ದೈನಂದಿನ ಭಾಷೆಯಲ್ಲಿ ನಾಲ್ಕು ಆರ್ಯ ಸತ್ಯಗಳು
ಕ್ಸಲಾಪಕ್ಕೆ ಮತ್ತೊಮ್ಮೆ ಭೇಟಿ ನೀಡಿರುವುದಕ್ಕೆ ನನಗೆ ಬಹಳಾ ಸಂತೋಷವಾಗಿದೆ, ಮತ್ತು ಈ ಸಂಜೆ ನನಗೆ ಮಾತನಾಡಲು ಕೇಳಲಾಗಿರುವ ವಿಷಯವು ‘ಕರ್ಮ’ವಾಗಿದೆ. ಖಂಡಿತ, ನಾವು ಬೌದ್ಧಧರ್ಮದ ಕೆಲವು ವಿಷಯವನ್ನು ಅಧ್ಯಯನ ಮಾಡುವಾಗ, ನಾವು ಅದನ್ನು ಏಕೆ ಅಧ್ಯಯನ ಮಾಡಲು ಬಯಸುತ್ತೇವೆ, ಅದರ ಪ್ರಾಮುಖ್ಯತೆ ಏನು ಮತ್ತು ಅದು ಬೌದ್ಧಧರ್ಮದ ಸಂಪೂರ್ಣ ಸಂದರ್ಭಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ಬಗ್ಗೆ ಸ್ವಲ್ಪ ಕಲ್ಪನೆಯನ್ನು ಹೊಂದಿರುವುದು ಮುಖ್ಯ. ಮೂಲತಃ. ಬುದ್ಧ ಪ್ರತಿಯೊಬ್ಬರ ಅನುಭವದ ಬಗ್ಗೆ, ಜೀವನದಲ್ಲಿ ನಾವು ಅನುಭವಿಸುವ ಬಗ್ಗೆ, ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮಾತನಾಡುತ್ತಿದ್ದರು. ನಾವೆಲ್ಲರೂ ಅನುಭವಿಸುವ ಅತ್ಯಂತ ಮೂಲಭೂತ ವಿಷಯ ಯಾವುದು? ಕೆಲವೊಮ್ಮೆ ನಾವು ಅತೃಪ್ತರಾಗಿದ್ದೇವೆ ಮತ್ತು ಕೆಲವೊಮ್ಮೆ ನಾವು ಸಂತೋಷವಾಗಿರುತ್ತೇವೆ ಎಂಬುದಾಗಿರುತ್ತದೆ. ಇದು ನಾವು ನಮ್ಮ ಜೀವನವನ್ನು ಅನುಭವಿಸುವ ರೀತಿಯಾಗಿರುತ್ತದೆ, ಅಲ್ಲವೇ?
ಕೆಲವೊಮ್ಮೆ ಅತೃಪ್ತರಾಗಿರುವ, ಕೆಲವೊಮ್ಮೆ ಸಂತೋಷವಾಗಿರುವ ಆ ಪರಿಸ್ಥಿತಿಯನ್ನು ನಾವು ಪರಿಶೀಲಿಸಿದಾಗ, ಅದಕ್ಕೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳಿವೆ ಎಂದು ನಾವು ಕಂಡುಕೊಳ್ಳುತ್ತೇವೆ. ನಾವು ಅತೃಪ್ತರಾಗಿರುವಾಗ, ಅದು ಖಂಡಿತವಾಗಿಯೂ ಬಳಲುವಿಕೆಯಾಗಿರುತ್ತದೆ. ಯಾರೂ ಅತೃಪ್ತರಾಗಲು ಇಷ್ಟಪಡುವುದಿಲ್ಲ, ಅಲ್ಲವೇ? ನಾವು ವಿಷಯಗಳನ್ನು ನೋಡಿ ಅತೃಪ್ತರಾಗಬಹುದು, ಒಬ್ಬ ಸ್ನೇಹಿತ ದೂರ ಹೋಗುವಂತೆ, ಅಥವಾ ವಿಷಯಗಳನ್ನು ಕೇಳುವಂತೆ, ಅಹಿತಕರ ಮಾತುಗಳನ್ನು ಕೇಳುವಂತೆ, ಮತ್ತು ವಿವಿಧ ಭಾವನೆಗಳೊಂದಿಗೆ ವಿವಿಧ ವಿಷಯಗಳನ್ನು ಯೋಚಿಸುವಾಗಲೂ ನಾವು ಅತೃಪ್ತರಾಗಬಹುದು. ಆದರೆ ಕೆಲವೊಮ್ಮೆ ನಾವು ಅತೃಪ್ತರಾದಾಗ, ಅದು ನಾವು ವಾಸ್ತವದಲ್ಲಿ ನೋಡುತ್ತಿರುವ ಅಥವಾ ಕೇಳುತ್ತಿರುವ ಅಥವಾ ನಮ್ಮ ಸುತ್ತಲೂ ನಡೆಯುತ್ತಿರುವುದಕ್ಕೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ತೋರುತ್ತದೆ. ಇದೊಂದು ಸಮಸ್ಯೆ, ಅಲ್ಲವೇ?
ಹಾಗಾದರೆ ಸಂತೋಷ ಹೇಗಿರುತ್ತದೆ? ಕೆಲವೊಮ್ಮೆ ನಾವು ಸಂತೋಷಪಡುತ್ತೇವೆ, ಅಲ್ಲವೇ? ನಾವು ವಿಷಯಗಳನ್ನು ನೋಡುವಾಗ, ವಿಷಯಗಳನ್ನು ಕೇಳುವಾಗ, ಪ್ರೀತಿಪಾತ್ರರನ್ನು ಕೇಳುವಾಗ ಸಂತೋಷಪಡುತ್ತೇವೆ ಮತ್ತು ನಾವು ಏನನ್ನಾದರೂ ಕುರಿತು ಯೋಚಿಸುವಾಗ ಸಂತೋಷಪಡಬಹುದು, ಅಂದರೆ ನಾವು ಯಾರೊಂದಿಗಾದರೂ ಕಳೆದ ಅದ್ಭುತ ಸಮಯವನ್ನು ನೆನಪಿಸಿಕೊಳ್ಳಬಹುದು. ಆದರೆ ನಾವು ಹೆಚ್ಚು ಆಳವಾಗಿ ನೋಡಿದಾಗ, ನಾವು ಅನುಭವಿಸುವ ಈ ಸಂತೋಷವು ಕೆಲವು ಸಮಸ್ಯೆಗಳನ್ನು ಹೊಂದಿದೆ ಎಂದು ನಾವು ಕಂಡುಕೊಳ್ಳುತ್ತೇವೆ. ಮೊದಲನೆಯದಾಗಿ, ಅದು ಎಂದಿಗೂ ಉಳಿಯುವುದಿಲ್ಲ, ಮತ್ತು ಅದು ಎಷ್ಟು ಕಾಲ ಉಳಿಯುತ್ತದೆ ಎಂದು ನಮಗೆ ತಿಳಿದಿಲ್ಲ. ಮತ್ತು ಅದು ಎಂದಿಗೂ ಸಾಕಾಗುವುದಿಲ್ಲ ಎಂದು ತೋರುತ್ತದೆ. ನಾವು ಒಂದು ಚಮಚ ಆಹಾರವನ್ನು ತಿನ್ನುವುದರಲ್ಲಿ ಸಂತೋಷವಾಗಿರಬಹುದು, ಆದರೆ ಅದು ಸಾಕಾಗುವುದಿಲ್ಲ - ನಾವು ಹೆಚ್ಚು ಹೆಚ್ಚು ತಿನ್ನಲು ಬಯಸುತ್ತೇವೆ. ವಾಸ್ತವದಲ್ಲಿ, ಇದು ಬಹಳಾ ಆಸಕ್ತಿದಾಯಕವಾದ ಪ್ರಶ್ನೆ – ನೀವು ನಿಜವಾಗಿಯೂ ಆನಂದಿಸಲು ಎಷ್ಟು ಆಹಾರವನ್ನು ತಿನ್ನಬೇಕು? ಅದರ ಬಗ್ಗೆ ಯೋಚಿಸಿ. ಈ ಸಂತೋಷದ ಇನ್ನೊಂದು ದೋಷ, ಇನ್ನೊಂದು ನ್ಯೂನತೆಯೆಂದರೆ ಮುಂದೆ ಏನಾಗಲಿದೆ ಎಂದು ನಮಗೆ ತಿಳಿದಿಲ್ಲ. ಮುಂದಿನ ನಿಮಿಷದಲ್ಲಿ ನಾವು ಸಂತೋಷವಾಗಿರುವುದನ್ನು ಮುಂದುವರಿಸಬಹುದು, ಅಥವಾ ನಾವು ಅತೃಪ್ತರಾಗಬಹುದು. ಅದು ಬದಲಾಗಬಹುದು, ಆದ್ದರಿಂದ ಈ ಸಂತೋಷದಲ್ಲಿ ಯಾವುದೇ ಭದ್ರತೆ ಇಲ್ಲ.
ಸಂತೋಷ ಮತ್ತು ಅತೃಪ್ತಿಯ ಬಗೆಗಿರುವ ಈ ರೀತಿಯ ಒಳನೋಟ ಅಥವಾ ವಿಶ್ಲೇಷಣೆ ಬೌದ್ಧಧರ್ಮಕ್ಕೆ ವಿಶಿಷ್ಟವಾದದ್ದೇನೂ ಅಲ್ಲ; ಪ್ರಪಂಚದ ಅನೇಕ ಮಹಾನ್ ಚಿಂತಕರು ಇದನ್ನು ಗಮನಿಸಿದ್ದಾರೆ ಮತ್ತು ಇದನ್ನು ಕಲಿಸಿದ್ದಾರೆ. ಆದರೆ ಬುದ್ಧನು ಕಲಿಸಿದ್ದು, ಬುದ್ಧನು ಅರ್ಥಮಾಡಿಕೊಂಡದ್ದು ಆಳವಾದ ರೀತಿಯ ಸಮಸ್ಯೆ ಅಥವಾ ಸಂಕಟವಾಗಿರುತ್ತದೆ. ಪ್ರತಿಯೊಬ್ಬರ ಜೀವನದ ಈ ಏರಿಳಿತದ ಪರಿಸ್ಥಿತಿಯನ್ನು ಅವರು ಹೆಚ್ಚು ಆಳವಾಗಿ ನೋಡಿದರು, ಸಂತೋಷ ಮತ್ತು ಅತೃಪ್ತಿಯು ಮೇಲೆ-ಕೆಳಗೆ, ಮೇಲೆ-ಕೆಳಗೆ ಹೋಗುತ್ತದೆ ಮತ್ತು ಆ ಘಟನೆಗೆ ಕಾರಣವು, ವಾಸ್ತವದಲ್ಲಿ ನಾವು ಅನುಭವಿಸುವ ಪ್ರತಿ ಕ್ಷಣದ ಭಾಗವಾಗಿದೆ ಎಂದು ಅವನು ಅರ್ಥಮಾಡಿಕೊಂಡರು. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಂತೋಷ ಮತ್ತು ಅತೃಪ್ತಿಯ ಏರಿಳಿತಗಳೊಂದಿಗೆ ನಾವು ವಿಷಯಗಳನ್ನು ಅನುಭವಿಸುವ ವಿಧಾನವು ಆ ಅತೃಪ್ತಿಕರ ಪರಿಸ್ಥಿತಿಯನ್ನು ಶಾಶ್ವತಗೊಳಿಸುತ್ತದೆ.
ಆಗ ಬುದ್ಧನು ಪ್ರತಿ ಕ್ಷಣದಲ್ಲಿ ಇರುವ ಈ ಅತೃಪ್ತಿಕರ ಪರಿಸ್ಥಿತಿಗೆ ಕಾರಣವೇನು ಎಂಬುದನ್ನು ವಿಶ್ಲೇಷಿಸಿದನು ಮತ್ತು ಅದುವೇ ವಾಸ್ತವದ ಬಗೆಗಿರುವ ಗೊಂದಲ ಎಂದು ಅರ್ಥಮಾಡಿಕೊಂಡನು. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ, ನಮ್ಮ ಸುತ್ತಲಿನ ಎಲ್ಲರೂ ಹೇಗೆ ಅಸ್ತಿತ್ವದಲ್ಲಿದ್ದಾರೆ, ಪ್ರಪಂಚವು ಹೇಗೆ ಅಸ್ತಿತ್ವದಲ್ಲಿದೆ ಎಂಬುದರ ಬಗೆಗಿರುವ ಗೊಂದಲ.
ಇದು ಇತರ ಅನೇಕರು ಹೇಳಿದ್ದಕ್ಕಿಂತ ಸಾಕಷ್ಟು ಭಿನ್ನವಾಗಿದೆ. ಉದಾಹರಣೆಗೆ, ನಾವು ಅನುಭವಿಸುವ ಸಂತೋಷ ಮತ್ತು ಅತೃಪ್ತಿಯ ಏರಿಳಿತವು ಮೂಲತಃ ಪ್ರತಿಫಲ ಮತ್ತು ಶಿಕ್ಷೆಯಿಂದಾಗಿರುತ್ತದೆ: ಅಂದರೆ ಕಾನೂನುಗಳನ್ನು ಅನುಸರಿಸುವುದರಿಂದ ಅಥವಾ ಕಾನೂನುಗಳನ್ನು ಪಾಲಿಸದಿರುವುದರಿಂದ ಎಂದು ಕೆಲವರು ಹೇಳಿದ್ದಾರೆ. ಅನೇಕ ಶಿಕ್ಷಕರ ಪ್ರಕಾರ, ಸಂತೋಷ ಅಥವಾ ಅತೃಪ್ತಿಯನ್ನು ಅನುಭವಿಸಲು ಇರುವ ಮೂಲ ವಿಷಯವೆಂದರೆ ವಿಧೇಯತೆ. ಆದರೆ ಬುದ್ಧನು ಹೀಗೆ ಹೇಳಿದನು: ಇಲ್ಲ, ಅದು ಹಾಗಲ್ಲ. ಇದು ಪಾಲಿಸುವ ಅಥವಾ ಅವಿಧೇಯತೆಯ ವಿಷಯವಾಗಿರುವುದಿಲ್ಲ, ನಿಜವಾದ ಕಾರಣವೆಂದರೆ ನಮ್ಮ ಗೊಂದಲ - ಜೀವನದ ಬಗ್ಗೆ ಗೊಂದಲಕ್ಕೊಳಗಾಗುವುದಾಗಿರುತ್ತದೆ. ನಂತರ, ಬುದ್ಧನು ಆ ಗೊಂದಲವು ಜೀವನದ, ವಿಷಯಗಳ ಅನುಭವಗಳ ಅವಿಭಾಜ್ಯ ಮತ್ತು ಅಗತ್ಯ ಭಾಗವಲ್ಲ ಎಂದು ಹೇಳಿದರು. ಅದು ಅಸ್ತಿತ್ವದಲ್ಲಿರೇಕಾಗಿಲ್ಲ: ಅದು ತೆಗೆದುಹಾಕಬಹುದಾದ ವಿಷಯ, ಆದ್ದರಿಂದ ಅದು ಎಂದಿಗೂ ಹಿಂತಿರುಗದಂತೆ ಅದನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ನಂತರ ಹಾಗೆ ಮಾಡುವ ನಿಜವಾದ ಮಾರ್ಗವು, ನಾವು ವಿಷಯಗಳನ್ನು ಅನುಭವಿಸುವ ವಿಧಾನವನ್ನು ಬದಲಾಯಿಸುವುದು ಎಂದು ಹೇಳಿದರು.
ಆ ಗೊಂದಲವನ್ನು ನಿವಾರಿಸುವುದು ಬೇರೆಯವರನ್ನು ನಮಗಾಗಿ ಅದನ್ನು ನಿವಾರಿಸವಂತೆ ಕೇಳುವ ವಿಷಯವಲ್ಲ, ಆದರೆ ಅದು ಮೂಲತಃ ನಮ್ಮ ಸ್ವಂತ ವರ್ತನೆಗಳನ್ನು, ವಾಸ್ತವದ ಬಗ್ಗೆ ನಮ್ಮ ಸ್ವಂತ ತಿಳುವಳಿಕೆಯನ್ನು ಬದಲಾಯಿಸುವ ವಿಷಯವಾಗಿರುತ್ತದೆ. ನಾವು ತಪ್ಪು ತಿಳುವಳಿಕೆಯನ್ನು ತಿಳುವಳಿಕೆಯೊಂದಿಗೆ ಬದಲಾಯಿಸಿದರೆ ಮತ್ತು ನಂತರ ಈ ತಿಳುವಳಿಕೆಯನ್ನು ಯಾವಾಗಲೂ ಹೊಂದಿದ್ದರೆ, ನಮಗೆ ಸಂತೋಷ ಮತ್ತು ಅತೃಪ್ತಿಯ ನಿರಂತರ ಏರಿಳಿತವಿರುವುದಿಲ್ಲ ಎಂದು ನಾವು ಕಂಡುಕೊಳ್ಳುತ್ತೇವೆ ಮತ್ತು ನಾವು ಸಂತೋಷ ಮತ್ತು ಅತೃಪ್ತಿಯ ಈ ಏರಿಳಿತವನ್ನು ಶಾಶ್ವತಗೊಳಿಸುವುದಿಲ್ಲ. ಇದು ಬುದ್ಧನ ಮೂಲಭೂತ ಬೋಧನೆಯ, ಪ್ರತಿದಿನದ ಭಾಷೆಯಲ್ಲಿರುವ ವಿವರಣೆಯಾಗಿದೆ.
ಕರ್ಮವು ವರ್ತನೆಯ ಕಾರಣ ಮತ್ತು ಪರಿಣಾಮದೊಂದಿಗೆ ವ್ಯವಹರಿಸುತ್ತದೆ
ನಾವು ಕರ್ಮದ ಬಗ್ಗೆ ಮಾತನಾಡುವಾಗ, ಕರ್ಮವು ನಮ್ಮ ಸಂತೋಷ ಮತ್ತು ಅತೃಪ್ತಿಯ ಅನುಭವಗಳು ಹೇಗೆ ಮತ್ತು ಏಕೆ ಮೇಲೆ-ಕೆಳಗೆ ಹೋಗುತ್ತವೆ ಎಂಬುದರ ಮೂಲ ವಿವರಣೆಯಾಗಿರುತ್ತದೆ - ಇದೇ ಕರ್ಮ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ಗೊಂದಲವು ಸಂತೋಷ ಮತ್ತು ಅತೃಪ್ತಿಯ ಈ ಏರಿಳಿತವನ್ನು, ಆಹ್ಲಾದಕರ ಮತ್ತು ಅಹಿತಕರ ಅನುಭವಗಳನ್ನು ಹೇಗೆ ಉಂಟುಮಾಡುತ್ತದೆ? ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಕಾರಣ ಮತ್ತು ಪರಿಣಾಮದೊಂದಿಗೆ ವ್ಯವಹರಿಸುತ್ತದೆ, ಮತ್ತು ಇಲ್ಲಿ ಕಾರಣ ಮತ್ತು ಪರಿಣಾಮವು ಅತ್ಯಂತ ಸಂಕೀರ್ಣವಾದ ವಿಷಯವಾಗಿರುತ್ತದೆ. ಬುದ್ಧ ಹೇಳಿದಂತೆ, ಒಂದು ಬಕೆಟ್ ನೀರು ಮೊದಲ ಹನಿಯಿಂದ ತುಂಬುವುದಿಲ್ಲ ಮತ್ತು ಕೊನೆಯ ಹನಿಯಿಂದ ತುಂಬುವುದಿಲ್ಲ; ಅದು ಹನಿಗಳ ಸಂಪೂರ್ಣ ಸಂಗ್ರಹದಿಂದ ತುಂಬಿರುತ್ತದೆ. ಅದೇ ರೀತಿ, ನಮ್ಮ ಜೀವನದ ಅನುಭವವು ಕೇವಲ ಒಂದು ಕಾರಣದ ಫಲಿತಾಂಶವಲ್ಲ - ಕಾರಣವು ನಾವು ಈಗ ಮೊದಲು ಮಾಡಿದ ಅಥವಾ ನಾವು ಯುಗಗಳ ಹಿಂದೆ ಮಾಡಿದ್ದ ಒಂದು ವಿಷಯವಲ್ಲ. ಇದು ಅಪಾರ ಪ್ರಮಾಣದ ಕಾರಣಾತ್ಮಕ ಅಂಶಗಳು ಮತ್ತು ಪರಿಸ್ಥಿತಿಗಳ ಫಲಿತಾಂಶವಾಗಿರುತ್ತದೆ.
