ಅಹಿಂಸೆ ಮತ್ತು ಆಧ್ಯಾತ್ಮಿಕ ಮೌಲ್ಯಗಳು

ಇಂದಿನ ಆಧುನಿಕ ಜಗತ್ತಿನಲ್ಲಿ ಅಹಿಂಸೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಕುರಿತು ಮಾತನಾಡಲು ನನಗೆ ಅವಕಾಶ ನೀಡಲಾಗಿದೆ. ವೈದ್ಯಕೀಯ ಅಥವಾ ಬೋಧನಾ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸುವ ನಿಮ್ಮಂತಹ ವಿದ್ಯಾರ್ಥಿಗಳಿಗೆ ಈ ವಿಷಯಗಳು ಅತ್ಯಂತ ಮಹತ್ವದ್ದಾಗಿವೆ; ಏಕೆಂದರೆ, ಇತರರಿಗೆ ಸಹಾಯ ಮಾಡುವುದನ್ನೇ ಒಳಗೊಂಡಿರುವ ಈ ವೃತ್ತಿಗಳನ್ನು ಅಹಿಂಸಾತ್ಮಕವಾಗಿ ನಿರ್ವಹಿಸುವುದು ಅತ್ಯಗತ್ಯ ಎಂದು ನಾನು ನಂಬುತ್ತೇನೆ. ವಾಸ್ತವವಾಗಿ, ಇತರರಿಗೆ ಸಹಾಯ ಮಾಡುವುದೇ ಹಿಂಸೆಗೆ ವಿರುದ್ಧವಾದುದಾಗಿದೆ. ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ನಿಮ್ಮ ಕೆಲಸಕ್ಕೆ ಹೆಚ್ಚಿನ ಅರ್ಥಪೂರ್ಣತೆಯನ್ನು ನೀಡಬಲ್ಲದು; ಇದು ನಿಮ್ಮ ವೃತ್ತಿಯನ್ನು ಕೇವಲ ಹಣ ಗಳಿಸುವ ಸಾಧನವಾಗಿ ನೋಡುವ ಬದಲು, ಜನರಿಗೆ ಅರ್ಥಪೂರ್ಣ ರೀತಿಯಲ್ಲಿ ಸಹಾಯ ಮಾಡುವ ಅವಕಾಶವಾಗಿ ಗೌರವಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಎಲ್ಲಾ ಧರ್ಮಗಳಂತೆಯೇ ಬೌದ್ಧಧರ್ಮವೂ ಅಹಿಂಸೆಯ ಬಗ್ಗೆ ವಿಸ್ತಾರವಾಗಿ ಮಾತನಾಡುತ್ತದೆ ಹಾಗು ವಿವಿಧ ಪಂಥಗಳು ಇದನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತವೆ. ನಾವು ಸಾಮಾನ್ಯವಾಗಿ ಹಿಂಸೆಯನ್ನು ನಿರ್ದಿಷ್ಟ ಕ್ರಿಯೆಗಳ ದೃಷ್ಟಿಯಿಂದ ನೋಡುತ್ತೇವೆ, ವಿಶೇಷವಾಗಿ ಹಿಂಸಾತ್ಮಕ ಕೃತ್ಯಗಳ ಮೂಲಕ ಮತ್ತು ಅಂತಹ ನಡವಳಿಕೆಯಿಂದ ದೂರವಿರುವುದನ್ನೇ ಅಹಿಂಸೆ ಎಂದು ಭಾವಿಸುತ್ತೇವೆ. ಆದರೆ, ಬೌದ್ಧಧರ್ಮವು ಈ ಪರಿಕಲ್ಪನೆಯನ್ನು ಮುಖ್ಯವಾಗಿ ಮನಸ್ಥಿತಿ ಹಾಗು ನಮ್ಮ ಆಂತರಿಕ ಮನೋಭಾವದ ದೃಷ್ಟಿಕೋನದಿಂದ ಪರಿಗಣಿಸುತ್ತದೆ. ಏಕೆಂದರೆ, ನಾವು ಹಿಂಸಾತ್ಮಕ ಕೃತ್ಯವನ್ನು ನಿಜವಾಗಿಯೂ ಎಸಗುತ್ತೇವೆಯೋ ಇಲ್ಲವೋ ಎಂಬುದು ಅಷ್ಟೊಂದು ಮುಖ್ಯವಲ್ಲ; ಅಂತಹ ಕೃತ್ಯಕ್ಕೆ ಪ್ರಚೋದನೆ ನೀಡುವುದು ಹಿಂಸಾತ್ಮಕ ಮನಸ್ಥಿತಿಯೇ ಆಗಿರುತ್ತದೆ. ಆದ್ದರಿಂದ, ಇತರರಿಗೆ ಹಾನಿ ಮಾಡುವ ಹಿಂಸಾತ್ಮಕ ಆಲೋಚನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಕೇವಲ ದೈಹಿಕ ಹಾನಿಯಿಂದ ದೂರವಿರುವುದು ಸಾಕಾಗುವುದಿಲ್ಲ. ಹೀಗಾಗಿ, ಆ ಹಿಂಸಾತ್ಮಕ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಜಯಿಸುವ ವಿಧಾನಗಳನ್ನು ಕಲಿಯುವುದು ಅತ್ಯಗತ್ಯ.

ಹಿಂಸೆ ಮತ್ತು ಅಹಿಂಸೆಯ ಮೂರು ಬಗೆಗಳು

ಬೌದ್ಧ ಬೋಧನೆಗಳಲ್ಲಿ ಹಿಂಸೆಯನ್ನು, ಅಂದರೆ ಮನಸ್ಸಿನ ಹಿಂಸಾತ್ಮಕ ಸ್ಥಿತಿಯನ್ನು, ಮೂರು ಬಗೆಗಳಾಗಿ ವಿಂಗಡಿಸಲಾಗಿದೆ. ಇಲ್ಲಿ 'ಹಿಂಸೆ' ಎಂಬ ಪರಿಕಲ್ಪನೆಯನ್ನು 'ಕ್ರೌರ್ಯ' ಎಂದೂ ಅರ್ಥೈಸಬಹುದು. ಹಿಂಸಾತ್ಮಕವಾಗಿ ವರ್ತಿಸುವುದು ಎಂದರೆ ಕೇವಲ ಬಲ ಅಥವಾ ಶಕ್ತಿಯ ಪ್ರಯೋಗವಲ್ಲ; ಏಕೆಂದರೆ, ಕೆಲವೊಮ್ಮೆ ಯಾರಾದರೂ ತಮಗಾಗಲಿ ಅಥವಾ ಇತರರಿಗಾಗಲಿ ಹಾನಿಯಾಗುವುದನ್ನು ತಡೆಯಲು ನಾವು ಬಲವಂತದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಮಗು ರಸ್ತೆಗೆ ಓಡುತ್ತಿದ್ದು, ಕಾರಿನ ಡಿಕ್ಕಿಯಿಂದಾಗಿ ಪ್ರಾಣಾಪಾಯದ ಸಾಧ್ಯತೆಯಿದ್ದರೆ, ನೀವು ಸುಮ್ಮನೆ "ಅಯ್ಯೋ, ದಯವಿಟ್ಟು ರಸ್ತೆಗೆ ಓಡಬೇಡ" ಎಂದು ಹೇಳಿ ಕೈಕಟ್ಟಿ ನಿಲ್ಲುವುದಿಲ್ಲ. ಅಂತಹ ಸಂದರ್ಭದಲ್ಲಿ, ನೀವು ಮಗುವನ್ನು ಸಾಕಷ್ಟು ಬಲಪ್ರಯೋಗ ಮಾಡಿ ತಡೆಯಬೇಕಾಗುತ್ತದೆ. ಆದರೆ, ಅದು ಹಿಂಸೆಯಾಗುವುದಿಲ್ಲ. ಹಿಂಸೆಯು ಹಾನಿ ಉಂಟುಮಾಡುವ ಉದ್ದೇಶದಿಂದ ಉಂಟಾಗುತ್ತದೆ ಮತ್ತು ಅಂತಹ ಹಾನಿಯನ್ನು ವಿವಿಧ ರೀತಿಯಲ್ಲಿ ಎಸಗಬಹುದು. ಬೌದ್ಧಧರ್ಮವು ಮೂರು ನಿರ್ದಿಷ್ಟ ಬಗೆಗಳನ್ನು ಗುರುತಿಸಿದರೂ, ನಾವು ಇತರ ಬಗೆಗಳನ್ನೂ ಪರಿಗಣಿಸಬಹುದು ಎಂದು ನಾನು ಭಾವಿಸುತ್ತೇನೆ.

ಇತರರ ವಿಷಯದಲ್ಲಿ ಅಹಿಂಸೆಯನ್ನು ಪಾಲಿಸುವುದು

ಹಿಂಸೆಯ ಮೊದಲನೆಯ ಬಗೆಯೆಂದರೆ ಇತರರ ಬಗ್ಗೆ ಹಿಂಸಾತ್ಮಕ ಆಲೋಚನೆಗಳನ್ನು ಹೊಂದುವುದು. ಇದು ಸಹಾನುಭೂತಿಯ ಸಂಪೂರ್ಣ ಕೊರತೆ ಹಾಗೂ ಇತರರಿಗೆ ಹಾನಿ ಮಾಡುವ ಅಥವಾ ಕೆಟ್ಟದ್ದನ್ನು ಉಂಟಾಗಬೇಕೆಂದು ಬಯಸುವ ಕ್ರೂರ ಮನಸ್ಥಿತಿಯಿಂದ ಕೂಡಿದೆ. ಇದಕ್ಕೆ ತದ್ವಿರುದ್ಧವಾಗಿ, ಸಹಾನುಭೂತಿಯು ಇತರರು ನೋವು, ಸಮಸ್ಯೆಗಳು ಮತ್ತು ಅವುಗಳಿಗೆ ಕಾರಣವಾಗುವ ಅಂಶಗಳಿಂದ ಮುಕ್ತರಾಗಬೇಕೆಂದು ಬಯಸುವ ಮನೋಭಾವವಾಗಿದೆ. ಆದರೆ ಇಲ್ಲಿ, ಅವರು ಸಂಕಷ್ಟಗಳಿಂದ ಮುಕ್ತರಾಗಬೇಕೆಂದು ಬಯಸುವ ಬದಲು, ನೋವು ಮತ್ತು ಸಮಸ್ಯೆಗಳನ್ನು ಅನುಭವಿಸಬೇಕೆಂದು ನಾವು ಬಯಸುತ್ತೇವೆ. ಅದು ನಮ್ಮಿಂದಲೋ, ಇತರರಿಂದಲೋ ಅಥವಾ ಪ್ರಕೃತಿಯಿಂದಲೋ ಉಂಟಾಗಿದ್ದರೂ ಸರಿ. ಈ ಮನಸ್ಥಿತಿಯನ್ನು ನಿವಾರಿಸಲು, ಪ್ರತಿಯೊಬ್ಬರೂ ಸಮಾನರು ಎಂಬುದನ್ನು ನಾವು ತಿಳಿದುಕೊಳ್ಳಬೇಕು; ಪ್ರತಿಯೊಬ್ಬರೂ ಸಂತೋಷವನ್ನು ಬಯಸುತ್ತಾರೆ ಮತ್ತು ದುಃಖವನ್ನು ತಪ್ಪಿಸಲು ಇಚ್ಛಿಸುತ್ತಾರೆ.

ಆದ್ದರಿಂದ, ಯಾರಾದರೂ ನಮಗೆ ಹಾನಿ ಮಾಡಿದಾಗ, ಅಥವಾ ಉದಾಹರಣೆಗೆ, ನೀವು ತರಗತಿಯನ್ನು ನಡೆಸುತ್ತಿರುವಾಗ ಒಬ್ಬ ವಿದ್ಯಾರ್ಥಿಯು ಇತರರಿಗೆ ತೊಂದರೆಯೋ, ಹಾನಿ ಉಂಟುಮಾಡುತ್ತಿರುವಾಗ, ಆ ವ್ಯಕ್ತಿಗೆ ಶಿಕ್ಷೆ ನೀಡುವ ಬಗ್ಗೆ ಯೋಚಿಸುವ ಬದಲು – ಇದು ಸಾಮಾನ್ಯವಾಗಿ ಕೋಪ, ಅಸಹನೆ ಮತ್ತು ಇತರ ಅಸ್ಥಿರವಾದ ಹಾಗೂ ಅಹಿತಕರ ಮನಸ್ಥಿತಿಗಳಿಂದ ಪ್ರೇರಿತವಾಗಿರುತ್ತದೆ – ಆ ವಿದ್ಯಾರ್ಥಿಯನ್ನು ಸಂಕಷ್ಟದಲ್ಲಿರುವ ವ್ಯಕ್ತಿಯಾಗಿ ನೋಡುವುದು ಬಹಳ ಸಹಾಯಕವಾಗುತ್ತದೆ. ಆ ವಿದ್ಯಾರ್ಥಿಯು ಸಂತೋಷವನ್ನು ಬಯಸುತ್ತಾನೆ ಆದರೆ ಅದನ್ನು ಹೇಗೆ ಪಡೆಯಬೇಕೆಂದು ಅವನಿಗೆ ತಿಳಿದಿರುವುದಿಲ್ಲ; ಅವನ ಮನಸ್ಸು ತಲ್ಲಣಗೊಂಡಿರುವುದರಿಂದ, ಅಂತಹ ನಡವಳಿಕೆಯು ತನಗೆ ಸಂತೋಷವನ್ನು ನೀಡುತ್ತದೆ ಎಂದು ಅವನು ತಪ್ಪಾಗಿ ನಂಬಿರುತ್ತಾನೆ. ಈ ದೃಷ್ಟಿಕೋನವನ್ನು ಅಳವಡಿಸಿಕೊಂಡಾಗ, ನಾವು ಅವರನ್ನು "ಕೆಟ್ಟವರು" ಎಂದು ಪರಿಗಣಿಸುವುದನ್ನು ಅಥವಾ ಅವರಿಗೆ ಶಿಕ್ಷೆ ನೀಡಲು ಬಯಸುವುದನ್ನು ತಪ್ಪಿಸುತ್ತೇವೆ; ಬದಲಾಗಿ, ತರಗತಿಯಲ್ಲಿ ಅಡಚಣೆ ಮತ್ತು ಹಾನಿಯನ್ನುಂಟುಮಾಡುವಂತೆ ಅವರನ್ನು ಪ್ರೇರೇಪಿಸುತ್ತಿರುವ ಆಂತರಿಕ ಸಮಸ್ಯೆಗಳಿಂದ ಅವರು ಮುಕ್ತರಾಗಲಿ ಎಂದು ಹಾರೈಸುವ ಮೂಲಕ ಅವರ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ.

