನು ತಡೆಯುವುದು ಕಷ್ಟ ಮತ್ತು ಒತ್ತಡದಾಯಕವಾಗಿರುವುದರಿಂದ ಅಂತಹ ಅನುಮಾನಗಳು ಉದ್ಭವಿಸುತ್ತವೆ. ಈ ಅನುಮಾನಗಳನ್ನು ನಿಭಾಯಿಸಲು, ನಮ್ಮ ಅಭ್ಯಾಸಗಳನ್ನು ಬದಲಾಯಿಸುವ ಪ್ರಯೋಜನಗಳನ್ನು ನಾವು ನೆನಪಿಸಿಕೊಳ್ಳಬೇಕು. 

ನಮ್ಮ ಜೀವನವನ್ನು ಸಂತೋಷಪಡಿಸಲು ನಾವು ಅಳವಡಿಸಿಕೊಳ್ಳಬಹುದಾದ ಇತರ ತಂತ್ರಗಳಿವೆ. ಉದಾಹರಣೆಗೆ, ನಾವು ಜನದಟ್ಟಣೆಯ ಸುರಂಗಮಾರ್ಗದಲ್ಲಿರುವಾಗ, ನಾವು ನಮ್ಮ ಮೇಲೆ ಮಾತ್ರ ಗಮನಹರಿಸುತ್ತೇವೆ ಮತ್ತು ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ನಮ್ಮ ಮೊಬೈಲ್ ಫೋನ್‌ಗೆ ತಪ್ಪಿಸಿಕೊಳ್ಳಲು ಬಯಸಿದಷ್ಟೂ, ನಮ್ಮಲ್ಲಿ ಹೆಚ್ಚು ಮುಚ್ಚಿದ ಭಾವನೆಯಿರುತ್ತದೆ. ಹೀಗೆ, ನಮ್ಮ ಶಕ್ತಿ ಸಂಕುಚಿತಗೊಳ್ಳುತ್ತದೆ ಮತ್ತು ನಾವು ಹೆಚ್ಚು ಉದ್ವಿಗ್ನರಾಗುತ್ತೇವೆ. ನಾವು ವಿಶ್ರಾಂತಿ ಪಡೆಯುವುದಿಲ್ಲ, ಏಕೆಂದರೆ ನಾವು ಅಪಾಯದಿಂದ ಬೆದರಿಕೆಗೆ ಒಳಗಾಗುತ್ತೇವೆ. ನಾವು ಮೊಬೈಲ್‌ನಲ್ಲಿ ಆಡುವ ಆಟದಲ್ಲಿ ಅಥವಾ ನಮ್ಮ ಐಪಾಡ್‌ನಲ್ಲಿ ಕೇಳುವ ಜೋರಾದ ಸಂಗೀತದಲ್ಲಿ ಸಾಕಷ್ಟು ಮಗ್ನರಾಗಿದ್ದರೂ ಸಹ, ನಾವು ನಮ್ಮ ಸುತ್ತಲೂ ಗೋಡೆಗಳನ್ನು ಹಾಕಿಕೊಂಡಿದ್ದೇವೆ ಮತ್ತು ತೊಂದರೆಗೊಳಗಾಗಲು ಬಯಸುವುದಿಲ್ಲ, ಆದ್ದರಿಂದ ನಾವು ರಕ್ಷಣಾತ್ಮಕವಾಗಿರುತ್ತೇವೆ. ಮತ್ತೊಂದೆಡೆ, ನಾವು ಸಬ್‌ವೇಯಲ್ಲಿರುವ ಜನರ ಇಡೀ ಗುಂಪಿನ ಭಾಗವಾಗಿ ನಮ್ಮನ್ನು ನೋಡಿಕೊಂಡರೆ ಮತ್ತು ನಮ್ಮಂತೆಯೇ ಇರುವ ಪರಿಸ್ಥಿತಿಯಲ್ಲಿರುವ ಪ್ರತಿಯೊಬ್ಬರ ಬಗ್ಗೆ ಕಾಳಜಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಂಡರೆ, ನಮ್ಮ ಹೃದಯಗಳು ಮತ್ತು ಮನಸ್ಸುಗಳು ತೆರೆದಿರುತ್ತವೆ. ನಾವು ಅಪಾಯದ ಬಗ್ಗೆ ಎಚ್ಚರವಾಗಿರಬಹುದು, ಆದರೆ ನಮ್ಮ ಮೇಲೆ ಮಾತ್ರ ಕೇಂದ್ರೀಕರಿಸುವ ಮತಿವಿಕಲ್ಪವಿಲ್ಲದೆ - ಎಲ್ಲರೂ ಸುರಕ್ಷಿತವಾಗಿರಬೇಕೆಂದು ನಾವು ಬಯಸುತ್ತೇವೆ. ನಾವು ಎಲ್ಲರನ್ನೂ ಸಂಗೀತ ಅಥವಾ ಆಟದೊಂದಿಗೆ ಮುಳುಗಿಸಲು ಪ್ರಯತ್ನಿಸುವುದಿಲ್ಲ ಅಥವಾ ಇತರರಿಂದ ನಮ್ಮನ್ನು ನಾವು ಪ್ರತ್ಯೇಕಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಅಂತಹ ತಂತ್ರಗಳು ನಮ್ಮ ಒಂಟಿತನವನ್ನು ಹೆಚ್ಚಿಸುತ್ತವೆ. ಬದಲಾಗಿ ನಾವು ನಮ್ಮ ಸುತ್ತಲಿನ ಎಲ್ಲರೂ ದೊಡ್ಡ ಗುಂಪಿನ ಭಾಗವೆಂದು ಭಾವಿಸಿದರೆ, ಹಿಂಡಿನಲ್ಲಿರುವ ಪ್ರಾಣಿಯಂತೆ ನಾವು ಹೆಚ್ಚು ಸುರಕ್ಷಿತರಾಗಿರುತ್ತೇವೆ. ಆದರೆ, ಈ ತಂತ್ರವನ್ನು ಪರಿಣಾಮಕಾರಿಯಾಗಿ ಅನ್ವಯಿಸಲು, ಸ್ವಯಂ-ಶಿಸ್ತು, ಏಕಾಗ್ರತೆ ಮತ್ತು ವಿವೇಚನಾತ್ಮಕ ಅರಿವಿನಲ್ಲಿ ಈ ಮೂರು ತರಬೇತಿಗಳು ಬೇಕಾಗುತ್ತವೆ. 

