ಬುದ್ಧನ ಬೋಧನೆಗಳನ್ನು ಆಚರಣೆಗೆ ತರಲು ನಾವು ಬಯಸಿದರೆ, ನಿಸ್ಸಂದೇಹವಾಗಿ ಧ್ಯಾನವು ಒಂದು ಪ್ರಮುಖ ವಿಷಯವಾಗಿದೆ. ಆದರೆ ಧ್ಯಾನವು ವಿಶೇಷವಾಗಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ. ಎಲ್ಲಾ ಭಾರತೀಯ ಸಂಪ್ರದಾಯಗಳಲ್ಲಿ ಮತ್ತು ಭಾರತದ ಹೊರಗಿನ ಬೌದ್ಧೇತರ ವ್ಯವಸ್ಥೆಗಳಲ್ಲಿ ನಾವು ಧ್ಯಾನವನ್ನು ಕಾಣಬಹುದು.
ಸಂಸ್ಕೃತದಲ್ಲಿ ಧ್ಯಾನಕ್ಕಾಗಿ ಇರುವ ಪದವು "ಭಾವನ". ಭಾವನವು "ಭು" ಎಂಬ ಕ್ರಿಯಾಪದದಿಂದ ಬಂದಿದೆ, ಇದರರ್ಥ "ಆಗುವುದು" ಅಥವಾ "ಒಂದು ವಿಷಯವನ್ನು ಇನ್ನೊಂದು ವಿಷಯವಾಗಿ ಮಾಡುವುದು". ಹಾಗಾದರೆ, ಭಾವನವು ಒಂದು ಪ್ರಕ್ರಿಯೆಯಾಗಿದ್ದು, ಇದರ ಮೂಲಕ ನಾವು ಒಂದು ರೀತಿಯ ರಚನಾತ್ಮಕ ಮನಸ್ಥಿತಿಯನ್ನು ಹೇಗೆ ಅಭಿವೃದ್ಧಿಪಡಿಸುವುದು ಮತ್ತು ಸಾಂಕೇತಿಕವಾಗಿ, ನಾವು ಆ ಸ್ಥಿತಿ ಹೇಗೆ "ಆಗುತ್ತೇವೆ" ಎಂಬುದರ ಕುರಿತಾದ ಬೋಧನೆಯನ್ನು ನಾವು ತೆಗೆದುಕೊಳ್ಳುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಧ್ಯಾನ ಪ್ರಕ್ರಿಯೆಯ ಮೂಲಕ, ನಾವು ನಮ್ಮ ಮನಸ್ಸನ್ನು ನಿರ್ದಿಷ್ಟವಾದ ಪ್ರಯೋಜನಕಾರಿ ಸ್ಥಿತಿಯಲ್ಲಿರಿಸಿಕೊಳ್ಳುತ್ತೇವೆ.
ಭಾವನವು ಸಂಸ್ಕೃತ ಮೂಲ "ಭು" ದಿಂದ ಬಂದಿರುವುದರಿಂದ, "ಆಗುವುದು" ಎಂಬ ಪದದಿಂದ, ಭಾವನವು ರೂಪಾಂತರವನ್ನು ಸೂಚಿಸುತ್ತದೆ. ಉದಾಹರಣೆಗೆ, ನಾವು ಪ್ರೀತಿಯ ಬಗ್ಗೆ ಧ್ಯಾನಿಸುತ್ತಿದ್ದರೆ, ನಾವು ನಿಜವಾಗಿಯೂ ನಮ್ಮ ಹೃದಯದಲ್ಲಿ ಪ್ರೀತಿಯನ್ನು ಹೊಂದಿರುವ ವ್ಯಕ್ತಿಯಾಗಿ ನಮ್ಮನ್ನು ಪರಿವರ್ತಿಸಿಕೊಳ್ಳುತ್ತೇವೆ. ಈ ಪದವನ್ನು ಸಂಸ್ಕೃತದಿಂದ ಟಿಬೆಟಿಯನ್ ಭಾಷೆಗೆ ಅನುವಾದಿಸಿದಾಗ, ಅದನ್ನು "ಅಭ್ಯಾಸವನ್ನು ಬೆಳೆಸಿಕೊಳ್ಳುವುದು" ಎಂಬ ಅರ್ಥದೊಂದಿಗೆ ಅನುವಾದಿಸಲಾಗಿದೆ. ಇದುವೇ ಟಿಬೆಟಿಯನ್ ಪದ "ಗೋಮ್". ಗೋಮ್ ಎಂದರೆ ಸಕಾರಾತ್ಮಕವಾದದ್ದಕ್ಕೆ ನಮ್ಮನ್ನು ನಾವು ಅಭ್ಯಸಿಸಿಕೊಳ್ಳುವುದು - ನಕಾರಾತ್ಮಕ ಅಥವಾ ತಟಸ್ಥವಾದದ್ದಕ್ಕೆ ಅಲ್ಲ - ಮತ್ತು ಆ ಮೂಲಕ ಸಕಾರಾತ್ಮಕ, ರಚನಾತ್ಮಕ ಅಭ್ಯಾಸವನ್ನು ಬೆಳೆಸಿಕೊಳ್ಳುವುದು.
ಹಾಗಿದ್ದಲ್ಲಿ, ಟಿಬೆಟಿಯನ್ ಪದವು ಸಂಸ್ಕೃತ ಪದಕ್ಕೆ ಅರ್ಥ ಅಥವಾ ಸೂಚ್ಯಾರ್ಥದಲ್ಲಿ ಸಾಕಷ್ಟು ಹೋಲುತ್ತದೆ. ಎರಡೂ ಪದಗಳ ತಾತ್ವಿಕ ಅರ್ಥವೆಂದರೆ, ನಮ್ಮ ಗುರಿಯಂತೆ ನಮ್ಮನ್ನು ಪರಿವರ್ತಿಸಿಕೊಳ್ಳಲು - ಉದಾಹರಣೆಗೆ, ನಮ್ಮ ಹೃದಯದಲ್ಲಿ ಪ್ರೀತಿಯನ್ನು ಹೊಂದಿರುವ ವ್ಯಕ್ತಿ - ನಾವು ಪ್ರೀತಿಯನ್ನು ಪ್ರಯೋಜನಕಾರಿ ಅಭ್ಯಾಸವಾಗಿ ಬೆಳೆಸಿಕೊಳ್ಳಬೇಕು. ಈ ಪ್ರಯೋಜನಕಾರಿ ಅಭ್ಯಾಸವನ್ನು ಬೆಳೆಸಲು ನಾವು ಬಳಸುವ ವಿಧಾನವೆಂದರೆ ಧ್ಯಾನ.
ಬೋಧನೆಗಳನ್ನು ಆಲಿಸುವುದು
ಬುದ್ಧನ ಕಾಲದ ಮುಂಚೆಯೂ ಇದ್ದ ಮುಖ್ಯ ಭಾರತೀಯ ತಾತ್ವಿಕ ಪಠ್ಯಗಳು ಉಪನಿಷತ್ತುಗಳಾಗಿದ್ದವು ಮತ್ತು ಈ ಪಠ್ಯಗಳು ಈಗಾಗಲೇ ಧ್ಯಾನದ ಉಲ್ಲೇಖಗಳನ್ನು ಒಳಗೊಂಡಿವೆ. ಉಪನಿಷತ್ತುಗಳಲ್ಲಿ, ಧ್ಯಾನವನ್ನು ಮೂರು-ಹಂತದ ಪ್ರಕ್ರಿಯೆಯ ಸಂದರ್ಭದಲ್ಲಿ ಚರ್ಚಿಸಲಾಗಿದೆ: ಆಲಿಸುವುದು, ಯೋಚಿಸುವುದು ಮತ್ತು ಧ್ಯಾನ ಮಾಡುವುದು. ಬುದ್ಧನು ಈ ಮೂರು-ಹಂತದ ಪ್ರಕ್ರಿಯೆಯನ್ನು ಆವಿಷ್ಕರಿಸಲಿಲ್ಲ; ಅದು ಅವನ ಕಾಲದಲ್ಲಿ ಆಗಾಗಲೇ ಇತ್ತು. ಆದ್ದರಿಂದ ನಾವು ಏನನ್ನಾದರೂ ಸಕಾರಾತ್ಮಕ ಅಭ್ಯಾಸವನ್ನಾಗಿ ಮಾಡಿಕೊಳ್ಳಲು ಬಯಸಿದರೆ, ನಿಸ್ಸಂಶಯವಾಗಿ ನಾವು ಮೊದಲು ಅದರ ಬಗ್ಗೆ ಕೇಳಬೇಕು; ನಂತರ ನಾವು ಅದನ್ನು ಯೋಚಿಸುವ ಮೂಲಕ ಅರ್ಥಮಾಡಿಕೊಳ್ಳಬೇಕು; ಮತ್ತು ಅಂತಿಮವಾಗಿ, ನಾವು ಅದನ್ನು ನಮ್ಮೊಳಗೆ ಸಂಯೋಜಿಸಿಕೊಳ್ಳಬೇಕು.
ನಮಗೆ ಧರ್ಮದ ಬಗ್ಗೆ ಏನೂ ತಿಳಿದಿಲ್ಲದಿದ್ದರೆ, ನಾವು ಮೊದಲು ಬೌದ್ಧಧರ್ಮದ ಬಗ್ಗೆ ಮೂಲಭೂತ ಮಾಹಿತಿಯನ್ನು ಪಡೆಯಬೇಕು ಮತ್ತು ಈ ಮಾಹಿತಿ ಸರಿಯಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ನಿಜವಾದ ಧರ್ಮ ಬೋಧನೆಗಳಲ್ಲಿ ಆಸಕ್ತಿ ವಹಿಸಲು ಸರಿಯಾದ ಮೂಲಭೂತ ಮಾಹಿತಿ ಮಾತ್ರ ವಿಶ್ವಾಸಾರ್ಹ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಬುದ್ಧನ ಕಾಲದಲ್ಲಿ, ತಾತ್ವಿಕ ಬೋಧನೆಗಳನ್ನು ಎಂದಿಗೂ ಬರೆಯಲಾಗಲಿಲ್ಲ. ಅವುಗಳನ್ನು ಲಿಖಿತ ಪಠ್ಯಗಳಾಗಿ ಸಂಕಲಿಸುವುದು ಶತಮಾನಗಳ ನಂತರ ಪ್ರಾರಂಭವಾಯಿತು. ಇದಕ್ಕಾಗಿಯೇ ಮೂರು-ಹಂತದ ಪ್ರಕ್ರಿಯೆಯು ಬೋಧನೆಯನ್ನು "ಕೇಳುವ" ಅಗತ್ಯತೆಯೊಂದಿಗೆ ಪ್ರಾರಂಭವಾಗುತ್ತದೆ - ಬೇರೆ ರೀತಿಯಲ್ಲಿ ಹೇಳುವುದಾದರೆ, ಗಟ್ಟಿಯಾಗಿ ನೀಡಲಾದ ಬೋಧನೆಯನ್ನು ಕೇಳುವುದು.