ವಾಸ್ತವದಲ್ಲಿ, ಇದು ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಬಹಳಷ್ಟು ಸಂಜಸವಾಗಿದೆ, ಏಕೆಂದರೆ ಅದು ಹೀಗೆ ಹೇಳುತ್ತಿದೆ - ಘಟನೆಗಳು ಪ್ರತ್ಯೇಕವಾಗಿ ಸಂಭವಿಸುವುದಿಲ್ಲ, ವಾಸ್ತವದಲ್ಲಿ ಎಲ್ಲವೂ ಪರಸ್ಪರ ಸಂಬಂಧಿತವಾಗಿರುತ್ತದೆ. ಬಹಳ ಸರಳವಾದ ಉದಾಹರಣೆಯನ್ನು ಬಳಸುವುದಾದರೆ, ಸ್ಪ್ಯಾನಿಷ್ ಜನರು ಅಮೆರಿಕಕ್ಕೆ ಬರದಿದ್ದರೆ ನಾವೆಲ್ಲರೂ ಈ ಉಪನ್ಯಾಸವನ್ನು ಕೇಳುತ್ತಾ ಈ ಕೋಣೆಯಲ್ಲಿ ಇರುತ್ತಿರಲಿಲ್ಲ, ಅಲ್ಲವೇ? ನಾವು ಇಲ್ಲಿರುವುದಕ್ಕೆ ಅದು ಒಂದು ಕಾರಣವಾಗಿದೆ. ಅದರಂತೆ, ನಾವು ಈಗ ಅಥವಾ ಯಾವುದೇ ಕ್ಷಣದಲ್ಲಿ ಅನುಭವಿಸುತ್ತಿರುವುದಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಹಲವು ವಿಭಿನ್ನ ಕಾರಣಗಳಿವೆ.
ಆದರೆ ಕರ್ಮವು ನಮ್ಮ ಸ್ವಂತ ಮನಸ್ಸಿನೊಂದಿಗೆ ನಿರ್ದಿಷ್ಟವಾಗಿ ಸಂಪರ್ಕ ಹೊಂದಿದ ಕಾರಣಗಳನ್ನು ವಿವರಿಸುತ್ತದೆ. ಆದರೆ ನಾವು ಅನುಭವಿಸುವ ಅನುಭವಗಳಿಗೆ ಕಾರಣವಾಗುವ ಇನ್ನೂ ಅನೇಕ ಕಾರಣಗಳಿವೆ - ಭೌತಿಕ ಕಾರಣಗಳು, ಉದಾಹರಣೆಗೆ, ಹವಾಮಾನ, ಇತ್ಯಾದಿ. ನಮ್ಮ ಮೇಲೆ ಪರಿಣಾಮ ಬೀರುವ ಅನೇಕ ವಿಷಯಗಳು ನಮ್ಮ ಸ್ವಂತ ಮನಸ್ಸಿನಿಂದ ಮಾತ್ರವಲ್ಲ, ಇತರರ ಮನಸ್ಸಿನಿಂದಲೂ ಬರುತ್ತವೆ. ನಮ್ಮ ಮೇಲೆ ಪರಿಣಾಮ ಬೀರುವ ವಿವಿಧ ನೀತಿಗಳನ್ನು ನಿರ್ಧರಿಸುವ ರಾಜಕಾರಣಿಗಳ ವಿಷಯದಲ್ಲೂ ಕೆಲವು ಗೊಂದಲಗಳೊಂದಿಗೆ ಬೆರೆತುಹೋಗಬಹುದು ಎಂದು ಹೇಳಬಹುದು, ಅಲ್ಲವೇ?
ಕರ್ಮವು ನಂಬಿಕೆಯ ಬಗ್ಗೆ ಮಾತನಾಡುತ್ತಿಲ್ಲ, ಅದು ವಿಧಿ ಮತ್ತು ಪೂರ್ವನಿರ್ಣಯಗಳಂತಹ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ನಾವು ವಿಷಯಗಳನ್ನು ಹೇಗೆ ಅನುಭವಿಸುತ್ತೇವೆ ಮತ್ತು ನಮ್ಮ ವರ್ತನೆಗಳು ಜೀವನದಲ್ಲಿ ನಾವು ಅನುಭವಿಸುವುದರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಮಾತನಾಡುತ್ತಿದೆ. ಕರ್ಮ ಎಂಬ ಪದವನ್ನು ವರ್ತನೆಯ ಕಾರಣ ಮತ್ತು ಪರಿಣಾಮದ ವಿಷಯವಾಗಿ, ಇಲ್ಲಿ ಒಳಗೊಂಡಿರುವ ಎಲ್ಲವನ್ನೂ ಉಲ್ಲೇಖಿಸಲು ಸಾಮಾನ್ಯ ಅರ್ಥದಲ್ಲಿ ಬಳಸಲಾಗುತ್ತದೆ; ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ನಡವಳಿಕೆ ಮತ್ತು ವರ್ತನೆಗಳಿಂದ ಬರುವ ಕಾರಣ ಮತ್ತು ಪರಿಣಾಮದ ಸಂಬಂಧ. "ಕರ್ಮ" ಸಾಮಾನ್ಯವಾಗಿ ವರ್ತನೆಯ ಕಾರಣ ಮತ್ತು ಪರಿಣಾಮದ ಸಂಪೂರ್ಣ ವಿಷಯವನ್ನು ಉಲ್ಲೇಖಿಸಬಹುದು, ಅಥವಾ ಅದು ಆ ಸಂಪೂರ್ಣ ಪ್ರಕ್ರಿಯೆಯ ಒಂದು ಅಂಶವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಬಹುದು. ಆದ್ದರಿಂದ ನಾವು ಕರ್ಮದ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ನಾವು ಅದನ್ನು ಸ್ವಲ್ಪ ಹೆಚ್ಚು ನಿಖರತೆಯಿಂದ, ಸ್ವಲ್ಪ ವಿವರವಾಗಿ ನೋಡಬೇಕು.
ಕರ್ಮದ ವಿವರಣೆಯ ಹಲವಾರು ವ್ಯವಸ್ಥೆಗಳು
ಬೌದ್ಧಧರ್ಮದೊಳಗೆ ನಾವು ಹೆಚ್ಚು ನಿಖರವಾದ ವಿವರಣೆಗಳನ್ನು ನೋಡಲು ಪ್ರಾರಂಭಿಸಿದಾಗ, ಕೇವಲ ಒಂದು ವಿವರಣೆಯಿಲ್ಲ ಎಂಬುದನ್ನು ನಾವು ಬಹಳ ಬೇಗನೆ ಕಂಡುಕೊಳ್ಳುತ್ತೇವೆ. ಕೆಲವು ಪಾಶ್ಚಿಮಾತ್ಯರು ಅದನ್ನು ಸ್ವಲ್ಪ ಅನಾನುಕೂಲವೆಂದು ಕಂಡುಕೊಳ್ಳುತ್ತಾರೆ. ಆದರೆ ನಮಗೆ ಸಮಸ್ಯೆ ಅಥವಾ ಪರಿಸ್ಥಿತಿ ಇದ್ದರೆ, ನಮ್ಮ ದೃಷ್ಟಿಕೋನವನ್ನು ಅವಲಂಬಿಸಿ ನಾವು ಅದನ್ನು ಹಲವಾರು ವಿಭಿನ್ನ ರೀತಿಯಲ್ಲಿ ವಿವರಿಸಬಹುದು. ಪಶ್ಚಿಮದಲ್ಲಿ ನಾವು ಹಾಗೆ ಮಾಡುತ್ತೇವೆ, ಸಾಮಾಜಿಕ ದೃಷ್ಟಿಕೋನದಿಂದ, ಮಾನಸಿಕ ದೃಷ್ಟಿಕೋನದಿಂದ, ಅರ್ಥಶಾಸ್ತ್ರದ ದೃಷ್ಟಿಕೋನದಿಂದ ನಾವು ವಿಷಯಗಳನ್ನು ವಿವರಿಸಬಹುದು - ಅದು ಆಶ್ಚರ್ಯವೇನಿಲ್ಲ. ಈ ವಿವಿಧ ವಿವರಣೆಗಳು ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದನ್ನು ಹೆಚ್ಚು ಪೂರ್ಣ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಮತ್ತು ಏನು ನಡೆಯುತ್ತಿದೆ ಎಂಬುದನ್ನು ವಿವರಿಸುವ ಪ್ರತಿಯೊಂದು ವಿಧಾನವು ಒಂದು ನಿರ್ದಿಷ್ಟ ಚಿಂತನೆಯ ವ್ಯವಸ್ಥೆಯನ್ನು ಆಧರಿಸಿರುತ್ತದೆ - ಮನೋವಿಜ್ಞಾನದ ವ್ಯವಸ್ಥೆ, ರಾಜಕೀಯ ವ್ಯವಸ್ಥೆ, ಅರ್ಥಶಾಸ್ತ್ರ, ಇತ್ಯಾದಿ. ಬೌದ್ಧಧರ್ಮದಲ್ಲಿಯೂ ಇದೇ ರೀತಿಯಾದ ವ್ಯವಸ್ಥೆಯಿದೆ, ಆದ್ದರಿಂದ ಕರ್ಮವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ವಿಭಿನ್ನ ತಾತ್ವಿಕ ಸಿದ್ಧಾಂತ ವ್ಯವಸ್ಥೆಗಳಿಂದ ಹಲವಾರು ವಿವರಣೆಗಳಿವೆ ಎಂದು ನಾವು ಕಂಡುಕೊಳ್ಳುತ್ತೇವೆ. ಪಶ್ಚಿಮದಲ್ಲಿಯೂ ಸಹ, ಮನೋವಿಜ್ಞಾನದಂತಹ ಒಂದು ವಿಭಾಗದೊಳಗೆ - ಫ್ರಾಯ್ಡಿಯನ್ ಮನೋವಿಜ್ಞಾನದ ದೃಷ್ಟಿಕೋನದಿಂದ ವಿವರಣೆ ಇರಬಹುದು, ಜಂಗಿಯನ್ ಮನೋವಿಜ್ಞಾನದ ದೃಷ್ಟಿಕೋನದಿಂದ ವಿವರಣೆ ಇರಬಹುದು; ಒಬ್ಬರು ವಿಷಯಗಳನ್ನು ಸಮಾಜವಾದಿ ರೀತಿಯಲ್ಲಿ ಅಥವಾ ಬಂಡವಾಳಶಾಹಿ ರೀತಿಯಲ್ಲಿ ವಿವರಿಸಬಹುದು. ಬೌದ್ಧಧರ್ಮದಲ್ಲಿ ಈ ಹಲವಾರು ವ್ಯವಸ್ಥೆಗಳನ್ನು ನೋಡುವುದು ಸಹಾಯಕವಾಗಿದೆ, ಏಕೆಂದರೆ ಅವು ಕರ್ಮ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ನಮಗೆ ವಿಭಿನ್ನ ಒಳನೋಟಗಳನ್ನು ನೀಡುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ನಮ್ಮ ಉದ್ದೇಶಗಳಿಗಾಗಿ, ವ್ಯವಸ್ಥೆಗಳ ವ್ಯತ್ಯಾಸಗಳ ಬಗ್ಗೆ ವಿವರವಾಗಿ ವಿಶ್ಲೇಷಿಸುವ ಅಗತ್ಯವಿಲ್ಲ, ಆದರೆ ಹಲವಾರು ವ್ಯವಸ್ಥೆಗಳಿವೆ ಎಂದು ತಿಳಿದಿರುವುದು ಸಹಾಯಕವಾಗಿರುತ್ತದೆ.
ಅಂದರೆ, ಸೂಚ್ಯವಾಗಿ, ನಾವು ಅನುಭವಿಸುವುದರೊಂದಿಗೆ ಏನು ನಡೆಯುತ್ತಿದೆ ಎಂಬುದನ್ನು ವಿವರಿಸುವ ಪಾಶ್ಚಿಮಾತ್ಯ ವ್ಯವಸ್ಥೆಗಳನ್ನು ಸಹ ನಾವು ನೋಡಬಹುದು. ಅದು ಕರ್ಮದ ಬಗೆಗಿರುವ ನಮ್ಮ ಮಾತುಗಳನ್ನು ವಿರೋಧಿಸುವುದಿಲ್ಲ.
ಪ್ರಚೋದನೆಯ ಮಾನಸಿಕ ಅಂಶವಾಗಿ ಕರ್ಮ
ಕರ್ಮವು, ಒಂದು ನಿರ್ದಿಷ್ಟ ವಸ್ತು, ಒಂದು ನಿರ್ದಿಷ್ಟ ವಿಷಯ ಎಂಬಂತೆ ಮಾತನಾಡುವಾಗ - ನಾವು ಒಂದು ವಿವರಣೆಯ ವ್ಯವಸ್ಥೆಯನ್ನು ಅನುಸರಿಸಿದರೆ - ಅದು ಒಂದು ಮಾನಸಿಕ ಅಂಶವಾಗಿರುತ್ತದೆ. "ಮಾನಸಿಕ ಅಂಶ" ದಿಂದ ನಾವು ಏನನ್ನು ಅರ್ಥೈಸುತ್ತೇವೆ? ಮಾನಸಿಕ ಅಂಶವು ಏನನ್ನಾದರೂ ತಿಳಿದಿರುವ ಒಂದು ಮಾರ್ಗವಾಗಿರುತ್ತದೆ. ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ: ನಾವು ಯಾರನ್ನಾದರೂ ನೋಡುತ್ತೇವೆ ಮತ್ತು ನಾವು ಅವರ ಕಡೆಗೆ ನಡೆಯುತ್ತೇವೆ. ಆ ಅನುಭವವು ಅನೇಕ ಮಾನಸಿಕ ಅಂಶಗಳು ಒಳಗೊಂಡಿರುತ್ತವೆ. ಇವು ನಾವು ಆ ವ್ಯಕ್ತಿಯ ಬಗ್ಗೆ ಹೇಗೆ ತಿಳಿದಿರುತ್ತೇವೆ ಎಂಬುದರ ವಿಭಿನ್ನ ಅಂಶಗಳಾಗಿರುತ್ತವೆ. ಕೆಲವು ಅಂಶಗಳು ಬಹಳ ಮೂಲಭೂತವಾಗಿರುತ್ತವೆ, ಆ ವ್ಯಕ್ತಿಯನ್ನು ಬೇರೆಯವರಿಂದ ಅಥವಾ ಗೋಡೆಯಿಂದ ಪ್ರತ್ಯೇಕಿಸುವಂತಹವ ವಿಷಯವಾಗಿರುತ್ತದೆ. ಆಸಕ್ತಿಯಾಗಿರಬಹುದು - ಅದು ಅವರನ್ನು ನೋಡುವುದರೊಂದಿಗೆ, ಬರುವ ವ್ಯಕ್ತಿಯ ಬಗ್ಗೆ ತಿಳಿದಿರುವ ಒಂದು ಮಾರ್ಗವಾಗಿರುತ್ತದೆ. ಏಕಾಗ್ರತೆ ಇರಬಹುದು; ವಿವಿಧ ಭಾವನೆಗಳು ಇರಬಹುದು. ಇವೆಲ್ಲವೂ ಮಾನಸಿಕ ಅಂಶಗಳಾಗಿವೆ, ಮತ್ತು ಆ ವ್ಯಕ್ತಿಯನ್ನು ನೋಡುವ ಮತ್ತು ಅವರ ಕಡೆಗೆ ನಡೆಯುವ ಆ ಕ್ಷಣದಲ್ಲಿ ಅವು ಒಟ್ಟಿಗೆ ಜಾಲಬಂಧವಾಗುತ್ತವೆ.
ಇಲ್ಲಿ, ಕರ್ಮವು ಯಾವ ಮಾನಸಿಕ ಅಂಶವಾಗಿರುತ್ತದೆ? ಕರ್ಮವು ನಮ್ಮನ್ನು ವ್ಯಕ್ತಿಯ ಕಡೆಗೆ ಸೆಳೆಯುವ ಮಾನಸಿಕ ಅಂಶವಾಗಿದೆ; ಅದು ವ್ಯಕ್ತಿಯನ್ನು ನೋಡುವ ಮತ್ತು ನಂತರ ಅವರ ಕಡೆಗೆ ಹೋಗುವ ಪ್ರಚೋದನೆಯಾಗಿದೆ. ಅದಕ್ಕಾಗಿಯೇ, ಕೆಲವು ಸಿದ್ಧಾಂತಗಳಲ್ಲಿ, ಕರ್ಮವನ್ನು ಒಂದು ಭೌತಿಕ ಶಕ್ತಿಯಂತೆ ವಿವರಿಸಲಾಗುತ್ತದೆ. ಸಹಜವಾಗಿ, ಉದ್ದೇಶದಂತಹ ಮಾನಸಿಕ ಅಂಶಗಳು ಇರಬಹುದು. ಈ ವ್ಯಕ್ತಿಯೊಂದಿಗೆ ನಾವು ಏನು ಮಾಡಲು ಉದ್ದೇಶಿಸಿದ್ದೇವೆ? ನಾವು ಅವರನ್ನು ತಬ್ಬಿಕೊಳ್ಳುವ ಉದ್ದೇಶವನ್ನು ಹೊಂದಿರಬಹುದು ಅಥವಾ ಅವರ ಮುಖಕ್ಕೆ ಗುದ್ದುವ ಉದ್ದೇಶವನ್ನು ಹೊಂದಿರಬಹುದು. ಇದರಲ್ಲಿ ಇನ್ನೂ ಅನೇಕ ಅಂಶಗಳಿವೆ, ಆದರೆ ಕರ್ಮವು ಕೇವಲ ಈ ಮಾನಸಿಕ ಪ್ರಚೋದನೆಯಾಗಿದ್ದು, ನಾವು ಅವರನ್ನು ನೋಡಿ ಅವರ ಕಡೆಗೆ ಹೋಗಿ ತಬ್ಬಿಕೊಳ್ಳುವ ಅಥವಾ ಗುದ್ದುವ ಕ್ರಿಯೆಗೆ ನಮ್ಮನ್ನು ಸೆಳೆಯುತ್ತಿದೆ. ಅಲ್ಲದೆ, ಮಾನಸಿಕ ಪ್ರಚೋದನೆಗಳು ಕೇವಲ ಅಪ್ಪಿಕೊಳ್ಳುವುದು ಅಥವಾ ಗುದ್ದುವಂತಹ ದೈಹಿಕ ಕ್ರಿಯೆಗಳಿಗೆ ಮಾತ್ರವಲ್ಲ ಎಂಬುದನ್ನು ನೆನಪಿಡಿ. ನಾವು ಏನನ್ನಾದರೂ ಯೋಚಿಸುವ ಪ್ರೇರಕ ಮಾನಸಿಕ ಪ್ರಚೋದನೆಯೂ ಆಗಿರಬಹುದು; ಅದು ಏನನ್ನಾದರೂ ಹೇಳುವ ಅಥವಾ ದೈಹಿಕವಾಗಿ ಮಾಡುವ ವಿಷಯದಲ್ಲಿ ಮಾತ್ರವಾಗಿರುವುದಿಲ್ಲ. ನಾವು ಏನನ್ನಾದರೂ ಯೋಚಿಸುತ್ತಿರಲಿ, ನಾವು ಏನನ್ನಾದರೂ ಹೇಳುತ್ತಿರಲಿ, ನಾವು ದೈಹಿಕವಾಗಿ ಏನನ್ನಾದರೂ ಮಾಡುತ್ತಿರಲಿ - ಈ ಎಲ್ಲಾ ವಿಷಯಗಳು ಒಂದು ರೀತಿಯ ಮಾನಸಿಕ ಪ್ರಚೋದನೆಯನ್ನು ಒಳಗೊಂಡಿರುತ್ತವೆ.