ನಾವು ಅಳವಡಿಸಿಕೊಳ್ಳಬಹುದಾದ ಇನ್ನೊಂದು ತಂತ್ರವೆಂದರೆ, ಕೆಲಸದಿಂದ ವಿರಾಮ ಬೇಕಾದಾಗ, ನಮ್ಮ ಮೊಬೈಲ್ ಅನ್ನು ಪರಿಶೀಲಿಸುವ ಬದಲು, ಎದ್ದು ನಿಂತು, ಸಾಧ್ಯವಾದರೆ ಕೋಣೆಯ ಸುತ್ತಲೂ ನಡೆಯುವುದು. ಇಂಟರ್ನೆಟ್ ಅಥವಾ ಫೋನ್‌ ಬಳಸುವ ಬದಲು ಕಡಿಮೆ ಪ್ರಚೋದನೆಯೊಂದಿಗೆ ವ್ಯವಹರಿಸಿ. 

ಸಾರಾಂಶ 

ಸ್ವತಂತ್ರವಾಗಿರಲು ದೃಢಸಂಕಲ್ಪದ ಮೂಲಕ, ಸ್ವಯಂ-ವಿನಾಶಕಾರಿ ಅಭ್ಯಾಸಗಳಿಂದ ನಮಗಿರುವ ಒತ್ತಡವನ್ನು ಕಡಿಮೆ ಮಾಡಲು ನಾವು ಮೂರು ತರಬೇತಿಗಳ ಈ ವಿಧಾನಗಳನ್ನು ಅನ್ವಯಿಸಿದರೆ, ಕೆಲಸ, ಕುಟುಂಬ, ಆರ್ಥಿಕ ಪರಿಸ್ಥಿತಿ ಇತ್ಯಾದಿಗಳ ಒತ್ತಡಗಳನ್ನು ನಿಭಾಯಿಸಲು ನಾವು ಶಾಂತ ಮನಸ್ಸಿನ ಸ್ಥಿತಿಯಲ್ಲಿರುತ್ತೇವೆ. ಮಾಹಿತಿ ವ್ಯಸನದಿಂದ ಬರುವ ಆಧುನಿಕ ಜೀವನದ ತೊಡಕುಗಳನ್ನು ನಿಭಾಯಿಸುವಲ್ಲಿ ಮತ್ತು ಇಂಟರ್ನೆಟ್, ಸಾಮಾಜಿಕ ಮಾಧ್ಯಮ, ಸಂಗೀತ ಇತ್ಯಾದಿಗಳಿಗೆ ತಪ್ಪಿಸಿಕೊಳ್ಳುವುದನ್ನು ನಿಭಾಯಿಸುವಲ್ಲಿ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಇದರರ್ಥ ನಾವು ಇಂಟರ್ನೆಟ್ ಅನ್ನು ತ್ಯಜಿಸಬೇಕು ಅಥವಾ ನಮ್ಮ ಮೊಬೈಲ್ ಸಾಧನಗಳನ್ನು ಎಸೆಯಬೇಕು ಎಂದಲ್ಲ; ಬದಲಿಗೆ ಅವುಗಳನ್ನು ಪ್ರಯೋಜನಕಾರಿ ಮತ್ತು ಆರೋಗ್ಯಕರ ರೀತಿಯಲ್ಲಿ ಹೇಗೆ ಬಳಸುವುದು ಎಂಬುದರ ಕುರಿತು ನಾವು ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು.

Top