ಇಂದು ನೀವು ಮೊದಲ ಹಂತದಲ್ಲಿ, ಪುಸ್ತಕಗಳಲ್ಲಿ ಅಥವಾ ಇಂಟರ್ನೆಟ್ನಲ್ಲಿ ನೀವು ಅಭಿವೃದ್ಧಿಪಡಿಸಲು ಬಯಸುವ ಕೆಲವು ಅಭ್ಯಾಸಗಳು ಅಥವಾ ಮನಸ್ಥಿತಿಗಳ ಬಗ್ಗೆ ಓದುವುದನ್ನು ಸಹ ಸೇರಿಸಬಹುದು. ಆದಾಗ್ಯೂ, ಈ ಅಂಶವು ಚರ್ಚಾಸ್ಪದವಾಗಿದೆ, ಏಕೆಂದರೆ ನಾವು ಶಿಕ್ಷಕರಿಂದ ನೇರವಾಗಿ ಬೋಧನೆಯನ್ನು ಕೇಳಿದಾಗ, ಶಿಕ್ಷಕರು ನಮ್ಮ ಮುಂದೆ ಇರುವುದರಿಂದ ರಚಿಸಲಾದ ವಿಶೇಷ ವಾತಾವರಣವಿರುತ್ತದೆ. ನಾವು ನೇರ ಬೋಧನೆಯನ್ನು ಕೇಳುವಾಗ, ನಾವು ಪುಸ್ತಕವನ್ನು ಓದುವುದರಿಂದ ಸ್ಫೂರ್ತಿ ಪಡೆಯದ ರೀತಿಯಲ್ಲಿ ಶಿಕ್ಷಕರಿಂದ ಸ್ಫೂರ್ತಿ ಪಡೆಯಬಹುದು. ಹೌದು, ಯಾರಾದರೂ ಪುಸ್ತಕವನ್ನು ಬರೆಯಬೇಕಾಗಿತ್ತು ಎಂಬುದು ನಿಜ. ನಮ್ಮ ದೈನಂದಿನ ಜೀವನದಲ್ಲೂ ಇದು ನಿಜ ಎಂದು ನಾವು ಕಂಡುಕೊಂಡಿದ್ದೇವೆ. ಉದಾಹರಣೆಗೆ, ನೀವು ನೇರವಾಗಿ, ಸಂಗೀತ ಕಾನ್ಸರ್ಟಗೆ ಹೋದಾಗ, ಅದು ನೀವು ಮನೆಯಲ್ಲಿ CDಯನ್ನು ಕೇಳುವಾಗಿರುವ ಅನುಭವಕ್ಕಿಂತ ಹೆಚ್ಚು ಶಕ್ತಿಶಾಲಿ ಮತ್ತು ಸ್ಪೂರ್ತಿದಾಯಕವಾಗಿರುತ್ತದೆ. ಇದು ಸಂಪೂರ್ಣವಾಗಿ ವಿಭಿನ್ನವಾದ ಅನುಭವವಾಗಿರುತ್ತದೆ.
ನಾವು ಬೋಧನೆಗಳನ್ನು ಕೇಳುವಾಗ, ಅತ್ಯಂತ ಸಹಾಯಕವಾದ ಸೂಚನೆಗಳಲ್ಲಿ ಒಂದೆಂದರೆ "ಮಣ್ಣಿನ ಹೂದಾನಿಯಂತಹ ಮೂರು ದೋಷಗಳನ್ನು" ತೆಗೆದುಹಾಕುವುದು.
- ಮೊದಲನೆಯದಾಗಿ, ನಾವು ತಲೆಕೆಳಗಾದ ಹೂದಾನಿಯೊಳಗೆ ಏನೂ ಹೋಗದ ಸ್ಥಿತಿಯಲ್ಲಿ ಇರುವ ತಪ್ಪನ್ನು ತಪ್ಪಿಸಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ಮನಸ್ಸುಗಳು ಮುಚ್ಚಿದ್ದರೆ, ನಾವು ಕೇಳುವುದರಿಂದ ನಾವು ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ.
- ನಂತರ, ಕೆಳಭಾಗದಲ್ಲಿ ರಂಧ್ರವಿರುವ ಹೂದಾನಿಯಂತೆ ಇರುವ ತಪ್ಪನ್ನು ಸಹ ನಾವು ತಪ್ಪಿಸಬೇಕು. ಆ ಸಂದರ್ಭದಲ್ಲಿ, ಸುರಿಯಲ್ಪಟ್ಟ ಯಾವುದೇ ವಸ್ತುವು ರಂಧ್ರದಿಂದ ನೇರವಾಗಿ ಹೊರಬರುತ್ತದೆ. ಇಂಗ್ಲಿಷ್ನಲ್ಲಿ, "ಒಂದು ಕಿವಿಯಲ್ಲಿ ಕೇಳವುದು ಮತ್ತು ಇನ್ನೊಂದು ಕಿವಿಯಿಂದ ಹೊರಗೆ ಹಾಕುವುದು" ಎಂಬ ಅಭಿವ್ಯಕ್ತಿ ಇದೆ. ನಾವು ಅದನ್ನು ತಪ್ಪಿಸಬೇಕು.
- ಕೊನೆಯದಾಗಿ, ನಾವು ಕೊಳಕು ಹೂದಾನಿಯಂತೆ ಇರುವ ತಪ್ಪನ್ನು ತಪ್ಪಿಸಬೇಕು. ನೀವು ಕೊಳಕು ಹೂದಾನಿಗೆ ಶುದ್ಧ ನೀರನ್ನು ಸುರಿದಾಗ, ನೀರು ಕೂಡ ಮಣ್ಣಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಮಗೆ ಅನೇಕ ಪೂರ್ವಭಾವಿ ಭಾವನೆಗಳಿರುವಾಗ, ಈ ಪೂರ್ವಭಾವಿ ಭಾವನೆಗಳು ಹೊಸ ವಿಷಯದ ಬಗೆಗಿರುವ ನಮ್ಮ ತಿಳುವಳಿಕೆಯನ್ನು ಕಲುಷಿತಗೊಳಿಸುತ್ತವೆ. ಒಬ್ಬ ವ್ಯಕ್ತಿಯು ಏನು ಹೇಳುತ್ತಾನೆಂದು ಕೇಳುವ ಬದಲು, ನಾವು ಯಾವಾಗಲೂ ಹೊಸ ವಿಷಯವನ್ನು ನಮ್ಮ ಸ್ವಂತ ಆಲೋಚನೆಗಳ ಪ್ರಕ್ಷೇಪಗಳೊಂದಿಗೆ ಬೆರೆಸುತ್ತೇವೆ.
ಈ ತಪ್ಪುಗಳನ್ನು ತಪ್ಪಿಸಲು ಸಹಾಯ ಮಾಡಲು, ನಾವು ಕೆಲವು ಬೋಧನೆಗಳನ್ನು ಕೇಳಿದ ನಂತರ, ಅವುಗಳನ್ನು ಬರೆಯುವುದು ಅಥವಾ ಹೇಗಾದರೂ ರೆಕಾರ್ಡ್ ಮಾಡುವುದು ಬಹಳಾ ಸಹಾಯಕವಾಗಿರುತ್ತದೆ, ಇದರಿಂದ ನಾವು ಉಲ್ಲೇಖಿಸಲಾದ ಅಂಶಗಳನ್ನು ಸರಿಯಾಗಿ ನೆನಪಿಟ್ಟುಕೊಳ್ಳಬಹುದು. ನಮ್ಮಲ್ಲಿ ಹೆಚ್ಚಿನವರಿಗೆ ಪರಿಪೂರ್ಣ ನೆನಪುಗಳಿಲ್ಲದಿರುವುದರಿಂದ ಇದು ತುಂಬಾ ಸಹಾಯಕವಾಗಿದೆ. ನಾವು ಕೇಳಿದ್ದನ್ನು ಬರೆಯಲು ಹೆಚ್ಚು ಸಮಯ ಕಾದಷ್ಟು, ನಮ್ಮ ಪೂರ್ವಾಗ್ರಹಗಳು ನಮ್ಮ ನೆನಪುಗಳನ್ನು ಕಲುಷಿತಗೊಳಿಸುತ್ತವೆ. ಮತ್ತು ನಾವು ಅವುಗಳನ್ನು ಬರೆದಾಗ ಅಥವಾ ರೆಕಾರ್ಡ್ ಮಾಡಿದಾಗಲೂ ಸಹ, ನಾವು ಅವುಗಳನ್ನು ಮತ್ತೆ ಮತ್ತೆ ಕೇಳಬೇಕಾಗುತ್ತದೆ. ನಮ್ಮ ಶೆಲ್ಫ್ನಲ್ಲಿ ಟಿಪ್ಪಣಿಗಳ ಪುಸ್ತಕವಾಗಿ ಅಥವಾ ನಮ್ಮ ಕಂಪ್ಯೂಟರ್ಗಳಲ್ಲಿ ಅಥವಾ ನಮ್ಮ ಐಪಾಡ್ಗಳಲ್ಲಿ ಫೈಲ್ ಆಗಿ ಬೋಧನೆಗಳನ್ನು ಹೊಂದಿದ್ದರೆ ಖಂಡಿತವಾಗಿಯೂ ಸಾಕಾಗುವುದಿಲ್ಲ!
ಧರ್ಮದ ಆಚರಣೆಯನ್ನು ಶುರುಮಾಡಲು ಶಾಕ್ಯ ಗುರು ಸೋನಮ್ ತ್ಸೆಮೊ ಹೀಗೆ ಹೇಳಿದ್ದಾರೆ:
- ನಮಗೆ ಸಮಸ್ಯೆಗಳಿವೆ ಮತ್ತು ನಾವು ಬಳಲುತ್ತಿದ್ದೇವೆ ಎಂದು ನಾವು ಮೊದಲು ಒಪ್ಪಿಕೊಳ್ಳಬೇಕು.
- ನಂತರ ನಮ್ಮ ದುಃಖದ ಪರಿಸ್ಥಿತಿಯಿಂದ ಹೊರಬರುವ ಬಯಕೆ ನಮಗಿರಬೇಕು.
- ಅಂತಿಮವಾಗಿ, ದುಃಖದಿಂದ ಹೊರಬರಲು ಒಂದು ಮಾರ್ಗವಾಗಿ ನಾವು ಧರ್ಮದಲ್ಲಿ ಆಸಕ್ತಿ ವಹಿಸಬೇಕು.
ನಾವು ಹೊಸಬರಾಗಿರುವಾಗ, ನಾವು ಖಂಡಿತವಾಗಿಯೂ ಮುಕ್ತ ಮನಸ್ಸನ್ನು ಹೊಂದಿರಬೇಕು ಮತ್ತು ನಾವು ಕಲಿಯುವುದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು; ಆದರೆ ಮುಖ್ಯವಾಗಿ, ನಾವು ಕೇಳುವುದನ್ನು ಮೌಲ್ಯಮಾಪನ ಮಾಡುವ ಆಸಕ್ತಿ ಮತ್ತು ಉದ್ದೇಶದಿಂದ ಧರ್ಮ ಬೋಧನೆಯನ್ನು ಕೇಳಬೇಕು. ನಾವು ಕೇಳುವ ಬೋಧನೆಯು ನಾವು ಅದನ್ನು ಆಚರಣೆಗೆ ತಂದರೆ, ಅದು ಸಮಸ್ಯೆಗಳನ್ನು ನಿವಾರಿಸಲು ವೈಯಕ್ತಿಕವಾಗಿ ನಮಗೆ ಸಹಾಯ ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ನಾವು ಅದನ್ನು ಮೌಲ್ಯಮಾಪನ ಮಾಡಲು ಬಯಸುತ್ತೇವೆ. ಶಾಲೆಯಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಥವಾ ನಮ್ಮ ಪಾಂಡಿತ್ಯಪೂರ್ಣ ಜ್ಞಾನದಿಂದ ಇತರರನ್ನು ಮೆಚ್ಚಿಸಲು ನಾವು ಬೌದ್ಧ ಬೋಧನೆಗಳ ಬಗ್ಗೆ ಕಲಿಯುತ್ತಿಲ್ಲ. ನಮ್ಮ ಜೀವನದಲ್ಲಿ ವೈಯಕ್ತಿಕವಾಗಿ ಪ್ರಸ್ತುತವಾಗಿರುವ ಮತ್ತು ಸಹಾಯಕವಾಗುವಂತಹದ್ದನ್ನು ನಾವು ಕಂಡುಕೊಳ್ಳಬಹುದೇ ಎಂದು ನೋಡಲು ನಾವು ಬೋಧನೆಗಳನ್ನು ಕೇಳುತ್ತೇವೆ.