ಕರ್ಮ ವರ್ತನೆಯ ಪರಿಣಾಮಗಳು
ವಿಜ್ಞಾನದಂತೆಯೇ ಬೌದ್ಧಧರ್ಮವೂ ಕಾರಣ ಮತ್ತು ಪರಿಣಾಮದ ವಿಷಯದಲ್ಲಿ ಬಹಳಷ್ಟನ್ನು ಕಲಿಸುತ್ತದೆ. ಆದ್ದರಿಂದ, ಈ ಕರ್ಮದಿಂದ ಸೆಳೆದಾಗ - ಈ ಪ್ರಚೋದನೆಯಿಂದ - ನಾವು ಕೆಲಸಗಳನ್ನು ಮಾಡುತ್ತೇವೆ, ಹೇಳುತ್ತೇವೆ ಮತ್ತು ಯೋಚಿಸುತ್ತೇವೆ, ಆಗ ಫಲಿತಾಂಶ ಸಿಗುತ್ತದೆ. ಕರ್ಮವು, ನಮ್ಮ ನಡವಳಿಕೆಯು ಇತರರ ಮೇಲೆ ಬೀರುವ ಪರಿಣಾಮದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ – ಆದರೆ ಅದು ಇತರರ ಮೇಲೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ನಾವು ಅವರಿಗಾಗಿ ಮಾಡುವ ಕೆಲಸದಿಂದ ಬೀರುವ ಪರಿಣಾಮವು ಹೆಚ್ಚಿನ ಮಟ್ಟಿಗೆ ಆ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ನಾವು ಆ ವ್ಯಕ್ತಿಗೆ ಏನು ಮಾಡುತ್ತೇವೆ ಎಂಬುದರ ಮೇಲೆ ಆಧಾರಿತವಾಗಿ, ಆ ವ್ಯಕ್ತಿಯ ಮೇಲೆ ಬೀರುವ ಕೆಲವು ಪರಿಣಾಮಗಳು ಕೇವಲ ಭೌತಿಕ ಅಂಶಗಳಿಂದ ಉಂಟಾಗುತ್ತವೆ: ನೀವು ಯಾರನ್ನಾದರೂ ಹೊಡೆದರೆ ಚರ್ಮವು ಗಾಯಗೊಳ್ಳುತ್ತದೆ. ಅದು ಕೇವಲ ದೈಹಿಕವಾದ ಕಾರಣ ಮತ್ತು ಪರಿಣಾಮ; ನಾವು ಕರ್ಮದ ವಿಷಯದಲ್ಲಿ ಅದರ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನಾವು ಏನು ಹೇಳುತ್ತೇವೆ ಅಥವಾ ಮಾಡುತ್ತೇವೆ ಎಂಬುದನ್ನು ಅವರು ಅದನ್ನು ಹೇಗೆ ಅನುಭವಿಸುತ್ತಾರೆ ಎಂಬುದರ ವಿಷಯವಾಗಿ, ಅದು ಇನ್ನೊಬ್ಬ ವ್ಯಕ್ತಿಯ ಮೇಲೆ ಬೀರುವ ಪರಿಣಾಮವನ್ನು ನೋಡಿದರೆ, ಅದು ಅವರ ಮೇಲೆ ಬಿಟ್ಟ ವಿಷಯ ಅಲ್ಲವೇ? ನಾವು ಯಾರಿಗಾದರೂ ಬಹಳಾ ಕ್ರೂರವಾದದ್ದನ್ನು ಹೇಳಬಹುದು, ಮತ್ತು ಅವರ ಭಾವನೆಗಳನ್ನು ಬಹಳಾ ನೋಯಿಸಬಹುದು; ಅವರು ತುಂಬಾ ಅಸಮಾಧಾನಗೊಳ್ಳಬಹುದು. ಆದರೆ ಅವರು ನಾವು ಸಂಪೂರ್ಣವಾಗಿ ಮೂರ್ಖರು ಎಂದು ಭಾವಿಸಬಹುದು, ಮತ್ತು ಆ ಕಾರಣದಿಂದ ಅವರು ನಮ್ಮನ್ನು ನಂಬುವುದಿಲ್ಲ ಮತ್ತು ಗಂಭೀರವಾಗಿ ಪರಿಗಣಿಸುವುದಿಲ್ಲ. ಅಥವಾ ಅವರು ನಮ್ಮನ್ನು ಕೇಳದೇ ಇರಬಹುದು ಅಥವಾ ಅವರು ನಮ್ಮನ್ನು ತಪ್ಪಾಗಿ ಕೇಳಬಹುದು. ಉದಾಹರಣೆಗೆ, ಅವರ ಮನಸ್ಸು ಬೇರೆ ಯಾವುದೋ ವಿಷಯದಲ್ಲಿ ಮುಳುಗಿರಬಹುದು. ಆದ್ದರಿಂದ, ಈ ವ್ಯಕ್ತಿಯ ಭಾವನೆಗಳನ್ನು ನಿಜವಾಗಿಯೂ ನೋಯಿಸುವ ಕೆಟ್ಟ ಉದ್ದೇಶಗಳನ್ನು ನಾವು ಹೊಂದಿದ್ದರೂ ಸಹ, ಅದು ಹಾಗೆಯೇ ನಡೆಯುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ - ಸಹಜವಾಗಿ ಬೌದ್ಧಧರ್ಮವು ಯಾರನ್ನೂ ನೋಯಿಸದಿರಲು ಪ್ರಯತ್ನಿಸಿ ಎಂದು ಕಲಿಸುತ್ತದೆ. ಆದರೆ ಅದು ಇಲ್ಲಿ ಕರ್ಮವನ್ನು ಒಳಗೊಂಡಿಲ್ಲ.
ನಾವು ಯಾವುದಾದರೂ ಒಂದು ವಿಷಯದ ಕರ್ಮಫಲಗಳ ಬಗ್ಗೆ ಮಾತನಾಡುವಾಗ, ಈ ಕರ್ಮ ಪ್ರಚೋದನೆಗಳೊಂದಿಗಿನ ಈ ಹಠಾತ್ ಪ್ರವೃತ್ತಿಯ, ಪ್ರಚೋದಿತವಾದ ರೀತಿಯಲ್ಲಿ ವರ್ತಿಸುವ ಪರಿಣಾಮವಾಗಿ ನಾವು ಅನುಭವಿಸುವ ಕರ್ಮಫಲಗಳಾಗಿರುತ್ತವೆ.
ನಮ್ಮೊಳಗಿನ ಪರಿಣಾಮಗಳೇನು? ಈ ಪರಿಣಾಮಗಳಲ್ಲಿ ಒಂದು - ಮತ್ತು ಇದು ಪಾಶ್ಚಿಮಾತ್ಯ ವಿಜ್ಞಾನವು ಹೇಳುವುದಕ್ಕೆ ಹೋಲುತ್ತದೆ - ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ಯೋಚಿಸಲು, ಒಂದು ನಿರ್ದಿಷ್ಟ ರೀತಿಯಲ್ಲಿ ಮಾತನಾಡಲು ಮತ್ತು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಲು ನಮ್ಮನ್ನು ಷರತ್ತುಬದ್ಧಗೊಳಿಸುತ್ತೇವೆ, ಆದ್ದರಿಂದ ಅದು ಆ ನಡವಳಿಕೆಯ ವಿಧಾನವನ್ನು ಪುನರಾವರ್ತಿಸುವ ಪ್ರವೃತ್ತಿಯನ್ನು ನಿರ್ಮಿಸುತ್ತದೆ. ಮತ್ತು ಕ್ರಿಯೆಯನ್ನು ಪುನರಾವರ್ತಿಸುವ ಪ್ರವೃತ್ತಿ ಮತ್ತು ಆ ಕ್ರಿಯೆಯನ್ನು ಪುನರಾವರ್ತಿಸುವ ಸಾಮರ್ಥ್ಯದ ಪರಿಣಾಮವಾಗಿ - ನಾವು ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳ ನಡುವೆ ಸ್ವಲ್ಪ ವ್ಯತ್ಯಸಿಸುತ್ತೇವೆ, ಅದರ ಬಗ್ಗೆ ಹೆಚ್ಚು ವಿವರಣೆ ನೀಡುವ ಅಗತ್ಯವಿಲ್ಲ - ಅವುಗಳ ಪರಿಣಾಮವಾಗಿ, ನಾವು ಆ ಕ್ರಿಯೆಯನ್ನು ಪುನರಾವರ್ತಿಸಲು ಬಯಸುತ್ತೇವೆ.
ಇದು ನಿಜವಾಗಿಯೂ ಏನನ್ನು ಉತ್ಪಾದಿಸುತ್ತದೆ, ಈ ಪ್ರವೃತ್ತಿಯನ್ನೇ ಅಥವಾ ಸಾಮರ್ಥ್ಯವನ್ನೇ? ಪ್ರವೃತ್ತಿಯು ಒಂದು ಭಾವನೆಯನ್ನು ಉಂಟುಮಾಡುತ್ತದೆ – ಉದಾಹರಣೆಗೆ, ನಿಮ್ಮ ಬಳಿಗೆ ಹೋಗಿ ನಿಮ್ಮನ್ನು ಅಪ್ಪಿಕೊಳ್ಳುವ ಭಾವನೆ ಅಥವಾ ನಿಮ್ಮ ಬಳಿಗೆ ಹೋಗಿ ಅಸಹ್ಯವಾದದ್ದನ್ನು ಹೇಳುವ ಭಾವನೆ. ತದನಂತರ, ನಾವು ಅದನ್ನು ಮಾಡಲು ಬಯಸಿದಾಗ, ಅದನ್ನು ಮಾಡಬೇಕೆ ಅಥವಾ ಬೇಡವೇ ಎಂಬ ಆಯ್ಕೆ ನಮಗಿರುತ್ತದೆ. ಅದು ಬಹಳ ಮುಖ್ಯವಾದ ಅಂಶವಾಗಿದೆ, ನಮಗೆ ಏನು ಮಾಡಬೇಕೆಂದು ಅನಿಸುತ್ತದೆಯೋ ಆ ಕೃತ್ಯವನ್ನು ಎಸಗುವ ಆಯ್ಕೆ ನಮಗಿದೆ ಎಂದು ಅರಿತುಕೊಳ್ಳುವುದು. ಆದರೆ ನಾವು ಅದನ್ನು ಮಾಡುತ್ತೇವೆ ಎಂದು ನಿರ್ಧರಿಸಿದರೆ, ಅಥವಾ ನಾವು ಅದನ್ನು ಮಾಡುತ್ತೇವೆಯೋ ಇಲ್ಲವೋ ಎಂಬುನ್ನು ಪರಿಗಣಿಸದೆಯೂ ಇದ್ದರೆ, ನಾವು ಅದನ್ನು ಎಸಗುತ್ತೇವೆ, ಅನಂತರದ ಹಂತವೆಂದರೆ ಕರ್ಮವು ಬರುತ್ತದೆ. ಕರ್ಮವು ನಾವು ನಿಜವಾಗಿಯೂ ಮಾಡುವ ಪ್ರಚೋದನೆ, ಚಾಲನೆ, ಬಲವಂತವಾಗಿರುತ್ತದೆ.
ಇದಾದ ನಂತರ ಈ ಪ್ರವೃತ್ತಿಗಳಿಂದ ಹಣ್ಣಾಗುವ ಇತರ ಹಲವು ವಿಷಯಗಳಿವೆ. ಒಂದು ಮೂಲಭೂತ ಅಂಶವು ನಾವು ಅನುಭವಿಸುವ ವಿಷಯವೇ ಅಗಿರುತ್ತದೆ. "ವಿಷಯ" ಎಂಬುದು ಒಂದು ದೊಡ್ಡ ಪದ; ನಾವು ಸ್ವಲ್ಪ ಹೆಚ್ಚು ನಿಖರವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಉದಾಹರಣೆಗೆ, ಈ ವ್ಯಕ್ತಿಯನ್ನು ಭೇಟಿಯಾಗುವುದರೊಂದಿಗೆ ಮತ್ತು ಆ ವ್ಯಕ್ತಿಯನ್ನು ಭೇಟಿಯಾಗದೆ ಇರುವುದರೊಂದಿಗೆ ಇದು ಸಂಬಂಧಿಸಿದೆ. ಜನರು ನಮ್ಮೊಂದಿಗೆ ವರ್ತಿಸುವ ರೀತಿಯನ್ನು ಸಹ ಇದು ಒಳಗೊಂಡಿರುತ್ತದೆ. ಹೆಚ್ಚು ನಿಖರವಾಗಿ ಹೇಳಬೇಕೆಂದರೆ, ನಾವು ಅದನ್ನು ಹೇಗೆ ಹೇಳುತ್ತೇವೆ ಎಂಬುದರ ಬಗ್ಗೆ ನಾವು ಬಹಳಾ ಜಾಗರೂಕರಾಗಿರಬೇಕು. ನಮ್ಮ ಕರ್ಮವು, ಇನ್ನೊಬ್ಬ ವ್ಯಕ್ತಿಯನ್ನು ನಮ್ಮ ಮೇಲೆ ಕೂಗುವಂತೆ ಮಾಡುವುದಿಲ್ಲ - ಅವರಿಗೆ ಜನರ ಮೇಲೆ ಕೂಗಾಡುವ ಪ್ರವೃತ್ತಿಯಿರುವುದರ ಪರಿಣಾಮವಾಗಿ ಅವರು ನಮ್ಮ ಮೇಲೆ ಕೂಗಾಡುತ್ತಾರೆ. ಆದರೆ ನಮ್ಮ ಸ್ವಂತ ಕರ್ಮವು, ಇತರರು ನಮ್ಮ ಮೇಲೆ ಕೂಗುವುದನ್ನು ಅನುಭವಿಸಲು ಕಾರಣವಾಗಿರುತ್ತದೆ.
ಇದು ಅರ್ಥಮಾಡಿಕೊಳ್ಳಲು ಸುಲಭವಾದ ವಿಷಯವಲ್ಲ, ಆದರೆ ಅದರ ತಿಳುವಳಿಕೆಯನ್ನು ಸಮೀಪಿಸುವ ಒಂದು ಮಾರ್ಗವು ಉದಾಹರಣೆಯೊಂದಿಗೆ ಎಂದು ನಾನು ಭಾವಿಸುತ್ತೇನೆ. ಒಂದು ಮಗು ಡೈಪರ್ ಧರಿಸಿ ಡೈಪರ್ ಅನ್ನು ಕೊಳಕು ಮಾಡಿದರೆ, ಆ ಮಗು ಅದರೊಂದಿಗೆ ಬದುಕಬೇಕು; ಮಗುವು ತಾನು ರಚಿಸಿದ ಅಸ್ಥವ್ಯಸ್ಥ ಸಂದರ್ಬದೊಂದಿಗೆ ಬದುಕಬೇಕು. ಯಾರಾದರೂ ಮಗುವಿನ ಡೈಪರ್ ಅನ್ನು ಬದಲಾಯಿಸುತ್ತಾರೋ ಇಲ್ಲವೋ ಎಂಬ ವಿಷಯವನ್ನು ಪಕ್ಕಕ್ಕೆ ಇಡೋಣ, ಇಲ್ಲಿ ಮುಖ್ಯವಾದ ವಿಷಯವೆಂದರೆ ನೀವು ಅವ್ಯವಸ್ಥೆಯನ್ನು ಸೃಷ್ಟಿಸುತ್ತೀರಿ ಮತ್ತು ನೀವು ಅವ್ಯವಸ್ಥೆಯನ್ನು ಅನುಭವಿಸಬೇಕು. ನಾವು ಜೀವನದಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತೇವೆ, ಮತ್ತು ಜೀವನ ಮುಂದುವರೆದಂತೆ, ನಾವು ಹೆಚ್ಚು ಹೆಚ್ಚು ಗೊಂದಲಗಳಲ್ಲಿ ಸಿಲುಕುತ್ತೇವೆ; ಮೂಲತಃ, ಇದು ಹೀಗೆ ಕೆಲಸ ಮಾಡುತ್ತದೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ನಾವು ಇತರರ ಕಡೆಗೆ ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತೇವೆ ಮತ್ತು ಇತರರು ನಮ್ಮ ಕಡೆಗೆ ಅದೇ ರೀತಿಯಲ್ಲಿ ವರ್ತಿಸುವುದನ್ನು ನಾವು ಅನುಭವಿಸುತ್ತೇವೆ. ಆದರೆ ಕರ್ಮದೊಂದಿಗಿನ ಮತ್ತೊಂದು ಪ್ರಮುಖ ತತ್ವವೆಂದರೆ ಇದು ತಕ್ಷಣವೇ ಕೆಲಸ ಮಾಡುವುದಿಲ್ಲ. ನಾವು ಯಾರೊಂದಿಗಾದರೂ ತುಂಬಾ ದಯೆಯಿಂದ ಮತ್ತು ಮೃದುವಾಗಿ ಮಾತನಾಡಬಹುದು, ಆದರೆ ಅವರು ಇನ್ನೂ ಹುಚ್ಚರಾಗಿ, ಕೋಪದಿಂದ ನಮ್ಮ ಮೇಲೆ ಕೂಗಾಡಬಹುದು.
ಇದಕ್ಕಾಗಿಯೇ ಕರ್ಮವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು, ಪುನರ್ಜನ್ಮದ ಸಂಪೂರ್ಣ ಚರ್ಚೆಯನ್ನು ಕರೆತರಬೇಕು, ವಿಷಯಗಳು ಪರಿಣಾಮವನ್ನು ಉಂಟುಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅವು ಈ ಜೀವಿತಾವಧಿಯಲ್ಲಿ ಪರಿಣಾಮವನ್ನು ಉಂಟುಮಾಡದಿರಬಹುದು. ವಾಸ್ತವದಲ್ಲಿ, ಹೆಚ್ಚಾಗಿ ಅವು ಪರಿಣಾಮಗಳನ್ನು ಮಾಡುವುದಿಲ್ಲ. ಪಾಶ್ಚಿಮಾತ್ಯರಾದ ನಮಗೆ ಇದನ್ನು ಒಪ್ಪಿಕೊಳ್ಳುವುದು ತುಂಬಾ ಸುಲಭವಲ್ಲ. ಕೆಲವರಿಗೆ ಬೌದ್ಧಧರ್ಮವು "ಈ ಜೀವಿತಾವಧಿಯಲ್ಲಿ ಒಳ್ಳೆಯವರಾಗಿರಿ ಮತ್ತು ಮರಣಾನಂತರದ ಜೀವನದಲ್ಲಿ ನೀವು ಸ್ವರ್ಗದಲ್ಲಿ ಫಲಿತಾಂಶಗಳನ್ನು ಅನುಭವಿಸುವಿರಿ; ಕೆಟ್ಟವರಾಗಿರಿ ಮತ್ತು ಮರಣಾನಂತರದ ಜೀವನದಲ್ಲಿ ನೀವು ನರಕದಲ್ಲಿ ಫಲಿತಾಂಶಗಳನ್ನು ಅನುಭವಿಸುವಿರಿ" ಎಂದು ಹೇಳುತ್ತಿದೆ ಎಂದು ತೋರುತ್ತದೆ.
ನಾವು ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು: ಬೌದ್ಧಧರ್ಮವು ಇದನ್ನೇ ಹೇಳುತ್ತಿದೆಯೇ? ಅಥವಾ ಅದು ಭಿನ್ನವೇ? ಇದು ಸುಲಭದ ವಿಷಯವೇನಲ್ಲ, ಇದು ತುಂಬಾ ಸಂಕೀರ್ಣವಾದ ವಿಷಯ, ಏಕೆಂದರೆ ಕರ್ಮದ ಕಾರಣ ಮತ್ತು ಪರಿಣಾಮವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು, ನಾವು ಪುನರ್ಜನ್ಮವನ್ನು ಅರ್ಥಮಾಡಿಕೊಳ್ಳಬೇಕು - ಬೌದ್ಧರ ಪುನರ್ಜನ್ಮದ ಪರಿಕಲ್ಪನೆ, ಬೌದ್ಧೇತರ ಪುನರ್ಜನ್ಮದ ಪರಿಕಲ್ಪನೆಯಾಗಿರುವುದಿಲ್ಲ. ಕರ್ಮದ ಕಾರಣವನ್ನು ಯಾರು ಎಸಗುತ್ತಾರೆ ಮತ್ತು ಅದರ ಫಲಿತಾಂಶವನ್ನು ಅನುಭವಿಸುವವರು ಯಾರು? ಪ್ರತಿಫಲ ಅಥವಾ ಶಿಕ್ಷೆಗೆ ಒಳಪಡಬಹುದಾದ "ನಾನು" ಎಂಬುದು ಇದೆಯೇ.
ಆದರೆ, ಪುನರ್ಜನ್ಮದ ಸಮಸ್ಯೆಯನ್ನು ಮತ್ತು ಅದನ್ನು ಅನುಭವಿಸುವವರನ್ನು ಬದಿಗಿಟ್ಟು, ನಾನು ಆರಂಭದಲ್ಲಿ ಹೇಳಿದಂತೆ, ಬೌದ್ಧಧರ್ಮವು ಕಾನೂನುಗಳ ವಿಧೇಯತೆಯ ಆಧಾರದ ಮೇಲೆ ಪ್ರತಿಫಲ ಮತ್ತು ಶಿಕ್ಷೆಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿಲ್ಲ. ಬೌದ್ಧಧರ್ಮವು, ಈ ಜೀವನವು ಒಂದು ರೀತಿಯ ಪರೀಕ್ಷೆ ಮತ್ತು ನಮ್ಮ ಮುಂದಿನ ಜನ್ಮದಲ್ಲಿ ನಾವು ಪರೀಕ್ಷೆಯ ಫಲಿತಾಂಶಗಳನ್ನು ಪಡೆಯುತ್ತೇವೆ ಎಂದು ಹೇಳುತ್ತಿಲ್ಲ. ವಿಷಯಗಳು ಅವುಗಳ ಪರಿಣಾಮವನ್ನು ಉಂಟುಮಾಡಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಅದು ಸರಳವಾಗಿ ಹೇಳುತ್ತಿದೆ. ಪರಿಸರದ ವಿಷಯದಲ್ಲಿ ನಾವು ಅದನ್ನು ನೋಡಬಹುದು. ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತೇವೆ ಮತ್ತು ಅದು ನಮ್ಮ ಜೀವಿತಾವಧಿಯಲ್ಲಿ ಕೆಲವು ಪರಿಣಾಮಗಳನ್ನು ಉಂಟುಮಾಡುತ್ತದೆ, ಆದರೆ ಅದು ಭವಿಷ್ಯದ ಪೀಳಿಗೆಯ ಜೀವಿತಾವಧಿಯಲ್ಲಿ ಇನ್ನೂ ಹೆಚ್ಚಿನ ಪರಿಣಾಮಗಳನ್ನು ಉಂಟುಮಾಡಲಿದೆ. ಇವೆರಡನ್ನು ಹೋಲಿಸಬಹುದು.