ಇದರರ್ಥ ನಾವು ಏನನ್ನೂ ಮಾಡಬಾರದೆಂದಲ್ಲ. ಅಹಿಂಸೆ ಎಂದರೆ ನಿಷ್ಕ್ರಿಯತೆ ಅಥವಾ ಸುಮ್ಮನಿರುವುದಲ್ಲ; ಬದಲಾಗಿ, ಕೋಪಕ್ಕೆ ಒಳಗಾಗದೆ, ಸಂಕಷ್ಟದಲ್ಲಿರುವ ಮಗುವಿಗೆ ಸಹಾಯವಾಗಬೇಕೆಂಬ ಮನೋಭಾವವನ್ನು ಹೊಂದಿರುವುದು ಎಂದರ್ಥ. ಆದ್ದರಿಂದ, ಶಾಲಾ ವ್ಯವಸ್ಥೆಯೊಳಗೆ ಸ್ವೀಕಾರಾರ್ಹ ಮತ್ತು ರಚನಾತ್ಮಕ ವಿಧಾನಗಳನ್ನು ಬಳಸಿಕೊಂಡು ಇಂತಹ ನಡವಳಿಕೆಯನ್ನು ತಡೆಯಲು ನಾವು ಪ್ರಯತ್ನಿಸಬೇಕು. ಅದರಲ್ಲೂ, ಮಗು "ಕೆಟ್ಟದ್ದು" ಎಂಬ ಕಾರಣಕ್ಕಾಗಿಯೇ ಅದನ್ನು ಶಿಕ್ಷಿಸಬೇಕು ಎಂಬ ಮನಸ್ಥಿತಿಗಿಂತ, ಇದರ ಹಿಂದಿನ ಉದ್ದೇಶ ಮತ್ತು ದೃಷ್ಟಿಕೋನವು ಸಂಪೂರ್ಣವಾಗಿ ಭಿನ್ನವಾಗಿರಬೇಕು.

"ಪ್ರೇರಣೆ" ಎಂಬ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಇದು ಎರಡು ಆಯಾಮಗಳನ್ನು ಹೊಂದಿದೆ: ಒಂದು ನಮ್ಮ ಗುರಿ ಅಥವಾ ಉದ್ದೇಶ, ಮತ್ತು ಇನ್ನೊಂದು ಆ ಗುರಿಯನ್ನು ಸಾಧಿಸಲು ನಮ್ಮನ್ನು ಪ್ರೇರೇಪಿಸುವ ಭಾವನಾತ್ಮಕ ಮನೋಭಾವ. ಮಕ್ಕಳಿಗೆ ಸಹಾಯ ಮಾಡುವುದೇ ನಮ್ಮ ಗುರಿ; ಅದಕ್ಕಾಗಿಯೇ ನಾವು ಶಿಕ್ಷಕರಾದೆವು. ವೈದ್ಯಕೀಯ ವೃತ್ತಿಯನ್ನು ಪ್ರವೇಶಿಸುವವರಿಗೂ ಇದೇ ಮಾತು ಅನ್ವಯವಾಗುತ್ತದೆ: ರೋಗಿಗೆ ಸಹಾಯ ಮಾಡುವುದೇ ನಮ್ಮ ಗುರಿ. ಹಾಗಾದರೆ, ಆ ಗುರಿಯತ್ತ ನಮ್ಮನ್ನು ಕೊಂಡೊಯ್ಯುವ ಮನಸ್ಥಿತಿ ಯಾವುದು? ಅದು ಕೇವಲ ಹಣ ಗಳಿಸುವುದೇ, ಅಥವಾ ಇನ್ನೊಬ್ಬರು ನಮಗೆ ಕೃತಜ್ಞತೆ ಸಲ್ಲಿಸಬೇಕು ಮತ್ತು ನಮ್ಮ ಬಗ್ಗೆ ಋಣಭಾವ ಹೊಂದಿರಬೇಕು ಎಂದು ಬಯಸುವುದೇ? ಇದು ನಿಜಕ್ಕೂ ಆತ್ಮಕೇಂದ್ರಿತ ಮನೋಭಾವ – ಒಂದು ಸ್ವಾರ್ಥಪೂರಿತ ನಡವಳಿಕೆಯಾಗಿರುತ್ತದೆ. ನಮ್ಮ ಗಮನ ಹೆಚ್ಚಾಗಿ ನಮ್ಮ ಮೇಲೆಯೇ ಇರುವುದರಿಂದ, ಇನ್ನೊಬ್ಬರಿಗೆ ನಿಜವಾಗಿಯೂ ಯಾವುದು ಉತ್ತಮ ಎಂಬುದರ ಬಗ್ಗೆ ನಾವು ಸಾಕಷ್ಟು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಅಗತ್ಯವಿಲ್ಲದಿದ್ದರೂ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡುವ ವೈದ್ಯರ ಉದಾಹರಣೆಯನ್ನು ತೆಗೆದುಕೊಳ್ಳಿ; ಅವರು ಕೇವಲ ಹೆಚ್ಚು ಹಣ ಗಳಿಸಲು ಹಾಗೆ ಮಾಡುತ್ತಾರೆ. ಆದರೆ, ಇನ್ನೊಬ್ಬರಿಗೆ ನಿಜವಾಗಿಯೂ ಸಹಾಯ ಮಾಡಬೇಕೆಂಬ ಗುರಿಯನ್ನು ಸಾಧಿಸಲು, ನಮಗೆ ಬೇಕಾಗಿರುವುದು ಸಹಾನುಭೂತಿ – ಅಂದರೆ, ಇನ್ನೊಬ್ಬ ವ್ಯಕ್ತಿ ಮತ್ತು ಅವರ ಕ್ಷೇಮದ ಕುರಿತು ಕಾಳಜಿ ವಹಿಸುವುದು.

ವೈದ್ಯಕೀಯ ವೃತ್ತಿಯಲ್ಲಿ ಕೆಲವೊಮ್ಮೆ ನಾವು ಚಿಕಿತ್ಸೆಗಾಗಿ ನೋವಿನ ವಿಧಾನಗಳನ್ನು, ಉದಾಹರಣೆಗೆ ಇಂಜೆಕ್ಷನ್ ಅಥವಾ ಶಸ್ತ್ರಚಿಕಿತ್ಸೆಯನ್ನು ಅವಲಂಬಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆಯಲ್ಲೂ ನೋವಿರುತ್ತದೆ. ಆದರೆ, ಇದು ಹಿಂಸಾತ್ಮಕ ಕೃತ್ಯವಲ್ಲ; ಏಕೆಂದರೆ, ವ್ಯಕ್ತಿಗೆ ನೋವುಂಟು ಮಾಡುವುದು ಇಲ್ಲಿಯ ಉದ್ದೇಶವಲ್ಲ. ಬದಲಾಗಿ, ಅವರ ನೋವು, ಸಮಸ್ಯೆ ಅಥವಾ ಕಾಯಿಲೆಯಿಂದ ಅವರನ್ನು ಗುಣಪಡಿಸುವುದೇ ನಮ್ಮ ಉದ್ದೇಶವಾಗಿರುತ್ತದೆ.

ಹಾಗೆಯೇ, ತುಂಟತನ ಮಾಡುವ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಶಿಸ್ತು ಕಲಿಸುವುದೂ ಇದೇ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು: ಇಲ್ಲಿನ ಉದ್ದೇಶ ಆ ಮಗುವಿಗೆ ನೋವುಂಟು ಮಾಡುವುದಲ್ಲ. ನಾವು ಅವನಿಗೆ ಸಹಾಯ ಮಾಡಲು ಬಯಸುತ್ತೇವೆ, ಏಕೆಂದರೆ ಅವನು ನಮ್ಮಂತೆಯೇ ಒಬ್ಬ ಮನುಷ್ಯ – ಅವನೂ ಸಂತೋಷವನ್ನು ಬಯಸುತ್ತಾನೆ ಹಾಗು ನೋವನ್ನು ಇಷ್ಟಪಡುವುದಿಲ್ಲ. ಆದ್ದರಿಂದ, ಅವನು ಸುಖಮಯ ಜೀವನವನ್ನು ನಡೆಸಲು ಅಗತ್ಯವಾದ ಮಾರ್ಗವನ್ನು ಕಂಡುಕೊಳ್ಳುವಂತೆ ನಾವು ಅವನಿಗೆ ಸಹಾಯ ಮಾಡಲು ಬಯಸುತ್ತೇವೆ. ಭವಿಷ್ಯದಲ್ಲಿ ಅವನು ಯಾವುದೇ ವೃತ್ತಿಯನ್ನು ಆರಿಸಿಕೊಂಡರೂ, ಇತರರೊಂದಿಗೆ ಸಹಕರಿಸುವುದು ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವುದು ಅವನಿಗೆ ಬಹಳ ಪ್ರಯೋಜನಕಾರಿಯಾಗುತ್ತದೆ. ಇಂತಹ ಗುಣಗಳು ಅವನ ಮುಂದಿನ ಜೀವನದಲ್ಲಿ ಮಾತ್ರವಲ್ಲ, ಇತರರಿಗೂ ಉಪಯುಕ್ತವಾಗುತ್ತವೆ.

ಶಿಸ್ತು ಎಂದರೆ ಆತ್ಮನಿಯಂತ್ರಣ. ಮಗು ಹಠ ಮಾಡುತ್ತಿದ್ದರೆ, ಸರಿಯಾಗಿ ವರ್ತಿಸುತ್ತಿಲ್ಲವಾದರೆ, ಅದು ತನ್ನನ್ನು ತಾನು ಹೇಗೆ ನಿಯಂತ್ರಿಸಿಕೊಳ್ಳಬೇಕೆಂದು ಕಲಿಯುವಂತೆ ನಾವು ಅದಕ್ಕೆ ಸಹಾಯ ಮಾಡಬೇಕು. ಮಕ್ಕಳಿಗೆ ಶಿಸ್ತಿನ ಬಗ್ಗೆ ಮಾರ್ಗದರ್ಶನ ನೀಡುವಾಗ, ಸ್ವಯಂ-ಶಿಸ್ತನ್ನು ಪಾಲಿಸುವ ಸಾಮರ್ಥ್ಯ ಅವರಿಗಿದೆ ಎಂಬುದನ್ನು ಅರಿತುಕೊಳ್ಳುವಂತೆ ಅವರಿಗೆ ಸಹಾಯ ಮಾಡಬೇಕು. ಸರಿಯಾದ ಮನಸ್ಥಿತಿಯಿಂದ ಶಿಸ್ತಿನ ವಿಷಯವನ್ನು ನಿರ್ವಹಿಸುವುದು ಮಗುವಿನೊಂದಿಗಿನ ಸಂವಹನವನ್ನು ಉತ್ತಮಗೊಳಿಸುತ್ತದೆ. ಏನೇ ಆಗಲಿ, ಪೋಷಕರು ತಮ್ಮ ಮಕ್ಕಳಿಗೆ ಶಿಸ್ತು ಕಲಿಸುವುದು ದ್ವೇಷದಿಂದ ಅಲ್ಲ, ಅಲ್ಲವೇ?

ಆದ್ದರಿಂದ, ವೈದ್ಯಕೀಯ ಅಥವಾ ಬೋಧನೆಯಂತಹ ಸೇವಾ ವೃತ್ತಿಗಳನ್ನು ಪ್ರವೇಶಿಸುವಾಗ, ಪ್ರೀತಿಯ ಆಂತರಿಕ ಮನಸ್ಥಿತಿ ಮತ್ತು ಸಹಾನುಭೂತಿಯ ಭಾವನೆಯನ್ನು ಬೆಳೆಸಿಕೊಳ್ಳುವುದು ಹಾಗೂ ಈ ನಿಟ್ಟಿನಲ್ಲಿ ತರಬೇತಿ ಪಡೆಯುವುದು ಅತ್ಯಗತ್ಯ ಎಂದು ನಾನು ಭಾವಿಸುತ್ತೇನೆ. ರೋಗಿಗಳು ಮತ್ತು ವಿದ್ಯಾರ್ಥಿಗಳು ಸಮಸ್ಯೆಗಳಿಂದ ಮುಕ್ತರಾಗಿ, ಸಂತೋಷದಿಂದ ಮತ್ತು ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡುವುದು ನಿಮ್ಮ ಉದ್ದೇಶವಾಗಿರುತ್ತದೆ. ಅದರ ಜೊತೆಗೇ, ನೀವು ಹೊರನೋಟಕ್ಕಾಗಿ ವೃತ್ತಿಪರ ನಡವಳಿಕೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ; ಇದಕ್ಕಾಗಿ ಕೆಲವೊಮ್ಮೆ ಗಂಭೀರವಾಗಿ ಮತ್ತು ದೃಢವಾಗಿ ವರ್ತಿಸಬೇಕಾಗುತ್ತದೆ. ಈ ರೀತಿಯಾಗಿ, ನಾವು ಅಹಿಂಸೆಯ ತತ್ವವನ್ನು ಅನುಸರಿಸುತ್ತಾ ನಮ್ಮ ವೃತ್ತಿಯನ್ನು ನಿರ್ವಹಿಸಬಹುದು; ಇದೇ ಅಹಿಂಸೆಯ ಮೂಲಭೂತ ಅರ್ಥವಾಗಿದೆ.

ಆದ್ದರಿಂದ, ಇತರರಿಗೆ ಹಾನಿ ಮಾಡಲು ಬಯಸುವವರ ಬಗ್ಗೆ ಸಹಾನುಭೂತಿ ತೋರಿಸದೆ ಇರುವ ಬದಲು, ನಾವು ಅವರ ಬಗ್ಗೆಯೂ ಸಹಾನುಭೂತಿಯನ್ನು ಹೊಂದಿರಬೇಕು; ಅವರು ಹಾನಿ ಹಾಗೂ ಸಂಕಷ್ಟಗಳಿಂದ ಮುಕ್ತರಾಗಬೇಕೆಂದು ಆಶಿಸಬೇಕು. ಆದರೆ ವಾಸ್ತವದಲ್ಲಿ, ಒಬ್ಬರಿಗೆ ಸಹಾಯ ಮಾಡಲು ಉತ್ತಮವಾದ ಮಾರ್ಗ ಯಾವುದು ಎಂಬುದನ್ನು ತಿಳಿಯುವುದು ಕಷ್ಟಕರವಾಗಿರುತ್ತದೆ. ಪ್ರತಿಯೊಂದು ಮಗುವೂ ಮತ್ತು ಪ್ರತಿಯೊಬ್ಬ ರೋಗಿಯೂ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುತ್ತಾರೆ; ಒಬ್ಬರಿಗೆ ಪರಿಣಾಮಕಾರಿಯಾದ ವಿಧಾನವು ಇನ್ನೊಬ್ಬರಿಗೆ ಪರಿಣಾಮಕಾರಿಯಾಗದೇ ಇರಬಹುದು. ಆದ್ದರಿಂದ, ಶಿಕ್ಷಕರು ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಗೌರವಿಸಬೇಕಾದಂತೆಯೇ, ವೈದ್ಯರು ಕೂಡ ರೋಗಿಯ ವ್ಯಕ್ತಿತ್ವವನ್ನು ಗೌರವಿಸುವುದು ಅತ್ಯಗತ್ಯ. 