ಬೋಧನೆಗಳನ್ನು ಕೇಳುವಾಗ, ನಮ್ಮನ್ನು ಮತ್ತು ಪರಿಸ್ಥಿತಿಯನ್ನು ಪರಿಗಣಿಸಲು ವಿವಿಧ ಮಾರ್ಗಗಳಿವೆ. "ಮೂರು ಗುರುತಿಸುವಿಕೆಗಳು" ಎಂದು ಕರೆಯಲ್ಪಡುವ ವಿಧಾನದಲ್ಲಿ, ನಾವು ನಮ್ಮನ್ನು ಅನಾರೋಗ್ಯದ ವ್ಯಕ್ತಿ ಎಂದು, ಶಿಕ್ಷಕನನ್ನು ವೈದ್ಯ ಎಂದು ಮತ್ತು ಬೋಧನೆಗಳನ್ನು ವಿವಿಧ ಕಾಯಿಲೆಗಳು ಅಥವಾ ಸಮಸ್ಯೆಗಳನ್ನು ನಿವಾರಿಸಲು ನಮಗೆ ಸಹಾಯ ಮಾಡುವ ಔಷಧಿ ಎಂದು ಪರಿಗಣಿಸುತ್ತೇವೆ - ಅನಾರೋಗ್ಯಗಳು ನಮ್ಮ ಗೊಂದಲದ ಭಾವನೆಗಳಾಗಿರುತ್ತವೆ.
ನಾವು ನಮ್ಮ ಅಭ್ಯಾಸದಲ್ಲಿ ಹೆಚ್ಚು ಮುಂದುವರಿದಂತೆ, ಶಿಕ್ಷಕರ ಬಗ್ಗೆ ನಮಗೆ ಅಗತ್ಯವಿರುವ ವರ್ತನೆಗಳ ಬಗ್ಗೆ, ಗುರುವನ್ನು ಬುದ್ಧನಂತೆ ನೋಡುವ ವಿಷಯ ಇತ್ಯಾದಿಗಳ ಬಗ್ಗೆ ಇನ್ನೂ ಅನೇಕ ಸೂಚನೆಗಳಿವೆ; ಆದರೆ ಆ ಸೂಚನೆಗಳು ಆರಂಭಿಕರನ್ನು ಉದ್ದೇಶಿಸಲಾಗಿರುವುದಿಲ್ಲ.
ಔಪಚಾರಿಕ ಚಿಂತನಾ ಪ್ರಕ್ರಿಯೆ
ಔಪಚಾರಿಕ ಚಿಂತನಾ ಪ್ರಕ್ರಿಯೆಯು ತಾರ್ಕಿಕ ಮಾರ್ಗವನ್ನು ಅನುಸರಿಸುವುದು ಎಂದರ್ಥ. ನಾವು ಒಂದು ನಿರ್ದಿಷ್ಟ ಮನಸ್ಸಿನ ಸ್ಥಿತಿಯನ್ನು ಅಭಿವೃದ್ಧಿಪಡಿಸಲು ಬಯಸಿದಾಗ, ನಾವು ಅದನ್ನು ನಿರ್ಮಿಸಬೇಕಾಗಿದೆ. ಹಂತಗಳು ಅಥವಾ ಹೆಜ್ಜೆಗಳ ಮೂಲಕ ಹೋಗುವ ಮೂಲಕ ನಾವು ಆ ಮನಸ್ಥಿತಿಯನ್ನು ನಿರ್ಮಿಸಬೇಕಾಗಿದೆ, ಮತ್ತು ಆಗಾಗ್ಗೆ ಆ ಹಂತಗಳು ತಾರ್ಕಿಕ ಮಾರ್ಗಗಳೊಂದಿಗೆ ಕೆಲಸ ಮಾಡುವುದನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಬೋಧನೆಯು ಅಶಾಶ್ವತತೆಯ ತಿಳುವಳಿಕೆಯನ್ನು ನಿರ್ಮಿಸುವ ತಾರ್ಕಿಕ ಮಾರ್ಗವನ್ನು ಒಳಗೊಂಡಿರಬಹುದು (ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಪ್ರಭಾವಿತವಾದ ವಿಷಯಗಳು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತವೆ ಮತ್ತು ಕೊನೆಗೊಳ್ಳುತ್ತವೆ); ಅಥವಾ ಅದು ಶೂನ್ಯತೆಯ ತಿಳುವಳಿಕೆಯನ್ನು ನಿರ್ಮಿಸುವ ತಾರ್ಕಿಕ ಮಾರ್ಗವನ್ನು ಒಳಗೊಂಡಿರಬಹುದು (ಯಾವುದೂ ಅಸಾಧ್ಯವಾದ ರೀತಿಯಲ್ಲಿ ಅಸ್ತಿತ್ವದಲ್ಲಿರುವುದಿಲ್ಲ). ತಾರ್ಕಿಕತೆಯ ರೇಖೆಗಳ ತರ್ಕದ ಬಗ್ಗೆ ಯೋಚಿಸುವ ಮತ್ತು ಕೆಲಸ ಮಾಡುವ ಮೂಲಕ, ಅಶಾಶ್ವತತೆ ಮತ್ತು ಶೂನ್ಯತೆ ಮಾನ್ಯವಾಗಿವೆ ಎಂದು ನಮಗೆ ಮನವರಿಕೆಯಾಗುವುದಲ್ಲದೆ, ತಾರ್ಕಿಕತೆಯ ರೇಖೆಗಳು ಅಶಾಶ್ವತತೆ ಮತ್ತು ಶೂನ್ಯತೆ ನಿಜವೆಂದು ಮಾನ್ಯವಾಗಿ ಸಾಬೀತುಪಡಿಸುತ್ತವೆ. ಅಷ್ಟೇ ಅಲ್ಲ, ತಾರ್ಕಿಕತೆಯ ರೇಖೆಗಳ ತರ್ಕದ ಮೂಲಕ ಹಾದುಹೋಗುವ ಮೂಲಕ, ನಾವು ಅಶಾಶ್ವತತೆ ಮತ್ತು ಶೂನ್ಯತೆಯ ಸರಿಯಾದ ಮತ್ತು ನಿರ್ಣಾಯಕ ತಿಳುವಳಿಕೆಯನ್ನು ಬೆಳೆಸಬಹುದು ಎಂಬುದು ನಮಗೆ ಮನವರಿಕೆಯಾಗುತ್ತದೆ. ನೆನಪಿರಲಿ: ಮನವರಿಕೆಯಾಗುವುದು ಆಲೋಚನಾ ಪ್ರಕ್ರಿಯೆಯ ಭಾಗವಾಗಿರುತ್ತದೆ.
ಪರ್ಯಾಯವಾಗಿ, ನಾವು ಒಂದು ನಿರ್ದಿಷ್ಟ ಮನಸ್ಸಿನ ಸ್ಥಿತಿಯನ್ನು ಬೆಳೆಸಿಕೊಳ್ಳಬಹುದು, ಅದು ಅಗತ್ಯವಾಗಿ ತಾರ್ಕಿಕತೆಯ ರೇಖೆಯ ಮೂಲಕವಾಗಿರಬೇಕಿಲ್ಲ, ಬದಲಿಗೆ ಹಂತಗಳ ಮೂಲಕ. ಉದಾಹರಣೆಗೆ, ನಾವು ಬೋಧಿಚಿತ್ತ ಗುರಿಯನ್ನು ಬೆಳೆಸಿಕೊಳ್ಳಲು ಬಯಸಿದರೆ, ನಾವು ಸಮಚಿತ್ತತೆಯನ್ನು ಬೆಳೆಸಿಕೊಳ್ಳುವಂತಹ ಹಂತಗಳ ಮೂಲಕ ಹೋಗುತ್ತೇವೆ, ಮತ್ತು ನಂತರ ಹಿಂದಿನ ಜೀವನದಲ್ಲಿ ಪ್ರತಿಯೊಬ್ಬರನ್ನು ನಮ್ಮ ತಾಯಂದಿರಂತೆ ನೋಡುವುದು, ತಾಯಿಯ ಪ್ರೀತಿಯ ದಯೆಯನ್ನು ನೆನಪಿಸಿಕೊಳ್ಳುವುದು, ಅದಕ್ಕಾಗಿ ಕೃತಜ್ಞತೆಯನ್ನು ಬೆಳೆಸಿಕೊಳ್ಳುವುದು ಇತ್ಯಾದಿ. ಈ ಹಂತಗಳನ್ನು ತೆಗೆದುಕೊಳ್ಳುವ ಮೂಲಕ, ನಾವು ಬೋಧಿಚಿತ್ತ ಗುರಿಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ತಲುಪಬಹುದು ಎಂದು ನಮಗೆ ಮನವರಿಕೆಯಾಗುತ್ತದೆ ಮತ್ತು ನಾವು ಹಂತಗಳ ಮೂಲಕ ಹಾದುಹೋಗುತ್ತೇವೆ. ಇದು ಇನ್ನೂ ಚಿಂತನಾ ಪ್ರಕ್ರಿಯೆಯ ಭಾಗವಾಗಿರುತ್ತದೆ.
ಈ ಆಲೋಚನಾ ಪ್ರಕ್ರಿಯೆಯಲ್ಲಿ, ನಾವು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿರುವ ಮನಸ್ಥಿತಿ ಯಾವುದು ಎಂಬುದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಕೆಲವು ಧ್ಯಾನಗಳು ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡಲು ಇರುತ್ತವೆ, ಉದಾಹರಣೆಗೆ, ದೃಶ್ಯೀಕರಿಸಿದ ಬುದ್ಧನ ಮೇಲೆ. ದೃಶ್ಯೀಕರಿಸಿದ ಬುದ್ಧನನ್ನು ಧ್ಯಾನಿಸಲು, ಇದು ಧ್ಯಾನದ ಕೇಂದ್ರೀಕರಣದ ಪ್ರಕಾರವಾಗಿದೆ ಮತ್ತು ಅದರ ಗುರಿಯು ಒಂದು ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸುವುದು ಎಂದು ನಾವು ಅರ್ಥಮಾಡಿಕೊಳ್ಳಬೇಕು, ಅಂದರೆ ನಮ್ಮ ಮುಂದೆ, ಕಣ್ಣಿನ ಮಟ್ಟದಲ್ಲಿ ನಾವು ಕಲ್ಪಿಸಿಕೊಳ್ಳುವ ಬೆಳಕಿನಿಂದ ಮಾಡಿದ ಸಣ್ಣ, ಮೂರು ಆಯಾಮದ, ಜೀವಂತ ಬುದ್ಧ.
ಮತ್ತೊಂದೆಡೆ, ನಿರ್ದಿಷ್ಟ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾದ ವಿಭಿನ್ನ ಧ್ಯಾನಗಳಿವೆ, ಉದಾಹರಣೆಗೆ, ಪ್ರೀತಿ. ಪ್ರೀತಿಯು ನಾವು ಕೇಂದ್ರೀಕರಿಸುವ ವಸ್ತುವಲ್ಲ; ಬದಲಿಗೆ ಅದು ಮನಸ್ಸಿನ ಸ್ಥಿತಿಯಾಗಿರುತ್ತದೆ, ನಾವು ಬೆಳೆಸಿಕೊಳ್ಳುವ ಒಂದು ರೀತಿಯ ಮಾನಸಿಕ ಮನೋಭಾವವಾಗಿರುತ್ತದೆ. ಆದ್ದರಿಂದ ನಾವು ಯಾವ ರೀತಿಯ ಧ್ಯಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು: ನಾವು ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದೇವೆಯೇ ಅಥವಾ ನಾವು ನಿರ್ದಿಷ್ಟ ಮನಸ್ಸಿನ ಸ್ಥಿತಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದೇವೆಯೇ? ನಾವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ?
ಎರಡೂ ಸಂದರ್ಭಗಳಲ್ಲಿ, ತ್ಸೋಂಗ್ಖಾಪಾ ಅವರು ನಾವು ಎರಡು ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಬಲವಾಗಿ ಒತ್ತಿ ಹೇಳಿದರು:
- ಮೊದಲನೆಯದಾಗಿ, ನಮ್ಮ ಮನಸ್ಸಿನಲ್ಲಿ ಕಾಣಿಸಿಕೊಳ್ಳಬೇಕಾದ ವಸ್ತು ಯಾವುದು ಎಂಬುದರ ಕುರಿತು ನಾವು ಸ್ಪಷ್ಟವಾಗಿರಬೇಕು. ನಾವು ದೃಶ್ಯೀಕರಿಸಿದ ಬುದ್ಧನ ಬಗ್ಗೆ ಧ್ಯಾನ ಮಾಡುತ್ತಿರಲಿ ಅಥವಾ ಪ್ರೀತಿಯ ಬಗ್ಗೆ ಧ್ಯಾನ ಮಾಡುತ್ತಿರಲಿ, ನಮ್ಮ ಧ್ಯಾನದಲ್ಲಿ ಕಾಣಿಸಿಕೊಳ್ಳುವ ವಸ್ತು ಯಾವುದು?