ಸಂತೋಷ ಮತ್ತು ಅಸಂತೋಷ
ಕರ್ಮವು ಹಣ್ಣಾಗಿರುವ ಸಂಪೂರ್ಣವಾಗಿ ವಿಭಿನ್ನವಾದ ಆಯಾಮ - ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಕರ್ಮ ಕ್ರಿಯೆಗಳಿಂದ ಫಲಿತಾಂಶಗಳು ಬರುವ ಮತ್ತೊಂದು ಆಯಾಮ - ಈ ಉಪನ್ಯಾಸದ ಆರಂಭದಲ್ಲಿ ನಾವು ಮಾತನಾಡುತ್ತಿದ್ದ ವಿಷಯಕ್ಕೆ ಸಂಬಂಧಿಸಿದೆ, ಅದುವೇ ಸಂತೋಷ ಮತ್ತು ಅಸಂತೋಷದ ಈ ಆಯಾಮ. ಕೆಲವು ಕ್ರಿಯೆಗಳನ್ನು ಪುನರಾವರ್ತಿಸುವುದರಿಂದ, ಕೆಲವು ವಿಷಯಗಳು ಸಂಭವಿಸುವುದನ್ನು ನಾವು ಅನುಭವಿಸುತ್ತೇವೆ - ಜನರು ನಮ್ಮ ಕಡೆಗೆ ಒಂದು ರೀತಿಯಲ್ಲಿ ವರ್ತಿಸುವುದಾಗಿರಬಹುದು, ಅಥವಾ ಅದು ಬಂಡೆಯ ತುದಿಯಿಂದ ನಮ್ಮ ತಲೆಯ ಮೇಲೆ ಬೀಳುವ ಕಲ್ಲಾಗಿರಬಹುದು. ನಾವು ಈ ವಿಷಯಗಳನ್ನು ಸಂತೋಷ ಅಥವಾ ಅಸಂತೋಷವಾಗಿ ಅನುಭವಿಸುತ್ತೇವೆ. ಇದರ ಬಗ್ಗೆ ಯೋಚಿಸಿ. ಕೆಲವು ಜನರಿದ್ದಾರೆ, ಅವರು ಜಿರಳೆ ಮೇಲೆ ಕಾಲಿಟ್ಟಾಗ, ಅವರು ತುಂಬಾ ಸಂತೋಷಪಡುತ್ತಾರೆ - ಈ ಭಯಾನಕ ವಿಷಯ ನನಗೆ ಗೊತ್ತಾಯಿತು! ಇತರರು, ಅವರು ಜಿರಳೆಯ ಮೇಲೆ ಕಾಲಿಟ್ಟಾಗ, ಅಸಹ್ಯಪಡುತ್ತಾರೆ ಮತ್ತು ತುಂಬಾ ಅತೃಪ್ತರಾಗುತ್ತಾರೆ. ಕೆಲವರು, ಯಾರಾದರೂ ಅವರನ್ನು ಹೊಡೆದಾಗ ಅಥವಾ ಅವರ ಮೇಲೆ ಕೂಗಿದಾಗ, ಬಹಳಾ ಅತೃಪ್ತಿ ಮತ್ತು ಬಹಳಾ ದುಃಖಿತರಾಗುತ್ತಾರೆ, ಮತ್ತು ಇತರರು ಸಂತೋಷಪಡುತ್ತಾರೆ, "ಹೌದು, ನಾನು ಪಾಪಿ; ನಾನು ಒಳ್ಳೆಯವನಲ್ಲ; ನಾನು ಕೆಟ್ಟವನು; ನನ್ನ ಮೇಲೆ ಕಿರುಚಿ ಮತ್ತು ಹೊಡೆಯಿರಿ, ನಾನು ಇದಕ್ಕೆ ಲಾಯಕ್ಕು."
ಈ ಮಾತು ನಿಮಗೆ ತಿಳಿದಿರಬಹುದು, ಅದು ಇಲ್ಲಿಂದ ಮೆಕ್ಸಿಕೋದಿಂದ ಬಂದಿದೆ ಎಂದು ನಾನು ಭಾವಿಸುತ್ತೇನೆ, ಅಥವಾ ಯಾರೋ ಒಬ್ಬರು ಅದನ್ನು ಒಂದು ಕಥೆಯಾಗಿ ಸೃಷ್ಟಿಸಿರಬಹುದು ಮತ್ತು ನಾನು ಅದನ್ನು ನಂಬಿದ್ದೇನೆ, ಆದರೆ ಅದು ಹೀಗೆ ಹೇಳುತ್ತದೆ: "ನನ್ನ ಗಂಡ ನನ್ನನ್ನು ಹೊಡೆದರೆ ಅವನು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತಾನೆ ಎಂದರ್ಥ; ಅವನು ನನ್ನನ್ನು ಹೊಡೆಯದಿದ್ದರೆ ಅವನು ಕಾಳಜಿ ವಹಿಸುವುದಿಲ್ಲ ಎಂದರ್ಥ."
ಈ ಸಂತೋಷ ಅಥವಾ ಅಸಂತೋಷವು ಬಹಳಾ ವಿಭಿನ್ನವಾದ ಆಯಾಮದಂತೆ ತೋರುತ್ತದೆ, ಅಲ್ಲವೇ? ಒಂದು ಆಯಾಮದ ವಿಷಯದಲ್ಲಿ ನಮಗೆ ಏನಾಗುತ್ತದೆ ಎಂಬುದು ನಾವು ಪ್ರಚೋದಿತವಾಗಿ, ಪುನರಾವರ್ತನೆಯಿಂದ ಏನು ಮಾಡುತ್ತೇವೆ ಮತ್ತು ನಾವು ಅನುಭವಿಸುವ ವಿಷಯಗಳು, ನಮಗೆ ಆಗುತ್ತಿರುವ ವಿಷಯಗಳಾಗಿರುತ್ತವೆ - ಅದು ಒಂದು ಆಯಾಮವಾಗಿರುತ್ತದೆ; ಇನ್ನೊಂದು ಆಯಾಮವೆಂದರೆ ನಾವು ನಿಜವಾಗಿಯೂ ಅದನ್ನು ಹೇಗೆ ಅನುಭವಿಸುತ್ತೇವೆ, ಸಂತೋಷವಾಗಿಯೇ ಅಥವಾ ಅಸಂತೋಷವಾಗಿಯೇ ಎಂಬುದಾಗಿರುತ್ತದೆ. ನಾವು ಅನುಭವಿಸುವ ಈ ವಿಷಯಗಳು, ಈ ಎರಡು ಆಯಾಮಗಳು, ಎರಡೂ ಹಿಂದಿನ ಕರ್ಮ, ಆದರೆ ವಿಭಿನ್ನವಾದ ಕ್ರಿಯೆಗಳಿಂದ ಹಣ್ಣಾಗಿರುತ್ತವೆ. ನಾವು ಕೇವಲ ಸಂತೋಷ ಮತ್ತು ಅಸಂತೋಷದ ಆಯಾಮವನ್ನು ನೋಡಿದರೆ, ಇದು ಬಹಳಾ ಸಾಮಾನ್ಯವಾದ ಆಯಾಮವಾಗಿರುತ್ತದೆ. ನಾವು ವಿನಾಶಕಾರಿ ರೀತಿಯಲ್ಲಿ ವರ್ತಿಸುತ್ತೇವೆಯೇ ಅಥವಾ ರಚನಾತ್ಮಕ ರೀತಿಯಲ್ಲಿ ವರ್ತಿಸುತ್ತೇವೆಯೇ ಎಂಬುದರಿಂದ ಇದು ಬರುತ್ತದೆ. ನಾವು ವಿನಾಶಕಾರಿಯಾಗಿ ವರ್ತಿಸಿದರೆ, ಇದರ ಫಲಿತಾಂಶವು ಅಸಂತೋಷವನ್ನು ಅನುಭವಿಸುವುದಾಗಿರುತ್ತದೆ; ನಾವು ರಚನಾತ್ಮಕವಾಗಿ ವರ್ತಿಸಿದರೆ, ಅದರ ಫಲಿತಾಂಶವು ಸಂತೋಷವನ್ನು ಅನುಭವಿಸುವುದಾಗಿರುತ್ತದೆ.
ರಚನಾತ್ಮಕ ಮತ್ತು ವಿನಾಶಕಾರಿ ನಡವಳಿಕೆ
ಬೌದ್ಧಧರ್ಮದ ಪ್ರಕಾರ ರಚನಾತ್ಮಕ ಮತ್ತು ವಿನಾಶಕಾರಿ ಎಂದರೆ ಏನು ಎಂಬುದನ್ನು ನಾವು ಪರಿಶೀಲಿಸಿದಾಗ ಅದು ಬಹಳಾ ಆಸಕ್ತಿದಾಯಕವಾಗಿರುತ್ತದೆ. ಸ್ವಾಭಾವಿಕವಾಗಿಯೇ, ಇದಕ್ಕೆ ಹಲವಾರು ವಿವರಣೆಗಳಿವೆ. ಆದರೆ ನಾವು ನೋಡಿದಂತೆ, ಕ್ರಿಯೆಯ ಸ್ವರೂಪವನ್ನು ಅದು ಬೇರೆಯವರ ಮೇಲೆ ಬೀರುವ ಪರಿಣಾಮದ ದೃಷ್ಟಿಕೋನದಿಂದ, ನಿಜವಾಗಿಯೂ ನಿರ್ದಿಷ್ಟಪಡಿಸಲು ಸಾಧ್ಯವಿಲ್ಲ, ಏಕೆಂದರೆ ಅದರ ಪರಿಣಾಮ ಏನೆಂದು ಯಾರಿಗೆ ತಾನೆ ತಿಳಿದಿರುತ್ತದೆ: ಇದು ಇನ್ನೂ ಹಲವು ಅಂಶಗಳು ಒಳಗೊಂಡಿರುತ್ತವೆ. ಆದ್ದರಿಂದ ರಚನಾತ್ಮಕ ಮತ್ತು ವಿನಾಶಕಾರಿ ಎಂಬುದು ನಾವು ವರ್ತಿಸುವ ಮನಸ್ಥಿತಿಗೆ ಸಂಬಂಧಿಸಿರುತ್ತದೆ. ನಮ್ಮ ಕ್ರಿಯೆಯು ದುರಾಸೆ, ಅಥವಾ ಬಾಂಧವ್ಯ, ಅಥವಾ ಕೋಪ, ಅಥವಾ ಸಂಪೂರ್ಣ ಮುಗ್ಧತೆಯನ್ನು ಆಧರಿಸಿದ್ದರೆ, ಅದು ವಿನಾಶಕಾರಿಯಾಗಿರುತ್ತದೆ. ಮತ್ತೊಂದೆಡೆ, ನಮ್ಮ ಕ್ರಿಯೆಯು ಕೋಪವಿಲ್ಲದೆ, ದುರಾಸೆಯಿಲ್ಲದೆ, ಲಗತ್ತಿಸದೆ, ನಿಷ್ಕಪಟವಾಗಿರದೆ ಇದ್ದರೆ, ಅದು ರಚನಾತ್ಮಕವಾಗಿರುತ್ತದೆ. ನಿಸ್ಸಂಶಯವಾಗಿ, ಅದು ಅದಕ್ಕಿಂತ ಹೆಚ್ಚಿನದಾಗಿದ್ದರೆ, ಅದು ಪ್ರೀತಿ ಮತ್ತು ಸಹಾನುಭೂತಿ, ಔದಾರ್ಯ ಇತ್ಯಾದಿಗಳನ್ನು ಆಧರಿಸಿದ್ದರೆ, ಅದು ರಚನಾತ್ಮಕವಾಗಿರುತ್ತದೆ.
ಇತರ ಅಂಶಗಳೂ ಇವೆ. ಕ್ರಿಯೆಯನ್ನು ರಚನಾತ್ಮಕ ಅಥವಾ ವಿನಾಶಕಾರಿಯನ್ನಾಗಿ ಮಾಡುವ ಈ ಇತರ ಅಂಶಗಳನ್ನು ಪರಿಶೀಲಿಸುವುದು ಬಹಳಾ ಆಸಕ್ತಿದಾಯಕವಾಗಿದೆ. ಒಂದು ಅಂಶವೆಂದರೆ ನೈತಿಕ ಸ್ವ-ಘನತೆ, ಅಥವಾ ಸಭ್ಯ ಸ್ವ-ಘನತೆ. ಅದು ನಮ್ಮ ಸ್ವಂತ ವ್ಯಕ್ತಿತ್ವ ಮತ್ತು ನಮ್ಮ ಸ್ವಾಭಿಮಾನಕ್ಕೆ ಸಂಬಂಧಿಸಿರುತ್ತದೆ. ನಮಗೆ ನಮ್ಮ ಬಗ್ಗೆ ಗೌರವವಿಲ್ಲದಿದ್ದರೆ, ನಮ್ಮ ನಡವಳಿಕೆಯು ನಮ್ಮ ಮೇಲೆ ಬೀರುವ ಪರಿಣಾಮದ ಬಗ್ಗೆ ನಾವು ಕಾಳಜಿ ವಹಿಸುವುದಿಲ್ಲ. ಅದು "ಏನೋ ಆಗಲಿ" ಎಂಬ ಮನೋಭಾವವಾಗಿರುತ್ತದೆ. ಆ ರೀತಿಯ ಕಡಿಮೆ ಸ್ವಾಭಿಮಾನದೊಂದಿಗೆ, ನಾವು ವಿನಾಶಕಾರಿಯಾಗಿ ವರ್ತಿಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾನು ನನ್ನ ಬಗ್ಗೆ ಸಕಾರಾತ್ಮಕ ರೀತಿಯಲ್ಲಿ ಯೋಚಿಸಿದರೆ, ಒಬ್ಬ ವ್ಯಕ್ತಿಯಾಗಿ ನನ್ನ ಬಗ್ಗೆ ನನಗೆ ಗೌರವವಿದ್ದರೆ, ನಾನು ಮೂರ್ಖನಂತೆ ವರ್ತಿಸುವುದಿಲ್ಲ. ನಾನು ಮೂರ್ಖ, ಕ್ರೂರ ರೀತಿಯಲ್ಲಿ ವರ್ತಿಸುವುದಿಲ್ಲ, ಏಕೆಂದರೆ ನಾನು ಆ ರೀತಿ ವರ್ತಿಸಲು ನನ್ನನ್ನು ಕೆಳಮಟ್ಟಕ್ಕೆ ಇಳಿಸಿಕೊಳ್ಳಲು ಬಯಸುವುದಿಲ್ಲ - ನನಗೆ ನನ್ನ ಬಗ್ಗೆ, ನಾನು ಏನು ಮಾಡಬಹುದು ಎಂಬುದರ ಬಗ್ಗೆ ಹೆಚ್ಚಿನ ಅಭಿಪ್ರಾಯವಿದೆ. ನಾವು ಇಲ್ಲಿ ಮಾತನಾಡುತ್ತಿರುವ ಅಂಶವೆಂದರೆ: ನೈತಿಕ ಸ್ವ-ಘನತೆಯ ಪ್ರಜ್ಞೆಯನ್ನು ಹೊಂದಿರುವುದು ಅಥವಾ ಸಭ್ಯ ಸ್ವ-ಘನತೆಯ ಪ್ರಜ್ಞೆಯನ್ನು ಹೊಂದಿರದಿರುವುದು. ನಾವು ರಚನಾತ್ಮಕ ರೀತಿಯಲ್ಲಿ ವರ್ತಿಸುತ್ತೇವೆಯೇ ಅಥವಾ ವಿನಾಶಕಾರಿ ರೀತಿಯಲ್ಲಿ ವರ್ತಿಸುತ್ತೇವೆಯೇ ಎಂಬುದನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ಅಂಶ ಇದು.
ಮತ್ತೊಂದು ಅಂಶವೆಂದರೆ ನಮ್ಮ ನಡವಳಿಕೆಯು ಇತರರ ಮೇಲೆ ಹೇಗೆ ಪ್ರತಿಫಲಿಸುತ್ತದೆ ಎಂಬುದರ ಬಗ್ಗೆ ಕಾಳಜಿ ವಹಿಸುವುದು. ನಾವು ಏನು ಮಾತನಾಡುತ್ತಿದ್ದೇವೆ? ನಾನು ಕೆಟ್ಟ ರೀತಿಯಲ್ಲಿ ವರ್ತಿಸಿದರೆ, ಅದು ನನ್ನ ಕುಟುಂಬದ ಮೇಲೆ ಹೇಗೆ ಪ್ರತಿಫಲಿಸುತ್ತದೆ? ಅದು ನನ್ನ ದೇಶದ ಮೇಲೆ ಹೇಗೆ ಪ್ರತಿಫಲಿಸುತ್ತದೆ? ನಾನು ಕೆಟ್ಟ ರೀತಿಯಲ್ಲಿ ವರ್ತಿಸಿದರೆ, ಮೆಕ್ಸಿಕನ್ನರ ಬಗ್ಗೆ ಜನರು ಏನು ಯೋಚಿಸುತ್ತಾರೆ? ನಾವು ಬೌದ್ಧರಾಗಿದ್ದರೆ, ನಾವು ಹೊರಗೆ ಹೋಗಿ ಕುಡಿದು ಜಗಳವಾಡಿದರೆ, ಅದು ಬೌದ್ಧಧರ್ಮ ಮತ್ತು ಬೌದ್ಧರ ಮೇಲೆ ಹೇಗೆ ಪ್ರತಿಫಲಿಸುತ್ತದೆ? ನಮ್ಮ ಕುಟುಂಬದ ಬಗ್ಗೆ, ನಮ್ಮ ಗುಂಪಿನ ಬಗ್ಗೆ - ಧರ್ಮ, ದೇಶ, ನಗರ ಏನೇ ಇರಲಿ - ನಮಗೆ ಸಾಕಷ್ಟು ಗೌರವವಿರುವುದರಿಂದ, ನಮ್ಮ ನಡವಳಿಕೆಯ ಪರಿಣಾಮದ ಬಗ್ಗೆ, ನಮ್ಮ ನಡವಳಿಕೆಯು ಇತರರ ಮೇಲೆ ಹೇಗೆ ಪ್ರತಿಫಲಿಸುತ್ತದೆ ಎಂಉದರ ಬಗೆಗಿರುವ ಕಾಳಜಿಯಿದ್ದರೆ, ನಾವು ವಿನಾಶಕಾರಿಯಾಗಿ ವರ್ತಿಸುವುದನ್ನು ತಡೆಯುತ್ತೇವೆ; ನಮ್ಮಲ್ಲಿ ಇದು ಇಲ್ಲದಿದ್ದರೆ, ನಾವು ವಿನಾಶಕಾರಿಯಾಗಿ ವರ್ತಿಸುತ್ತೇವೆ. ಇದು ಬೌದ್ಧಧರ್ಮದಲ್ಲಿನ ಅಸಾಧಾರಣವಾದ ಆಳವಾದ ಒಳನೋಟವಾಗಿದೆ. ಇಲ್ಲಿನ ನಿರ್ಣಾಯಕ ಅಂಶ ಯಾವುದು? ಸ್ವಾಭಿಮಾನ, ಮರ್ಯಾದೆ ಮತ್ತು ನಮ್ಮ ಸಮುದಾಯದ ಗೌರವದ ಪ್ರಜ್ಞೆ.
ಭಯೋತ್ಪಾದನೆಯನ್ನು ಎದುರಿಸುವ ವಿಷಯದಲ್ಲಿ ಪರಿಗಣಿಸಬೇಕಾದ ಕೆಲವು ಅಂಶಗಳ ಬಗ್ಗೆ ಇದು ನಮಗೆ ದೊಡ್ಡ ಒಳನೋಟವನ್ನು ನೀಡುತ್ತದೆ. ನೀವು ಒಬ್ಬ ವ್ಯಕ್ತಿ ಮತ್ತು ಅವರ ಸಮುದಾಯವನ್ನು ಎಲ್ಲಾ ಸ್ವಾಭಿಮಾನದ ಪ್ರಜ್ಞೆಯಿಂದ ವಂಚಿತಗೊಳಿಸಿದರೆ, ಅವರ ಜೀವನವನ್ನು ನಿಜವಾಗಿಯೂ ಭಯಾನಕವಾಗಿಸಿದರೆ ಮತ್ತು ಅವರ ಬಗ್ಗೆ ಭಯಾನಕ ವಿಷಯಗಳನ್ನು ಯೋಚಿಸಿದರೆ, ಅವರು ಏನೇ ಮಾಡಲಿ, ಅದರಿಂದ ಪ್ರಯೋಜನವಿಲ್ಲ ಎಂದು ಅವರು ಭಾವಿಸುತ್ತಾರೆ. ಅವರಿಗೆ ತಮ್ಮ ಸಮುದಾಯದ ಬಗ್ಗೆ ಸ್ವ-ಮೌಲ್ಯ ಅಥವಾ ಮೌಲ್ಯದ ಅರಿವು ಇಲ್ಲದಿದ್ದರೆ, ಅವರು ಹೊರಗೆ ಹೋಗಿ ಏಕೆ ವಿನಾಶಕಾರಿಯಾಗಿ ವರ್ತಿಸಬಾರದು? ಅವರು ಕಳೆದುಕೊಳ್ಳಲು ಏನೂ ಇಲ್ಲ ಎಂದು ಭಾವಿಸುತ್ತಾರೆ. ನಾವು ಇತರರೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎಂಬುದರ ವಿಷಯದಲ್ಲಿ, ವಿಶೇಷವಾಗಿ ಜಗತ್ತಿನ ಸಮಸ್ಯಾತ್ಮಕ ಸಂದರ್ಭಗಳಲ್ಲಿ, ಇದು ನೆನಪಿಡಬೇಕಾದ ಸಹಾಯಕವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಯಾರಿಂದಲೂ, ಅವರ ಸಮುದಾಯದ ಸ್ವಾಭಿಮಾನ ಅಥವಾ ಮೌಲ್ಯದ ಭಾವನೆಯನ್ನು ಎಂದಿಗೂ ಕಸಿದುಕೊಳ್ಳದಿರುವುದು ಮುಖ್ಯ.