ಇದು ಯಾವಾಗಲೂ ಸುಲಭದ ಕೆಲಸವಲ್ಲದಿದ್ದರೂ – ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ರೋಗಿಗಳನ್ನು ನೋಡಿಕೊಳ್ಳುವಾಗ ಅಥವಾ ವಿದ್ಯಾರ್ಥಿಗಳಿಂದ ತುಂಬಿದ ತರಗತಿಗಳನ್ನು ನಿರ್ವಹಿಸುವಾಗ – ಅವರನ್ನು ಅರ್ಥಮಾಡಿಕೊಳ್ಳುವ ನಿಜವಾದ ಆಸಕ್ತಿ ಮತ್ತು ಮನೋಭಾವ ಬಹಳ ಮುಖ್ಯವಾಗಿರುತ್ತದೆ. ಅವರ ಬಗ್ಗೆ ಆಸಕ್ತಿ ತೋರುವುದು ಅವರನ್ನು ಗೌರವಿಸುವ ಒಂದು ಪ್ರಮುಖ ಭಾಗವಾಗಿದೆ. ನಿಮ್ಮ ಮಗು, ಪೋಷಕರು, ಒಡಹುಟ್ಟಿದವರು ಅಥವಾ ಬೇರೆ ಯಾರೇ ಆಗಿರಲಿ, ಒಬ್ಬ ಆಪ್ತ ಸ್ನೇಹಿತ ಅಥವಾ ಸಂಬಂಧಿಕರಿಗೆ ನೀವು ನೀಡುವಷ್ಟೇ ಆಸಕ್ತಿ ಮತ್ತು ಗೌರವದಿಂದ ಅವರನ್ನೂ ನೋಡಲು ಪ್ರಯತ್ನಿಸಬೇಕು.

ನಮಗೆ ಯಾವಾಗಲೂ ಸಹಾಯವಾಗುವ ಮಾರ್ಗದರ್ಶಕ ತತ್ವಗಳಲ್ಲಿ ಒಂದೇನೆಂದರೆ, ಎದುರಿಗಿರುವ ವ್ಯಕ್ತಿಯೂ ನಮ್ಮಂತೆಯೇ ಭಾವನೆಗಳನ್ನು ಹೊಂದಿರುವ ಮನುಷ್ಯರೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು. ನಾನು ಹೇಗೆ ಸಂತೋಷವನ್ನು ಬಯಸುತ್ತೇನೆಯೋ, ಅವರೂ ಹಾಗೆಯೇ ಸಂತೋಷವಾಗಿರಲು ಬಯಸುತ್ತಾರೆ; ಮತ್ತು ನಮ್ಮಂತೆಯೇ ಅವರೂ ಇತರರಿಂದ ಮೆಚ್ಚುಗೆಯನ್ನು ಪಡೆಯಲು ಇಷ್ಟಪಡುತ್ತಾರೆ. ನಾನು ಅವರ ಬಗ್ಗೆ ಕ್ರೂರ ಆಲೋಚನೆಗಳನ್ನಿಟ್ಟುಕೊಂಡು ಅದಕ್ಕೆ ತಕ್ಕಂತೆ ವರ್ತಿಸಿದರೆ, ಅವರಿಗೆ ತೀವ್ರ ನೋವಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ಇತರರ ಬಗ್ಗೆ ಗೌರವಭಾವನೆಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ.

ನಮ್ಮ ಬಗ್ಗೆಯೇ ಅಹಿಂಸಾ ಭಾವನೆ

ಅಹಿಂಸೆಯ ಎರಡನೆಯ ಪ್ರಕಾರವು ನಾವು ಈಗಷ್ಟೇ ವಿವರಿಸಿದ ವಿಷಯಕ್ಕೆ ಸ್ವಲ್ಪಮಟ್ಟಿಗೆ ಸಂಬಂಧಿಸಿದೆ; ಏಕೆಂದರೆ ಇಲ್ಲಿ ನಾವು ನಮ್ಮ ಸ್ವಂತ ವ್ಯಕ್ತಿತ್ವದ ವಿಷಯದಲ್ಲಿ ಪಾಲಿಸಬೇಕಾದ ಅಹಿಂಸೆಯ ಬಗ್ಗೆ ಮಾತನಾಡುತ್ತಿದ್ದೇವೆ (ಆದರೆ ಮೊದಲನೆಯ ಪ್ರಕಾರವು ಇತರರೊಂದಿಗಿನ ವರ್ತನೆಗೆ ಸಂಬಂಧಿಸಿದೆ). ಇಲ್ಲಿ ನಾವು ಸ್ವಯಂ-ವಿನಾಶಕಾರಿ ಪ್ರವೃತ್ತಿಯ ಬಗ್ಗೆ ಚರ್ಚಿಸುತ್ತಿದ್ದೇವೆ. ನಾವು ಸ್ವಯಂ-ವಿನಾಶಕಾರಿ ಧೋರಣೆಯನ್ನು ಸ್ವೀಕರಿಸುತ್ತೇವೆ ಎಂದರೆ, ಅದಕ್ಕೆ ನಮ್ಮ ಬಗ್ಗೆ ನಮಗಿರುವ ಪ್ರೀತಿಯ ಕೊರತೆ ಹಾಗೂ ನಮಗೆ ನಾವೇ ಹಾನಿ ಮಾಡಿಕೊಳ್ಳುವ, ಅಥವಾ ಕೆಡುಕನ್ನು ಬಯಸುವ ಮನಸ್ಥಿತಿಯೇ ಕಾರಣವಾಗಿರುತ್ತದೆ. ಈ ಹಾನಿಯು ಉದ್ದೇಶಪೂರ್ವಕವಾಗಿ ಅಥವಾ ಅರಿವಿಲ್ಲದೆಯೇ ಸಂಭವಿಸಬಹುದು; ಉದಾಹರಣೆಗೆ, "ನಾನೊಬ್ಬ ಕೆಟ್ಟ ವ್ಯಕ್ತಿ", "ನಾನು ಸರಿಯಿಲ್ಲ" ಅಥವಾ "ನಾನು ಯಾವುದಕ್ಕೂ ಯೋಗ್ಯನಲ್ಲ" ಎಂಬಂತಹ ಆಲೋಚನೆಗಳನ್ನು ನಿರಂತರವಾಗಿ  ಯೋಚಿಸುವುದು.
ವಿಶೇಷವಾಗಿ ವೈದ್ಯರಾಗಿ, ನಮ್ಮ ರೋಗಿಯೊಬ್ಬರು ಮೃತಪಟ್ಟಾಗ, "ಅಯ್ಯೋ, ನಾನೊಬ್ಬ ಕಳಪೆ ವೈದ್ಯ; ನಾನೊಬ್ಬ ಕೆಟ್ಟ ವ್ಯಕ್ತಿ" ಎಂದು ನಾವು ಭಾವಿಸಬಹುದು. ಆ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿಯೇ ನಾವು ಆ ಅಪರಾಧ ಪ್ರಜ್ಞೆಯನ್ನು ಹೊತ್ತುಕೊಳ್ಳುತ್ತೇವೆ ಮತ್ತು ಒಂದು ರೀತಿಯಲ್ಲಿ ನಮ್ಮನ್ನೇ ಶಿಕ್ಷಿಸಿಕೊಳ್ಳುತ್ತೇವೆ – ಆಳವಾದ ಮಾನಸಿಕ ಮತ್ತು ಭಾವನಾತ್ಮಕ ಮಟ್ಟದಲ್ಲಿ. ನಾವು ವೈದ್ಯರಾಗಲು ಅಥವಾ ಶಿಕ್ಷಕರಾಗಲು ನಿರ್ಧರಿಸಿದಾಗ ಇಂತಹ ವಾಸ್ತವತೆಗಳನ್ನು ಎದುರಿಸಲು ಸಿದ್ಧರಿರಬೇಕು. 

ನಾವೇನೂ ಬುದ್ಧನಲ್ಲ; ಎಲ್ಲರಿಗೂ ಸಹಾಯ ಮಾಡಲು ನಮಗೆ ಸಾಧ್ಯವಿಲ್ಲ; ಖುದ್ದು ಬುದ್ಧನಿಗೂ ಕೂಡ ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಾಗಿರಲಿಲ್ಲ. ಸಹಜವಾಗಿಯೇ, ನಾವು ವಿಫಲರಾಗುವ ಸಂದರ್ಭಗಳು ಬರುತ್ತವೆ, ಬಹುಶಃ ರೋಗಿಯೊಬ್ಬರನ್ನು ಗುಣಪಡಿಸಲು ಸಾಧ್ಯವಾಗದಿರಬಹುದು ಅಥವಾ ಮಗುವಿಗೆ ಪರಿಣಾಮಕಾರಿಯಾಗಿ ಪಾಠ ಮಾಡಲು ವಿಫಲರಾಗಬಹುದು. ವಾಸ್ತವದ ಸ್ವರೂಪವೇ ಅಂತಹದ್ದು. ಸಹಾಯವು ಪರಿಣಾಮಕಾರಿಯಾಗಬೇಕಾದರೆ, ಅದನ್ನು ಪಡೆಯುವ ವ್ಯಕ್ತಿಯೂ ಅದನ್ನು ಸ್ವೀಕರಿಸಲು ಸಿದ್ಧರಿರಬೇಕು. ಗುಣಪಡಿಸಲು ಸಾಧ್ಯವಾಗದ ಕಾಯಿಲೆಗಳಿವೆ; ಮತ್ತು ಚಿಕಿತ್ಸೆ ಸಾಧ್ಯವಿದ್ದಾಗಲೂ ಕೆಲವೊಮ್ಮೆ ನಾವು ತಪ್ಪುಗಳನ್ನು ಮಾಡುತ್ತೇವೆ, ಏಕೆಂದರೆ, ಕೊನೆಗೂ ನಾವೆಲ್ಲರೂ ಮನುಷ್ಯರೇ. ಇದಲ್ಲದೆ, ಕೆಲವು ವಿದ್ಯಾರ್ಥಿಗಳು ತೀವ್ರವಾದ ಭಾವನಾತ್ಮಕ, ಸಾಮಾಜಿಕ ಅಥವಾ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ, ಅಂತಹ ಸಂದರ್ಭಗಳಲ್ಲಿ ಅವರಿಗೆ ಸಹಾಯ ಮಾಡುವುದು ನಮ್ಮ ನಿಯಂತ್ರಣವನ್ನೂ ಮೀರಿರುತ್ತದೆ.

ಆದ್ದರಿಂದ, ನಮ್ಮನ್ನು ನಾವೇ ಹಾನಿ ಮಾಡಿಕೊಳ್ಳುವ ಪ್ರವೃತ್ತಿಗಳ ಬಗ್ಗೆ – ಅಂದರೆ, ನಮ್ಮೊಂದಿಗೆ ನಾವೇ ಕಠೋರವಾಗಿ ನಡೆದುಕೊಳ್ಳುವ ರೀತಿಗಳ ಬಗ್ಗೆ ನಾವು ಎಚ್ಚರದಿಂದಿರಬೇಕು. ಉದಾಹರಣೆಗೆ, ವಾಸ್ತವವಾಗಿ ಅಸಾಧ್ಯವಾಗಿದ್ದರೂ "ನಾನು ಪರಿಪೂರ್ಣನಾಗಿರಲೇಬೇಕು" ಎಂದುಕೊಂಡು ನಮ್ಮ ಮೇಲೆ ನಾವೇ ಒತ್ತಡ ಹೇರಿಕೊಳ್ಳುವುದು ಅಂತಹ ಒಂದು ಹಾನಿಕಾರಕ ಅಭ್ಯಾಸವಾಗಿದೆ. ಆದಷ್ಟು ಅತ್ಯುತ್ತಮವಾಗಿ ಕೆಲಸ ಮಾಡಲು ನಾವು ಖಂಡಿತವಾಗಿಯೂ ಪ್ರಯತ್ನಿಸುತ್ತೇವೆಯಾದರೂ , ಯಾರೂ ಸಂಪೂರ್ಣವಾಗಿ ದೋಷರಹಿತರಾಗಿರಲು ಸಾಧ್ಯವಿಲ್ಲ. ಹೀಗಾಗಿ, ಯಾವುದಾದರೂ ವಿಷಯದಲ್ಲಿ ನಾವು ವಿಫಲರಾದಾಗ ಪಶ್ಚಾತ್ತಾಪ ಪಡುವುದು ಮತ್ತು ಭವಿಷ್ಯದಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಶ್ರಮಿಸುವುದು ಸಹಜವೇ; ಆದರೆ, ಹತಾಶೆಗೆ ಒಳಗಾಗುವುದನ್ನು ನಾವು ತಪ್ಪಿಸಬೇಕು, ಏಕೆಂದರೆ ಅದು ನಮ್ಮ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ನಮ್ಮ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.

"ನಾನು ಹತಾಶೆಗೆ ಒಳಗಾಗುವುದನ್ನು ಅಥವಾ ತೀವ್ರ ಬೇಸರಗೊಳ್ಳುವುದನ್ನು ಹೇಗೆ ತಡೆಯಬಹುದು?" ಎಂದು ನೀವು ಕೇಳಬಹುದು. ಉದಾಹರಣೆಗೆ, ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಯಾವುದೋ ಕಾರಣದಿಂದ ಶಾಲೆಯನ್ನು ಬಿಡುವ ಸನ್ನಿವೇಶವನ್ನೇ ತೆಗೆದುಕೊಳ್ಳಿ. ಸಹಜವಾಗಿಯೇ ಇದು ನಿರಾಶಾದಾಯಕವೆನಿಸುತ್ತದೆ, ಆದರೆ ಅದರಿಂದಾಗಿ ಖಿನ್ನತೆಗೆ ಒಳಗಾಗಲು ನಾವು ಅವಕಾಶ ನೀಡಬಾರದು. ಹಾಗಾದರೆ, ಅಂತಹ ಹತಾಶೆಯಿಂದ ಪಾರಾಗಲು ನಮಗೆ ನಾವೇ ಹೇಗೆ ನೆರವಾಗಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಇತರರೊಂದಿಗೆ ನಾವು ವ್ಯವಹರಿಸುವ ರೀತಿಗೂ ಅನ್ವಯಿಸುತ್ತದೆ. ಇತರರಿಗೆ ನಿಜವಾಗಿಯೂ ಸಹಾಯ ಮಾಡಲು ಮತ್ತು ಅವರಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಅವರನ್ನು ಗೌರವಿಸುವುದು ಎಷ್ಟು ಮುಖ್ಯವೋ, ಹಾಗೆಯೇ ನಮ್ಮನ್ನೂ ನಾವು ಗೌರವಿಸಿಕೊಳ್ಳುವುದು ಅಷ್ಟೇ ಮುಖ್ಯ. "ನನ್ನಲ್ಲಿ ಸಾಮರ್ಥ್ಯಗಳಿವೆ; ಇಲ್ಲದಿದ್ದರೆ ನಾನು ಉತ್ತಮ ಶಿಕ್ಷಕನಾಗಿಯೋ ಅಥವಾ ವೈದ್ಯನಾಗಿಯೋ ಆಗಲು ಸಾಧ್ಯವಾಗುತ್ತಿರಲಿಲ್ಲ" ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ನಮ್ಮ ಕೆಲಸದ ಹಿಂದಿರುವ ಸಕಾರಾತ್ಮಕ ಉದ್ದೇಶವನ್ನು ನಮಗೆ ನಾವೇ ನೆನಪಿಸಿಕೊಳ್ಳಬೇಕು: "ನಾನು ಮಾಡುವ ಕೆಲಸದಲ್ಲಿ ಒಳ್ಳೆಯ ಉದ್ದೇಶವಿದೆ." ಜೊತೆಗೆ ಇದನ್ನು ಒಪ್ಪಿಕೊಳ್ಳಬೇಕು – "ಒಬ್ಬ ಮನುಷ್ಯನಾಗಿ ನಾನು ಪರಿಪೂರ್ಣನಲ್ಲ; ಆದರೂ, ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ಕೆಲಸ ಮಾಡುತ್ತಿರುವುದಕ್ಕೆ ನಾನು ನನ್ನನ್ನು ಗೌರವಿಸುತ್ತೇನೆ." ಇಂತಹ ಮನಸ್ಥಿತಿಯು ನಾವು ಹತಾಶೆಗೆ ಒಳಗಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ನಾವು ಪ್ರಾಮಾಣಿಕವಾಗಿ ನಮ್ಮನ್ನು ಪರಿಶೀಲಿಸಿಕೊಂಡಾಗ, ನಮ್ಮಿಂದ ಸಾಧ್ಯವಾದಷ್ಟು ಉತ್ತಮ ಪ್ರಯತ್ನವನ್ನು ಮಾಡಿಲ್ಲ ಎಂದು ಅರಿವಾದಾಗ ಏನಾಗುತ್ತದೆ? ನಾವು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂಬ ಭಾವನೆ ನಮಗೆ ಮೂಡುತ್ತದೆ. ಅಂತಹ ಸಂದರ್ಭದಲ್ಲಿ, ನಾವು ಪಶ್ಚಾತ್ತಾಪ ಪಡಬಹುದು ಮತ್ತು "ಭವಿಷ್ಯದಲ್ಲಿ ನಾನು ಇನ್ನೂ ಹೆಚ್ಚು ಶ್ರಮಿಸುತ್ತೇನೆ" ಎಂದು ನಮಗೆ ನಾವೇ ಹೇಳಿಕೊಳ್ಳುವ ಮೂಲಕ ಆ ತಪ್ಪನ್ನು ಪುನರಾವರ್ತಿಸದಿರಲು ನಿರ್ಧರಿಸಬಹುದು. ಆದರೂ, ಅಂತಹ ಪರಿಸ್ಥಿತಿಗಳು ಮತ್ತೆ ಎದುರಾಗದಂತೆ ನೋಡಿಕೊಳ್ಳಲು, ನಾವು ಅದರ ಮೂಲ ಕಾರಣಗಳನ್ನು ಗಮನಿಸಬೇಕು – ಬಹುಶಃ ವಿಪರೀತ ಆಯಾಸವೇ ಅದಕ್ಕೆ ಕಾರಣವಾಗಿರಬಹುದು. ನಮ್ಮನ್ನು ನಾವೇ ಹಾನಿಗೊಳಿಸಿಕೊಳ್ಳುವ ಬದಲು, ದಯೆಯಿಂದ ಇರಬೇಕು. 