- ಎರಡನೆಯದಾಗಿ, ಮನಸ್ಸು ಆ ವಸ್ತುವನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತದೆ, ಅದನ್ನು ಹೇಗೆ ಅರಿತುಕೊಳ್ಳುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.
ಈ ಎರಡು ಅಂಶಗಳ ಬಗ್ಗೆ ನಮಗೆ ಸಂಪೂರ್ಣ ಸ್ಪಷ್ಟತೆಯಿಲ್ಲದಿದ್ದರೆ, ನಾವು ಅಭಿವೃದ್ಧಿಪಡಿಸಲು ಬಯಸುವ ಮನಸ್ಥಿತಿಯನ್ನು ನಾವು ಹೇಗೆ ಉತ್ಪಾದಿಸಲು ಸಾಧ್ಯ?
ಉದಾಹರಣೆಗೆ, ಸಹಾನುಭೂತಿ: ಸಹಾನುಭೂತಿ ಯಾವುದನ್ನು ಗುರಿಯಾಗಿರಿಸಿಕೊಂಡಿದೆ? ಕಾಣಿಸಿಕೊಳ್ಳುವ ವಸ್ತು ಯಾವುದು? ಸಹಾನುಭೂತಿಯ ಬಗ್ಗೆ ಧ್ಯಾನ ಮಾಡುವಾಗ ನಮ್ಮ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ವಸ್ತುವು ಪ್ರಜ್ಞೆಯುಳ್ಳ ಜೀವಿಗಳು, ದುಃಖ ಹೊಂದಿರುವ ವಿವಿಧ ಸೀಮಿತ ಜೀವಿಗಳಾಗಿರುತ್ತವೆ. ನಮ್ಮ ಮನಸ್ಸುಗಳು ಅವುಗಳ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ಅವುಗಳ ಬಗ್ಗೆ ಒಂದು ನಿರ್ದಿಷ್ಟ ಅಂಶವನ್ನು ಪ್ರತ್ಯೇಕಿಸುತ್ತವೆ, ಅವುಗಳೆಂದರೆ ಅವುಗಳ ದುಃಖ ಮತ್ತು ಅವುಗಳ ದುಃಖದ ಕಾರಣಗಳು. ಮನಸ್ಸು ಆ ವಿಷಯಗಳನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತದೆ? ಈ ಜೀವಿಗಳು ಅವುಗಳ ದುಃಖ ಮತ್ತು ಅದರ ಕಾರಣಗಳಿಂದ ಬೇರ್ಪಡಬೇಕೆಂಬ ಬಲವಾದ ಬಯಕೆಯೊಂದಿಗೆ ಮತ್ತು ಇದನ್ನು ನಾವೇ ಮಾಡಬೇಕೆಂಬ ಉದ್ದೇಶದಿಂದ ಮನಸ್ಸು ಈ ವಸ್ತುಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ರೀತಿಯಾಗಿ, ನಾವು ಕೇಳಿದ ಅಥವಾ ಓದಿದ ಸೂಚನೆಗಳ ಬಗ್ಗೆ ಯೋಚಿಸುವ ಮೂಲಕ, ನಾವು ಯಾವ ಮನಸ್ಥಿತಿಯನ್ನು ಸೃಷ್ಟಿಸಲು ಬಯಸುತ್ತೇವೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಮತ್ತು ನಿರ್ದಿಷ್ಟಪಡಿಸಲು ಸಾಧ್ಯವಾಗುತ್ತದೆ.
ನಾವು ಬೋಧಿಚಿತ್ತದ ಬಗ್ಗೆ ಧ್ಯಾನಿಸಲು ಯೋಜಿಸಿದರೆ, ಅಂತಹ ಧ್ಯಾನದಲ್ಲಿ ನಮ್ಮ ಮನಸ್ಸು ಏನು ಮಾಡುತ್ತದೆ ಎಂಬುದರ ಕುರಿತು ನಾವು ಯೋಚಿಸಬೇಕು ಮತ್ತು ಸ್ಪಷ್ಟವಾಗಿರಬೇಕು. ಹೆಚ್ಚಿನ ಜನರು ಬೋಧಿಚಿತ್ತವನ್ನು ಸಹಾನುಭೂತಿಯೆಂದು ತಪ್ಪಾಗಿ ತಿಳಿದುಕೊಳ್ಳುತ್ತಾರೆ; ಆದರೆ ಬೋಧಿಚಿತ್ತ ಮತ್ತು ಸಹಾನುಭೂತಿ ಒಂದೇ ಆಗಿರುವುದಿಲ್ಲ. ಬೋಧಿಚಿತ್ತವು ಸಹಾನುಭೂತಿಯನ್ನು ತನ್ನ ಆಧಾರವಾಗಿ ಹೊಂದಿರುವ ಮನಸ್ಥಿತಿಯಾಗಿರುತ್ತದೆ; ಆದರೆ ಬೋಧಿಚಿತ್ತವು ಇತರರು ಎಲ್ಲಾ ದುಃಖ ಮತ್ತು ಅದರ ಕಾರಣಗಳಿಂದ ಮುಕ್ತರಾಗಬೇಕೆಂದು ಬಯಸುವುದಕ್ಕಿಂತ ಹೆಚ್ಚಿನದರ ಬಗ್ಗೆಯಾಗಿರುತ್ತದೆ. ಇದು ಎಲ್ಲಾ ಸೀಮಿತ ಜೀವಿಗಳನ್ನು ಜ್ಞಾನೋದಯಕ್ಕೆ ತರಲು ಬಯಸುವುದು ಮತ್ತು ಹೀಗೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದನ್ನು ಮೀರಿರುತ್ತದೆ. ಆದರೆ ಈ ಶುಭ ಹಾರೈಕೆಗಳು ಮತ್ತು ಭಾವನೆಗಳು, ಬೋಧಿಚಿತ್ತವು ಅವಲಂಬಿಸಿರುವ ಮತ್ತು ಅವುಗಳ ಮೂಲಕ ಬೆಳೆಯುವ, ಸಕಾರಾತ್ಮಕ ಭಾವನೆಗಳಾಗಿರುತ್ತವೆ. ಮೊದಲು ನಾವು ಪ್ರೀತಿ ಮತ್ತು ಸಹಾನುಭೂತಿಯ ಅಡಿಪಾಯವನ್ನು ಹೊಂದಿರಬೇಕು.
ನಾವು ನಮ್ಮ ಕುಶನ್ಗಳ ಮೇಲೆ ಕುಳಿತು ಬೋಧಿಚಿತ್ತವನ್ನು ಧ್ಯಾನಿಸುವಾಗ ನಾವು ನಿಜವಾಗಿಯೂ ಯಾವುದರ ಮೇಲೆ ಕೇಂದ್ರೀಕರಿಸಿರುತ್ತೇವೆ? ನಮ್ಮ ಸ್ವಂತ ವೈಯಕ್ತಿಕ ಜ್ಞಾನೋದಯದ ಮೇಲೆ ಕೇಂದ್ರೀಕರಿಸಿರುತ್ತೇವೆ, ಅದು ಸಧ್ಯಕ್ಕೆ ಇನ್ನೂ ಆಗಿಲ್ಲ, ಆದರೆ ನಮ್ಮ ಬುದ್ಧ-ಸ್ವಭಾವ ಅಂಶಗಳ ಆಧಾರದ ಮೇಲೆ ಮತ್ತು ಆ ಜ್ಞಾನೋದಯವನ್ನು ಸಾಧಿಸಲು ನಾವು ಮಾಡಬೇಕಾದ ಎಲ್ಲಾ ಕಠಿಣ ಪರಿಶ್ರಮದ ಆಧಾರದ ಮೇಲೆ ಅದು ಸಂಭವಿಸಬಹುದು. ನಮ್ಮ ಬುದ್ಧ-ಸ್ವಭಾವದ ಅಂಶಗಳು, ನಮ್ಮ ಮನಸ್ಸಿನ ಶುದ್ಧ ಸ್ವಭಾವದಂತಹ ಅಂಶಗಳು, ಬುದ್ಧನಾಗಲು ನಮಗೆ ಅನುವು ಮಾಡಿಕೊಡುವ ಮೂಲಭೂತ ಗುಣಗಳು ಮತ್ತು ವೈಶಿಷ್ಟ್ಯಗಳಾಗಿರುತ್ತವೆ. ನಾವು ಬುದ್ಧ ಶಾಕ್ಯಮುನಿಯ ಜ್ಞಾನೋದಯದ ಮೇಲೆ ಕೇಂದ್ರೀಕರಿಸುತ್ತಿಲ್ಲ. ನಾವು ಸಾಮಾನ್ಯವಾದ ಅಮೂರ್ತ ಜ್ಞಾನೋದಯದ ಮೇಲೆ ಕೇಂದ್ರೀಕರಿಸುತ್ತಿಲ್ಲ; ಬದಲಿಗೆ ನಾವು ನಮ್ಮ ಸ್ವಂತ ವೈಯಕ್ತಿಕ ಜ್ಞಾನೋದಯದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ, ನಮ್ಮ ಇನ್ನೂ-ಆಗದ ಜ್ಞಾನೋದಯದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ.
ನಮ್ಮ ಇನ್ನೂ-ಆಗದ ಜ್ಞಾನೋದಯದ ಮೇಲೆ ನಾವು ಹೇಗೆ ಗಮನಹರಿಸಬಹುದು? ಅದು ಸುಲಭವಾದ ವಿಷಯವೇನಲ್ಲ. ಮೊದಲನೆಯದಾಗಿ, ಅದರ ಅರ್ಥವೇನೆಂದು ನಾವು ಅರ್ಥಮಾಡಿಕೊಳ್ಳಬೇಕು, ಅದು ಯಾವ ರೀತಿಯ ವಿದ್ಯಮಾನ - ಇನ್ನೂ ಆಗದ ವಿದ್ಯಮಾನ ಅಥವಾ ವಿಷಯ. ಉದಾಹರಣೆಗೆ, ನಾವು ಇದನ್ನು ಪರಿಗಣಿಸಬೇಕಾಗಿದೆ: ಇನ್ನೂ-ಆಗದ ಮೊಳಕೆಯು ಈಗಾಗಲೇ ಹೊರಬರಲು ಕಾಯುತ್ತಿರುವ ಬೀಜದಲ್ಲಿ ಅಸ್ತಿತ್ವದಲ್ಲಿದೆಯೇ? ಅಥವಾ ಇನ್ನೂ-ಆಗದ ಮೊಳಕೆ ಬೀಜದ ಸಮಯದಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿಲ್ಲವೇ?