ಒಂದು ಕ್ರಿಯೆಯನ್ನು ವಿನಾಶಕಾರಿಯನ್ನಾಗಿ ಮಾಡುವ ಅಥವಾ ರಚನಾತ್ಮಕವಾಗಿಸುವಲ್ಲಿ ಕೆಲವು ಮಾನಸಿಕ ಅಂಶಗಳು ಒಳಗೊಂಡಿರುತ್ತವೆ. ನಾವು ಇತರರ ಕಡೆಗೆ ವರ್ತಿಸುವ ರೀತಿಯು ಅವರ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸುವಂತಹ ವಿಷಯಗಳನ್ನು ಸಹ ಇವು ಒಳಗೊಂಡಿರುತ್ತವೆ. ಇದು ಪರಿಗಣನೆ ಅಥವಾ ಕಾಳಜಿಯ ಪ್ರಜ್ಞೆಯನ್ನು ಹೊಂದಿರುವುದನ್ನು ಸೂಚಿಸುತ್ತದೆ - ನಾನು ಅದನ್ನು "ಕಾಳಜಿ ವಹಿಸುವ ವರ್ತನೆ" ಎಂದು ಕರೆಯುತ್ತೇನೆ. ಆದರೆ ಕೆಲವೊಮ್ಮೆ ನಾವು ಬಹಳಾ ಮುಗ್ಧರಾಗಿರುತ್ತೇವೆ, ‘ನಾನು ನಿಮಗೆ ಏನು ಬೇಕಾದರೂ ಹೇಳಬಲ್ಲೆ, ಅದು ಅಪ್ರಸ್ತುತವಾಗುತ್ತದೆ’ ಎಂದು ನಾವು ಭಾವಿಸುತ್ತೇವೆ. ನಾನು ನಿಜವಾಗಿಯೂ ನಿಮ್ಮ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆಗ ನಮಗೆ ಕಾಳಜಿ ವಹಿಸುವ ಮನೋಭಾವ ಇರುವುದಿಲ್ಲ.
ನಾವು ಈ ರೀತಿಯ ಮಾನಸಿಕ ಅಂಶಗಳೊಂದಿಗೆ ವರ್ತಿಸಿದರೆ - ದುರಾಸೆ, ಕೋಪ, ಸ್ವ-ಮೌಲ್ಯದ ಪ್ರಜ್ಞೆ ಇಲ್ಲದಿರುವುದು, ನಾವು ಮಾಡುವ ಕೆಲಸವು ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಪರಿಗಣನೆ ಇಲ್ಲದಿರುವುದು, ಕಾಳಜಿ ಇಲ್ಲದಿರುವುದು, ನಾವು ಮಾಡುವ ಕೆಲಸವು ಇತರರ ಮೇಲೆ ಮತ್ತು ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲದಿರುವುದು - ಅದರ ಫಲಿತಾಂಶವೇನು? ಅಸಂತೋಷ. ಆದರೆ ಈ ಅಸಂತೋಷವು ಶಿಕ್ಷೆಯಲ್ಲ.
ನಾವು ಇದರ ಬಗ್ಗೆ ನಿಜವಾಗಿಯೂ ಆಳವಾಗಿ ಯೋಚಿಸಬೇಕು. ಈ ಎಲ್ಲಾ ನಕಾರಾತ್ಮಕ ಅಂಶಗಳೊಂದಿಗೆ ಆ ಮನಸ್ಸಿನ ಸ್ಥಿತಿ ನಿಜವಾಗಿಯೂ ಸಂತೋಷದ ಮನಸ್ಸಿನ ಸ್ಥಿತಿಯಾಗಿರಬಹುದೇ ಮತ್ತು ಅದು ನಿಜವಾಗಿಯೂ ನಮ್ಮಲ್ಲಿ ಸಂತೋಷದ ಅನುಭವವನ್ನು ಉಂಟುಮಾಡಬಹುದೇ? ಅಥವಾ ಅದು ಅಸಂತೋಷವನ್ನು ಮಾತ್ರ ಉಂಟುಮಾಡಬಹುದೇ? ನಾವು ಅದರ ಬಗ್ಗೆ ಹೆಚ್ಚು ಹೆಚ್ಚು ಯೋಚಿಸಿದರೆ, ಆ ಮನಸ್ಥಿತಿ, ಆ ನಕಾರಾತ್ಮಕ ಮನಸ್ಸಿನ ಸ್ಥಿತಿಯು ಅಸಂತೋಷವನ್ನು ಅನುಭವಿಸಲು ಕಾರಣವಾಗುತ್ತದೆ ಎಂಬುದು ಅರ್ಥಪೂರ್ಣವಾಗಿರುತ್ತದೆ ಮತ್ತು ನಾವು ದುರಾಸೆ ಮತ್ತು ಕೋಪ ಮತ್ತು ಈ ಎಲ್ಲಾ ಇತರ ವಿಷಯಗಳಿಲ್ಲದ ವಿರುದ್ಧ ಮನಸ್ಥಿತಿಯನ್ನು ಹೊಂದಿದ್ದರೆ, ಅದು ಸಂತೋಷವನ್ನು ಉಂಟುಮಾಡುತ್ತದೆ. ಆದ್ದರಿಂದ, ನಮ್ಮಲ್ಲಿ ಈ ಸಾಮಾನ್ಯ ನಡವಳಿಕೆಯ ವರ್ಗಗಳಿವೆ - ರಚನಾತ್ಮಕ ಮತ್ತು ವಿನಾಶಕಾರಿ - ಮತ್ತು ಅವು ನಾವು ಸಂತೋಷ ಮತ್ತು ಅಸಂತೋಷವನ್ನು ಅನುಭವಿಸಲು ಕಾರಣವಾಗುತ್ತವೆ.
ಇದರ ಜೊತೆಗೆ, ನಾವು ಮಾಡುವ ನಿರ್ದಿಷ್ಟ ಕ್ರಿಯೆಗಳಿವೆ: ಒಬ್ಬರ ಮೇಲೆ ಕೂಗಾಡುವುದು, ಅಥವಾ ಒಬ್ಬರಿಗೆ ದಯೆ ತೋರುವುದು, ಇತ್ಯಾದಿ, ಮತ್ತು ಇವು ಆ ನಡವಳಿಕೆಯನ್ನು ಪುನರಾವರ್ತಿಸುವ ಪ್ರವೃತ್ತಿಗಳು ಮತ್ತು ಇತರರು, ನಮ್ಮೆಡೆಗೆ ಆ ರೀತಿಯಲ್ಲಿ ವರ್ತಿಸುವ ಸಂದರ್ಭಗಳಿಗೆ ಸಿಲುಕುವ ಪ್ರವೃತ್ತಿಗಳ ವಿಷಯದಲ್ಲಿಯೂ ಸಹ ತಮ್ಮ ಪರಿಣಾಮಗಳನ್ನು ಬೀರುತ್ತವೆ.
ನಮ್ಮ ಕರ್ಮ ನಡವಳಿಕೆಯ ಮತ್ತೊಂದು ಫಲಿತಾಂಶವು - ಆದರೆ ಇಲ್ಲಿ ಹೆಚ್ಚಾಗಿ ವಿವರಿಸಬೇಕಿಲ್ಲ - ನಾವು ಯಾವ ರೀತಿಯ ಪುನರ್ಜನ್ಮವನ್ನು ಪಡೆಯಲಿದ್ದೆವೆ ಎಂಬುದಕ್ಕೆ ಸಂಬಂಧಿಸಿರುತ್ತದೆ: ನಾವು ನಾಯಿ, ಜಿರಳೆ, ಮನುಷ್ಯನ ಮೂಲ ದೇಹ ಮತ್ತು ಮನಸ್ಸಿನೊಂದಿಗೆ ಮರುಜನ್ಮ ಪಡೆಯಲಿದ್ದೇವೆಯೇ. ನಮಗೆ ಸಂಭವಿಸುವ ಕೆಲವು ವಿಷಯಗಳನ್ನು ಅನುಭವಿಸಲು ಮತ್ತು ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಲು, ನಾವು ಯಾವ ರೀತಿಯ ದೇಹ ಮತ್ತು ಮನಸ್ಸನ್ನು ಹೊಂದಿರುತ್ತೇವೆ. ಇಲ್ಲಿ ಇನ್ನೂ ಹಲವು ವಿವರಗಳಿವೆ, ಆದರೆ ಈ ಪರಿಚಯಾತ್ಮಕ ಉಪನ್ಯಾಸದಲ್ಲಿ ನಾನು ಕೇವಲ ಸಾಮಾನ್ಯ ತತ್ವಗಳ ಬಗ್ಗೆ ಚರ್ಚಿಸಲು ಬಯಸುತ್ತೇನೆ.
ನಿರ್ಣಾಯಕತೆ ಅಥವಾ ಸ್ವತಂತ್ರ ಇಚ್ಛಾಶಕ್ತಿ
ಒಂದೆಡೆ, ನಾವು ಒಂದು ರೀತಿಯ ನಡವಳಿಕೆಗಳನ್ನು ಪುನರಾವರ್ತಿಸುವುದನ್ನು ಮತ್ತು ನಮಗೆ ಸಂಭವಿಸುವುದನ್ನು ಅನುಭವಿಸುತ್ತೇವೆ; ಮತ್ತೊಂದೆಡೆ, ನಾವು ಇದನ್ನೆಲ್ಲಾ ಸಂತೋಷ ಮತ್ತು ಅಸಂತೋಷದ ಏರಿಳಿತದೊಂದಿಗೆ ಅನುಭವಿಸುತ್ತೇವೆ, ಇದು ಕೆಲವೊಮ್ಮೆ ನಮ್ಮ ನಡವಳಿಕೆಯೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಕೆಲವೊಮ್ಮೆ ಅದಕ್ಕೆ ಹೊಂದಿಕೆಯಾಗುವುದಿಲ್ಲ. ಮತ್ತು ಇದೆಲ್ಲವೂ ನಿರಂತರವಾಗಿ ಮೇಲೆ-ಕೆಳಗೆ, ಮೇಲೆ-ಕೆಳಗಾಗುತ್ತಿರುತ್ತದೆ ಮತ್ತು ಮುಂದೆ ಏನು ಬರಲಿದೆ ಎಂದು ನಮಗೆ ತಿಳಿದಿರುವುದಿಲ್ಲ. ಸಹಜವಾಗಿ, ನಮಗೆ ಆಗುತ್ತಿರುವುದೆಲ್ಲವೂ, ನಾವು ಮತ್ತು ನಮ್ಮ ಕರ್ಮದಿಂದ ಮಾತ್ರ ಉಂಟಾಗುವುದಿಲ್ಲ. ಇದು ವಿಶ್ವದಲ್ಲಿರುವ ಪ್ರತಿಯೊಬ್ಬರ ಮೇಲೆ ಮತ್ತು ಅವರ ಕರ್ಮ ಮತ್ತು ಅವರು ಏನು ಮಾಡುತ್ತಿದ್ದಾರೆ, ಜೊತೆಗೆ ಭೌತಿಕ ವಿಶ್ವದಲ್ಲಿಯೇ ಏನು ನಡೆಯುತ್ತಿದೆ ಎಂಬುದರ ಮೇಲೂ ಪರಿಣಾಮ ಬೀರುತ್ತದೆ – ಅಂದರೆ ಬ್ರಹ್ಮಾಂಡದ ಅಂಶಗಳು: ಹವಾಮಾನ, ಭೂಕಂಪಗಳು,ಇತ್ಯಾದಿ ವಿಷಯಗಳು. ಅದಕ್ಕಾಗಿಯೇ, ನಾವು ಮುಂದೆ ಏನನ್ನು ಅನುಭವಿಸಲಿದ್ದೇವೆ ಎಂದು ಊಹಿಸುವುದು ಬಹಳಾ ಕಷ್ಟ - ಅದರ ಮೇಲೆ ಪರಿಣಾಮ ಬೀರುವ ಅಂಶಗಳು ತುಂಬಾ ಸಂಕೀರ್ಣವಾಗಿವೆ ಮತ್ತು ವಾಸ್ತವದಲ್ಲಿ, ಅರ್ಥಮಾಡಿಕೊಳ್ಳಲು ಇದು ಅತ್ಯಂತ ಸಂಕೀರ್ಣವಾದ ವಿಷಯ ಎಂದು ಬುದ್ದ ಹೇಳಿದರು.
ಕರ್ಮದ ಬಗ್ಗೆ ಅನೇಕರು ಇದನ್ನು ಕೇಳಿರುವುದರಿಂದ ನಾವು ಇಲ್ಲಿ ಬಹಳಾ ನಿಖರವಾಗಿರಬೇಕು - ಇದು ನಿರ್ಣಾಯಕವಾದವೇ ಅಥವಾ ನಮಗೆ ಸ್ವತಂತ್ರ ಇಚ್ಛಾಶಕ್ತಿ ಇದೆಯೇ? ಇವೆರಡೂ ಸರಿಯಲ್ಲ, ಇವೆರಡೂ ವಿಪರೀತಗಳಾಗಿವೆ. ನಿರ್ಣಾಯಕವಾದವು, ಸಾಮಾನ್ಯವಾಗಿ ಬೇರೆಯವರು ನಾವು ಏನು ಮಾಡಲಿದ್ದೇವೆ ಅಥವಾ ನಾವು ಏನು ಅನುಭವಿಸಲಿದ್ದೇವೆ ಎಂಬುದನ್ನು ನಿರ್ಧರಿಸಿದ್ದಾರೆ ಎಂದು ಸೂಚಿಸುತ್ತದೆ – ಒಂದು ರೀತಿಯ ಬಾಹ್ಯ ಜೀವಿ, ಉನ್ನತ ಜೀವಿ ಇತ್ಯಾದಿ. ಬೌದ್ಧಧರ್ಮವು ಅದು ಹೀಗಿರುವುದಿಲ್ಲ ಎಂದು ಹೇಳುತ್ತದೆ; ನಾವು ಏನು ಮಾಡಬೇಕೆಂಬುದನ್ನು ಬೇರೆಯವರು ನಿರ್ಧರಿಸಿರುವುದಿಲ್ಲ, ನಾವು ಕೇವಲ ಕೈಗೊಂಬೆಗಳಾಗಿ, ಬೇರೆಯವರು ನಮಗಾಗಿ ಬರೆದ ಯಾವುದೋ ನಾಟಕದಲ್ಲಿ ನಟಿಸುತ್ತೇವೆ ಎಂಬಂತೆ ಇರುವುದಿಲ್ಲ.
ಮತ್ತೊಂದೆಡೆ, ಇಚ್ಛಾ ಸ್ವಾತಂತ್ರ್ಯವು, ರೆಸ್ಟೋರೆಂಟ್‌ನಲ್ಲಿ ಕುಳಿತಿರುವ ಯಾರೋ ಒಬ್ಬರು, ಮೆನು ಹಿಡಿದು ಏನನ್ನು ಕೊಂಡುಕೊಳ್ಳಬೇಕೆಂದು ನಿರ್ಧರಿಸುವಂತಿದೆ. ಜೀವನ ಹೀಗಿರುವುದಿಲ್ಲ. ಜೀವನ ಹೀಗಿದೆ ಎಂದು ಕಲ್ಪಿಸಿಕೊಳ್ಳುವುದು ತಪ್ಪು, ಇದು ಗೊಂದಲಮಯ ಎಂದು ಬೌದ್ಧಧರ್ಮ ಹೇಳುತ್ತದೆ. ಇದು ಪ್ರತ್ಯೇಕವಾದ "ನಾನು" ಇದೆ ಎಂದು ತೋರುತ್ತದೆ ಮತ್ತು ಇದನ್ನು ಅನುಭವಿಸಬಹುದು - ಜೀವನದಿಂದ ಬೇರ್ಪಟ್ಟ, ಅನುಭವದಿಂದ ಬೇರ್ಪಟ್ಟ, ಮತ್ತು ಪ್ರಸ್ತುತವಾಗಿ ನಡೆಯುತ್ತಿರುವ ಎಲ್ಲದರ ಹೊರಗೆ, ಜೀವನವನ್ನು ಮೆನುವಿನಂತೆ ನೋಡಬಹುದು ಮತ್ತು ಅಲ್ಲಿಂದ ವಸ್ತುಗಳನ್ನು ಆಯ್ಕೆ ಮಾಡಬಹುದು ಎಂಬಂತೆ ಇರುತ್ತದೆ. ಜೀವನದಿಂದ ಬೇರ್ಪಟ್ಟ "ನಾನು" ಎನ್ನುವುದು ಇಲ್ಲ, ಅಥವಾ ಅನುಭವದಿಂದ ಬೇರ್ಪಟ್ಟ "ನಾನು" ಇಲ್ಲ, ಮತ್ತು ನಮಗೆ ಏನಾಗಲಿದೆ ಎಂಬುದನ್ನು ನಾವು ಆಯ್ಕೆ ಮಾಡಬಹುದಾದ ಮೆನುವಿನಲ್ಲಿರುವ ಸಣ್ಣ ವಸ್ತುಗಳು, ನಾವು ಬಟನ್ ಒತ್ತದಾಕ್ಷಣ ವೆಂಡಿಂಗ್ ಮೆಷಿನ್‌ನಿಂದ ಹೊರಬರುವಂತಹದ್ದು ಅಸ್ತಿತ್ವದಲ್ಲಿಲ್ಲ. ಇದು ಎಷ್ಟು ಮೂರ್ಖತನದ ವಿಷಯ ಎಂದು ಅರಿಯಲು, ಇದು ಉಪಯುಕ್ತವಾದ ಚಿತ್ರ ಎಂದು ನಾನು ಭಾವಿಸುತ್ತೇನೆ. ಅನುಭವಗಳು ವೆಂಡಿಂಗ್ ಮೆಷಿನ್‌ನೊಳಗಿನ ಕ್ಯಾಂಡಿ ಬಾರ್‌ಗಳಂತೆ ಅಸ್ತಿತ್ವದಲ್ಲಿವೆ ಮತ್ತು ನೀವು ಯಾವುದನ್ನು ಬಯಸುತ್ತೀರಿ ಎಂಬುದನ್ನು ಆರಿಸಿಕೊಳ್ಳಿ; ಬಟನ್ ಒತ್ತಿ, ಹಣವನ್ನು ಹಾಕಿ, ಆಗ ಅದು ನಿಮಗೆ ಸಿಗುತ್ತದೆ. ಜೀವನವು ಹೀಗಿರುವುದಿಲ್ಲ, ಅಲ್ಲವೇ? "ಇಂದು, ನಾನು ಸಂತೋಷವನ್ನು ಅನುಭವಿಸುತ್ತೇನೆ ಮತ್ತು ಎಲ್ಲರೂ ನನಗೆ ಒಳ್ಳೆಯವರಾಗಿರುವುದನ್ನು ಅನುಭವಿಸುತ್ತೇನೆ" ಎಂದು ನಾವು ಮೊದಲೇ ನಿರ್ಧರಿಸುತ್ತೇವೆ ಎಂದಲ್ಲ. ನಂತರ ನಾವು ನಮ್ಮ ಹಣವನ್ನು ಜೀವನದ ಯಂತ್ರದಲ್ಲಿ ಹಾಕುತ್ತೇವೆ ಮತ್ತು ನಾವು ಆರಿಸಿಕೊಂಡದ್ದು ಹೊರಬರುತ್ತದೆ. ಅದು ಸ್ವತಂತ್ರವಾದ ಇಚ್ಛೆ, ಅಲ್ಲವೇ? ನಮಗೆ ಏನಾಗಲಿದೆ ಮತ್ತು ನಾವು ಏನು ಮಾಡಲಿದ್ದೇವೆ ಎಂಬುದನ್ನು ನಿರ್ಧರಿಸುವುದು ಸ್ವತಂತ್ರ ಇಚ್ಛೆ. ಆದರೆ ನಮಗೆ ಏನಾಗುತ್ತದೆ ಎಂಬುದು, ನಿರ್ಣಾಯಕತೆ ಅಥವಾ ಸಂಪೂರ್ಣ ಸ್ವತಂತ್ರ ಇಚ್ಛೆಯ ಈ ಎರಡು ವಿಪರೀತಗಳಿಗಿಂತ ಹೆಚ್ಚು ಸೂಕ್ಷ್ಮ ಮತ್ತು ಅತ್ಯಾಧುನಿಕವಾಗಿರುತ್ತದೆ.