ನಮಗೆ ಎಷ್ಟು ವಿಶ್ರಾಂತಿಯ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು – ನಮ್ಮ ಮಿತಿಗಳನ್ನು ಗುರುತಿಸುವುದು — ಮತ್ತು ಯಾವುದೇ ಕೀಳರಿಮೆಯಾಗಲಿ ಅಥವಾ ಬೇಸರವಿಲ್ಲದೆ, ಆ ಮಿತಿಗಳನ್ನು ಗೌರವಿಸುವುದು ಮುಖ್ಯ. ಪ್ರತಿಯೊಬ್ಬರಿಗೂ ಅವರದೇ ಆದ ಮಿತಿಗಳಿರುತ್ತವೆ. ತುರ್ತು ಪರಿಸ್ಥಿತಿಯಲ್ಲಿ ನಾವು ನಮ್ಮ ಸಾಮರ್ಥ್ಯಕ್ಕೂ ಮೀರಿ ಶ್ರಮಿಸಬಲ್ಲೆವು ಎಂಬುದು ನಿಜವಾದರೂ, ಎಲ್ಲಾ ಸಂದರ್ಭಗಳೂ ತುರ್ತು ಪರಿಸ್ಥಿತಿಗಳಾಗಿರುವುದಿಲ್ಲ. ಕೆಲವೊಮ್ಮೆ, ವಿಶ್ರಾಂತಿಯ ಅಗತ್ಯವನ್ನು ಒಪ್ಪಿಕೊಂಡು ಅದನ್ನು ಪಡೆಯಲು ಪ್ರಯತ್ನಿಸುವುದು ಮುಖ್ಯ; ಇದು ಯಾವಾಗಲೂ ಸಾಧ್ಯವಾಗದಿರಬಹುದು, ಆದರೆ ಸಾಧ್ಯವಾದಾಗಲೆಲ್ಲಾ ಯಾವುದೇ ಅಪರಾಧ ಭಾವನೆಯಿಲ್ಲದೆ ನಾವು ವಿಶ್ರಾಂತಿ ಪಡೆಯಬೇಕು.

ಕೆಲಸ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಎಂದಿಗೂ ಸುಲಭವಲ್ಲ. ನಮ್ಮ ಮಕ್ಕಳಿಗೆ ಅನೇಕ ಅಗತ್ಯಗಳಿದ್ದರೂ, ಈ ಸಮತೋಲನಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ; ಕೆಲಸವನ್ನು ಯೋಜಿಸಿಕೊಳ್ಳುವುದು ಮತ್ತು ಇತರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದನ್ನು ನಾವು ಕಲಿಯಬೇಕಾಗಿದೆ. ಹೀಗೆ ಮಾಡುವುದರಿಂದ ಅತಿಯಾದ ಕೆಲಸ ಮತ್ತು ಒತ್ತಡದಿಂದಾಗಿ ನಾವು ಬೆವರು ಹರಿಸುವುದನ್ನು (ಹೈರಾಣಾಗುವುದನ್ನು) ತಡೆಯಬಹುದು ಹಾಗೂ 'ನಾವು ಸಾಕಷ್ಟು ಮಾಡುತ್ತಿಲ್ಲ' ಎಂಬ ಭಾವನೆಯಿಂದ ಪಾರಾಗಬಹುದು. ಸಹನೆಯ ಮಿತಿ ಮೀರುವ ಅಥವಾ ಕುಸಿಯುವ ಹಂತ ತಲುಪುವವರೆಗೆ ನಾವು ಕಾಯಬಾರದು. ನಮ್ಮ ಸ್ವಂತ ಅಗತ್ಯಗಳನ್ನು ನಿರ್ಲಕ್ಷಿಸುವುದು ಒಂದು ರೀತಿಯಲ್ಲಿ ನಮಗೇ ಹಾನಿ ಮಾಡಿಕೊಂಡಂತೆ; ಆದ್ದರಿಂದ, ನಮ್ಮ ವಿಷಯದಲ್ಲೂ ಅಹಿಂಸೆಯನ್ನು ಪಾಲಿಸುವುದು ಅತ್ಯಂತ ಮುಖ್ಯ.

ಇತರರ ದುರದೃಷ್ಟವನ್ನು ಕಂಡು ಸಂಭ್ರಮಿಸುವುದರಿಂದ ದೂರವಿರುವುದು

ಅಹಿಂಸೆಯ ಮೂರನೇ ಪ್ರಕಾರವು, ಇತರರ ದುರದೃಷ್ಟದಲ್ಲಿ ಆನಂದಿಸದಿರುವುದನ್ನು ಒಳಗೊಂಡಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ – ಹಿಂಸೆಯನ್ನು ಒಂದು ಕ್ರೂರ ಮನಸ್ಥಿತಿ ಎಂದು ಪರಿಗಣಿಸಿದರೆ – ಇತರರ ಸಂಕಟದಿಂದ ಸಂತೋಷಪಡುವುದು ಕೂಡ ಒಂದು ಬಗೆಯ ಕ್ರೌರ್ಯವೇ ಆಗಿರುತ್ತದೆ; ಸಾಮಾನ್ಯವಾಗಿ ಯಾರಾದರೂ ವಿಫಲರಾದಾಗ ಇಂತಹ ಭಾವನೆ ಉಂಟಾಗುತ್ತದೆ. "ನಾನು ಅಂತಹ ಕೆಲಸವನ್ನು ಮಾಡುವುದಿಲ್ಲ" ಎಂದು ನಾವು ಅಂದುಕೊಳ್ಳಬಹುದು. ಆದರೆ, ರಾಜಕೀಯದ ಉದಾಹರಣೆಯನ್ನು ಗಮನಿಸಿ: ಇಬ್ಬರು ಅಭ್ಯರ್ಥಿಗಳಿದ್ದಾಗ, ನಿಮಗೆ ಇಷ್ಟವಿಲ್ಲದ ಅಭ್ಯರ್ಥಿಯು ಚುನಾವಣೆಯಲ್ಲಿ ಸೋತರೆ, ಅಥವಾ ಅಧಿಕಾರದಿಂದ ಕೆಳಗಿಳಿದರೆ, ತೆಗೆದುಹಾಕಲ್ಪಟ್ಟರೆ, ನಿಮಗೆ ತುಂಬಾ ಸಂತೋಷವಾಗುತ್ತದೆ. ಅವರ ದುರದೃಷ್ಟವನ್ನು ಕಂಡು ನೀವು ಸಂಭ್ರಮಿಸುತ್ತೀರಿ, ಅಲ್ಲವೇ? ಇದಕ್ಕೆ ವಿರುದ್ಧವಾಗಿ, ನೀವು ಇಷ್ಟಪಡುವ ವ್ಯಕ್ತಿಯು ಅಧಿಕಾರಕ್ಕೆ ಬಂದಾಗ ನೀವು ಸಂತೋಷಪಡುತ್ತೀರಿ ಮತ್ತು ಅವರ ಆನಂದದಲ್ಲಿ ಪಾಲ್ಗೊಳ್ಳುತ್ತೀರಿ. ಆದರೂ, ಇನ್ನೊಬ್ಬರ ಸೋಲಿನಲ್ಲಿ ಸಂಭ್ರಮಿಸುವುದರಲ್ಲಿ ಯಾವುದೇ ಒಳ್ಳೆಯತನವಿಲ್ಲ; ಏಕೆಂದರೆ, ಅವರಿಗೂ ಕುಟುಂಬ ಮತ್ತು ಅವಲಂಬಿತರಿರುತ್ತಾರೆ, ಹಾಗೂ ಅವರು ದುಃಖವನ್ನು ಅನುಭವಿಸುತ್ತಿರುತ್ತಾರೆ – ಅವರೂ ಮನುಷ್ಯರೇ ಆಗಿರುತ್ತಾರಲ್ಲವೇ. ಆದ್ದರಿಂದ, ಅವರು ಆ ಹುದ್ದೆಯಲ್ಲಿ ಇಲ್ಲದಿರುವುದಕ್ಕೆ ನನಗೆ ಸಂತೋಷವಿದ್ದರೂ, ಅವರ ಜೀವನದಲ್ಲಿ ಸುಖ-ಶಾಂತಿ ಇರಲಿ ಎಂದೇ ನಾನು ಬಯಸುತ್ತೇನೆ. ಅವರು ಅನಾರೋಗ್ಯಕ್ಕೆ ಒಳಗಾಗಲಿ ಅಥವಾ ಅವರಿಗೆ ಯಾವುದೇ ಹಾನಿಯಾಗಲಿ ಎಂದು ನಾನು ಬಯಸುವುದಿಲ್ಲ.
ಹೀಗೆ, ಅಹಿಂಸೆಯ ಈ ಮೂರು ಪ್ರಕಾರಗಳು ಮೂರು ರೀತಿಯ ಕ್ರೂರ ಆಲೋಚನೆಗಳನ್ನು ವಿವರಿಸುತ್ತವೆ ಎಂಬುದನ್ನು ನಾವು ನೋಡಿದ್ದೇವೆ:

  • ಸಹಾನುಭೂತಿಯ ಅಭಾವ – ಇತರರು ದುಃಖ ಮತ್ತು ಸಂಕಷ್ಟಗಳನ್ನು ಅನುಭವಿಸಬೇಕೆಂದು ಬಯಸುವುದು.
  • ಸ್ವಯಂ-ಪ್ರೀತಿಯ ಕೊರತೆ – ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ತಮಗೆ ತಾವೇ ಹಾನಿ ಮಾಡಿಕೊಳ್ಳಲು ಬಯಸುವುದು.
  • ಇತರರ ದುರದೃಷ್ಟದಲ್ಲಿ ಆನಂದಿಸುವುದು – ಬೇರೊಬ್ಬರು ವಿಫಲರಾದಾಗ ಅಥವಾ ಅವರಿಗೆ ಯಾವುದಾದರೂ ಅನಾಹುತ ಸಂಭವಿಸಿದಾಗ ಸಂತೋಷಪಡುವುದು.

ನಾನು ಮೊದಲೇ ಹೇಳಿದಂತೆ, ನಾವು ಕೈಗೊಳ್ಳುವ ಕ್ರಮಗಳು ಕೇವಲ ಹಿಂಸಾತ್ಮಕವಾಗಿಲ್ಲದಿದ್ದರೂ ಪ್ರಭಾವಶಾಲಿಯಾಗಿರಬಲ್ಲವು. ಬೌದ್ಧ ಬೋಧನೆಗಳಲ್ಲಿ ಇದಕ್ಕೆ ಒಂದು ಉತ್ತಮ ಉದಾಹರಣೆಯಿದೆ. ಇಬ್ಬರು ಧ್ಯಾನಿಗಳು ನದಿಯ ದಡದಲ್ಲಿ ಕುಳಿತಿದ್ದರು. ಆಗ ಒಬ್ಬ ವ್ಯಕ್ತಿಯು ಅಲ್ಲಿಗೆ ಬಂದನು; ಆ ನದಿಯ ಪ್ರವಾಹವು ಅತ್ಯಂತ ವೇಗವಾಗಿತ್ತು. ಆ ವ್ಯಕ್ತಿಯು ನದಿಗೆ ಹಾರಿ ಈಜಿ, ದಾಟಲು ಯತ್ನಿಸಿದನು. ಇದು ಯಾರೂ ಈಜಿ ದಾಟಲು ಸಾಧ್ಯವಾಗದಂತಹ ನದಿ; ಹಾಗೆ ಮಾಡಲು ಪ್ರಯತ್ನಿಸುವ ಯಾರಾದರೂ ಖಂಡಿತವಾಗಿಯೂ ಮುಳುಗಿ ಸಾಯುತ್ತಿದ್ದರು. ಒಬ್ಬ ಧ್ಯಾನಿಯು ಶಾಂತ ಮುಖಭಾವದೊಂದಿಗೆ ಸುಮ್ಮನೆ ಕುಳಿತಿದ್ದನು; ಆ ವ್ಯಕ್ತಿಯು ನದಿಗೆ ಹಾರಿ ಖಂಡಿತವಾಗಿಯೂ ಸಾಯಲು ಮುಂದಾಗಿದ್ದಾಗ, ಏನನ್ನೂ ಮಾಡದೆ ಸುಮ್ಮನಿರಲು ಅವನು ಸಿದ್ಧನಾಗಿದ್ದನು. ಇನ್ನೊಬ್ಬ ಧ್ಯಾನಿಯು ಎದ್ದು ನಿಂತನು. ಆ ವ್ಯಕ್ತಿಯನ್ನು ನದಿಗೆ ಹೋಗದಂತೆ ಮನವೊಲಿಸಲು ಸಾಧ್ಯವಾಗದಾಗ, ನದಿಯನ್ನು ದಾಟುವ ಪ್ರಯತ್ನವನ್ನು ತಡೆಯಲು ಆತ ಆ ವ್ಯಕ್ತಿಗೆ ಗುದ್ದಿ ಪ್ರಜ್ಞೆ ತಪ್ಪುವಂತೆ ಮಾಡಿದನು. ಬುದ್ಧನು ಇದೆಲ್ಲವನ್ನೂ ಗಮನಿಸಿದನು, ಮುಖದಲ್ಲಿ ಮಂದಹಾಸದೊಂದಿಗೆ ಶಾಂತವಾಗಿ ಕುಳಿತಿದ್ದ ಧ್ಯಾನಿಯೇ ಹಿಂಸಾತ್ಮಕ ಕೃತ್ಯ ಎಸಗಿದವನು ಎಂದು ಹೇಳಿದನು. ಆ ವ್ಯಕ್ತಿಯು ತನಗೆ ತಾನೇ ಹಾನಿ ಮಾಡಿಕೊಳ್ಳುವುದನ್ನು ತಡೆಯಲು ಹೊಡೆದದ್ದು ಅಹಿಂಸಾತ್ಮಕ ಕೃತ್ಯವಾಗಿತ್ತು. ಏಕೆ? ಏಕೆಂದರೆ ಅದಕ್ಕೆ ಕಾರಣವಾದ ಉದ್ದೇಶ ಮತ್ತು ಮನಸ್ಥಿತಿ – ಅಂದರೆ, ಆ ವ್ಯಕ್ತಿಯು ಅನಿವಾರ್ಯವಾಗಿ ಮುಳುಗಿ ಸಾಯುವುದನ್ನು ತಪ್ಪಿಸುವ ಮತ್ತು ಸಹಾಯ ಮಾಡುವ ಬಯಕೆಯೇ ಅದಕ್ಕೆ ಕಾರಣವಾಗಿತ್ತು.