ನಿಸ್ಸಂಶಯವಾಗಿ, ನಾವು ನಮ್ಮ ಇನ್ನೂ ಆಗದ ಜ್ಞಾನೋದಯದ ಮೇಲೆ ಕೇಂದ್ರೀಕರಿಸುವಾಗ ನಾವು ಯಾವುದರ ಮೇಲೆ ಕೇಂದ್ರೀಕರಿಸುತ್ತಿದ್ದೇವೆ ಎಂಬುದರ ಸ್ಪಷ್ಟ ತಿಳುವಳಿಕೆಯನ್ನು ಪಡೆಯಲು ಇಲ್ಲಿ ಶೂನ್ಯತೆಯ ತಿಳುವಳಿಕೆ ಅಗತ್ಯವಾಗಿದೆ. ನಮ್ಮ ಇನ್ನೂ-ಆಗದ ಜ್ಞಾನೋದಯವು ನಾವು ಸಾಗುತ್ತಿರುವ ಓಟದ ಅಂತಿಮ ರೇಖೆಯಂತೆ ಎಲ್ಲೋ ಹೊರಗೆ ಕುಳಿತಿಲ್ಲ. ನಮ್ಮ ಮನಸ್ಸಿನಲ್ಲಿ ಅಥವಾ ನಮ್ಮ ಬುದ್ಧ-ಸ್ವಭಾವದಲ್ಲಿ ಎಲ್ಲೋ ಕುಳಿತು, ಹೊರಬರಲು ಕಾಯುತ್ತಿಲ್ಲ. ಅದು ಹಾಗೆ ಕಂಡುಬರುವ ವಸ್ತುವಲ್ಲ. ಮತ್ತೊಂದೆಡೆ, ನಾವು ಅಸ್ತಿತ್ವದಲ್ಲಿಲ್ಲದ ಯಾವುದರ ಮೇಲೆಯೂ ಕೇಂದ್ರೀಕರಿಸುತ್ತಿಲ್ಲ; ನಾವು ಶೂನ್ಯದ ಮೇಲೂ ಕೇಂದ್ರೀಕರಿಸುತ್ತಿಲ್ಲ. ಬದಲಾಗಿ, ನಮ್ಮ ಇನ್ನೂ ಆಗದ ಜ್ಞಾನೋದಯವು, ನಮ್ಮ ಬುದ್ಧ-ಸ್ವಭಾವದ ಅಂಶಗಳ ಆಧಾರದ ಮೇಲೆ ನಮ್ಮ ಮಾನಸಿಕ ನಿರಂತರತೆಗಳ ಮೇಲೆ ಮಾನ್ಯವಾಗಿ ಆರೋಪಿಸಬಹುದಾದ ವಿಷಯ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಸೂಕ್ತವಾದ ಆಧಾರದ ಮೇಲೆ ಒಂದು ವಿಷಯವನ್ನು ಮಾನ್ಯವಾಗಿ ಆರೋಪಿಸಲು ಸಾಧ್ಯವಾದರೆ ಅದರ ಅರ್ಥವೇನೆಂದು ನಾವು ತಿಳಿದುಕೊಳ್ಳಬೇಕು.
ಆದರೆ, ಈ ಇನ್ನೂ-ಆಗದಿರುವ ಜ್ಞಾನೋದಯದ ಮೇಲೆ ಕೇಂದ್ರೀಕರಿಸಲು, ನಮ್ಮ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ಜ್ಞಾನೋದಯದ ಮಾನಸಿಕ ಪ್ರಾತಿನಿಧ್ಯದ ಮೂಲಕ ನಾವು ಅದರ ಮೇಲೆ ಕೇಂದ್ರೀಕರಿಸಬೇಕು. ಉದಾಹರಣೆಗೆ, "ಜ್ಞಾನೋದಯ" ಎಂಬ ಪದದ ಧ್ವನಿಯನ್ನು ನಾವು ಊಹಿಸಬಹುದು ಅಥವಾ ನಮ್ಮ ಮುಂದೆ ಇರುವ ಬುದ್ಧನನ್ನು ದೃಶ್ಯೀಕರಿಸಬಹುದು. ತಂತ್ರದಲ್ಲಿ, ನಾವು ಬುದ್ಧ-ಸ್ವಭಾವದ ರೂಪದಲ್ಲಿ ನಮ್ಮನ್ನು ದೃಶ್ಯೀಕರಿಸಬಹುದು. ಈ ಪ್ರತಿಯೊಂದು ಉದಾಹರಣೆಗಳೊಂದಿಗೆ, ನಮ್ಮ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಧ್ವನಿ ಅಥವಾ ಮಾನಸಿಕ ಚಿತ್ರವನ್ನು ನಮ್ಮ ಇನ್ನೂ ಆಗದಿರುವ ಜ್ಞಾನೋದಯದ ಪ್ರಾತಿನಿಧ್ಯವೆಂದು ನಾವು ಪರಿಗಣಿಸಬೇಕು.
ಇದಾದ ನಂತರ, ನಮ್ಮ ಮನಸ್ಸು ಕಾಣಿಸಿಕೊಳ್ಳುವ ಈ ಮಾನಸಿಕ ವಸ್ತುವಿನ ಮೇಲೆ ಹೇಗೆ ಕೇಂದ್ರೀಕರಿಸುತ್ತದೆ? ನಮ್ಮ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ಮಾನಸಿಕ ವಸ್ತುವಿನಿಂದ ಪ್ರತಿನಿಧಿಸಲ್ಪಟ್ಟಂತೆ, ನಾವು ಇನ್ನೂ ಆಗದಿರುವ ನಮ್ಮ ಜ್ಞಾನೋದಯದ ಮೇಲೆ ಎರಡು ಉದ್ದೇಶಗಳೊಂದಿಗೆ ಗಮನಹರಿಸುತ್ತೇವೆ. ಮೊದಲ ಉದ್ದೇಶವೆಂದರೆ: "ನಾನು ಜ್ಞಾನೋದಯವನ್ನು ಸಾಧಿಸಲಿದ್ದೇನೆ." ಈಗ, ಜ್ಞಾನೋದಯವನ್ನು ಸಾಧಿಸುವ ಆ ಉದ್ದೇಶವನ್ನು ಹೊಂದುವುದು, ನಾವು ಯೋಚಿಸಬೇಕಾದ ಮತ್ತು ಅರ್ಥಮಾಡಿಕೊಳ್ಳಬೇಕಾದ ಇತರ ಹಲವು ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಜ್ಞಾನೋದಯವನ್ನು ಸಾಧಿಸಲು ನಾವು ಏನು ಮಾಡಬೇಕೆಂಬುದನ್ನು ನಾವು ವಾಸ್ತವಿಕವಾಗಿ ತಿಳಿದುಕೊಳ್ಳಬೇಕು. ನಮ್ಮ ವರ್ತನೆ ಕೇವಲ ಆಕಸ್ಮಿಕವಾಗಿ "ಓಹ್, ನಾನು ಇದನ್ನು ಸಾಧಿಸಲಿದ್ದೇನೆ" ಎಂದಾಗಿರಬಾರದು. ನಾವು ಅದನ್ನು ಹೇಗೆ ಸಾಧಿಸಲಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಅದನ್ನು ಸಾಧಿಸಬಹುದು ಎಂದು ಮನವರಿಕೆ ಮಾಡಿಕೊಳ್ಳಬೇಕು. ಜ್ಞಾನೋದಯದ ಸ್ಥಿತಿಯನ್ನು ಸಾಧಿಸಲು ನಮಗೆ ಸರಿಯಾದ ಉದ್ದೇಶವಿರಬೇಕು; ಇಲ್ಲದಿದ್ದರೆ, ಅದನ್ನು ಸಾಧಿಸುವುದು ಕೇವಲ ಒಂದು ಒಳ್ಳೆಯ ಕನಸಾಗಿರುತ್ತದೆ ಅಷ್ಟೆ. ಮತ್ತು ಸಹಜವಾಗಿ, ಜ್ಞಾನೋದಯ ಎಂದರೇನು ಎಂಬುದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು, ಅದನ್ನು ಅರ್ಥಮಾಡಿಕೊಳ್ಳುವುದು ಸುಲಭವಾದ ವಿಷಯವೇನಲ್ಲ. ಈ ಪ್ರಕ್ರಿಯೆಯ ಈ ಎರಡನೇ ಹಂತದ ಮೂಲಕ ನಾವು ಈ ಎಲ್ಲಾ ತಿಳುವಳಿಕೆಗಳನ್ನು ಪಡೆಯುತ್ತೇವೆ: ಚಿಂತನೆ.
ಈ ಮಾನಸಿಕ ಪ್ರಾತಿನಿಧ್ಯದ ಮೇಲೆ ಕೇಂದ್ರೀಕರಿಸುವಾಗ ನಾವು ಹೊಂದಿರಬೇಕಾದ ಎರಡನೇ ಉದ್ದೇಶವೆಂದರೆ ಆ ಜ್ಞಾನೋದಯದಿಂದ ನಾವು ಸಾಧ್ಯವಾದಷ್ಟು ಇತರರಿಗೆ ಪ್ರಯೋಜನವನ್ನು ನೀಡಲಿದ್ದೇವೆ ಎಂಬುದು. ಏಕೆಂದರೆ ಜ್ಞಾನೋದಯ ಎಂದರೆ ಸರ್ವಶಕ್ತ ದೇವರಾಗುವುದು ಎಂದರ್ಥವಲ್ಲ. ಎಲ್ಲರಿಗೂ ಪ್ರಯೋಜನಕಾರಿಯಾಗಲು ಸಾಧ್ಯವಾಗುವುದು, ಸಹಜವಾಗಿ, ಬೋಧಿಚಿತ್ತವು ಅವಲಂಬಿಸಿರುವ, ಅಡಿಪಾಯವಾಗಿರುವ ಮೊದಲು ಹೆಜ್ಜೆಗಳಾದ ಪ್ರೀತಿ ಮತ್ತು ಸಹಾನುಭೂತಿಯಾಗಿರುತ್ತವೆ. ಇತರರನ್ನು ಜ್ಞಾನೋದಯಕ್ಕೆ ತರುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ ಏಕೆಂದರೆ ಅವರು ಎಲ್ಲಾ ದುಃಖಗಳಿಂದ ಮುಕ್ತರಾಗಬೇಕೆಂದು ಮತ್ತು ಸಂಪೂರ್ಣವಾಗಿ ಸಂತೋಷದಿಂದ ದಯಪಾಲಿಸಬೇಕೆಂದು ನಾವು ಬಯಸುತ್ತೇವೆ.
ಈ ಆಲೋಚನಾ ಹಂತವು ಸಾಕಷ್ಟು ಗಹನವಾದ ಹೆಜ್ಜೆಯಾಗಿದ್ದು, ಇದಕ್ಕೆ ಹೆಚ್ಚಿನ ಶ್ರಮದ ಅಗತ್ಯವಿರುತ್ತದೆ. ಆದರೆ ಈ ಹಂತದ ಕೊನೆಯಲ್ಲಿ, ನಾವು ಸಾಧಿಸಲು ಪ್ರಯತ್ನಿಸುತ್ತಿರುವ ಮನಸ್ಸಿನ ಸ್ಥಿತಿ ಏನು ಮತ್ತು ಆ ಮನಸ್ಥಿತಿಯನ್ನು ಹೇಗೆ ಬೆಳೆಸಿಕೊಳ್ಳುವುದು ಎಂಬುದನ್ನು ನಿಖರವಾಗಿ ಮತ್ತು ನಿಸ್ಸಂದೇಹವಾಗಿ ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ತಿಳಿದಿರುತ್ತೇವೆ. ಆ ಮನಸ್ಥಿತಿಯನ್ನು ಉತ್ಪಾದಿಸಲು ನಾವು ಸಮರ್ಥರಾಗಿದ್ದೇವೆ ಮತ್ತು ಅದನ್ನು ಉತ್ಪಾದಿಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ನಮಗೆ ಸಂಪೂರ್ಣವಾಗಿ ಮತ್ತು ಮಾನ್ಯವಾಗಿ ಮನವರಿಕೆಯಾಗಿರುತ್ತದೆ.
ಈ ಆಲೋಚನಾ ಪ್ರಕ್ರಿಯೆಯು ಧ್ಯಾನದಂತೆ ಕಾಣಿಸಬಹುದು, ಆದರೆ ಸಾಂಪ್ರದಾಯಿಕ ವ್ಯಾಖ್ಯಾನದ ಪ್ರಕಾರ ಇದು ಧ್ಯಾನವಲ್ಲ. ಪರಿಭಾಷೆಯನ್ನು ನಿಖರವಾಗಿ ಬಳಸದ ಪಾಶ್ಚಿಮಾತ್ಯ ಜನರು ಈ ಆಲೋಚನಾ ಪ್ರಕ್ರಿಯೆಯನ್ನು "ಧ್ಯಾನ" ಎಂದು ಕರೆಯಬಹುದು, ಆದರೆ ಅದು ಸರಿಯಲ್ಲ. ಚಿಂತನೆ ಮತ್ತು ಧ್ಯಾನದ ನಡುವಿನ ವ್ಯತ್ಯಾಸಗಳ ಬಗ್ಗೆ ನಾವು ಸ್ಪಷ್ಟವಾಗಿರಬೇಕು.