ಕರ್ಮದ ಮೂಲವಾಗಿ ಗೊಂದಲ
ಬೌದ್ಧಧರ್ಮದಲ್ಲಿ ನಿಜವಾಗಿಯೂ ವಿಶಿಷ್ಟವಾದದ್ದು ಎಂದರೆ, ಬುದ್ಧನು ನಮ್ಮ ಸಂತೋಷ ಮತ್ತು ಅಸಂತೋಷವನ್ನು ಅನುಭವಿಸುವ ನಿರಂತರ ಏರಿಳಿತಕ್ಕೆ ಮತ್ತು ನಮಗೆ ಇಷ್ಟವಿಲ್ಲದ ಸಂದರ್ಭಗಳನ್ನು ಅನುಭವಿಸುವುದರ ಮೇಲೆ ನಮಗೆ ಯಾವುದೇ ನಿಯಂತ್ರಣವಿಲ್ಲದ ಎಲ್ಲಾ ರೀತಿಯ ವಿಷಯಗಳಿಗೆ ಇರುವ ಕಾರಣಗಳನ್ನು ಕಲಿಸಿದನು ಎಂಬುದನ್ನು ನಾವು ಈಗಾಗಲೇ ಈ ಉಪನ್ಯಾಸದಲ್ಲಿ ನೋಡಿದ್ದೇವೆ. ಕಾರಣವು, ನಮ್ಮ ಅನುಭವದ ಪ್ರತಿ ಕ್ಷಣದ ಭಾಗವಾಗಿರುತ್ತದೆ ಮತ್ತು ಈ ಸಿಂಡ್ರೋಮ್ ಅನ್ನು ಸಂಪೂರ್ಣವಾಗಿ ಶಾಶ್ವತಗೊಳಿಸುತ್ತಿದೆ - ಮತ್ತು ಆ ಕಾರಣವು ಗೊಂದಲವಾಗಿರುತ್ತದೆ. ಅಷ್ಟೇ ಅಲ್ಲ, ನಾವು ಗೊಂದಲದಿಂದ ವರ್ತಿಸಿದಾಗ - ವಿನಾಶಕಾರಿಯಾಗಿ ಅಥವಾ ರಚನಾತ್ಮಕವಾಗಿ - ಅದು "ನಿರಂತರ ಅಭ್ಯಾಸ" ಎಂದು ಕರೆಯಲ್ಪಡುವುದನ್ನು ಬಲಪಡಿಸುತ್ತದೆ - ನಿರಂತರವಾಗಿ ಗೊಂದಲದಿಂದ ವರ್ತಿಸುವ ಅಭ್ಯಾಸ - ಆದ್ದರಿಂದ ನಾವು ಪ್ರತಿ ಕ್ಷಣವೂ ಗೊಂದಲದಿಂದ ವರ್ತಿಸುವುದನ್ನು ಮುಂದುವರಿಸುತ್ತೇವೆ.
ಈ ಗೊಂದಲ ಅಂದರೆ ಏನು? ಬೌದ್ಧಧರ್ಮದಲ್ಲಿ ಅದು ಬಹಳ ಆಳವಾದ ವಿಷಯವಾಗಿರುತ್ತದೆ; ಆದರೆ ನಾವು ಅದನ್ನು ಸರಳವಾಗಿ ಹೇಳುವುದಾದರೆ, ನಾನು ಹೇಗೆ ಅಸ್ತಿತ್ವದಲ್ಲಿದ್ದೇನೆ, ನೀವು ಹೇಗೆ ಅಸ್ತಿತ್ವದಲ್ಲಿದ್ದೀರಿ ಮತ್ತು ಎಲ್ಲರೂ ಹೇಗೆ ಅಸ್ತಿತ್ವದಲ್ಲಿದ್ದಾರೆ ಎಂಬುದರ ಕುರಿತಾದ ಗೊಂದಲವಾಗಿರುತ್ತದೆ. ಉದಾಹರಣೆಗೆ, ನಾನು ಬ್ರಹ್ಮಾಂಡದ ಕೇಂದ್ರ ಎಂದು ನಾವು ಭಾವಿಸುತ್ತೇವೆ; ನಾನು ಅತ್ಯಂತ ಮುಖ್ಯವಾದವನು; ನಾನು ಯಾವಾಗಲೂ ನಾನು ಹೇಳಿದ್ದನ್ನೇ ಪಡೆಯಬೇಕು; ನಾನು ಯಾವಾಗಲೂ ಸರಿ; ಜನರು ಯಾವಾಗಲೂ ನನಗಾಗಿ ಸಮಯ ಹೊಂದಿರಬೇಕು. ನಮ್ಮ ಸೆಲ್ ಫೋನ್‌ಗಳ ವಿಷಯದಲ್ಲಿ ನಾವು ಈ ಮನೋಭಾವವನ್ನು ಗುರುತಿಸಬಹುದು: ನಾನು ಯಾವುದೇ ಸಮಯದಲ್ಲಾದರೂ, ಯಾರಿಗಾದರೂ ಕರೆ ಮಾಡಿ, ಅವರು ಏನು ಮಾಡುತ್ತಿದ್ದರೂ ಅವರಿಗೆ ಅಡ್ಡಿಯಾಗಬಹುದು ಮತ್ತು ಅವರು ನನಗೆ ಲಭ್ಯವಿರಬೇಕು, ಏಕೆಂದರೆ ನಾನು ಹೇಳಬೇಕಾಗಿರುವುದು ಅವರು ಈಗ ಮಾಡಬಹುದಾದ ಯಾವುದೇ ವಿಷಯಕ್ಕಿಂತ ಹೆಚ್ಚು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಗೊಂದಲದ ಆಧಾರದ ಮೇಲೆ, ನಾವು ಯಾರೊಂದಿಗಾದರೂ ವಿನಾಶಕಾರಿಯಾಗಿ ವರ್ತಿಸಬಹುದು - ಅವರ ಮೇಲೆ ಕೂಗಾಡಬಹುದು, ಅವರೊಂದಿಗೆ ಕ್ರೂರವಾಗಿ ವರ್ತಿಸಬಹುದು - ಮತ್ತು ನಾನು ಹಾಗೆ ಮಾಡುತ್ತೇನೆ ಏಕೆಂದರೆ ಅವರು ನಾನು ಬಯಸಿದಂತೆ ನಡೆಯುತ್ತಿಲ್ಲ ಅಥವಾ ಅವರು ನನಗೆ ಇಷ್ಟವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಅವರು ನನಗೆ ಇಷ್ಟವಾದದ್ದನ್ನೇ ಮಾಡಬೇಕು ಏಕೆಂದರೆ ನನಗೆ ಬೇಕಾಗಿರುವುದು, ಅವರು ಬಯಕೆಗಿಂತ, ನಿಸ್ಸಂದೇಹವಾಗಿ ಹೆಚ್ಚು ಮುಖ್ಯವಾಗಿದೆ. ಅಥವಾ, ಇದೇ ಗೊಂದಲದ ಆಧಾರದ ಮೇಲೆ, ನಾವು ಯಾರಿಗಾದರೂ ಒಳ್ಳೆಯದನ್ನು ಮಾಡಬಹುದು, ಅವರಿಗೆ ದಯೆ ತೋರಿಸಬಹುದು, ಏಕೆಂದರೆ ಅವರು ನನ್ನನ್ನು ಇಷ್ಟಪಡಬೇಕೆಂದು ನಾನು ಬಯಸುತ್ತೇನೆ; ಅವರು ನನ್ನೊಂದಿಗೆ ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ. ಅವರಿಗೆ ನಾನು ಬೇಕು ಎಂಬುದು ನನ್ನ ಬಯಕೆಯಾಗಿರುತ್ತದೆ, ಅಂದರೆ ನನ್ನ ಅಭಿಪ್ರಾಯದಲ್ಲಿ, ಬೇರೆಯವರಿಗೆ ಯಾವ ಸಹಾಯದ ಅಗತ್ಯವಿದೆಯೋ ಅದನ್ನು ನಾನು ನೀಡುತ್ತಿದ್ದೇನೆ ಎಂದು ಭಾವಿಸಲು ಬಯಸುತ್ತೇನೆ, ಆದ್ದರಿಂದ ನಾನು ನನ್ನ ಮಗಳಿಗೆ ಅವಳ ಮಕ್ಕಳನ್ನು ಹೇಗೆ ಬೆಳೆಸಬೇಕು ಮತ್ತು ಅವಳ ಮನೆಯನ್ನು ಹೇಗೆ ನೋಡಿಕೊಳ್ಳಬೇಕು ಎಂದು ಬುದ್ಧಿವಾದ ಹೇಳುತ್ತೇನೆ. ಅದು ಸಹಾಯಕವಾಗಿದೆಯೇ? ನಮ್ಮ ಮಗಳು ನಮ್ಮ ಸಲಹೆ ಮತ್ತು ಸಹಾಯವನ್ನು ಬಯಸುತ್ತಾಳೋ ಇಲ್ಲವೋ ಎಂಬುದು ಮುಖ್ಯವಲ್ಲ, ಆದರೆ ನಾವು ಅತ್ಯಂತ ಮುಖ್ಯ ಎಂದು ನಾವು ಭಾವಿಸುತ್ತೇವೆ ಮತ್ತು ನಾವು ಅಗತ್ಯವಾಗಿರಲು ಬಯಸುತ್ತೇವೆ, ಮತ್ತು ಅವಳ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದು ನಮ್ಮ ಮಗಳಿಗಿಂತ ನಮಗೆ ಚೆನ್ನಾಗಿ ತಿಳಿದಿದೆ ಮತ್ತು ಅವಳು ಅದನ್ನು ನಮ್ಮಿಂದ ಕೇಳಬೇಕಾಗಿದೆ ಎಂದು ಬಯಸುತ್ತೇವೆ.
ಈ ರೀತಿಯ ಗೊಂದಲವಿದ್ದು, ಅದು ವಿನಾಶಕಾರಿ ಮತ್ತು ರಚನಾತ್ಮಕ ನಡವಳಿಕೆ ಎರಡರ ಹಿಂದೆಯೂ ಇರುತ್ತದೆ. ಈ ಗೊಂದಲದಿಂದಾಗಿ ನಾವು ಈ ಏರಿಳಿತದ ಚಕ್ರವನ್ನು ಶಾಶ್ವತಗೊಳಿಸುತ್ತೇವೆ. ಆದ್ದರಿಂದ ನಾವು ಇದನ್ನು ಹೇಗೆ ನಿವಾರಿಸಬಹುದು ಎಂಬುದನ್ನು ಪರಿಶೀಲಿಸಬೇಕು.
ಗೊಂದಲವನ್ನು ನಮ್ಮಿಂದ ನಿವಾರಿಸುವುದು
ಈ ಕರ್ಮ ಪ್ರವೃತ್ತಿಗಳು ಮತ್ತು ಅಭ್ಯಾಸಗಳು ಹೇಗೆ ಹಣ್ಣಾಗುತ್ತವೆ ಎಂಬುದರ ಕಾರ್ಯವಿಧಾನವನ್ನು ನಾವು ನೋಡಿದಾಗ, ವಿಶೇಷವಾಗಿ ಪ್ರವೃತ್ತಿಗಳನ್ನು ಗಮನಿಸಿದಾಗ, ಇದೆಲ್ಲವೂ ನಾವು ಅನುಭವಿಸುವ ಈ ಸಂತೋಷ ಮತ್ತು ಅಸಂತೋಷದ ಏರಿಳಿತದ ನಮ್ಮ ಮನೋಭಾವಕ್ಕೆ ಸಂಬಂಧಿಸಿರುತ್ತದೆ ಎಂಬುದನ್ನು ತಿಳಿಯುತ್ತೇವೆ. ನಾವು ಸಂತೋಷ ಮತ್ತು ಅಸಂತೋಷವನ್ನು ಅನುಭವಿಸುವುದರೊಂದಿಗೆ ಎರಡು ಮಾನಸಿಕ ಅಂಶಗಳನ್ನು ಹೊಂದಿರುತ್ತೇವೆ ಮತ್ತು ಅವು ಇಲ್ಲಿ ಗಮನಾರ್ಹವಾಗಿವೆ. ಮೊದಲನೆಯದನ್ನು "ಹಂಬಲ" ಎಂದು ಕರೆಯಲಾಗುತ್ತದೆ. ನಾವು ಸಂತೋಷವನ್ನು ಅನುಭವಿಸಿದಾಗ, ನಾವು ಹಂಬಲಿಸುತ್ತೇವೆ - ಅಂದರೆ ನಮಗೆ ತುಂಬಾ ಬಲವಾದ ಬಯಕೆ ಇರುತ್ತದೆ - ಅದರಿಂದ ಬೇರ್ಪಡಬಾರದು ಎಂದು ಹಂಬಲಿಸುತ್ತೇವೆ. "ನನ್ನನ್ನು ಬಿಟ್ಟು ಹೋಗಬೇಡ, ಯಾವಾಗಲೂ ನನ್ನ ಜೊತೆ ಇರು! ನೀನು ಹೆಚ್ಚು ಹೊತ್ತು ಇರಬಹುದೇ?" - ನಾವು ಯಾರೊಂದಿಗಾದರೂ ಇರುವುದನ್ನು ಆನಂದಿಸುತ್ತಿರುವಾಗ ಹೀಗೆ ಆಶಿಸುತ್ತೇವೆ. ಅಥವಾ ನಾವು ಚಾಕೊಲೇಟ್ ಕೇಕ್ ತಿನ್ನುವುದನ್ನು ಆನಂದಿಸುತ್ತಿದ್ದರೆ ಮತ್ತು ಸಂತೋಷವನ್ನು ಅನುಭವಿಸುತ್ತಿದ್ದರೆ, ನಾವು ಆ ಸಂತೋಷದಿಂದ ಬೇರ್ಪಡಲು ಬಯಸುವುದಿಲ್ಲ. ಅದಕ್ಕಾಗಿಯೇ, ನಾವು ಹೆಚ್ಚು ಹೆಚ್ಚು ಹೆಚ್ಚು ತಿನ್ನುತ್ತಲೇ ಇರುತ್ತೇವೆ, ಅಲ್ಲವೇ? ಅದೇ ಹಂಬಲವಾಗಿರುತ್ತದೆ. ನಾವು ಅಸಂತೋಷವನ್ನು ಅನುಭವಿಸುತ್ತಿರುವಾಗ, ಸಾಧ್ಯವಾದಷ್ಟು ಬೇಗ ಅದರಿಂದ ಬೇರ್ಪಡಲು ನಾವು ಹಾತೊರೆಯುತ್ತೇವೆ. ಇವೆರಡರ ಆಧಾರವೂ ಎರಡನೇ ಮಾನಸಿಕ ಅಂಶವಾಗಿರುತ್ತದೆ - ನಾವು ಅನುಭವಿಸುತ್ತಿರುವ "ನಾನು" ಎಂಬುದು, ಒಂದು ಘನವಾದ "ನಾನು" ಎಂಬುದನ್ನು ಗುರುತಿಸುವ ಬಲವಾದ ಮನೋಭಾವ. ನಾನು ಈ ಸಂತೋಷವನ್ನು ಮತ್ತು ನನಗೆ ಸಂತೋಷವನ್ನು ನೀಡುವ ಯಾವುದನ್ನಾದರೂ ಹೆಚ್ಚು ಹೆಚ್ಚು ಹೊಂದಿರಬೇಕು ಮತ್ತು ಅದರಿಂದ ಬೇರ್ಪಡಬಾರದು. ನನಗೆ ಇಷ್ಟವಿಲ್ಲದಿರುವುದರಿಂದ ನಾನು ಬೇರ್ಪಡಬೇಕು. ನೀವು ಹೇಳುತ್ತಿರುವುದು ನನಗೆ ಇಷ್ಟವಿಲ್ಲ, ಆದ್ದರಿಂದ ನೀವು ಬಾಯಿ ಮುಚ್ಚಿಕೊಳ್ಳಿ ಅಥವಾ ನಾನು ನಿಮ್ಮ ಮೇಲೆ ಕೂಗಾಡುತ್ತೇನೆ.
ನಮ್ಮ ಜೀವನದಲ್ಲಿ, ಈ ಹಂಬಲದಿಂದ ಮತ್ತು ನಡೆಯುತ್ತಿರುವ ಸಂಗತಿಗಳೊಂದಿಗೆ, ಘನವಾದ "ನಾನು" ಎಂಬ ಬಲವಾದ ಗುರುತಿಸುವಿಕೆಯೊಂದಿಗೆ ಏರಿಳಿತದ ಸಂತೋಷ ಮತ್ತು ಅಸಂತೋಷವನ್ನು ಅನುಭವಿಸಿದಾಗ - ಇದು ಗೊಂದಲವನ್ನು ಆಧರಿಸಿರುತ್ತದೆ - ಇದು ಈ ಎಲ್ಲಾ ಕರ್ಮ ಪ್ರವೃತ್ತಿಗಳನ್ನು ಪಕ್ವಗೊಳಿಸಲು ಕಾರಣವಾಗುತ್ತದೆ. ಈ ರೀತಿಯಲ್ಲಿ, ನಾವು ನಮ್ಮ ಏರಿಳಿತದ ಸಂತೋಷ ಮತ್ತು ಅಸಂತೋಷವನ್ನು ಶಾಶ್ವತಗೊಳಿಸುತ್ತಿದ್ದೇವೆ ಮತ್ತು ನಮ್ಮ ಹಿಂದಿನ ಎಲ್ಲಾ ನಡವಳಿಕೆಗಳನ್ನು ಪುನರಾವರ್ತಿಸುತ್ತಿದ್ದೇವೆ, ಏಕೆಂದರೆ ಆ ಪ್ರವೃತ್ತಿಗಳಿಂದ ಪಕ್ವವಾಗುವುದು ಇದೇ. ನಿಜವಾದ ಭಯಾನಕ ವಿಷಯವೆಂದರೆ, ಈ ಗೊಂದಲವು ಸಂತೋಷ ಮತ್ತು ಅಸಂತೋಷದ ಪ್ರತಿ ಕ್ಷಣದಲ್ಲೂ ಇರುತ್ತದೆ. ಮತ್ತು ಇದು ಸಂತೋಷ ಮತ್ತು ಅಸಂತೋಷದ ಹೆಚ್ಚಿನ ಕ್ಷಣಗಳನ್ನು ಶಾಶ್ವತಗೊಳಿಸುತ್ತದೆ, ಅವು ಕೂಡ ಗೊಂದಲದೊಂದಿಗೆ ಇರುತ್ತವೆ. ನಾವು ಈಗ ಅನುಭವಿಸುತ್ತಿರುವ ಗೊಂದಲವು, ನಾವು ಸಂತೋಷ ಮತ್ತು ಅಸಂತೋಷವನ್ನು ಅನುಭವಿಸುತ್ತಿದ್ದಾಗ ಇದ್ದ ನಮ್ಮ ಗೊಂದಲದ ಪರಿಣಾಮವಾಗಿರುತ್ತದೆ.
ಈ ಅನಿಯಂತ್ರಿತವಾಗಿ ಮರುಕಳಿಸುವ ಚಕ್ರ, ಈ ಸ್ವಯಂ-ಶಾಶ್ವತ ಚಕ್ರ - ಇದನ್ನೇ ಬೌದ್ಧಧರ್ಮದಲ್ಲಿ "ಸಂಸಾರ" ಎಂದು ಕರೆಯಲಾಗುತ್ತದೆ. ನಾವು ಈ ಗೊಂದಲವನ್ನು ನಿವಾರಿಸಲು ಸಾಧ್ಯವಾದರೆ, ಇಡೀ ಕರ್ಮ ವ್ಯವಸ್ಥೆಯು ಬೇರ್ಪಡುತ್ತದೆ ಮತ್ತು ನಾವು ಸಂಸಾರದಿಂದ ಮುಕ್ತರಾಗುತ್ತೇವೆ. ಗೊಂದಲವನ್ನು ಸರಿಯಾದ ತಿಳುವಳಿಕೆಯಿಂದ ಬದಲಾಯಿಸಿದರೆ - ಇದರ ಪೂರ್ಣ ಅರ್ಥವನ್ನು ಇಲ್ಲಿ ವಿವರಿಸುವುದಿಲ್ಲ, ಸರಳವಾದ ಅರ್ಥವನ್ನು ತಿಳಿಸುವೆ - ಗೊಂದಲವನ್ನು ಸರಿಯಾದ ತಿಳುವಳಿಕೆಯಿಂದ ಬದಲಾಯಿಸಿದರೆ, ಈ ಘನವಾದ "ನಾನು" ಎಂಬುದಕ್ಕೆ ಯಾವುದೇ ಆಧಾರವಿರುವುದಿಲ್ಲ - "ನನಗೆ ಇದು ಬೇಕು ಮತ್ತು ಅದು ಬೇಡ" ಎಂಬುದಕ್ಕೆ ಯಾವುದೇ ಆಧಾರವಿರುವುದಿಲ್ಲ. ಯಾವುದೇ ಹಂಬಲವಿರುವುದಿಲ್ಲ, ಆದ್ದರಿಂದ ಈ ಪ್ರವೃತ್ತಿಗಳು ಮತ್ತು ಅಭ್ಯಾಸಗಳನ್ನು ಸಕ್ರಿಯಗೊಳಿಸಲು ಏನೂ ಇರುವುದಿಲ್ಲ. ಮತ್ತು ಈ ಪ್ರವೃತ್ತಿಗಳು ಮತ್ತು ಅಭ್ಯಾಸಗಳನ್ನು ಸಕ್ರಿಯಗೊಳಿಸಲು ಏನೂ ಇಲ್ಲದಿದ್ದರೆ, ನಿಮ್ಮಲ್ಲಿ ಪ್ರವೃತ್ತಿಗಳು ಮತ್ತು ಅಭ್ಯಾಸಗಳು ಇನ್ನೂ ಇವೆ ಎಂದು ಹೇಳಲು ಸಾಧ್ಯವಿಲ್ಲ.