ಆಧ್ಯಾತ್ಮಿಕ ಮೌಲ್ಯಗಳು

ಇಂದು ಬೆಳಿಗ್ಗೆ ನಮ್ಮ ಚರ್ಚೆಯ ವಿಷಯವು "ಆಧುನಿಕ ಜಗತ್ತಿನಲ್ಲಿ ಆಧ್ಯಾತ್ಮಿಕ ಮೌಲ್ಯಗಳು" ಎಂಬ ವಿಷಯದ ಎರಡನೇ ಭಾಗಕ್ಕೆ ಸಂಬಂಧಿಸಿದೆ. "ಆಧ್ಯಾತ್ಮಿಕ" ಎಂಬ ಪದವನ್ನು ವ್ಯಾಖ್ಯಾನಿಸುವುದು ಸಾಕಷ್ಟು ಕಷ್ಟಕರ; ಇಂಗ್ಲಿಷ್ ಮತ್ತು ರಷ್ಯನ್‌ನಂತಹ ಭಾಷೆಗಳಲ್ಲಿ ಇದು ವಿವಿಧ ಅರ್ಥಗಳನ್ನು ಹೊಂದಿದೆ. ಆದರೂ, ಬೌದ್ಧಧರ್ಮದ ಸಂದರ್ಭದಲ್ಲಿ ಇದನ್ನು ಹೇಗೆ ವ್ಯಾಖ್ಯಾನಿಸಲಾಗಿದೆ – ಅಥವಾ ಇದಕ್ಕೆ ಸಮಾನವಾದ ಪದ ಯಾವುದು – ಎಂಬುದನ್ನು ನಾವು ಪರಿಶೀಲಿಸೋಣ. ಬೌದ್ಧಧರ್ಮದಲ್ಲಿ ನಾವು ಧರ್ಮದ ಬಗ್ಗೆ ಮಾತನಾಡುತ್ತೇವೆ. "ಧರ್ಮ"ವು ಒಂದು ತಡೆಗಟ್ಟುವ ಕ್ರಮವನ್ನು (ಮುನ್ನೆಚ್ಚರಿಕೆಯನ್ನು) ಸೂಚಿಸುತ್ತದೆ; ನಮ್ಮ ದುಃಖ ಮತ್ತು ಸಮಸ್ಯೆಗಳನ್ನು ಹೋಗಲಾಡಿಸಲು ನಾವು ಕೈಗೊಳ್ಳುವ ಕ್ರಿಯೆಗಳನ್ನು ಇದು ಸೂಚಿಸುತ್ತದೆ. ಇದು ಕೇವಲ ತಕ್ಷಣದ ಸನ್ನಿವೇಶಗಳ ಬಗ್ಗೆ ಯೋಚಿಸುವುದಲ್ಲ – ಉದಾಹರಣೆಗೆ, ಕಾರು ಅಥವಾ ಬೈಸಿಕಲ್ ಚಾಲನೆ ಮಾಡುವಾಗ ಅಪಘಾತವನ್ನು ತಪ್ಪಿಸಲು ವಾಹನವನ್ನು ಪಕ್ಕಕ್ಕೆ ತಿರುಗಿಸುವುದು. ಅದು ಧರ್ಮವಲ್ಲ.

ಆದ್ದರಿಂದ, ನಾವು ಕೇವಲ ನಮ್ಮ ದೈನಂದಿನ ಸಣ್ಣಪುಟ್ಟ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿಲ್ಲ – ಅವುಗಳನ್ನು ನಾವು ಅನಿವಾರ್ಯವಾಗಿ "ಆಧ್ಯಾತ್ಮಿಕ" ಎಂದು ಕರೆಯಲಾರೆವು. ಬದಲಾಗಿ, ಇದು ಭವಿಷ್ಯದತ್ತ ಗಮನಹರಿಸುವ ಮನಸ್ಥಿತಿಯನ್ನು ಒಳಗೊಂಡಿದೆ. ಬೌದ್ಧಧರ್ಮ ಸೇರಿದಂತೆ ಅನೇಕ ಧರ್ಮಗಳಲ್ಲಿ ಇದು ಮುಂದಿನ ಜನ್ಮಗಳ ಕುರಿತ ಚಿಂತನೆಯನ್ನು ಒಳಗೊಂಡಿದ್ದರೆ, ಇನ್ನು ಕೆಲವು ಧರ್ಮಗಳಲ್ಲಿ ಇದು ಮರಣೋತ್ತರ ಜೀವನದ ಮೇಲೆ ಕೇಂದ್ರೀಕೃತವಾಗಿರುತ್ತದೆ; ಇದರ ಮುಖ್ಯ ಉದ್ದೇಶವೇನೆಂದರೆ, ಈ ಜನ್ಮದಲ್ಲಿ ಭೌತಿಕ ಯಶಸ್ಸನ್ನು ಸಾಧಿಸುವುದು ನಮ್ಮ ಮುಖ್ಯ ಆದ್ಯತೆಯಲ್ಲ; ಏಕೆಂದರೆ, ಸಾವಿನ ಕ್ಷಣದಲ್ಲಿ ಉಳಿದುಕೊಳ್ಳುವ ಯಾವುದೇ ವಿಷಯವು, ಮುಂದೆ ಕಾಯುತ್ತಿರುವ ಅಪಾರ ಕಾಲಮಾನದೊಂದಿಗೆ ಹೋಲಿಸಿದರೆ ಅತ್ಯಲ್ಪವಾಗಿರುತ್ತದೆ.

ಮರುಜನ್ಮ ಅಥವಾ ಮರಣಾನಂತರದ ಜೀವನದ ಮೇಲಿನ ನಂಬಿಕೆಯು ಖಂಡಿತವಾಗಿಯೂ ಪ್ರಯೋಜನಕಾರಿ; ಆದರೆ ನಮ್ಮಲ್ಲಿ ಅನೇಕರು ಅಂತಹ ನಂಬಿಕೆಗಳನ್ನು ಹೊಂದಿಲ್ಲದಿರಬಹುದು. ಹಾಗಿದ್ದರೂ ನಾವು ಆಧ್ಯಾತ್ಮಿಕ ವ್ಯಕ್ತಿಗಳಾಗಿ ಉಳಿಯಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವೆಂದು ನಾನು ನಂಬುತ್ತೇನೆ; ಆದರೆ ಅದಕ್ಕಾಗಿ ನಾವು ಈ ಜೀವನದಲ್ಲಿ ಕೇವಲ ನಮ್ಮ ಸ್ವಂತ ಭೌತಿಕ ಯೋಗಕ್ಷೇಮವನ್ನಾಗಲಿ ಅಥವಾ ನಮ್ಮ ಹಾಗೂ ನಮ್ಮ ಕುಟುಂಬದವರ ಹಿತವನ್ನಷ್ಟೇ ನೋಡದೆ, ಅದರಾಚೆಗಿನ ವಿಶಾಲ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು – ಉದಾಹರಣೆಗೆ, ಮುಂದಿನ ಪೀಳಿಗೆಗಳ ಬಗ್ಗೆ ಯೋಚಿಸುವ ಮೂಲಕ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಮ್ಮ ಕೊಡುಗೆ ಎಷ್ಟೇ ಚಿಕ್ಕದಾಗಿದ್ದರೂ, ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನಾವು ಶ್ರಮಿಸಬೇಕು. 

ಬುದ್ಧನು ನೀಡಿದ ಒಂದು ಉದಾಹರಣೆಯನ್ನು ಇಲ್ಲಿ ಗಮನಿಸಬಹುದು: ಅಕ್ಕಿಯ ದೊಡ್ಡ ಚೀಲವೊಂದನ್ನು ಕಾಳುಕಾಳಾಗಿ ತುಂಬಿಸುವುದನ್ನು ಕಲ್ಪಿಸಿಕೊಳ್ಳಿ. ಕೆಲವರು ಒಂದು ಹಿಡಿ ಅಕ್ಕಿಯನ್ನು ನೀಡಬಹುದು, ಇನ್ನು ಕೆಲವರು ಕೇವಲ ಒಂದೇ ಒಂದು ಕಾಳನ್ನು ನೀಡಬಹುದು; ಆದರೂ ಅವರಿಬ್ಬರೂ ಸಹಾಯ ಮಾಡುವ ತಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದಾರೆ. ಇದೇ ವಿಷಯದ ತಿರುಳು: ನಮ್ಮ ಕೊಡುಗೆ ಸೀಮಿತವಾಗಿರಬಹುದು ಎಂದು ನಮಗೆ ತಿಳಿದಿದ್ದರೂ, ನಾವು ಶ್ರಮಿಸುವುದನ್ನು ಮುಂದುವರಿಸುತ್ತೇವೆ.

ಆದ್ದರಿಂದ, ಶಿಕ್ಷಕರು ಅಥವಾ ವೈದ್ಯರಾಗಲು ತರಬೇತಿ ಪಡೆಯುತ್ತಿರುವ ನಿಮಗೆ, ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಅದ್ಭುತ ಅವಕಾಶವಿದೆ. ಶಿಕ್ಷಕರಾಗಿ, ನೀವು ಭವಿಷ್ಯದ ಪೀಳಿಗೆಗೆ ಶಿಕ್ಷಣ ನೀಡುತ್ತೀರಿ ಮತ್ತು ಅವರು ಜಗತ್ತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಲು ಸಮರ್ಥರನ್ನಾಗಿ ಮಾಡುತ್ತೀರಿ. ವೈದ್ಯರಾಗಿ, ನೀವು ರೋಗಿಗಳನ್ನು ಗುಣಪಡಿಸಲು ನೆರವಾಗುತ್ತೀರಿ, ಆ ಮೂಲಕ ಅವರು ಭವಿಷ್ಯದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಲು ದಾರಿ ಮಾಡಿಕೊಡುತ್ತೀರಿ. ಇದು ಅವರ ಸಂತೋಷ ಮತ್ತು ಕ್ಷೇಮದ ಹಂಬಲದೊಂದಿಗೆ ಆಳವಾಗಿ ಬೆಸೆದುಕೊಂಡಿದೆ; ಹೀಗಾಗಿ, ನಾವು ಅವರ ಬಗ್ಗೆ ಯಾವುದೇ ಹಿಂಸಾತ್ಮಕ ಆಲೋಚನೆಗಳನ್ನು ಹೊಂದಿರಬಾರದು ಮತ್ತು ಅವರನ್ನು ಗೌರವದಿಂದ ಕಾಣಬೇಕು. "ನಾನು ನಮ್ಮ ಭವಿಷ್ಯಕ್ಕೆ ಕೊಡುಗೆ ನೀಡಬಲ್ಲೆ" ಎಂಬ ತಿಳುವಳಿಕೆಯೊಂದಿಗೆ ನಾವು ನಮ್ಮನ್ನು ಗೌರವಿಸಿಕೊಳ್ಳುತ್ತೇವೆ; ಹಾಗೆಯೇ, "ಅವರೂ ಕೂಡ ಕೊಡುಗೆ ನೀಡಬಲ್ಲರು" ಎಂಬ ಅರಿವಿನೊಂದಿಗೆ ನಮ್ಮ ರೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಗೌರವಿಸುತ್ತೇವೆ. 

ಆದರೆ "ಕೊಡುಗೆ" ಎಂದರೇನು? ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವುದು ಎಂದರೇನು? ಮೂಲಭೂತವಾಗಿ, ಇದರರ್ಥ ಜನರು ಸಂತೋಷವಾಗಿರಲು ಅಗತ್ಯವಿರುವ ಪರಿಸರ ಅಥವಾ ಮಾರ್ಗಗಳನ್ನು ಒದಗಿಸುವುದು. ಸಂತೋಷವೆಂದರೆ ಕೇವಲ ಭೌತಿಕ ಮಟ್ಟದ್ದಲ್ಲ – ಅದು ಮುಖ್ಯವಾಗಿದ್ದರೂ ಸಹ – ಅದು ಮಾನಸಿಕ ಶಾಂತಿಯನ್ನು ಹೊಂದುವುದು ಹಾಗೂ ಜೀವನದ ಸವಾಲುಗಳನ್ನು ಎದುರಿಸಲು ಕೇವಲ ತಾಂತ್ರಿಕ ಕೌಶಲ್ಯಗಳನ್ನಷ್ಟೇ ಅಲ್ಲದೆ ಭಾವನಾತ್ಮಕ ಕೌಶಲ್ಯಗಳನ್ನೂ ಬಳಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದಾಗಿದೆ.

ಆದ್ದರಿಂದ, ನಾನು ಇವುಗಳನ್ನು ಆಧ್ಯಾತ್ಮಿಕ ಮೌಲ್ಯಗಳೆಂದು ಪರಿಗಣಿಸುತ್ತೇನೆ; ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಮ್ಮ ಜೀವನದಲ್ಲಿ ಮತ್ತು ನಾವು ಮಾಡುವ ಕೆಲಸಗಳಲ್ಲಿ ಯಾವುದಕ್ಕೆ ನಾವು ಹೆಚ್ಚಿನ ಮಹತ್ವವನ್ನು ನೀಡುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಪ್ರೇರಣೆಯ ಬಗ್ಗೆ ಆಳವಾಗಿ ಚಿಂತಿಸುವುದು ಅತ್ಯಗತ್ಯ ಎಂದು ನಾನು ನಂಬುತ್ತೇನೆ – ವಿಶೇಷವಾಗಿ ನಿಮ್ಮಂತಹ ಯುವಜನರಿಗೆ ಇದು ಅಗತ್ಯ. ನಾನು ಇದನ್ನು ಏಕೆ ಅಧ್ಯಯನ ಮಾಡುತ್ತಿದ್ದೇನೆ? ಜೀವನದಲ್ಲಿ ನಾನು ಏನನ್ನು ಸಾಧಿಸಲು ಬಯಸುತ್ತೇನೆ? ಭವಿಷ್ಯದಲ್ಲಿ ನನ್ನ ಕುಟುಂಬಕ್ಕಾಗಿ ನಾನು ಏನನ್ನು ಸಾಧಿಸಲು ಬಯಸುತ್ತೇನೆ? ಅಂತಿಮವಾಗಿ, ಭವಿಷ್ಯದ ಪೀಳಿಗೆಗಾಗಿ ನಾನು ಯಾವ ರೀತಿಯ ಪರಂಪರೆಯನ್ನು ಬಿಟ್ಟುಹೋಗಲು ಬಯಸುತ್ತೇನೆ? ನಾನೇಕೆ ಇದನ್ನು ಬಯಸುತ್ತೇನೆ? 