ಈ ಆಲೋಚನಾ ಪ್ರಕ್ರಿಯೆಯು ಬಹಳ ಉಪಯುಕ್ತವಾದ ಚಟುವಟಿಕೆಯಾಗಿದೆ, ಮತ್ತು ಬೋಧನೆಗಳ ಬಗ್ಗೆ ಯೋಚಿಸುವುದು ನಾವು ಯಾವುದೇ ಸಮಯದಲ್ಲಿ ಮಾಡಬಹುದಾದ ವಿಷಯವಾಗಿರುತ್ತದೆ. ವಾಸ್ತವದಲ್ಲಿ, ನಾವು ನಮ್ಮ ದೈನಂದಿನ ಜೀವನದಲ್ಲಿ ಇತರ ಚಟುವಟಿಕೆಗಳಲ್ಲಿ ತೊಡಗಿರುವಾಗ, ಇದು ಮಾಡಬಹುದಾದ ಬಹಳಾ ಸಹಾಯಕವಾದ ಕೆಲಸ. ಉದಾಹರಣೆಗೆ, ನಾವು ಟ್ರಾಫಿಕ್ನಲ್ಲಿ ಸಿಕ್ಕಿಬಿದ್ದಾಗ, ಪ್ರೀತಿ ಮುಂತಾದ ನಿರ್ದಿಷ್ಟ ಮನಸ್ಥಿತಿಯು ಈ ಪರಿಸ್ಥಿತಿಯಲ್ಲಿ ಹೇಗೆ ಅನ್ವಯಿಸುತ್ತದೆ ಎಂಬುದರ ಕುರಿತು ನಾವು ಯೋಚಿಸಬಹುದು. ಅದು ಹೇಗೆ ಪ್ರಸ್ತುತವಾಗಿರುತ್ತದೆ? ಅದರ ಪ್ರಯೋಜನಗಳೇನು? ಇತ್ಯಾದಿ. ಇವು ನಮ್ಮ ದಿನವಿಡೀ ನಾವು ಯೋಚಿಸಬಹುದಾದ ಅಂಶಗಳಾಗಿರುತ್ತವೆ.
ಧ್ಯಾನ
ಈಗ ನಾವು ನಮ್ಮ ಮೂರು ಹಂತದ ಪ್ರಕ್ರಿಯೆಯ ಮೂರನೇ ಹಂತಕ್ಕೆ ಬಂದಿದ್ದೇವೆ: ಅದೇ ಧ್ಯಾನ. ಆಹಾರವನ್ನು ಚೆನ್ನಾಗಿ ಅಗಿದ ನಂತರ ಅದನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಗೆ ಧ್ಯಾನವು ಸಮಾನವಾಗಿದೆ. ಒಂದು ನಿರ್ದಿಷ್ಟ ಸಕಾರಾತ್ಮಕ ಮನಸ್ಥಿತಿಯನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳುವುದು ಧ್ಯಾನದ ಉದ್ದೇಶವಾಗಿದೆ; ಅಂದರೆ, ಆ ಮನಸ್ಥಿತಿಯ ಬಗ್ಗೆ ಯೋಚಿಸಿ, ಅದನ್ನು ಅರ್ಥಮಾಡಿಕೊಂಡು ಮತ್ತು ಅದನ್ನು ಸೃಷ್ಟಿಸುವ ಸಾಮರ್ಥ್ಯ ನಮಗಿದೆ ಎಂದು ಮನಗಂಡ ನಂತರ, ವಾಸ್ತವದಲ್ಲಿ ಆ ಮನಸ್ಥಿತಿಯನ್ನು ಹೊಂದುವುದು ಇದರ ಗುರಿಯಾಗಿರುತ್ತದೆ.
ಧ್ಯಾನವು ಮೂಲಭೂತವಾಗಿ ಎರಡು ಹಂತಗಳ ಪ್ರಕ್ರಿಯೆಯಾಗಿರುತ್ತದೆ. ಒಂದು ಹಂತವನ್ನು ನಾನು "ವಿವೇಚನಾತ್ಮಕ ಧ್ಯಾನ" ಎಂದು ಕರೆಯುತ್ತೇನೆ. ಇದನ್ನು ಸಾಮಾನ್ಯವಾಗಿ "ವಿಶ್ಲೇಷಣಾತ್ಮಕ ಧ್ಯಾನ" ಎಂದು ಅನುವಾದಿಸಲಾಗುತ್ತದೆ, ಆದರೆ "ವಿಶ್ಲೇಷಣಾತ್ಮಕ" ಎಂಬ ಪದವು ಇದನ್ನು ಕೇವಲ 'ಯೋಚಿಸುವ ಹಂತ'ದೊಂದಿಗೆ ಗೊಂದಲಕ್ಕೀಡುಮಾಡುವ ಸಾಧ್ಯತೆಯಿದೆ. ಈ ಪರಿಕಲ್ಪನೆಗೆ "ವಿವೇಚನಾತ್ಮಕ" ಎಂಬ ಪದವು ಹೆಚ್ಚು ನಿಖರವಾದ ಅನುವಾದ ಎಂದು ನನಗೆ ಅನ್ನಿಸುತ್ತದೆ. ಈ ಸಂದರ್ಭದಲ್ಲಿ, "ವಿವೇಚಿಸುವುದು" ಎಂದರೆ ಯಾವುದನ್ನಾದರೂ ಬಹಳ ಎಚ್ಚರಿಕೆಯಿಂದ ಪರಿಶೀಲಿಸುವುದು ಮತ್ತು ಅದನ್ನು ನಿರ್ದಿಷ್ಟ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದು ಎಂದಾಗಿರುತ್ತದೆ. ಧ್ಯಾನದ ಎರಡನೇ ಅಂಶವೆಂದರೆ ‘ಏಕಾಗ್ರತೆಯ ಧ್ಯಾನ’; ಇದರಲ್ಲಿ ನಾವು ಆ ನಿರ್ದಿಷ್ಟ ಮನಸ್ಥಿತಿಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಿ, ಅದರಲ್ಲಿಯೇ ಸ್ಥಿರವಾಗಿರುತ್ತೇವೆ. ಈ ಎರಡನೇ ಹಂತವನ್ನು ನಾವು "ಸ್ಥಿರೀಕರಣದ ಧ್ಯಾನ" ಎಂದೂ ಕರೆಯಬಹುದು.
ಮೊದಲ ಹಂತವಾದ 'ವಿವೇಚನಾತ್ಮಕ ಧ್ಯಾನ'ವನ್ನು ನಾವು ಹೇಗೆ ಸಾಧಿಸಬಹುದು? ಯೋಚಿಸುವ ಪ್ರಕ್ರಿಯೆಯಲ್ಲಿ, ನಾವು ಒಂದು ನಿರ್ದಿಷ್ಟ ತಾರ್ಕಿಕ ಹಾದಿಯನ್ನು ಅನುಸರಿಸಿರುತ್ತೇವೆ ಅಥವಾ ಒಂದು ನಿರ್ದಿಷ್ಟ ಮನಸ್ಥಿತಿಯನ್ನು ರೂಪಿಸಲು ಅಗತ್ಯವಾದ ಹಂತಗಳು ಮತ್ತು ಕ್ರಮಗಳ ಮೂಲಕ ಸಾಗಿರುತ್ತೇವೆ. ನಾವು ಬೆಳೆಸಿಕೊಳ್ಳಲು ಬಯಸುವ ಆ ಮನಸ್ಥಿತಿ ಯಾವುದು ಮತ್ತು ಅದನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ನಾವು ಹಾಗೆ ಮಾಡಿರುತ್ತೇವೆ. ಈಗ, ವಿವೇಚನಾತ್ಮಕ ಧ್ಯಾನದ ಮೂಲಕ, ನಿರ್ದಿಷ್ಟ ಮನಸ್ಥಿತಿಯನ್ನು ಸೃಷ್ಟಿಸಲು ಅಗತ್ಯವಾದ ಆ ತಾರ್ಕಿಕ ಹಾದಿ ಅಥವಾ ಹಂತಗಳನ್ನು ನಾವು ಮತ್ತೊಮ್ಮೆ ಅನುಸರಿಸುತ್ತೇವೆ. ಆದರೆ ಈಗ ನಾವು ಈ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿರುವುದು ಆ ಮನಸ್ಥಿತಿಯನ್ನು ವಾಸ್ತವದಲ್ಲಿ ಸೃಷ್ಟಿಸಲು ಮತ್ತು ಅದನ್ನು ನಮ್ಮಲ್ಲಿ ಹೊಸದಾಗಿ ಅನುಭವಿಸಲು ಆಗಿರುತ್ತದೆ. ಉದಾಹರಣೆಗೆ, ಎಲ್ಲರ ಬಗ್ಗೆಯೂ ಸಹಾನುಭೂತಿಯನ್ನು ಬೆಳೆಸಿಕೊಳ್ಳಲು, ನಾವು ಈ ರೀತಿಯ ತಾರ್ಕಿಕ ಹಾದಿಯನ್ನು ಅನುಸರಿಸುತ್ತೇವೆ: "ಪ್ರತಿಯೊಬ್ಬರೂ ಹಿಂದೆಂದೋ ನನ್ನ ತಾಯಿಯಾಗಿದ್ದರು, ಪ್ರತಿಯೊಬ್ಬರೂ ನನ್ನೊಂದಿಗೆ ದಯೆಯಿಂದ ವರ್ತಿಸಿದ್ದಾರೆ..." ಇತ್ಯಾದಿ. ಹೀಗೆ ಮಾಡುವುದರಿಂದ ನಾವು ಆ ನಿರ್ದಿಷ್ಟ ಮನಸ್ಥಿತಿಯನ್ನು ತಲುಪಲು ಪ್ರಯತ್ನಿಸುತ್ತೇವೆ ಮತ್ತು ಅದನ್ನು ನಿಜವಾಗಿಯೂ ಅನುಭವಿಸಲಾಗುತ್ತದೆ.
ಈ ಹಂತ-ಹಂತದ ಪ್ರಕ್ರಿಯೆಯ ಮೂಲಕ ನಾವು ಯಾವ ಮನಸ್ಥಿತಿಯನ್ನು ರೂಢಿಸಿಕೊಳ್ಳಲು ಬಯಸುತ್ತೇವೆಯೋ ಅದನ್ನು ತಲುಪಿದ ನಂತರ, ನಾವು ಆ ಕೇಂದ್ರಿಕೃತ ವಿಷಯವನ್ನು, ಆ ನಿರ್ದಿಷ್ಟ ರೀತಿಯಲ್ಲಿ ಸಕ್ರಿಯವಾಗಿ ವಿವೇಚಿಸುತ್ತೇವೆ ಅಥವಾ ಅರ್ಥಮಾಡಿಕೊಳ್ಳುತ್ತೇವೆ. ಉದಾಹರಣೆಗೆ, ನಾವು ಸಹಾನುಭೂತಿಯ ಕುರಿತು ಧ್ಯಾನಿಸುತ್ತಿದ್ದರೆ, ಸೀಮಿತ ಅಸ್ತಿತ್ವವನ್ನು ಹೊಂದಿರುವ ಎಲ್ಲಾ ಜೀವಿಗಳ ಮೇಲೆ ಮತ್ತು ಅವರ ಸಮಸ್ಯೆಗಳು ಹಾಗೂ ದುಃಖಗಳ ಮೇಲೆ ಗಮನಹರಿಸುತ್ತೇವೆ. ಅವರು ದುಃಖಿಸುತ್ತಿದ್ದಾರೆ ಎಂಬುದನ್ನು ನಾವು ಗ್ರಹಿಸುತ್ತೇವೆ; ಅವರು ಆ ದುಃಖದಿಂದ ಮುಕ್ತರಾಗಬೇಕೆಂಬ ಹಂಬಲವನ್ನು ಮತ್ತು ಅದರಿಂದ ಹೊರಬರಲು ಅವರಿಗೆ ಸಹಾಯ ಮಾಡುವ ಸಂಕಲ್ಪವನ್ನು ನಾವು ಹೊಂದಿರುತ್ತೇವೆ. ವಾಸ್ತವದಲ್ಲಿ, ನಾವು ನಮ್ಮ ಮನಸ್ಸಿನಲ್ಲಿ ಜೀವಿಗಳನ್ನು ಕಾಣುತ್ತಿದ್ದೇವೆ ಅಥವಾ ನಿಜ ಜೀವನದಲ್ಲಿ ಜನರನ್ನು ನೋಡುವಾಗಲೂ ಹೀಗೆಯೇ ಗಮನಿಸುತ್ತೇವೆ. ಸಹಾನುಭೂತಿಯು ಇತರರ ಮತ್ತು ಅವರ ದುಃಖದ ಮೇಲೆ ಕೇಂದ್ರೀಕೃತವಾಗಿರುತ್ತದೆ ಹಾಗೂ ಅವರು ಅದರಿಂದ ಮುಕ್ತರಾಗಬೇಕೆಂಬ ಆಶಯವನ್ನು ಹೊಂದಿರುತ್ತದೆ.