ನಾನು ಒಂದು ಉದಾಹರಣೆ ನೀಡಲು ಪ್ರಯತ್ನಿಸುತ್ತೇನೆ. ಡೈನೋಸಾರ್‌ಗಳನ್ನು ನೋಡುವ ಪ್ರವೃತ್ತಿ ಇದ್ದರೆ, ಡೈನೋಸಾರ್‌ಗಳು ಅಳಿದುಹೋದಾಗ, ನೀವು ಕಾಡಿನ ಮೂಲಕ ನಡೆಯುವಾಗ ಡೈನೋಸಾರ್‌ಗಳನ್ನು ನೋಡುವ ಪ್ರವೃತ್ತಿ ಇರುವುದಿಲ್ಲ, ಅಲ್ಲವೇ? ಹಿಂದೆ ಈ ಪ್ರವೃತ್ತಿ ಇತ್ತು: ನಾನು ಕಾಡಿನ ಮೂಲಕ ನಡೆಯುವಾಗ ನಾನು ಯಾವಾಗಲೂ ಡೈನೋಸಾರ್‌ಗಳನ್ನು ನೋಡುತ್ತಿದ್ದೆ. ಈಗ ಯಾವುದೇ ಡೈನೋಸಾರ್‌ಗಳಿಲ್ಲ, ಆದ್ದರಿಂದ ಡೈನೋಸಾರ್‌ಗಳನ್ನು ನೋಡುವ ಪ್ರವೃತ್ತಿ ಇರುವುದಿಲ್ಲ. ಆ ಉದಾಹರಣೆಯ ಪ್ರಕಾರ, ಹಣ್ಣಾಗುವ ಪ್ರವೃತ್ತಿಯನ್ನು ಉಂಟುಮಾಡಲು ಏನೂ ಇಲ್ಲದಿದ್ದಾಗ - ನಿಮ್ಮ ಮುಂದೆ ನಡೆಯುವ ಡೈನೋಸಾರ್, ಡೈನೋಸಾರ್ ಹಣ್ಣಾಗುವುದನ್ನು ನೋಡುವ ಪ್ರವೃತ್ತಿಯನ್ನು ಉಂಟುಮಾಡುತ್ತದೆ – ಆ ಪ್ರವೃತ್ತಿಯನ್ನು ಸಕ್ರಿಯಗೊಳಿಸಲು ಏನೂ ಇಲ್ಲದಿದ್ದರೆ, ನಿಮ್ಮಲ್ಲಿ ಆ ಪ್ರವೃತ್ತಿಯು ಇನ್ನು ಮುಂದೆ ಇರುವುದಿಲ್ಲ. ಮತ್ತು ಕರ್ಮದ ಪ್ರವೃತ್ತಿಗಳು ಇನ್ನು ಮುಂದೆ ಹಣ್ಣಾಗದಿದ್ದಲ್ಲಿ, ಯಾವುದೇ ಪ್ರವೃತ್ತಿಗಳಿಲ್ಲದ ಕಾರಣ, ನಾವು ಇನ್ನು ಮುಂದೆ ಸಂತೋಷ ಮತ್ತು ದುಃಖವನ್ನು ಅನುಭವಿಸುವುದಿಲ್ಲ, ಮತ್ತು ನಾವು ಖಂಡಿತವಾಗಿಯೂ ಅದರೊಂದಿಗೆ ಯಾವುದೇ ಗೊಂದಲವನ್ನು ಅನುಭವಿಸುವುದಿಲ್ಲ; ಅದು ಕೂಡ ಮಾಯವಾಗುತ್ತದೆ.
ಈ ಸಂಸಾರದ ಪರಿಸ್ಥಿತಿಯಿಂದ ನಾವು ಸಂಪೂರ್ಣವಾಗಿ ಮುಕ್ತರಾಗುವ ಮಾರ್ಗ ಇದು. ನಾವು ಇನ್ನು ಮುಂದೆ ಸಂತೋಷ ಮತ್ತು ದುಃಖದ ಈ ಅತೃಪ್ತಿಕರ, ಅಸುರಕ್ಷಿತ ಏರಿಳಿತವನ್ನು ಅನುಭವಿಸುವುದಿಲ್ಲ, ಬದಲಿಗೆ ನಮ್ಮಲ್ಲಿ ವಿಭಿನ್ನ ರೀತಿಯ ಸಂತೋಷವಿರುತ್ತದೆ, ಇದರ ಗುಣಮಟ್ಟವು ಬಹಳಾ ವಿಭಿನ್ನವಾಗಿ, ಧೃಡವಾಗಿರುತ್ತದೆ - ಇದು ಗೊಂದಲದೊಂದಿಗೆ ಬೆರೆತ ಸಂತೋಷದ ಪ್ರಕಾರವಾಗಿರುವುದಿಲ್ಲ, ಮತ್ತು "ನಾನು ಆಟವನ್ನು ಗೆದ್ದಿದ್ದೇನೆಮ ಮತ್ತು ಇದು ನನ್ನ ಪ್ರತಿಫಲವಾಗಿದೆ" ಎಂಬಂತಹ ಸಂತೋಷದ ಪ್ರಕಾರವಾಗಿರುವುದಿಲ್ಲ. ಕಠಿಣ ಪರಿಸ್ಥಿತಿಯಿಂದ ಮುಕ್ತರಾಗುವುದರಿಂದ ಅನುಭವಿಸುವ ಒಂದು ರೀತಿಯ ಸಂತೋಷವಿದು. ನಿಖರವಾದ ಉದಾಹರಣೆಯಲ್ಲದಿದ್ದರೂ, ಇದಕ್ಕೆ ಹತ್ತಿರವಾದ ಒಂದು ಸರಳ ಉದಾಹರಣೆಯಿದು ಎಂದು ನಾನು ಭಾವಿಸುತ್ತೇನೆ - ನಾವು ದಿನದ ಕೊನೆಯಲ್ಲಿ ನಮ್ಮ ಬಿಗಿಯಾದ ಬೂಟುಗಳನ್ನು ತೆಗೆದಾಗ ನಾವು ಅನುಭವಿಸುವ ಸಂತೋಷ - ನಾವು ಈ ನೋವಿನಿಂದ ಮುಕ್ತರಾಗಿದ್ದೇವೆ ಎಂಬುದು ಒಂದು ಸಂತೋಷದಾಯಕ ಪರಿಹಾರ.
ಅಲ್ಲದೆ ವಿಮೋಚನೆಯೊಂದಿಗೆ, ನಮ್ಮ ಕ್ರಿಯೆಗಳು ಇನ್ನು ಮುಂದೆ ಕರ್ಮದ ಈ ಕಡ್ಡಾಯ ಪ್ರಚೋದನೆಗಳಿಂದ ನಡೆಸಲ್ಪಡುವುದಿಲ್ಲ, ಅವುಗಳ ಕಾರಣದಿಂದ ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವುದಿಲ್ಲ, ಕೆಲವು ವಿಷಯಗಳನ್ನು ಅನುಭವಿಸುವುದಿಲ್ಲ. ಬದಲಾಗಿ, ನಾವು ವಿಮೋಚನೆಯನ್ನು ಮೀರಿ, ಬುದ್ಧನಾಗಲು ಕೆಲಸ ಮಾಡುತ್ತಿದ್ದರೆ, ನಮ್ಮ ಕ್ರಿಯೆಗಳನ್ನು ಪ್ರೇರೇಪಿಸುವ ವಿಷಯವು ಸಹಾನುಭೂತಿಯಾಗಿರುತ್ತದೆ - ಇತರರು ತಮ್ಮ ದುಃಖ ಮತ್ತು ಆ ದುಃಖದ ಕಾರಣಗಳಿಂದ ಮುಕ್ತರಾಗಬೇಕೆಂಬ ಬಯಕೆ.
ಮುಕ್ತಾಯದ ಮಾತುಗಳು
ಕರ್ಮದೊಂದಿಗೆ ಸಂಬಂಧಿಸಿದ ಕೆಲವು ತತ್ವಗಳಿಗೆ ಇದು ಮೂಲಭೂತ ಪರಿಚಯವಾಗಿದೆ. ಹೇಳಬಹುದಾದ ಮತ್ತು ವಿವರಿಸಬಹುದಾದ ಬಹಳಷ್ಟು ವಿಷಯಗಳಿವೆ, ಇನ್ನೂ ಹೆಚ್ಚು, ಹೆಚ್ಚು, ಹೆಚ್ಚಿನವುಗಳಿವೆ. ಅದರಲ್ಲಿ ಕೆಲವನ್ನು ಕೆಲವು ಸಾಮಾನ್ಯ ತತ್ವಗಳೊಂದಿಗೆ ವಿವರಿಸಲಾಗಿದೆ, ಈ ರೀತಿಯ ಕ್ರಿಯೆಯು ಈ ರೀತಿಯ ಪರಿಣಾಮಕ್ಕೆ ಕಾರಣವಾಗುತ್ತದೆ, ಮತ್ತು ಈ ಅಂಶವಿದ್ದರೆ, ಫಲಿತಾಂಶವು ಬಲವಾಗಿರುತ್ತದೆ, ಮತ್ತು ಅದು ಇಲ್ಲದಿದ್ದರೆ - ನೀವು ಉದ್ದೇಶಪೂರ್ವಕವಾಗಿ ಏನನ್ನಾದರೂ ಮಾಡುವುದಕ್ಕೆ ವಿರುದ್ಧವಾಗಿ ಆಕಸ್ಮಿಕವಾಗಿ ಏನನ್ನಾದರೂ ಮಾಡಿದರೆ - ಪರಿಣಾಮವು ವಿಭಿನ್ನವಾಗಿರುತ್ತದೆ ಇತ್ಯಾದಿ. ಇಲ್ಲಿ ಬಹಳಷ್ಟು ವಿವರಗಳಿವೆ.
ಅಲ್ಲದೆ, ಪ್ರಸ್ತುತದಲ್ಲಿ ನಿಜವಾಗಿ ಏನು ಹಣ್ಣಾಗಲಿದೆ ಎಂಬುದರ ವಿಷಯದಲ್ಲಿ, ಅದನ್ನು ತತ್ವಗಳೊಂದಿಗೆ ಸಾಮಾನ್ಯೀಕರಿಸುವುದು ಬಹಳಾ ಕಷ್ಟ, ಏಕೆಂದರೆ ಅದು ನಮ್ಮ ಸುತ್ತಲೂ ನಡೆಯುತ್ತಿರುವ ಎಲ್ಲದರಿಂದ ಪ್ರಭಾವಿತವಾಗಿರುತ್ತದೆ. ನಮಗೆ ಈಗ ಏನಾಗುತ್ತದೆ ಎಂಬುದನ್ನು ಸಾಮಾನ್ಯ ತತ್ವಗಳಿಂದ ನಾವು ಸಾಮಾನ್ಯೀಕರಿಸಲು ಸಾಧ್ಯವಿಲ್ಲ, ಏಕೆಂದರೆ ಈಗ ಏನಾಗುತ್ತದೆ ಎಂಬುದು ನಡೆಯುತ್ತಿರುವ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ, ಅದಕ್ಕೆ ಕಾರಣವೇನು ಎಂದು ಯೋಚಿಸಿ. ಕರ್ಮವು ಎಲ್ಲರನ್ನೂ ಅವರವರ ಕಡೆಯಿಂದ ಆ ರಸ್ತೆಗೆ ಕರೆತಂದಿತು, ಸಂಚಾರ ಪರಿಸ್ಥಿತಿಗಳು, ಹವಾಮಾನ ಮತ್ತು ರಸ್ತೆಯ ಸ್ಥಿತಿ. ಅನೇಕ ವಿಷಯಗಳು ಈಗ ಹಣ್ಣಾಗುತ್ತಿರುವ ಅಪಘಾತದ ನಿರ್ದಿಷ್ಟ ವಿಷಯಕ್ಕೆ ಕಾರಣವಾಗಿರುತ್ತವೆ.
ಈ ವಿಷಯದಲ್ಲಿ ನಮಗೆ ಆಸಕ್ತಿ ಇದ್ದರೆ, ಅದರ ಹಲವು ವಿಭಿನ್ನ ಅಂಶಗಳನ್ನು ಅನ್ವೇಷಿಸಲು ಹೆಚ್ಚಿನ ಅವಕಾಶವಿದೆ. ನಾವು ಕರ್ಮದ ಬಗ್ಗೆ ಹೆಚ್ಚು ಕಲಿತಷ್ಟೂ, ಕರ್ಮದ ನಿಯಂತ್ರಣದಲ್ಲಿರುವುದನ್ನು ಜಯಿಸಲು ಅದು ಹೆಚ್ಚು ಸಹಾಯಕವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ, ಇದರಿಂದ ನಾವು ಸಂಸಾರದ ದುಃಖದಿಂದ ಮುಕ್ತರಾಗುವುದಲ್ಲದೆ, ಎಲ್ಲರಿಗೂ ಸಹಾಯ ಮಾಡುವಂತಹ ಉತ್ತಮ ಸ್ಥಾನದಲ್ಲಿರುತ್ತೇವೆ.
ನಿಮ್ಮಲ್ಲಿ ಯಾವ ಪ್ರಶ್ನೆಗಳಿವೆ?
ಪ್ರಶ್ನೆಗಳು
ಈ ಸಂದರ್ಭದಲ್ಲಿ, ಅಪರಾಧ ಭಾವನೆಯು ಅಪ್ರಸ್ತುತವಾಗಿರುತ್ತದಯೇ? ಅಪರಾಧ ಭಾವನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಅಲ್ಲವೇ?
ಹೌದು. ಕರ್ಮದ ಬೌದ್ಧ ವಿವರಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅಪರಾಧ ಭಾವನೆಯು, ಬಲವಾದ ಘನವಾದ "ನಾನು" ಎಂಬುದನ್ನು ಪ್ರತ್ಯೇಕವಾದ ಅಸ್ತಿತ್ವವಾಗಿ ಮತ್ತು ನಾನು ಮಾಡಿದ್ದನ್ನು ಬೇರೆ ಯಾವುದೋ ಪ್ರತ್ಯೇಕ ಅಸ್ತಿತ್ವವಾಗಿ, ಎರಡು ಪಿಂಗ್-ಪಾಂಗ್ ಚೆಂಡುಗಳಂತೆ ಯೋಚಿಸುವುದರ ಮೇಲೆ ಆಧಾರಿತವಾಗಿದೆ. ತದನಂತರ "ನಾನು" ಎಂಬ ಅಸ್ತಿತ್ವವು ಎಷ್ಟು ಕೆಟ್ಟದಾಗಿದೆ ಮತ್ತು "ನಾನು ಮಾಡಿದ್ದು" ಎಂಬ ಅಸ್ತಿತ್ವವು ಎಷ್ಟು ಕೆಟ್ಟದಾಗಿದೆ ಎಂದು ನಾವು ಯೋಚಿಸುತ್ತೇವೆ. ಆದ್ದರಿಂದ ಈ ಎರಡು ಘನ ಅಸ್ತಿತ್ವಗಳ ಬಗ್ಗೆ ತೀರ್ಪು ನೀಡುವುದು ಮತ್ತು ನಂತರ ಬಿಡದಿರುವುದು - ಇದು ಅಪರಾಧಿ ಭಾವನೆಯಾಗಿರುತ್ತದೆ. ಅದು ನಿಮ್ಮ ಮನೆಯಿಂದ ಕಸವನ್ನು ಎಂದಿಗೂ ಎಸೆಯದೆ ಅದನ್ನು ಒಳಗೆ ಇಟ್ಟುಕೊಂಡು, ಅದು ಎಷ್ಟು ಕೆಟ್ಟದಾಗಿದೆ, ಅದು ಎಷ್ಟು ದುರ್ವಾಸನೆ ಬೀರುತ್ತದೆ, ಎಷ್ಟು ಕೊಳಕಾಗಿದೆ ಎಂದು ಹೇಳುತ್ತಾ, ಅದನ್ನು ಎಂದಿಗೂ ಬಿಡದಿರುವಂತೆ ಇರುತ್ತದೆ.
ಇದು ಬಹಳಾ ಸ್ಪಷ್ಟ ಮತ್ತು ತಾರ್ಕಿಕವಾಗಿರುವಂತೆ ತೋರುತ್ತದೆ, ಮತ್ತು ನಾನು ಇಡೀ ವ್ಯವಸ್ಥೆಯನ್ನು ಮತ್ತು ಗೊಂದಲ, ಪ್ರಚೋದನೆ, ಪ್ರವೃತ್ತಿಗಳು ಮತ್ತು ಎಲ್ಲವನ್ನೂ ಹೇಗೆ ನಿವಾರಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಅದನ್ನು ಕೇವಲ ಅರ್ಥಮಾಡಿಕೊಳ್ಳುವುರಿಂದ, ಅದರ ಅನುಭವ ಅಥವಾ ಬಲವಂತವಾಗಿ ವರ್ತಿಸುವ ಪ್ರಚೋದನೆಯಿಂದ ಮುಕ್ತರಾಗಲು ಸಾಕಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ.
ನಿಜ. ಹೌದು, ಅದಕ್ಕಾಗಿಯೇ ಮೊದಲು ನಾವು ನೈತಿಕ ಸ್ವನಿಯಂತ್ರಣವನ್ನು ಅಭ್ಯಾಸ ಮಾಡಬೇಕಾಗಿದೆ. ನೆನಪಿಡಿ, "ನೀವು ಇಂದು ಎಷ್ಟು ಕೆಟ್ಟದಾದ ಉಡುಗೆಯನ್ನು ಧರಿಸಿದ್ದೀರಿ" ಎಂದು ಹೇಳಲು ನನಗೆ ಅನಿಸಿದಾಗ ಮತ್ತು ನಾನು ನಿಜವಾಗಿಯೂ ಅದನ್ನು ಹೇಳುವ ಸಮಯದ ನಡುವೆ ಸ್ವಲ್ಪ ಅಂತರವಿರುತ್ತದೆ ಎಂದು ನಾವು ಹೇಳಿದ್ದೇವೆ. ನಾವು ಆ ಜಾಗವನ್ನು ಹಿಡಿಯಲು ಸಾಧ್ಯವಾದರೆ, ನಾನು ಈ ವ್ಯಕ್ತಿಗೆ, ಅವಳು ಕೆಟ್ಟ ಉಡುಗೆ ಧರಿಸಿದ್ದಾಳೆ ಎಂದು ಹೇಳಿದರೆ ಅದರ ಪರಿಣಾಮವೇನು ಎಂಬುದನ್ನು ನಿರ್ಧರಿಸುವ ಸಾಮರ್ಥ್ಯ ನಮಗಿರುತ್ತದೆ. ಮತ್ತು ಹಾಗೆ ಹೇಳುವುದು ಲಾಭದಾಯಕವಲ್ಲ ಎಂದು ನಾವು ನೋಡಿದರೆ, ನಾವು ಅದನ್ನು ಹೇಳುವುದಿಲ್ಲ. ನಾವು ಇಲ್ಲಿಂದ ಪ್ರಾರಂಭಿಸುತ್ತೇವೆ - ನೈತಿಕ ಶಿಸ್ತು ಮತ್ತು ಸ್ವಯಂ ನಿಯಂತ್ರಣದೊಂದಿಗೆ.
ಅಲ್ಲದೆ, ನಾನು ಏನನ್ನಾದರೂ ಮಾಡಲು ಬಯಸಿದಾಗ ನಾನು ಯಾವ ಭಾವನೆಯನ್ನು ಅನುಭವಿಸುತ್ತಿದ್ದೇನೆ? ಎಂದು ನಾವು ಪರಿಶೀಲಿಸಬಹುದು. ದುರಾಸೆಯಂತಹ ತೊಂದರೆಗೊಳಿಸುವ ಭಾವನೆಯನ್ನು ಆಧರಿಸಿ ಏನನ್ನಾದರೂ ಮಾಡುವುದು ನನ್ನ ಬಯಕೆಯೇ? ಅದು ಕೋಪವನ್ನು ಆಧರಿಸಿದೆಯೇ; ಅದು ಮುಗ್ಧತೆಯನ್ನು ಆಧರಿಸಿದೆಯೇ? ನಿಮ್ಮ ಉಡುಗೆ ಕೆಟ್ಟದು ಎಂದು ಹೇಳುವುದು ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಾನು ಭಾವಿಸುತ್ತಿದ್ದೇನೆಯೇ? ಅಥವಾ ಏನನ್ನಾದರೂ ಮಾಡುವ ನನ್ನ ಬಯಕೆಯು ದಯೆ ಮತ್ತು ಹೆಚ್ಚು ಸಕಾರಾತ್ಮಕ ವಿಷಯಗಳನ್ನು ಆಧರಿಸಿದೆಯೇ? ಅದಕ್ಕಾಗಿಯೇ ಗೊಂದಲದ ಭಾವನೆ ಅಥವಾ ಮನೋಭಾವದ ವ್ಯಾಖ್ಯಾನವು ಬಹಳಾ ಸಹಾಯಕವಾಗಿರುತ್ತದೆ: ಇದು ಉದ್ಭವಿಸಿದಾಗ, ನಾವು ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುತ್ತೇವೆ ಮತ್ತು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುತ್ತೇವೆ.