ಈ ಪ್ರಕ್ರಿಯೆಗೆ ಗಂಭೀರವಾದ ಆತ್ಮಾವಲೋಕನದ ಅಗತ್ಯವಿರಬಹುದು, ಆದರೆ ಇದು ಅತ್ಯಂತ ಮೌಲ್ಯಯುತವಾದದ್ದು. ಈ ಪ್ರಶ್ನೆಗಳಿಗೆ ನಮ್ಮಲ್ಲಿರುವ ಇಂದಿನ ಉತ್ತರಗಳು ಸಂಪೂರ್ಣವಾಗಿ ತೃಪ್ತಿಕರವಾಗಿಲ್ಲದಿರುವುದನ್ನು ನಾವು ಕಂಡುಕೊಳ್ಳಬಹುದು. ನಮ್ಮ ಪ್ರೇರಣೆಯನ್ನು ಬದಲಾಯಿಸಿಕೊಳ್ಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು, ನಮ್ಮ ಕಾರ್ಯಗಳು ನಮಗೆ ಮತ್ತು ಇತರರಿಗೆ ಸಂತೋಷವನ್ನು ನೀಡುತ್ತವೆಯೇ ಅಥವಾ ಸಮಸ್ಯೆಗಳನ್ನು ಸೃಷ್ಟಿಸುತ್ತವೆಯೇ ಎಂಬುದನ್ನು ನಾವು ಪರಿಗಣಿಸಬೇಕು. ಇದನ್ನು ಮೌಲ್ಯಮಾಪನ ಮಾಡುವಾಗ, ತಕ್ಷಣದ ಅಥವಾ ಅಲ್ಪಾವಧಿಯ ಫಲಿತಾಂಶಗಳಿಗಿಂತ ದೀರ್ಘಕಾಲೀನ ಪರಿಣಾಮಗಳು ಹೆಚ್ಚು ಮಹತ್ವದ್ದಾಗಿರುತ್ತವೆ. ಆದರೂ, ಜೀವನದಲ್ಲಿ ನಾವು ಏನು ಮಾಡುತ್ತಿದ್ದೇವೆ ಎಂಬುದರ ಕುರಿತು ಸ್ಪಷ್ಟತೆ ಇದ್ದರೆ ಮತ್ತು ನಾವು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ನಮಗೆ ಖಚಿತವಾದರೆ, ಅದು ನಮಗೆ ಅತ್ಯುತ್ತಮ ಆರೋಗ್ಯವನ್ನೂ ಆಳವಾದ ತೃಪ್ತಿಯ ಭಾವನೆಯನ್ನು ನೀಡುತ್ತದೆ.

ಜನರನ್ನು ಕೆಲವೊಮ್ಮೆ ಹತಾಶೆಯತ್ತ ತಳ್ಳುವ ಒಂದು ವಿಷಯವೆಂದರೆ, ತಮ್ಮ ಜೀವನದಲ್ಲಿ ಅರ್ಥ ಅಥವಾ ನಿರ್ದಿಷ್ಟ ಗುರಿಯಿಲ್ಲ ಎಂಬ ಭಾವನೆ. ನಾವು ವೃತ್ತಿಜೀವನವನ್ನು ಮುಂದುವರಿಸುತ್ತಿದ್ದರೂ, ಅದರಲ್ಲಿ ನಮ್ಮ ಮನಸ್ಸು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಿಲ್ಲ. ಜಾಗತಿಕ, ರಾಷ್ಟ್ರೀಯ, ಸ್ಥಳೀಯ ಮತ್ತು ವೈಯಕ್ತಿಕ ಮಟ್ಟದ ಸಮಸ್ಯೆಗಳ ಅಗಾಧತೆಯನ್ನು ಕಂಡು ನಾವು ಆಗಾಗ ಕಂಗೆಡುತ್ತೇವೆ; ಅವುಗಳನ್ನು ಎದುರಿಸಲಾಗದ ಅಥವಾ ಜಯಿಸಲಾಗದ ಸವಾಲುಗಳೆಂದು ಭಾವಿಸುತ್ತೇವೆ. ಇಂತಹ ಮನಸ್ಥಿತಿಯಲ್ಲಿ ಬದುಕುವಾಗ, "ಈ ಎಲ್ಲದರ ಅರ್ಥವೇನು?" ಎಂದು ನಾವೇ ಪ್ರಶ್ನಿಸಿಕೊಳ್ಳಲಾರಂಭಿಸುತ್ತೇವೆ. ಈ ಮನಸ್ಥಿತಿಯು ನೋವಿನಿಂದ ಕೂಡಿದ್ದು, ಸಂತೋಷದ ಜೀವನದಿಂದ ಬಹಳ ದೂರವಾಗಿರುತ್ತದೆ. 

ಈ ಹತಾಶೆಯನ್ನು ಹೋಗಲಾಡಿಸಲು, ನಾವು ನಮ್ಮನ್ನು ನಾವೇ ಗೌರವಿಸಲು ಕಲಿಯಬೇಕು. ಬಾಹ್ಯ ಪರಿಸ್ಥಿತಿಗಳು ಏನೇ ಇರಲಿ, ನಮ್ಮನ್ನು ನಾವು ಸುಧಾರಿಸಿಕೊಳ್ಳುವ ಸಾಮರ್ಥ್ಯ ಮತ್ತು ಉತ್ತಮ ಮನುಷ್ಯರಾಗುವ ಅವಕಾಶ ನಮ್ಮಲ್ಲಿದೆ ಎಂದು ನಾವು ನಂಬಬೇಕು. ಈ ನಂಬಿಕೆಯನ್ನು ಅಳವಡಿಸಿಕೊಳ್ಳುವುದರಿಂದ ಕೇವಲ ವೈಯಕ್ತಿಕ ಸಂತೋಷ ಮಾತ್ರ ಸಿಗುವುದಿಲ್ಲ; ನಮ್ಮ ಮನಸ್ಥಿತಿಯು ನಮ್ಮ ಸುತ್ತಮುತ್ತಲಿನ ಎಲ್ಲರ ಮೇಲೂ ಅನಿವಾರ್ಯವಾಗಿ ಪ್ರಭಾವ ಬೀರುತ್ತದೆ. ಪರಿಣಾಮವಾಗಿ, ವೈದ್ಯಕೀಯ ಅಥವಾ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಇತರರಿಗೆ ಸಹಾಯ ಮಾಡುವ ಕಾರ್ಯವು ಅತ್ಯಂತ ಅರ್ಥಪೂರ್ಣವಾದ ಪ್ರಯತ್ನವಾಗುತ್ತದೆ. ಭವಿಷ್ಯವು ಅನಿಶ್ಚಿತವಾಗಿದ್ದರೂ, ಜನರು ಆರೋಗ್ಯವಂತರೂ ಮತ್ತು ಸುಶಿಕ್ಷಿತರಾಗಿದ್ದರೆ ಪರಿಸ್ಥಿತಿ ಸುಧಾರಿಸುತ್ತದೆ ಎಂಬುದು ನಮಗೆ ತಿಳಿದಿದೆ. ಅದು ನಿಖರವಾಗಿ ಹೇಗೆ ಎಂಬುದನ್ನು ಊಹಿಸುವುದು ಕಷ್ಟವಾಗಬಹುದು, ಆದರೆ ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ಜನರನ್ನು ಸಜ್ಜುಗೊಳಿಸಲು ನಾವು ಖಂಡಿತವಾಗಿಯೂ ಸಹಾಯ ಮಾಡಬಹುದು.

ಆಧುನಿಕ ಜಗತ್ತಿನಲ್ಲಿ ಅಹಿಂಸೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಕುರಿತಾದ ನನ್ನ ಆಲೋಚನೆಗಳು ಇವು.

ಪ್ರಶ್ನೆಗಳು

ನಮ್ಮ ಆಧುನಿಕ ಜಗತ್ತಿನಲ್ಲಿ, ಸಹಾನುಭೂತಿಯು ಬೌದ್ಧಧರ್ಮದ ಒಂದು ಮೂಲಭೂತ ಮೌಲ್ಯವೆಂದು ನಮಗೆ ತಿಳಿದಿದೆ. ಆದರೆ, ವಾಸ್ತವ ಜೀವನದ ಸನ್ನಿವೇಶಗಳು ಬಹಳ ಕಠಿಣವಾಗಿರಬಹುದು; ಕೆಲವೊಮ್ಮೆ ಮಕ್ಕಳು ಪೋಷಕರಿಲ್ಲದೆ ಬೆಳೆಯುತ್ತಾರೆ ಮತ್ತು ಮುಂದೆ ಸಾಕಷ್ಟು ಕ್ರೂರ ಸ್ವಭಾವವನ್ನು ಬೆಳೆಸಿಕೊಳ್ಳುತ್ತಾರೆ. ಶಿಕ್ಷಕರಾಗಿ, ಅವರಿಗೆ ಸಹಾನುಭೂತಿಯ ಮಹತ್ವವನ್ನು ಮನವರಿಕೆ ಮಾಡಿಕೊಡುವುದು ಸವಾಲಿನ ಕೆಲಸವಾಗಿದೆ – ಅಂದರೆ, ದುರ್ಬಲರನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ಕಲಿಸುವುದು ಹಾಗೂ ದುರ್ಬಲರಿಗೆ ಹಾನಿ ಮಾಡಬಾರದು ಅಥವಾ ಕ್ರೂರವಾಗಿ ವರ್ತಿಸಬಾರದು ಎಂಬುದನ್ನು ಅವರಿಗೆ ಅರ್ಥೈಸಿಕೊಡುವುದು. ಹಾಗಾದರೆ, ಶಿಕ್ಷಕರಾಗಿ ನಾವು ಈ ಸಂದೇಶವನ್ನು ವಿದ್ಯಾರ್ಥಿಗಳಿಗೆ – ವಿಶೇಷವಾಗಿ ಹಿಂಸಾತ್ಮಕ ಪ್ರವೃತ್ತಿ ಇರುವವರಿಗೆ ಅಥವಾ ಅತ್ಯಂತ ಕಠಿಣವಾದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಬೆಳೆಯುತ್ತಿರುವವರಿಗೆ – ಹೇಗೆ ತಲುಪಿಸಬಹುದು?

ಅಂತಹ ತುಂಟ ಮಕ್ಕಳಿಗೆ ಸಹಾಯ ಮಾಡುವ ಒಂದು ಮಾರ್ಗವೆಂದರೆ, ಅವರಿಗೆ ಇತರರೊಂದಿಗೆ ವಸ್ತುಗಳನ್ನು ಹಂಚಿಕೊಳ್ಳಲು ಅಥವಾ ಇತರರಿಗೆ ಏನನ್ನಾದರೂ ನೀಡಲು ಅವಕಾಶಗಳನ್ನು ಒದಗಿಸುವುದು ಎಂದು ನಾನು ನಂಬುತ್ತೇನೆ. ಉದಾಹರಣೆಗೆ, ಒಂದು ಮಗುವಿಗೆ ಕಾಗದದ ಹಾಳೆಯನ್ನು ಅಥವಾ ತರಗತಿಯ ಅಸೈನ್‌ಮೆಂಟ್‌ನ ಪ್ರತಿಯನ್ನು ಸಹಪಾಠಿಗೆ ನೀಡುವ ಅವಕಾಶ ಸಿಕ್ಕರೆ, ಇತರರಿಗೆ ಸಹಾಯ ಮಾಡುವ ಈ ಸಣ್ಣ ಕ್ರಿಯೆಯು ಅವರಲ್ಲಿ ಆತ್ಮಗೌರವದ ಭಾವನೆಯನ್ನು ಬೆಳೆಸುತ್ತದೆ. ಸಾಮಾನ್ಯವಾಗಿ, ಕಷ್ಟಕರವಾದ ಅಥವಾ ಪ್ರೀತಿ-ವಾತ್ಸಲ್ಯವಿಲ್ಲದ ವಾತಾವರಣದಲ್ಲಿ ಬೆಳೆದ ಮಕ್ಕಳು ತಮ್ಮ ನೋವನ್ನು ಆಕ್ರಮಣಕಾರಿ ಅಥವಾ ಕ್ರೂರ ನಡವಳಿಕೆಯ ಮೂಲಕ ಹೊರಹಾಕುತ್ತಾರೆ; "ನನ್ನ ಹಿನ್ನೆಲೆಯಿಂದಾಗಿ ಜನರು ನನ್ನನ್ನು ಒಳ್ಳೆಯ ವ್ಯಕ್ತಿ ಎಂದು ಪರಿಗಣಿಸದಿದ್ದರೆ, ನಾನು ಎಷ್ಟು 'ಕೆಟ್ಟವನಾಗಬಲ್ಲೆ' ಎಂಬುದನ್ನು ಅವರಿಗೆ ತೋರಿಸಿಕೊಡುತ್ತೇನೆ" ಎಂದು ಅವರು ಭಾವಿಸಬಹುದು. ಪರಿಣಾಮವಾಗಿ, ತಾವು ಸಮಾಜದ ಭಾಗವಲ್ಲ ಎಂದು ಭಾವಿಸಿ, ಅವರು ಸಮಾಜವಿರೋಧಿ ನಡವಳಿಕೆ ಅಥವಾ ಅಪರಾಧ ಕೃತ್ಯಗಳಲ್ಲಿಯೂ ತೊಡಗಬಹುದು. ಆದಾಗ್ಯೂ, ತಾವು ಒಳ್ಳೆಯವರು ಎಂಬುದನ್ನು ಸಾಬೀತುಪಡಿಸಲು – ಅದು ಸಣ್ಣ ವಿಷಯವಾಗಿದ್ದರೂ ಸಹ – ಅವರಿಗೆ ಅವಕಾಶ ನೀಡಿದರೆ, ತಮ್ಮಲ್ಲಿ ಕೇವಲ ನಕಾರಾತ್ಮಕ ಗುಣಗಳಷ್ಟೇ ಅಲ್ಲದೆ ಸಕಾರಾತ್ಮಕ ಗುಣಗಳೂ ಇವೆ ಎಂಬ ಭಾವನೆ ಅವರಲ್ಲಿ ಬಲಪಡುತ್ತದೆ.