ನಾವು ಸ್ವಲ್ಪ ಸಮಯದವರೆಗೆ ಆ ವಿವೇಚನೆಯ ಸ್ಥಿತಿಯಲ್ಲಿ ಸಕ್ರಿಯವಾಗಿರುತ್ತೇವೆ. ತದನಂತರ, ಸ್ಥಿರೀಕರಣದ ಧ್ಯಾನದಲ್ಲಿ, ನಾವು ವಿವೇಚಿಸಿದ ವಿಷಯ ಅಥವಾ ಮಾನಸಿಕ ಸ್ಥಿತಿಯ ಮೇಲೆ ಪೂರ್ಣ ಏಕಾಗ್ರತೆಯಿಂದ ಅದನ್ನು ಮನಸ್ಸಿನಲ್ಲಿ ಆಳವಾಗಿ ನೆಲೆಗೊಳ್ಳುವಂತೆ ಮಾಡುತ್ತೇವೆ. ಸಹಜವಾಗಿಯೇ, ವಿವೇಚನೆಯ ಧ್ಯಾನದ ಹಂತದಲ್ಲೂ ನಮಗೆ ಏಕಾಗ್ರತೆಯ ಅಗತ್ಯವಿರುತ್ತದೆ; ಆದರೆ ಈ ಸ್ಥಿರೀಕರಣದ ಹಂತದಲ್ಲಿ, ಆ ಭಾವನೆಯನ್ನು ನಮ್ಮ ಹೃದಯದಲ್ಲಿ ಆಳವಾಗಿ ಇಳಿಯುವಂತೆ ಮಾಡುತ್ತೇವೆ: ಅಂದರೆ ನಾವು ಸಹಾನುಭೂತಿಯನ್ನು ಬಲವಾಗಿ ಅನುಭವಿಸುತ್ತೇವೆ.
ನಾವು ವಿವೇಚನೆ ಮತ್ತು ಸ್ಥಿರೀಕರಣ ಎಂಬ ಈ ಎರಡು ಹಂತಗಳ ನಡುವೆ ಅದಲು-ಬದಲು ಮಾಡುತ್ತಾ ಸಾಗುತ್ತೇವೆ ಮತ್ತು ಅಂತಿಮವಾಗಿ ಅವುಗಳನ್ನು ಸಂಯೋಜಿಸಲು ಸಮರ್ಥರಾಗುತ್ತೇವೆ. ಧ್ಯಾನದ ವಿವೇಚನೆ ಮತ್ತು ಸ್ಥಿರೀಕರಣ ಹಂತಗಳನ್ನು ಸಂಯೋಜಿಸುವುದು ಬಹಳ ಕಷ್ಟಕರವಾದ ಕೆಲಸ. ಅವುಗಳನ್ನು ಸಂಯೋಜಿಸುವ ಹಂತಗಳ ಕುರಿತಾದ ಚರ್ಚೆಯು ಅತ್ಯಂತ ಸಂಕೀರ್ಣವಾಗಿದೆ. ನೀವು ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಬಯಸಿದರೆ, ನನ್ನ ವೆಬ್ಸೈಟ್ನಲ್ಲಿ ಅದರ ಬಗ್ಗೆ ಓದಬಹುದು.
ಅಲ್ಲದೆ, ನಾವು ಉನ್ನತ ಹಂತವನ್ನು ತಲುಪಿದಾಗ, "ಶ್ರಮದಾಯಕ ಧ್ಯಾನ" ಎಂದು ಕರೆಯಲ್ಪಡುವ ವಿಧಾನವನ್ನು ಅನುಸರಿಸುವ ಅಗತ್ಯವಿರುವುದಿಲ್ಲ. ಶ್ರಮದಾಯಕ ಧ್ಯಾನವೆಂದರೆ, ಗ್ರಹಿಕೆಯ ಧ್ಯಾನ ಪ್ರಕ್ರಿಯೆಯಲ್ಲಿ ವಿವಿಧ ಹಂತಗಳನ್ನು ದಾಟುತ್ತಾ ಮತ್ತು ನಿರ್ದಿಷ್ಟ ಮಾನಸಿಕ ಸ್ಥಿತಿಯನ್ನು ಕ್ರಮೇಣವಾಗಿ ರೂಪಿಸಿಕೊಳ್ಳುತ್ತಾ ಸಾಗುವ ವಿಧಾನ. ಉನ್ನತ ಹಂತದಲ್ಲಿ, ನಾವು ಶ್ರಮವಿಲ್ಲದ ವಿವೇಚನಾತ್ಮಕ ಧ್ಯಾನವನ್ನು ಮಾಡಲು ಸಮರ್ಥರಾಗುತ್ತೇವೆ. ಹಂತಗಳು ಅಥವಾ ತಾರ್ಕಿಕ ಚಿಂತನೆಯ ಮೂಲಕ ರೂಪಿಸಿಕೊಳ್ಳುವ ಅಗತ್ಯವಿಲ್ಲದೆಯೇ, ನಾವು ಬಯಸಿದ ಮಾನಸಿಕ ಸ್ಥಿತಿಯನ್ನು ತಕ್ಷಣವೇ ಸೃಷ್ಟಿಸಿಕೊಳ್ಳಬಲ್ಲೆವು. ಆದಾಗ್ಯೂ, ಶ್ರಮದಾಯಕ ಧ್ಯಾನದ ಸಂದರ್ಭದಲ್ಲಿನಂತೆಯೇ, ಇಲ್ಲಿಯೂ ಸಹ ನಮ್ಮ ಗಮನದಲ್ಲಿರುವ ವಿಷಯವನ್ನು ವಿವೇಚಿಸಲು ನಾವು ಆ ಮಾನಸಿಕ ಸ್ಥಿತಿಯನ್ನೇ ಬಳಸಿಕೊಳ್ಳುತ್ತೇವೆ.
ಧ್ಯಾನದ ವಿಧಗಳು
ನಾವು ಸಾಮಾನ್ಯವಾಗಿ ಎರಡು ಬಗೆಯ ಧ್ಯಾನಗಳ ಬಗ್ಗೆ ಕೇಳುತ್ತೇವೆ. ಅವುಗಳಿಗೆ ಸಂಸ್ಕೃತದಲ್ಲಿ "ಶಮಥ" ಮತ್ತು "ವಿಪಾಸನಾ” ಎಂದು ಕರೆಯಲಾಗುತ್ತದೆ; ಟಿಬೆಟಿಯನ್ ಭಾಷೆಯಲ್ಲಿ ಇವುಗಳನ್ನು "ಶಿನೇ" ಮತ್ತು "ಲ್ಹಗ್ಟಾಂಗ್" ಎಂದು ಕರೆಯುತ್ತಾರೆ. ವಾಸ್ತವದಲ್ಲಿ, ಈ ಎರಡು ಪದಗಳು ಧ್ಯಾನ ಪ್ರಕ್ರಿಯೆಯ ಮೂಲಕ ನಾವು ಸಾಧಿಸಲು ಬಯಸುವ ಮನಸ್ಸಿನ ಎರಡು ಸ್ಥಿತಿಗಳನ್ನು ಸೂಚಿಸುತ್ತವೆ. 'ಶಮಥ' ಎಂದರೆ ಮನಸ್ಸಿನ ಶಾಂತ ಮತ್ತು ಸ್ಥಿರವಾದ ಸ್ಥಿತಿ. ಇಲ್ಲಿ 'ಶಾಂತ' ಎನ್ನುವುದು, ಮನಸ್ಸಿನ ಜಡತ್ವ ಹಾಗೂ ಚಂಚಲತೆ ಅಥವಾ ಕ್ಷೋಭೆಯನ್ನು (ಅಂದರೆ, ಬೇರೆ ಯಾವುದೋ ಆಕರ್ಷಕ ವಿಷಯದತ್ತ ಮನಸ್ಸು ಹರಿದುಹೋಗುವ ಸ್ಥಿತಿ) ಶಮನಗೊಳಿಸುವುದನ್ನು ಸೂಚಿಸುತ್ತದೆ. ಹಾಗೆಯೇ, 'ಶಮತ' ಎನ್ನುವುದು ಮನಸ್ಸಿನ ಏಕಾಗ್ರತೆಯು ಒಂದು ನಿರ್ದಿಷ್ಟ ವಿಷಯದ ಮೇಲೆ ದೃಢವಾಗಿ ನೆಲೆಗೊಂಡಿರುವುದನ್ನು ಸೂಚಿಸುತ್ತದೆ. ಹೀಗಾಗಿ, ಇಲ್ಲಿ ಧ್ಯಾನವನ್ನು ಸ್ಥಿರಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಉಸಿರಾಟ, ಕಲ್ಪನೆಯಲ್ಲಿ ಮೂಡಿಸಿಕೊಂಡ ಬುದ್ಧನ ರೂಪ ಮುಂತಾದ ವಿವಿಧ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನಾವು ಮನಸ್ಸಿನ ಈ ಶಾಂತ ಮತ್ತು ಸ್ಥಿರ ಸ್ಥಿತಿಯನ್ನು ಬೆಳೆಸಿಕೊಳ್ಳಬಹುದು. ಇದಕ್ಕಾಗಿ ಅನೇಕ ಸಾಧ್ಯತೆಗಳಿವೆ.
ಶಮಥ ಧ್ಯಾನದಲ್ಲೂ ಸಹ, ನಾವು ಮೊದಲು ಸೂಕ್ತ ಸೂಚನೆಗಳನ್ನು ಆಲಿಸಬೇಕು ಮತ್ತು ನಂತರ ಧ್ಯಾನದ ಹಂತಗಳ ಬಗ್ಗೆ ಚಿಂತನೆ ನಡೆಸಬೇಕು. ಉದಾಹರಣೆಗೆ, ನಾವು ಕಾಲ್ಪನಿಕ ಬುದ್ಧ ರೂಪವನ್ನು ಧ್ಯಾನಿಸುವಾಗ, ಆ ದೃಶ್ಯವನ್ನು ಹಂತ ಹಂತವಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಕುರಿತಾದ ಸೂಚನೆಗಳನ್ನು ನಾವು ಕೇಳುತ್ತೇವೆ. ಆಗ ನಾವು ಮೊದಲು ಏನು ಮಾಡಬೇಕು, ನಂತರ ಏನು ಮಾಡಬೇಕು ಇತ್ಯಾದಿಗಳ ಬಗ್ಗೆ ಯೋಚಿಸುತ್ತೇವೆ.