ನೀವು ಮನಸ್ಸಿನ ಶಾಂತಿಯನ್ನು ಕಳೆದುಕೊಂಡಾಗ ನೀವು ಗುರುತಿಸಬಹುದು: ನಿಮ್ಮ ಹೃದಯ ಸ್ವಲ್ಪ ವೇಗವಾಗಿ ಬಡಿಯುತ್ತದೆ; ನಿಮಗೆ ಸ್ವಲ್ಪ ಆತಂಕವಾಗುತ್ತದೆ. ಆದ್ದರಿಂದ ನಾವು ಸೂಕ್ಷ್ಮ ವಿಷಯಗಳನ್ನು ಗಮನಿಸಲು ಪ್ರಯತ್ನಿಸುತ್ತೇವೆ, ಉದಾಹರಣೆಗೆ, ನಾನು ಹೆಮ್ಮೆಯಿಂದ ಏನನ್ನಾದರೂ ಹೇಳುತ್ತಿದ್ದೇನೆಯೇ? ಉದಾಹರಣೆಗೆ, ಯಾರಾದರೂ, "ನನಗೆ ಅದು ಅರ್ಥವಾಗಲಿಲ್ಲ" ಎಂದು ಹೇಳಿದಾಗ, ನೀವು, "ಓಹ್, ಆದರೆ ನನಗೆ ಅರ್ಥವಾಯಿತು!" ಎಂದು ಹೇಳುತ್ತೀರಿ. ನೀವು ಸ್ವಲ್ಪ ಆತಂಕವನ್ನು ಗಮನಿಸುವಿರಿ, ಇದರ ಹಿಂದೆ ಸ್ವಲ್ಪ ಹೆಮ್ಮೆ ಇದೆ, ಸ್ವಲ್ಪ ದುರಹಂಕಾರವಿದೆ, ಆದ್ದರಿಂದ ನೀವು ಇದರ ಮೇಲೆ ಗಮನಹರಿಸುತ್ತೀರಿ.
ಆದರೆ ವಾಸ್ತವವನ್ನು ಅರ್ಥಮಾಡಿಕೊಳ್ಳುವುದು, ಅಂದರೆ ಶೂನ್ಯತೆಯ ತಿಳುವಳಿಕೆಯನ್ನು ಪಡೆಯುವುದು ಇತ್ಯಾದಿ, ಬಹಳಾ ಕಷ್ಟ, ಮತ್ತು ನಾವು ಅದನ್ನು ಪಡೆದಾಗಲೂ, ನಾವು ಅದನ್ನು ಯಾವಾಗಲೂ ಹೊಂದಿರುವಂತೆ, ಅದಕ್ಕೆ ನಮ್ಮನ್ನು ಒಗ್ಗಿಸಿಕೊಳ್ಳಬೇಕು. ಅದಕ್ಕಾಗಿಯೇ ನಾವು ವಿನಾಶಕಾರಿಯಾಗಿ ವರ್ತಿಸುವುದನ್ನು ತಡೆಯಲು, ನೈತಿಕ ಸ್ವಯಂ-ಶಿಸ್ತಿನಿಂದ ಪ್ರಾರಂಭಿಸುತ್ತೇವೆ.
ನಾನು ಸ್ವಲ್ಪ ದಾರಿ ತಪ್ಪಿರುವೆ. ಈ ಸಂತೋಷ ಮತ್ತು ಅಸಂತೋಷವನ್ನು ಶಾಶ್ವತಗೊಳಿಸುವ ಎರಡು ಭಾವನೆಗಳಿವೆ, ಈ ಏರಿಳಿತಗಳು ಎಂದು ನೀವು ಹೇಳಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇವುಗಳಲ್ಲಿ ಒಂದು ಹಂಬಲ, ಮತ್ತು ಇನ್ನೊಂದು ಯಾವುದು ಎಂದು ನೀವು ಹೇಳುವಿಇರ?
ನಾನು ವಿವರಿಸುತ್ತಿರುವುದು ಕರ್ಮ ಪ್ರವೃತ್ತಿಗಳನ್ನು ಸಕ್ರಿಯಗೊಳಿಸುವ ಎರಡು ಅಂಶಗಳು - ಇದು ಅವಲಂಬಿತ ಹುಟ್ಟಿನ ಹನ್ನೆರಡು ಕೊಂಡಿಗಳ ಬೋಧನೆಗಳಿಂದ ಬಂದಿದೆ. ಒಂದು ಹಂಬಲ, ಇನ್ನೊಂದು - ನಾನು ಸರಳೀಕರಿಸುತ್ತಿದ್ದೆ - ಇನ್ನೊಂದನ್ನು ವಾಸ್ತವದಲ್ಲಿ "ಪಡೆಯುವ ಮನೋಭಾವ ಅಥವಾ ಭಾವನೆ" ಎಂದು ಕರೆಯಲಾಗುತ್ತದೆ ಮತ್ತು ಇದು ಸುಮಾರು ಐದು ವಿಭಿನ್ನ ಸಾಧ್ಯತೆಗಳ ಪಟ್ಟಿಯಾಗಿರುತ್ತದೆ. ಇದರಿಂದ ಫಲಿತಾಂಶವನ್ನು ಪಡೆಯುವುದರಿಂದ, ಅತ್ಯಂತ ಪ್ರಮುಖವಾದದ್ದು, ಏನು ನಡೆಯುತ್ತಿದೆ ಮತ್ತು ನಾವು ಏನು ಅನುಭವಿಸುತ್ತಿದ್ದೇವೆ ಎಂಬುದರೊಂದಿಗೆ ಘನವಾದ "ನಾನು" ಅನ್ನು ಗುರುತಿಸುವುದಾಗಿರುತ್ತದೆ.
ಇದು ಘನವಾದ "ನಾನು" ಎಂಬುದನ್ನು ಒಂದು ವಿಷಯದೊಂದಿಗೆ ಸಂಬಂಧಿತವಾಗಿ ಗುರುತಿಸುತ್ತಿಸಲಾಗುತ್ತಿದೆಯೇ? ಇಲ್ಲಿ ಗೊಂದಲವಿದೆ ಎಂಬುದು ಸ್ಪಷ್ಟವಾಗಿದೆ ಮತ್ತು ನಾವು ಅದನ್ನು ನೋಡಿಕೊಳ್ಳಬೇಕು ಮತ್ತು ಗೊಂದಲವನ್ನು ನಿವಾರಿಸಬೇಕು. ಆದರೆ ನಾವು ಏನನ್ನು ಗೊಂದಲಗೊಳಿಸುತ್ತಿದ್ದೇವೆ ಮತ್ತು ಯಾವುದರೊಂದಿಗೆ ಗೊಂದಲಗೊಳಿಸುತ್ತಿದ್ದೇವೆ?
ಇದು ಸರಳ ರೀತಿಯಲ್ಲಿ ಉತ್ತರಿಸಬಹುದಾದ ಸುಲಭವಾದ ಪ್ರಶ್ನೆಯಲ್ಲ. ನಾವು "ನಾನು", ಸಾಂಪ್ರದಾಯಿಕವಾಗಿ ಅಸ್ತಿತ್ವದಲ್ಲಿರುವ "ನಾನು" ಮತ್ತು ಅಸ್ತಿತ್ವದಲ್ಲಿಲ್ಲದ ಸುಳ್ಳು "ನಾನು"ವಿನ ನಡುವೆ ಗೊಂದಲಕ್ಕೊಳಗಾಗುತ್ತಿದ್ದೇವೆ. ನಾವು ಏನು ಮಾಡುತ್ತಿದ್ದೇವೆ ಎಂದರೆ, ನಿಜವಾದ "ನಾನು" ಅಸಾಧ್ಯವಾದ ರೀತಿಯಲ್ಲಿ ಅಸ್ತಿತ್ವದಲ್ಲಿದೆ ಎಂದು ಊಹಿಸುವುತ್ತಿದ್ದೇವೆ, ಅದು ಉತ್ಪ್ರೇಕ್ಷೆಯಾಗಿರುತ್ತದೆ. ಅದು ಇಲ್ಲದಿರುವ ಏನನ್ನಾದರೂ ಸೇರಿಸುವುದಾಗಿರುತ್ತದೆ. ಉದಾಹರಣೆಗೆ: ನಾನು ಸಂತೋಷವಾಗಿದ್ದೇನೆ ಅಥವಾ ನಾನು ಅಸಂತೋಷವಾಗಿದ್ದೇನೆ. ನೀವು ಅಸಂತೋಷವಾಗಿದ್ದೀರಿ ಎಂದಲ್ಲ; ನಾನು ಅಸಂತೋಷವಾಗಿದ್ದೇನೆ. ಸಂತೋಷ ಅಥವಾ ಅಸಂತೋಷದ ಅನುಭವವಿದ್ದಾಗ, ನಾವು ಅದನ್ನು ನಾನು ಸಂತೋಷವಾಗಿದ್ದೇನೆ ಎಂಬ ಪದಗಳಲ್ಲಿ ಉಲ್ಲೇಖಿಸುತ್ತೇವೆ. ನೀವು ಸಂತೋಷವಾಗಿದ್ದೀರಿ ಅಥವಾ ಬೇರೆ ಯಾರೋ ಸಂತೋಷವಾಗಿದ್ದಾರೆ ಎಂದಲ್ಲ - ನಾನು ಸಂತೋಷವಾಗಿದ್ದೇನೆ. ಆ "ನಾನು" ಎನ್ನುವುದು ಸಾಂಪ್ರದಾಯಿಕವಾದ "ನಾನು" ಆಗಿರುತ್ತದೆ, ಅದು ಅಸ್ತಿತ್ವದಲ್ಲಿದೆ.
ಈ ಸಾಂಪ್ರದಾಯಿಕ "ನಾನು" ಗಾಗಿ ಒಂದು ಉದಾಹರಣೆಯನ್ನು ಬಳಸೋಣ. ನಾವು ಒಂದು ಚಲನಚಿತ್ರವನ್ನು ನೋಡುತ್ತಿದ್ದೇವೆ ಮತ್ತು ಚಲನಚಿತ್ರವು "ಗಾನ್ ವಿಥ್ ದಿ ವಿಂಡ್" ಎಂದು ಹೇಳೋಣ. ಅದರಲ್ಲಿ, ಒಂದು ಸಂತೋಷದ ದೃಶ್ಯ, ನಂತರ ಒಂದು ಅಸಂತೋಷದ ದೃಶ್ಯ, ಮತ್ತು ನಂತರ ಮತ್ತೊಂದು ಸಂತೋಷದ ದೃಶ್ಯವಿದೆ. ಸರಿ, ಇಲ್ಲಿ ಏನು ನಡೆಯುತ್ತಿದೆ? ಈ ಸಂತೋಷದ ದೃಶ್ಯವು "ಗಾನ್ ವಿಥ್ ದಿ ವಿಂಡ್" ನ ಒಂದು ದೃಶ್ಯವಾಗಿದೆ ಮತ್ತು ಆ ಅಸಂತೋಷದ ದೃಶ್ಯವು "ಗಾನ್ ವಿಥ್ ದಿ ವಿಂಡ್" ನ ಮತ್ತೊಂದು ದೃಶ್ಯವಾಗಿದೆ. "ಗಾನ್ ವಿಥ್ ದಿ ವಿಂಡ್" ಎಂಬುದು ಸಾಂಪ್ರದಾಯಿಕವಾಗಿ ಇಡೀ ವಿಷಯವನ್ನು, ಎಲ್ಲಾ ದೃಶ್ಯಗಳನ್ನು, ಸಂತೋಷ ಮತ್ತುಅಸಂತೋಷ ಎರಡನ್ನೂ ನೇಮಿಸುವ ವಿಧಾನವಾಗಿದೆ. ಆದರೆ, "ಗಾನ್ ವಿಥ್ ದಿ ವಿಂಡ್" ಎಂಬುದು ಕೇವಲ ಒಂದು ಶೀರ್ಷಿಕೆ, ಕೇವಲ ಒಂದು ಹೆಸರಾಗಿದೆ. ಆದರೆ ನಾವು "ಗಾನ್ ವಿಥ್ ದಿ ವಿಂಡ್" ಬಗ್ಗೆ ಮಾತನಾಡುವಾಗ, ನಾವು ಕೇವಲ ಶೀರ್ಷಿಕೆಯ ಬಗ್ಗೆ ಮಾತನಾಡುವುದಿಲ್ಲ. ನಾವು ನಿಜವಾದ ಚಲನಚಿತ್ರದ ಬಗ್ಗೆ ಮಾತನಾಡುತ್ತಿದ್ದೇವೆ - ಶೀರ್ಷಿಕೆ ಸೂಚಿಸುವ ಚಲನಚಿತ್ರದ ಬಗ್ಗೆ. ಅದು ಸಾಂಪ್ರದಾಯಿಕವಾಗಿ ಅಸ್ತಿತ್ವದಲ್ಲಿರುವ ಸಿನಿಮಾ: ಅದು ಅಸ್ತಿತ್ವದಲ್ಲಿದೆ. ಆ ಸಿನಿಮಾ ಆ ಪ್ರತಿಯೊಂದು ದೃಶ್ಯದಿಂದ ಪ್ರತ್ಯೇಕವಾದದ್ದಲ್ಲ - ಆ ದೃಶ್ಯಗಳಿಂದ ಪ್ರತ್ಯೇಕವಾದ ಮತ್ತು ಸ್ವತಂತ್ರವಾದ ಸಿನಿಮಾ ಸುಳ್ಳು ಸಿನಿಮಾ ಆಗಿರುತ್ತದೆ. ಅದು ಅಸ್ತಿತ್ವದಲ್ಲಿಲ್ಲ. ಸಾಂಪ್ರದಾಯಿಕವಾಗಿ ಅಸ್ತಿತ್ವದಲ್ಲಿರುವ ಸಿನಿಮಾ ಎಂದರೆ ದೃಶ್ಯಗಳ ಆಧಾರದ ಮೇಲೆ ಲೇಬಲ್ ಮಾಡಬಹುದಾದ ಅಥವಾ ಆರೋಪಿಸಬಹುದಾದದ್ದು ಎಂದು ನಾವು ಹೇಳುತ್ತೇವೆ.
ಅದೇ ರೀತಿಯಾಗಿ, ನಮ್ಮ ಜೀವನದಲ್ಲಿ ಸಂತೋಷದ ಕ್ಷಣಗಳಿವೆ, ನಮ್ಮ ಜೀವನದಲ್ಲಿ ಅಸಂತೋಷದ ಕ್ಷಣಗಳಿವೆ, ಇದನ್ನೆಲ್ಲ ನಾವು ಹೇಗೆ ಉಲ್ಲೇಖಿಸುತ್ತೇವೆ? ನಾವು ಇದನ್ನು "ನಾನು" ಎಂದು ಉಲ್ಲೇಖಿಸುತ್ತೇವೆ - ಸಾಂಪ್ರದಾಯಿಕವಾದ "ನಾನು" ಎಂಬುದು ಅಸ್ತಿತ್ವದಲ್ಲಿದೆ: ಅದು ನೀನಲ್ಲ, ಅದು "ನಾನು". ಅದೇ ರೀತಿ, ಆ ಸಿನಿಮಾ "ಗಾನ್ ವಿಥ್ ದಿ ವಿಂಡ್", ಅದು "ಸ್ಟಾರ್ ವಾರ್ಸ್" ಅಲ್ಲ. ಆದರೆ ಸಂತೋಷ ಮತ್ತು ಅಸಂತೋಷವನ್ನು ಅನುಭವಿಸುವ ಮತ್ತು ಆ ಕ್ಷಣಗಳನ್ನು ಅನುಭವಿಸುವ ಕ್ಷಣಗಳಿಂದ ಪ್ರತ್ಯೇಕವಾದ "ನಾನು" ಇಲ್ಲ. ಅದು ಸುಳ್ಳು "ನಾನು", ಅಸ್ತಿತ್ವದಲ್ಲಿಲ್ಲದ "ನಾನು". ಮತ್ತು "ನಾನು" ಎನ್ನುವುದು ಕೇವಲ ಒಂದು ಪದ; ಆದ್ದರಿಂದ "ನಾನು" ಎಂಬ ಪದವು, ಜೀವನದ ಎಲ್ಲಾ ಅನುಭವದ ಕ್ಷಣಗಳ ಆಧಾರದ ಮೇಲೆ ಉಲ್ಲೇಖಿಸುತ್ತಿರುವುದು ಅಷ್ಟೇ.
ಹಾಗಾದರೆ, ಇಲ್ಲಿರುವ ಗೊಂದಲವೆಂದರೆ, ಈ ದೇಹದೊಳಗೆ ಒಂದು ಪ್ರತ್ಯೇಕವಾದ "ನಾನು" ಇದೆ, ಅದು ಇಲ್ಲ ವಾಸಿಸುತ್ತಿದೆ, ಹೇಗೋ ಅದರೊಂದಿಗೆ ಸಂಪರ್ಕ ಹೊಂದಿದೆ, ಗುಂಡಿಗಳನ್ನು ಒತ್ತುತ್ತದೆ, ಮತ್ತು ಈಗ "ನಾನು" ನನ್ನ ಪಾದದಲ್ಲಿ ನೋವನ್ನು ಅನುಭವಿಸುತ್ತಿದೆ, ಮತ್ತು ನಾನು ತುಂಬಾ ಅಸಂತೋಷವಾಗಿದ್ದೇನೆ ಮತ್ತು ನನಗೆ ಇದು ಇಷ್ಟವಿಲ್ಲ ಎಂದು ಭಾವಿಸುವುದಾಗಿರುತ್ತದೆ. ದೇಹ ಎಂಬ ಅನ್ಯಲೋಕದ ವಸ್ತುವಿನೊಳಗೆ ಆ ಸಂಪೂರ್ಣ ಅನುಭವದಿಂದ ಪ್ರತ್ಯೇಕವಾದ "ನಾನು" ಇದೆ ಎಂಬಂತೆ. ನಂತರ, ಈ ಪ್ರತ್ಯೇಕವಾದ "ನಾನು" - ಈ ಸುಳ್ಳು "ನಾನು" - ಅನ್ನು ಸಾಂಪ್ರದಾಯಿಕವಾದ "ನಾನು" ನೊಂದಿಗೆ ಗೊಂದಲಗೊಳಿಸುವ ಮತ್ತು ಆ ಸುಳ್ಳು "ನಾನು" ನೊಂದಿಗೆ ಗುರುತಿಸುವ ಆಧಾರದ ಮೇಲೆ, ನಾವು ಹಂಬಲದಿಂದ, "ನಾನು ಈ ಅಸಂತೋಷದಿಂದ, ಈ ನೋವಿನಿಂದ, ದೈಹಿಕ ನೋವಿನಿಂದ ನಾನು ಅನುಭವಿಸುವ ಅತೃಪ್ತಿಯಿಂದ ಬೇರ್ಪಡಬೇಕು" ಎಂದು ಭಾವಿಸುತ್ತೇವೆ. ಖಂಡಿತವಾಗಿಯೂ, ನಮಗೆ ಘನವಾದ "ನಾನು" ಎಂಬ ತಪ್ಪು ಕಲ್ಪನೆ ಇಲ್ಲದಿದ್ದಾಗ, ನಾವು ಅಲ್ಲಿಯೇ ಕುಳಿತು ನೋವನ್ನು ಅನುಭವಿಸುತ್ತಲೇ ಇರುತ್ತೇವೆ ಎಂದಲ್ಲ. ನಮ್ಮ ಪಾದ ಬೆಂಕಿಯಲ್ಲಿದ್ದರೆ, ನಾವು ನಮ್ಮ ಪಾದವನ್ನು ಬೆಂಕಿಯಿಂದ ಹೊರತೆಗೆಯುತ್ತೇವೆ ಎಂಬುದು ನಿಜ, ಆದರೆ ಅದರ ಹಿಂದಿರುವ "ನಾನು" ಎಂಬ ಪರಿಕಲ್ಪನೆಯು ಬಹಳಾ ಭಿನ್ನವಾಗಿದೆ.ಇಲ್ಲಿ ಯಾವುದೇ ಭೀತಿ ಇರುವುದಿಲ್ಲ.
ಆದರೆ ಸುಳ್ಳು "ನಾನು" ಮತ್ತು ಸಾಂಪ್ರದಾಯಿಕ "ನಾನು" ಎಂಬ ಪರಿಕಲ್ಪನೆಯು ಬಹಳಾ ಸಂಕೀರ್ಣವಾದದ್ದು ಮತ್ತು ಸುಧಾರಿತವಾಗಿರುತ್ತದೆ. ಆದ್ದರಿಂದ, ಈಗ ಅದನ್ನು ಬಿಡೋಣ. ಈ ಸಂಜೆಗೆ ಸಮರ್ಪಣೆಯೊಂದಿಗೆ ಇಲ್ಲಿಗೆ ಕೊನೆಗೊಳಿಸೋಣ. ನಾವು ಹೀಗೆ ಯೋಚಿಸೋಣ: ಇದರಿಂದ ಯಾವುದೇ ತಿಳುವಳಿಕೆ, ಯಾವುದೇ ಸಕಾರಾತ್ಮಕ ಶಕ್ತಿ ಗಳಿಸಿದ್ದರೂ, ಅದು ಹೆಚ್ಚು-ಹೆಚ್ಚು ಆಳವಾಗಿ ಹೋಗಲಿ, ಹೆಚ್ಚು-ಹೆಚ್ಚು ಬಲವಾಗಿ ಬೆಳೆಯಲಿ ಮತ್ತು ಎಲ್ಲರ ಪ್ರಯೋಜನಕ್ಕಾಗಿ ಜ್ಞಾನೋದಯವನ್ನು ತಲುಪಲು ಒಂದು ಕಾರಣವಾಗಿ ಕಾರ್ಯನಿರ್ವಹಿಸಲಿ.