ಬೌದ್ಧ ದೃಷ್ಟಿಕೋನದಿಂದ ಹೇಳುವುದಾದರೆ, ಈ ರೀತಿಯಾಗಿ ಇತರರಿಗೆ ನೀಡುವುದು ಒಂದು ಬಗೆಯ ಸಕಾರಾತ್ಮಕ ಶಕ್ತಿ ಅಥವಾ ಪುಣ್ಯವನ್ನು ಉಂಟುಮಾಡುತ್ತದೆ. ಆದರೂ, ಇದನ್ನು ಬೌದ್ಧ ಪರಿಭಾಷೆಯಲ್ಲೇ ವಿವರಿಸುವ ಅಗತ್ಯವಿಲ್ಲ; ಕೆಲವೊಮ್ಮೆ ಇದನ್ನು ಕೇವಲ ಮನೋವೈಜ್ಞಾನಿಕ ದೃಷ್ಟಿಕೋನದಿಂದ ವಿವರಿಸುವುದೂ ಸಹಾಯಕವಾಗಬಹುದು ಎಂದು ನಾನು ಭಾವಿಸುತ್ತೇನೆ. ಅವರಿಗೆ ಯಾವುದಾದರೂ ಸಕಾರಾತ್ಮಕ ಮತ್ತು ರಚನಾತ್ಮಕ ಕಾರ್ಯವನ್ನು ವಹಿಸಿಕೊಡುವಾಗ, ಅದು ಶಿಕ್ಷೆಯ ಒಂದು ರೂಪವೆಂದು ಅವರಿಗೆ ಅನಿಸದಂತೆ ನೋಡಿಕೊಳ್ಳುವುದು ಅತ್ಯಗತ್ಯ.

ನಮ್ಮ ಜೀವನದಲ್ಲಿ, ನಾವು ಆಗಾಗ ಇತರರನ್ನು ಶಿಸ್ತುಬದ್ಧಗೊಳಿಸಲು ಪ್ರಯತ್ನಿಸುತ್ತೇವೆ. ಆದರೆ, ಶಿಸ್ತುಬದ್ಧಗೊಳಿಸುವ ಪ್ರಕ್ರಿಯೆಯಲ್ಲಿ ವ್ಯಕ್ತಿಯನ್ನು ಸುಧಾರಿಸುವುದು ಅಥವಾ ಪುನರ್ವಸತಿ ಕಲ್ಪಿಸುವುದೂ ಸೇರಿರುತ್ತದೆ. ಈ ಹಿನ್ನೆಲೆಯಲ್ಲಿ, ಶಿಸ್ತಿನ ಕ್ರಮಕ್ಕೆ ಒಳಗಾಗುವ ವ್ಯಕ್ತಿಗೆ ಯಾವುದು ಹೆಚ್ಚು ಪ್ರಯೋಜನಕಾರಿ? ಶಿಕ್ಷೆಯೇ, ಸಮಾಜ ಸೇವೆಗೆ ಸಂಬಂಧಿಸಿದ ಚಟುವಟಿಕೆಗಳೇ ಅಥವಾ ನೈತಿಕ ಶಿಕ್ಷಣವೇ? ಈ ವಿಷಯವು ಜೈಲಿನಲ್ಲಿರುವ ಅಪರಾಧಿಗಳಿಗೂ ಹಾಗೂ ಹೊರಗಿನ ಪ್ರಪಂಚದಲ್ಲಿರುವ ವಯಸ್ಕರಿಗೂ ಅನ್ವಯಿಸುತ್ತದೆ.

ಇದಕ್ಕೆ ಉತ್ತರಿಸುವುದು ಸಾಮಾನ್ಯವಾಗಿ ಬಹಳ ಕಷ್ಟ, ಏಕೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ. ವೈಯಕ್ತಿಕವಾಗಿ ಹೇಳುವುದಾದರೆ, ನಾನು ಎಂದಿಗೂ ಜೈಲುಗಳಲ್ಲಿ ಬೋಧನೆ ಮಾಡಿಲ್ಲ, ಆದರೆ ನನ್ನ ಅನೇಕ ಬೌದ್ಧ ಸಹೋದ್ಯೋಗಿಗಳು ಅಲ್ಲಿ ಬೋಧಿಸಿದ್ದಾರೆ. ಅವರು ಗಮನಿಸಿದ ಒಂದು ವಿಷಯವೆಂದರೆ, ಜೈಲಿನಲ್ಲಿರುವ ಅನೇಕರಿಗೆ ಈ ಬೋಧನೆಗಳನ್ನು ಅರ್ಥಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಕಷ್ಟು ಸಮಯದ ಅಗತ್ಯವಿರುತ್ತದೆ – ಅಂದರೆ ತಮ್ಮ ಜೀವನದ ಬಗ್ಗೆ ಚಿಂತಿಸಲು, ತಾವು ನಡೆಸುತ್ತಿರುವ ಜೀವನಶೈಲಿಯನ್ನು ಅವಲೋಕಿಸಲು ಮತ್ತು ಜೀವನದಿಂದ ತಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಅರಿಯಲು ಸಮಯ ಬೇಕಾಗುತ್ತದೆ. ಅನೇಕ ಕೈದಿಗಳು ತಮ್ಮ ಕೋಪ ಮತ್ತು ಹಿಂಸಾತ್ಮಕ ಪ್ರವೃತ್ತಿಗಳನ್ನು ಹೇಗೆ ನಿಯಂತ್ರಿಸಬೇಕೆಂದು ಕಲಿಯಲು ಆಸಕ್ತಿ ಹೊಂದಿರುತ್ತಾರೆ; ಹೀಗಾಗಿ ಅವರು ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸುವಂತಹ ಬೌದ್ಧ ಧ್ಯಾನದ ಮೂಲ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಅದರಿಂದ ಅಗತ್ಯವಾದ ಸಹಾಯವನ್ನು ಪಡೆಯುತ್ತಾರೆ. ಆದರೂ, ಎಲ್ಲರೂ ಸಹಾಯ ಪಡೆಯಲು ಮುಂದೆ ಬರುವುದಿಲ್ಲ; ಅವರು ಅದಕ್ಕೆ ಮನಸ್ಸು ಮಾಡದಿದ್ದರೆ ಅಥವಾ ಅದನ್ನು ಸ್ವೀಕರಿಸಲು ಸಿದ್ಧರಿಲ್ಲದಿದ್ದರೆ, ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವ ಅಥವಾ ಸುಧಾರಿಸಿಕೊಳ್ಳುವ ಬಯಕೆ ಇಲ್ಲದಿದ್ದಾಗ, ದೈಹಿಕ ಶಿಕ್ಷೆಯು ಅವರಲ್ಲಿ ಹೆಚ್ಚಿನ ದ್ವೇಷ ಮತ್ತು ಕೋಪವನ್ನು ಮಾತ್ರ ಹುಟ್ಟುಹಾಕುತ್ತದೆ.

ಕೆಲವು ಮನೋವೈಜ್ಞಾನಿಕ ತರಬೇತಿ ವಿಧಾನಗಳಿವೆ – ಇವು ಇಲ್ಲಿ ನೇರವಾಗಿ ಅನ್ವಯವಾಗದಿರಬಹುದು, ಆದರೆ ವಿಷಯವನ್ನು ವಿವರಿಸಲು ಸಹಾಯಕವಾಗಿವೆ – ಅದರಲ್ಲಿ ಸಹಕರಿಸಲು ಇಷ್ಟಪಡದ ಮತ್ತು ಹಠಮಾರಿ ವರ್ತನೆ ತೋರಿಸುವ ಮಕ್ಕಳು, ಸಾಮಾನ್ಯವಾಗಿ ಹದಿಹರೆಯದವರು, ಜನರ ಗುಂಪು ಮತ್ತು ಒಂದು ಹೇಸರಗತ್ತೆಯೊಂದಿಗೆ ಪ್ರಯಾಣ ಮಾಡುತ್ತಾರೆ. ಆ ಹೇಸರಗತ್ತೆಯು ಅತ್ಯಂತ ಹಠಮಾರಿ ಸ್ವಭಾವದ್ದಾಗಿರುತ್ತದೆ, ಹೀಗಾಗಿ ಅದನ್ನು ತಮಗೆ ಬೇಕಾದ ರೀತಿಯಲ್ಲಿ ನಡೆಸುವುದು ಕಷ್ಟಕರವಾಗಿರುತ್ತದೆ. ಹೇಸರಗತ್ತೆಯ ಜವಾಬ್ದಾರಿ ಅವರ ಮೇಲೆಯೇ ಇರುವುದರಿಂದ, ಅವರು ಅದನ್ನು ಕೆಲಸ ಮಾಡುವಂತೆ ಮಾಡಲೇಬೇಕಾಗುತ್ತದೆ; ಈ ಪ್ರಕ್ರಿಯೆಯಲ್ಲಿ, ಅವರು ತಮ್ಮ ಕೋಪ ಮತ್ತು ಅಸಹನೆಯನ್ನು ನಿಯಂತ್ರಿಸಲು ಹಾಗೂ ಆ ಪ್ರಾಣಿಯೊಂದಿಗೆ ಹೇಗೆ ಕೆಲಸ ಮಾಡಬೇಕೆಂದು ಕಲಿಯುತ್ತಾರೆ. ಮೂಲಭೂತವಾಗಿ, ಇದು ಹೇಸರಗತ್ತೆಯ ಜವಾಬ್ದಾರಿಯನ್ನು ಹೊತ್ತುಕೊಂಡು, ಅದರೊಂದಿಗೆ ಕೆಲಸ ಮಾಡುತ್ತಾ, ಒಂದು ರಚನಾತ್ಮಕ ಕಾರ್ಯವನ್ನು ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದ ವಿಷಯವಾಗಿದೆ.

ಆದ್ದರಿಂದ, ಕೆಲವೊಮ್ಮೆ ಮಕ್ಕಳಿಗೆ ಪ್ರಾಣಿಯೊಂದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಬೇಕು... ಏಕೆಂದರೆ ಪ್ರಾಣಿಯು ಅವರಿಗೆ ನೋವಾಗುವಂತಹ ಮಾತುಗಳನ್ನು ಆಡುವುದಿಲ್ಲ, ಆದರೆ ಮನುಷ್ಯರು ಕೆಲವೊಮ್ಮೆ ಹಾಗೆ ಮಾತಾಡುತ್ತಾರೆ. ನಾಯಿಗೆ ಎಷ್ಟೇ ಶಿಸ್ತು ಕಲಿಸಲು ಪ್ರಯತ್ನಿಸಿದರೂ, ಅದು ನಿಮ್ಮನ್ನು ಇಷ್ಟಪಡುವುದನ್ನು ಮುಂದುವರಿಸುತ್ತದೆ. ಹೀಗಾಗಿ, ಮತ್ತೊಂದು ಜೀವಿಯೊಂದಿಗೆ – ಈ ಸಂದರ್ಭದಲ್ಲಿ ನಾಯಿಯೊಂದಿಗೆ – ಒಡನಾಟವನ್ನು ಹೊಂದುವುದು ಸಕಾರಾತ್ಮಕ ಪರಿಣಾಮವನ್ನು ಬೀರಬಲ್ಲದು; ಅದರ ಮೂಲಕ ಪ್ರಾಣಿಯನ್ನು ನೋಡಿಕೊಳ್ಳುವುದು, ಶಾಂತವಾಗಿಡುವುದು ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದನ್ನು ಕಲಿಯಬಹುದು. ಆದರೂ, ಕೆಲವರು ಸಹಜವಾಗಿಯೇ ಹಿಂಸಾತ್ಮಕ ಸ್ವಭಾವದವರಾಗಿರುತ್ತಾರೆ; ಅಂತಹವರಿಗೆ ನಾಯಿಯನ್ನು ನೀಡಿದರೆ ಅವರು ಅದನ್ನು ದುರ್ಬಳಕೆ ಮಾಡಬಹುದು ಅಥವಾ ಹಿಂಸಿಸಬಹುದು. ಆದ್ದರಿಂದ, ಈ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದಿರಬೇಕು.

ನನ್ನ ಸ್ನೇಹಿತೆಯೊಬ್ಬರು ಮನೋವೈದ್ಯೆಯಾಗಿದ್ದಾರೆ; ಅವರು ಮುಖ್ಯವಾಗಿ ಹಿಂಸಾತ್ಮಕ ಪ್ರವೃತ್ತಿಯ ಹದಿಹರೆಯದವರು ಮತ್ತು ನಿರಾಶ್ರಿತರೊಂದಿಗೆ (ಅಂದರೆ ಬೀದಿಗಳಲ್ಲಿ ವಾಸಿಸುತ್ತಿರುವವರೊಂದಿಗೆ) ಕೆಲಸ ಮಾಡುತ್ತಾರೆ. ಹಿಂಸಾತ್ಮಕವಾಗಿ ವರ್ತಿಸಬಲ್ಲ ಇಂತಹ ಯುವಕರೊಂದಿಗೆ ವ್ಯವಹರಿಸುವಾಗ ಅತ್ಯಗತ್ಯವಾದ ಒಂದು ತತ್ವವನ್ನು ಅವರು ನನ್ನೊಂದಿಗೆ ಹಂಚಿಕೊಂಡಿದ್ದಾರೆ: ಅದೇನೆಂದರೆ, ಅವರನ್ನು ನಿಜವಾದ ಆಸಕ್ತಿ, ಗೌರವ ಮತ್ತು ಮಾನವೀಯ ದೃಷ್ಟಿಕೋನದಿಂದ ನೋಡುವುದು. ಅವರನ್ನು ಗಂಭೀರವಾಗಿ ಪರಿಗಣಿಸಿ, ಅವರು ಹೇಳುವುದನ್ನು ಆಲಿಸಲು ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಮಯ ಮೀಸಲಿಡಬೇಕು. ಆದರೆ, "ಓಹ್, ನಿಮ್ಮ ಸಮಯ ಮುಗಿದಿದೆ; ನೀವು ಈಗ ಹೋಗಬೇಕು" ಎಂದು ಹೇಳಿ ಸಂಭಾಷಣೆಯನ್ನು ಹಠಾತ್ತನೆ ಮೊಟಕುಗೊಳಿಸಬಾರದು. ಇಂತಹ ಮಾತುಗಳು ಅವರು ತಿರಸ್ಕರಿಸಲ್ಪಟ್ಟಿದ್ದಾರೆ ಎಂಬ ಭಾವನೆಯನ್ನು ಉಂಟುಮಾಡಬಹುದು; ಆಗ ಅವರು ತೀವ್ರ ಕೋಪದಿಂದ ಪ್ರತಿಕ್ರಿಯಿಸಬಹುದು.

ಆದ್ದರಿಂದ, ಇಲ್ಲಿನ ಪಾಠವೇನೆಂದರೆ, ಶಿಸ್ತಿನ ಕೊರತೆಯಿರುವ ವಿದ್ಯಾರ್ಥಿಯೊಂದಿಗೆ ವ್ಯವಹರಿಸುವಾಗ ನೀವು ಅವರಿಗೆ ನಿಮ್ಮ ಸಮಯವನ್ನು ನೀಡಬೇಕು. ಆ ವಿದ್ಯಾರ್ಥಿ ಹೇಳುವುದನ್ನು ನೀವು ಆಲಿಸಬೇಕು ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಒಂದು ವೇಳೆ ನಿಮಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೂ, ಸಹಾನುಭೂತಿಯಿಂದ ಆಲಿಸುವುದೇ ಅವರಿಗೆ ಸಹಾಯವಾಗುತ್ತದೆ. ಇದಕ್ಕೆ ಯಾವುದೇ ಸಮಯದ ಮಿತಿಯನ್ನು ವಿಧಿಸದೆ, ಅಂತಹ ವಿದ್ಯಾರ್ಥಿಗಳನ್ನು ಮನುಷ್ಯರೆಂದು ಪರಿಗಣಿಸಿ ಗೌರವ ನೀಡಬೇಕು.

ಆದರೆ ವಾಸ್ತವದಲ್ಲಿ, ಅವರನ್ನು ಶಿಸ್ತಿನಲ್ಲಿಡಲು ಯಾವ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳುವುದು ಬಹಳ ಕಷ್ಟ. ನಿಮ್ಮ ಸಮಾಜದಲ್ಲಿ ಯಾವುದು ಸರಿ ಅಥವಾ ತಪ್ಪು ಎಂದು ಪರಿಗಣಿಸಲಾಗುತ್ತದೆ ಎಂಬುದು ನನಗೆ ತಿಳಿದಿಲ್ಲ. ಆದರೂ, ಕೇವಲ ಶಿಕ್ಷಿಸುವುದರಿಂದ ಅಥವಾ ಕೋಪಗೊಳ್ಳುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ಜನರೊಂದಿಗಿನ ನಮ್ಮ ದೈನಂದಿನ ಒಡನಾಟದಲ್ಲಿ ಉಂಟಾಗುವ ಕಿರಿಕಿರಿಯನ್ನು ನಾವು ಹೇಗೆ ನಿವಾರಿಸಿಕೊಳ್ಳಬಹುದು?

ನಮಗೆ ಇಷ್ಟವಿಲ್ಲದ ಅಥವಾ ಕಿರಿಕಿರಿ ಉಂಟುಮಾಡುವ ಯಾವುದೇ ಪರಿಸ್ಥಿತಿಯನ್ನು ನಾವು ವಿಶ್ಲೇಷಿಸಿದರೆ, ಅದು ಅನೇಕ ಕಾರಣಗಳು, ಪರಿಸ್ಥಿತಿಗಳು ಮತ್ತು ಸಂದರ್ಭಗಳಿಂದ ಉಂಟಾಗುತ್ತದೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ಉದಾಹರಣೆಗೆ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶಗಳು, ಸಂಬಂಧಪಟ್ಟ ವ್ಯಕ್ತಿಗಳ ಕೌಟುಂಬಿಕ ಪರಿಸರ, ಅವರ ಹಿನ್ನೆಲೆ ಇತ್ಯಾದಿ. ಕೋಪ ಉಂಟಾದಾಗ, ನಾವು ಆ ಘಟನೆಯ ಮೇಲೆಯೇ ನಮ್ಮ ಗಮನವನ್ನು ಕೇಂದ್ರೀಕರಿಸಿ, ಅದನ್ನು ಭಯಾನಕವಾದದ್ದು ಮತ್ತು ನಮ್ಮ ಕಿರಿಕಿರಿಯ ಏಕೈಕ ಮೂಲ ಎಂದು ಭಾವಿಸುತ್ತೇವೆ. ಆ ಪರಿಸ್ಥಿತಿಯ ಬಗ್ಗೆ ಕೇವಲ ನಕಾರಾತ್ಮಕ ಅಂಶಗಳನ್ನು ಮಾತ್ರ ಕಾಣುತ್ತಾ, ಅದರ ಹಿಂದಿರುವ ಕಾರಣಗಳು, ಪರಿಸ್ಥಿತಿಗಳು ಮತ್ತು ಸಂದರ್ಭಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಪರಿಸ್ಥಿತಿ ಬೇರೆಯಾಗಿರಬೇಕೆಂದು ಬಯಸುವುದರಿಂದ, ವಾಸ್ತವತೆಯನ್ನು ಬಲವಾಗಿ ತಿರಸ್ಕರಿಸುವ ಭಾವನೆಯಾಗಿ ಕೋಪವು ವ್ಯಕ್ತವಾಗುತ್ತದೆ.

ತಿರಸ್ಕಾರದ ಸ್ವರೂಪವನ್ನು ಗಮನಿಸಿ: ಅದರ ಮೂಲದಲ್ಲಿ "ನಾನು ಈ ನೋವು ಮತ್ತು ಕಷ್ಟದಿಂದ ಮುಕ್ತನಾಗಲು ಬಯಸುತ್ತೇನೆ" ಎಂಬ ಭಾವನೆ ಇರುತ್ತದೆ. ಇಲ್ಲಿಯೇ ಪ್ರೀತಿ ಮತ್ತು ಸಹಾನುಭೂತಿಯ ಪಾತ್ರ ಬರುತ್ತದೆ. ಹೀಗಾಗಿ, ಕೋಪ ಮತ್ತು ಕಿರಿಕಿರಿಗೆ ಪ್ರೀತಿಯೇ ಪರಿಹಾರ. ಪ್ರೀತಿ ಎಂದರೆ ಇನ್ನೊಬ್ಬ ವ್ಯಕ್ತಿಯು ಕ್ಷೇಮವಾಗಿರಬೇಕು ಮತ್ತು ಸಂತೋಷವಾಗಿರಬೇಕು ಎಂದು ಬಯಸುವುದು. ಅವರು ಅಷ್ಟು ಕೆಟ್ಟದಾಗಿ ವರ್ತಿಸುತ್ತಿರುವುದಕ್ಕೆ ಅನೇಕ ಸನ್ನಿವೇಶಗಳು ಮತ್ತು ಅವರಲ್ಲಿರುವ ಅಸಂತೋಷವೇ ಕಾರಣವಾಗಿರುತ್ತದೆ. ಅವರು ಸಂತೋಷವಾಗಿರಬೇಕು ಎಂದು ನಾನು ಬಯಸುತ್ತೇನೆ; ಆಗ ಮಾತ್ರ ಅವರು ಇತರರಿಗೆ ಕಿರಿಕಿರಿ ಉಂಟುಮಾಡುವುದನ್ನು ಅಥವಾ ಭಯಾನಕವಾಗಿ ವರ್ತಿಸುವುದನ್ನು ನಿಲ್ಲಿಸಬಹುದು. ಅವರು ಸಂತೋಷವನ್ನು ಕಂಡುಕೊಳ್ಳಲು ಸಹಾಯ ಮಾಡಲು, ಅವರ ನೋವು ಮತ್ತು ಶಿಸ್ತಿನ ಕೊರತೆಗೆ ಕಾರಣವಾಗಿರುವ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಅವುಗಳಲ್ಲಿ ಬದಲಾವಣೆ ತರಲು ನಾನೇನು ಮಾಡಬಹುದು ಎಂಬುದನ್ನು ನಿರ್ಧರಿಸಬೇಕು.

ಇವು ನಾವು ಬಳಸುವ ಕೆಲವು ವಿಧಾನಗಳು. ಮೂಲಭೂತವಾಗಿ, ಇದು ವಿಶ್ಲೇಷಣೆಯ ಪ್ರಕ್ರಿಯೆಯಾಗಿದೆ: ಅಂದರೆ, ಆ ಪರಿಸ್ಥಿತಿಯು ನಿರ್ದಿಷ್ಟ ಕಾರಣಗಳಿಂದ ಉಂಟಾಗಿದೆ ಎಂಬುದನ್ನು ಗುರುತಿಸುವುದು. ಅವರು ಆ ರೀತಿಯಲ್ಲಿ ವರ್ತಿಸುವುದನ್ನು ನಿಲ್ಲಿಸಬೇಕೆಂದು ಬಯಸಿದಾಗ, "ಆ ವರ್ತನೆಯನ್ನು ಬದಲಾಯಿಸಲು ನಾನು ಏನು ಮಾಡಬಹುದು?" ಎಂದು ನನ್ನನ್ನೇ ಕೇಳಿಕೊಳ್ಳುತ್ತೇನೆ.

ಶಿಕ್ಷಕರಾಗಿ, ನಾವು ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ವೈವಿಧ್ಯಮಯ ಹಿನ್ನೆಲೆಗಳನ್ನು ಹೊಂದಿರುವ ಮಕ್ಕಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಇಂತಹ ವೈವಿಧ್ಯಮಯ ಮಕ್ಕಳ ಗುಂಪಿಗೆ ಶಿಸ್ತು ಕಲಿಸಲು ಮತ್ತು ಶಿಕ್ಷಣ ನೀಡಲು ಕೇವಲ ತಾಳ್ಮೆ ಸಾಕಾಗುತ್ತದೆಯೇ?

ಮಕ್ಕಳ ಬಗ್ಗೆ ನಿಜವಾದ ಆಸಕ್ತಿಯನ್ನು ಹೊಂದಿರುವುದು ಅತ್ಯಂತ ನಿರ್ಣಾಯಕ ಅಂಶ. ಅವರ ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ನೀವು ಯಾರಿಗೆ ಬೋಧಿಸಲು ಪ್ರಯತ್ನಿಸುತ್ತಿದ್ದೀರೋ ಅವರನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರೋ, ಅಷ್ಟೇ ಅವರ ನೈಜ ಅಗತ್ಯಗಳನ್ನು ಸ್ಪಷ್ಟವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಶಿಕ್ಷಣದ ಉದ್ದೇಶವು ಕೇವಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವುದಲ್ಲ, ಬದಲಿಗೆ ಅವರು ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ನೆರವಾಗುವುದಾಗಿದೆ. ಆದ್ದರಿಂದ, ಅವರನ್ನು ತಿಳಿದುಕೊಳ್ಳಲು ಸಮಯ ಮೀಸಲಿಡಿ. ಅವರ ಬಗ್ಗೆ, ಅವರ ಕುಟುಂಬಗಳ ಬಗ್ಗೆ ಅಥವಾ ಅವರ ಹಿನ್ನೆಲೆಗಳ ಬಗ್ಗೆ ಕಿರು ಪ್ರಬಂಧಗಳನ್ನು ಬರೆಯುವಂತೆ ಕೇಳಬಹುದು. ತಮ್ಮ ಬಗ್ಗೆ ಏನನ್ನಾದರೂ ಹಂಚಿಕೊಳ್ಳಲು ಪ್ರೋತ್ಸಾಹಿಸಿ; ಹೀಗೆ ಮಾಡುವುದರಿಂದ ಅವರನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಥವಾ ತಮ್ಮ ಬಗ್ಗೆ ಏನನ್ನಾದರೂ ಹಂಚಿಕೊಳ್ಳಲು ಬಯಸಿದಾಗ, ನಾನು ಅವರಿಗೆ ಅಡ್ಡಿಪಡಿಸದೆ ಅವರ ಮಾತನ್ನು ಆಲಿಸಲು ಅವರ ಬಳಿ ಹೋಗುತ್ತೇನೆ; ಏಕೆಂದರೆ ಅವರಿಗೆ ತಿರಸ್ಕಾರದ ಭಯವಿರುತ್ತದೆ. ಈ ಮನೋಭಾವ ಮತ್ತು ಭಯವನ್ನು ಹೋಗಲಾಡಿಸಲು ನಾನು ಅವರಿಗೆ ಹೇಗೆ ಸಹಾಯ ಮಾಡಬಹುದು?

ಹದಿಹರೆಯದವರಲ್ಲಿ ಇದೊಂದು ಪ್ರಮುಖ ಸಮಸ್ಯೆ – ಅವರು ಇತರರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಕುರಿತು ಹೆಚ್ಚಾಗಿ ಚಿಂತಿಸುತ್ತಾರೆ. ಅವರು ತಮ್ಮ ಸಂಕೋಚವನ್ನು ಹೇಗೆ ಹೋಗಲಾಡಿಸಬಹುದು? ಬೌದ್ಧ ಮಠೀಯ ಶಿಕ್ಷಣ ಪದ್ಧತಿಯಲ್ಲಿ ಬಳಸಲಾಗುವ ಒಂದು ವಿಧಾನವೆಂದರೆ, ಪಾಠದ ನಂತರ ವಿದ್ಯಾರ್ಥಿಗಳು ಜೋಡಿಗಳಾಗಿ ಸೇರಿ ತಾವು ಕಲಿತ ವಿಷಯದ ಬಗ್ಗೆ ಚರ್ಚಿಸುವುದು; ಹೀಗೆ ಮಾಡುವ ಮೂಲಕ ಅವರು ವಿಷಯದ ಕುರಿತಾದ ತಮ್ಮ ತಿಳುವಳಿಕೆಯನ್ನು ಪರಿಶೀಲಿಸಿಕೊಳ್ಳುವುದರ ಜೊತೆಗೆ, ಅರ್ಥಪೂರ್ಣ ಹಾಗೂ ತಾರ್ಕಿಕ ಚರ್ಚೆಯಲ್ಲಿ ತೊಡಗುತ್ತಾರೆ. ಈ ವಿಧಾನದಲ್ಲಿ, ಇಡೀ ತರಗತಿಯ ಮುಂದೆ ಮಾತನಾಡುವ ಸಂದರ್ಭವಿರುವುದಿಲ್ಲ; ಬದಲಾಗಿ, ಜೋಡಿಗಳಾಗಿರುವಾಗ ಅವರು ಮಾತನಾಡುವುದು ಅನಿವಾರ್ಯವಾಗುತ್ತದೆ. ಶಿಕ್ಷಕರು ತರಗತಿಯಲ್ಲಿ ಓಡಾಡುತ್ತಾ, ಒಂದೆರಡು ನಿಮಿಷಗಳ ಕಾಲ ಅವರ ಮಾತುಗಳನ್ನು ಆಲಿಸಿ, ಅವರು ಸರಿಯಾದ ವಿಷಯದ ಬಗ್ಗೆಯೇ ಚರ್ಚಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬಹುದು. ಇದು ಅತ್ಯುತ್ತಮ ಬೋಧನಾ ವಿಧಾನವಾಗಿದೆ ಏಕೆಂದರೆ, ಯಾರೂ ಸುಮ್ಮನೆ ಕುಳಿತುಕೊಳ್ಳಲು ಅಥವಾ ಗಮನ ನೀಡದೆ ಇರಲು ಇಲ್ಲಿ ಅವಕಾಶವಿರುವುದಿಲ್ಲ; ಪ್ರತಿಯೊಬ್ಬರೂ ಮಾತನಾಡಲೇಬೇಕು. ತಾವು ನಿಜವಾಗಿಯೂ ಗಮನವಿಟ್ಟು ಕೇಳುತ್ತಿದ್ದೇವೆ ಎಂಬುದನ್ನು ಅವರು ತಮ್ಮ ಸಂಗಾತಿಯ ಮುಂದೆ ತೋರಿಸಬೇಕಾಗುತ್ತದೆ. ಹೀಗಾಗಿ, ಯಾರೂ ಸಂಕೋಚಪಡುವ ಅಗತ್ಯವಿರುವುದಿಲ್ಲ. ಅವರು ಪ್ರತಿ ಬಾರಿಯೂ ಒಂದೇ ಸಂಗಾತಿಯೊಂದಿಗೆ ಚರ್ಚೆಗೆ ಸೀಮಿತವಾಗಬಾರದು; ಬದಲಿಗೆ, ಆಗಾಗ ಸಂಗಾತಿಗಳನ್ನು ಬದಲಾಯಿಸುತ್ತಿರಬೇಕು. ಮಠೀಯ ಶಿಕ್ಷಣ ಪದ್ಧತಿಯಲ್ಲಿ ಈ ತಂತ್ರವನ್ನು ಬಳಸಲಾಗುತ್ತದೆ. ಬಹುಶಃ ಇದು ನಿಮಗೆ ಸಹಾಯಕವಾಗಬಹುದು.

Top