"ವಿಪಶ್ಯಾನ" ಎಂದರೆ ಮನಸ್ಸಿನ ಅತ್ಯಂತ ಸೂಕ್ಷ್ಮ ಹಾಗೂ ಆಳವಾದ ಗ್ರಹಿಕೆಯ ಸ್ಥಿತಿ. ಇದು ವಿಷಯಗಳನ್ನು ಅಸಾಧಾರಣ ರೀತಿಯಲ್ಲಿ ಗ್ರಹಿಸುವ ಸಾಮರ್ಥ್ಯವುಳ್ಳ ಮನಸ್ಸಿನ ಸ್ಥಿತಿಯಾಗಿದೆ. ಆದ್ದರಿಂದ, ವಿಪಶ್ಯಾನ ಧ್ಯಾನವು ವಿವೇಚನಾತ್ಮಕ ಧ್ಯಾನಕ್ಕೆ ಒತ್ತು ನೀಡುತ್ತದೆ. ವಿಪಶ್ಯಾನ ಸ್ಥಿತಿಯನ್ನು ಸಾಧಿಸುವ ಬಗ್ಗೆ ಮಾತನಾಡುವಾಗ, ಅದು ಅನಿತ್ಯತೆ ಅಥವಾ ಶೂನ್ಯತೆಯನ್ನು ಗ್ರಹಿಸುವ ಅತ್ಯಂತ ಸೂಕ್ಷ್ಮ ಮನಸ್ಸಿನ ಸ್ಥಿತಿಯಾಗಿರಬಹುದು; ಆದರೆ ಅದು ಕೇವಲ ಆ ಎರಡರಲ್ಲಿ ಒಂದಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ತಂತ್ರದ ಅತ್ಯುನ್ನತ ವರ್ಗವಾದ 'ಅನುತ್ತರಯೋಗ ತಂತ್ರ'ದಲ್ಲಿ, ವಿಪಶ್ಯಾನ ಎಂಬ ಈ ಸೂಕ್ಷ್ಮ ಗ್ರಹಿಕೆಯ ಮನಸ್ಸಿನ ಸ್ಥಿತಿಯನ್ನು ಬೆಳೆಸಿಕೊಳ್ಳುವ ಒಂದು ವಿಧಾನವೆಂದರೆ ಮೂಗಿನ ತುದಿಯಲ್ಲಿ, ಒಂದು ಸಣ್ಣ ಚುಕ್ಕೆ ಅಥವಾ ಹನಿಯ ದೃಶ್ಯವನ್ನು ಕಲ್ಪಿಸಿಕೊಳ್ಳುವುದು. ನಂತರ, ಆ ಒಂದು ಚುಕ್ಕೆಯ ದೃಶ್ಯವನ್ನು ಮನಸ್ಸಿನಲ್ಲಿ ಉಳಿಸಿಕೊಂಡೇ, ಮುಂದಿನ ಸಾಲಿನಲ್ಲಿ ಎರಡು ಚುಕ್ಕೆಗಳನ್ನು, ಆಮೇಲೆ ನಾಲ್ಕು, ಎಂಟು, ಹದಿನಾರು, ಮೂವತ್ತೆರಡು ಹೀಗೆ ಚುಕ್ಕೆಗಳನ್ನು ಕಲ್ಪಿಸಿಕೊಳ್ಳುತ್ತಾ ಹೋಗಬೇಕು. ಅವೆಲ್ಲವನ್ನೂ ನೀವು ಅತ್ಯಂತ ಕ್ರಮಬದ್ಧವಾಗಿ ಇರಿಸಿಕೊಳ್ಳಬೇಕು ಮತ್ತು ನಂತರ ಆ ದೃಶ್ಯವನ್ನು ಹಂತ ಹಂತವಾಗಿ ವಿಲೀನಗೊಳಿಸಬೇಕು. ಈ ರೀತಿಯ ದೃಶ್ಯೀಕರಣವನ್ನು ಮಾಡುವುದರಿಂದ, ನೀವು ಅತ್ಯಂತ ತೀಕ್ಷ್ಣವಾದ ಮತ್ತು ಸೂಕ್ಷ್ಮ ಗ್ರಹಿಕೆಯ ಮನಸ್ಸಿನ ಸ್ಥಿತಿಯನ್ನು ಬೆಳೆಸಿಕೊಳ್ಳುತ್ತೀರಿ. ಈ ಮನಸ್ಥಿತಿಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಲು ನೀವು ಬಯಸಿದರೆ, ಇತರ ಅಭ್ಯಾಸಗಳೂ ಇವೆ; ಅವುಗಳಲ್ಲಿ ನೀವು ಪ್ರತಿ ಹನಿಯಲ್ಲೂ, ನೀವು ಆರಾಧಿಸುವ ದೇವತಾ ವ್ಯವಸ್ಥೆಯ ಸಂಪೂರ್ಣ ಮಂಡಲವನ್ನು (ಅಂದರೆ ಎಲ್ಲಾ ದೇವತೆಗಳು ಮತ್ತು ಅವರ ಎಲ್ಲಾ ವಿವರಗಳೊಂದಿಗೆ) ಕಲ್ಪಿಸಿಕೊಳ್ಳುತ್ತೀರಿ. ಇದನ್ನು ನೀವು ಸಾಧಿಸಿದರೆ, ನಿಜವಾಗಿಯೂ ನೀವು ಅತ್ಯಂತ ಸೂಕ್ಷ್ಮ ಗ್ರಹಿಕೆಯ ಮನಸ್ಸಿನ ಸ್ಥಿತಿಯನ್ನು ಹೊಂದಿರುತ್ತೀರಿ!
ಶಮಥ ಮತ್ತು ವಿಪಶ್ಯಾನ ಎಂಬ ಈ ಎರಡು ಬಗೆಯ ಧ್ಯಾನಗಳು ಎಲ್ಲಾ ಬೌದ್ಧ ಸಂಪ್ರದಾಯಗಳಲ್ಲಿ ಹಾಗೂ ಭಾರತದ ಅನೇಕ ಬೌದ್ಧೇತರ ಪದ್ಧತಿಗಳಲ್ಲಿ ಕಂಡುಬರುತ್ತವೆ. ಥೆರವಾದ ಬೌದ್ಧ ಸಂಪ್ರದಾಯಗಳಲ್ಲಿ, ಇವುಗಳನ್ನು ಪಾಲಿ ಭಾಷೆಯ ಪದಗಳಾದ "ಸಮಥಾ" ಮತ್ತು "ವಿಪಸ್ಸನಾ" ಎಂದು ಕರೆಯಲಾಗುತ್ತದೆ. ಝೆನ್ (Zen) ಸಂಪ್ರದಾಯದಲ್ಲೂ ನಾವು ಇವೆರಡನ್ನೂ ಕಾಣಬಹುದು. ಉದಾಹರಣೆಗೆ, ಝೆನ್ನ ಕೊರಿಯನ್ ರೂಪವಾದ 'ಸೊನ್' ಬೌದ್ಧಧರ್ಮದಲ್ಲಿ ಕೊನ್(koan): ಇದು ಏನು? ಎಂಬುದು ಇದೆ. ನಾವು "ಇದು ಏನು?" ಎಂಬುದರ ಮೇಲೆ ಗಮನ ಹರಿಸಿದಾಗ, ಅದಕ್ಕೆ "ಇದು ಮೇಜು; ಇದು ಲೋಟ" ಇತ್ಯಾದಿ ಉತ್ತರಗಳನ್ನು ಕಂಡುಕೊಳ್ಳುವುದು ಮುಖ್ಯ ಉದ್ದೇಶವಾಗಿರುವುದಿಲ್ಲ. ಬದಲಾಗಿ, ನಾವು ಮನಸ್ಸನ್ನು "ಗಹನವಾದ ಸಂಶಯ"ದ ಸ್ಥಿತಿಯಲ್ಲಿರುವಂತೆ ರೂಪಿಸಿಕೊಳ್ಳುತ್ತೇವೆ – ಅಂದರೆ "ಇದು ಏನು?" ಎಂಬ ವಾಸ್ತವತೆಯನ್ನು ಸದಾ ಪ್ರಶ್ನಿಸುವುದು. ಆಗ ನಮ್ಮ ಮನಸ್ಸಿನ ಸ್ಥಿತಿಯು ಅತ್ಯಂತ ಸೂಕ್ಷ್ಮ ಗ್ರಹಿಕೆಯ ಸಾಮರ್ಥ್ಯವನ್ನು ಪಡೆಯುತ್ತದೆ.
ಬಹುತೇಕ ಟಿಬೆಟಿಯನ್ ಗುರುಗಳು ಝೆನ್ ಸಂಪ್ರದಾಯವನ್ನು ಅಧ್ಯಯನ ಮಾಡಿಲ್ಲ ಅಥವಾ ಅದರ ಪರಿಚಯ ಅವರಿಗಿಲ್ಲ ಎಂಬುದನ್ನು ತೋರಿಸುವ ಒಂದು ತಮಾಷೆಯ ಕಥೆಯಿದೆ. ಒಮ್ಮೆ ಒಬ್ಬ ಝೆನ್ ಗುರು ಮತ್ತು ಕಾಲು ರಿಂಪೋಚೆ ಅವರ ನಡುವೆ ಪ್ರಸಿದ್ಧ ಭೇಟಿಯೊಂದು ನಡೆಯಿತು. ಆ ಝೆನ್ ಗುರು ಒಂದು ಕಿತ್ತಳೆ ಹಣ್ಣನ್ನು ಮೇಲಕ್ಕೆತ್ತಿ ಕಾಲು ರಿಂಪೋಚೆ ಅವರನ್ನು, "ಇದು ಏನು?" ಎಂದು ಕೇಳಿದರು. ಆಗ ಕಾಲು ರಿಂಪೋಚೆ ತಮ್ಮ ಭಾಷಾಂತರಕಾರರತ್ತ ಪ್ರಶ್ನಾರ್ಥಕವಾಗಿ ನೋಡುತ್ತಾ, "ಏನಿದು, ಅವರ ದೇಶದಲ್ಲಿ ಕಿತ್ತಳೆ ಹಣ್ಣುಗಳೇ ಇಲ್ಲವೇ?" ಎಂದು ಕೇಳಿದರು.
ನಮ್ಮಲ್ಲಿ ಶಮಥ ಮತ್ತು ವಿಪಶ್ಯಾನ ಎಂಬ ಅಭ್ಯಾಸಗಳಿವೆ. ಶಮಥ ಎಂದರೆ ಕೇವಲ ಪರಿಪೂರ್ಣ ಏಕಾಗ್ರತೆಯಲ್ಲ; ಇದು ವಿವಿಧ ರೀತಿಯ ಗಮನಹರಿಸುವಿಕೆ ಇತ್ಯಾದಿಗಳನ್ನು ಬಳಸಿಕೊಂಡು ಒಂಬತ್ತು ಹಂತಗಳಲ್ಲಿ ಬೆಳೆಸಲ್ಪಡುವ ಪ್ರಕ್ರಿಯೆಯಾಗಿದೆ. ಆದರೆ ಪರಿಪೂರ್ಣ ಏಕಾಗ್ರತೆಯ ಜೊತೆಗೆ, ಶಮಥವು "ಮನಸ್ಸಿನ ಉಲ್ಲಾಸಭರಿತ ಸ್ಥಿತಿ"ಯನ್ನೂ ಒಳಗೊಂಡಿರುತ್ತದೆ. ಇದಕ್ಕೆ ತಾಂತ್ರಿಕದಲ್ಲಿ "ಸಮರ್ಥತೆಯ ಭಾವ" ಎಂದು ಕರೆಯಲಾಗುತ್ತದೆ. ಇದು ಪರಿಪೂರ್ಣ ಏಕಾಗ್ರತೆಯ ಜೊತೆಗೆ, ದೈಹಿಕ ಮತ್ತು ಮಾನಸಿಕವಾಗಿ ಅತ್ಯಂತ ಚೈತನ್ಯಪೂರ್ಣ ಹಾಗೂ ಸಮರ್ಥವಾಗಿರುವ ಸ್ಥಿತಿಯಾಗಿರುತ್ತದೆ. ಈ "ಸಮರ್ಥತೆಯ ಭಾವ"ವು ಅತ್ಯುತ್ತಮ ತರಬೇತಿ ಪಡೆದ ಕ್ರೀಡಾಪಟುವಿನ ಸ್ಥಿತಿಗೆ ಹೋಲಿಸಬಹುದು.
ನನ್ನ ಗುರುಗಳಾದ ತ್ಸೆನ್ಝಾಬ್ ಸೆರ್ಕಾಂಗ್ ರಿಂಪೋಚೆ ಅವರು ಶಮಥದ ಮನಸ್ಥಿತಿಯನ್ನು ಜಂಬೋ ಜೆಟ್ ವಿಮಾನಕ್ಕೆ ಹೋಲಿಸಿ ವಿವರಿಸಿದ್ದರು: ಅದನ್ನು ನೆಲದ ಮೇಲೆ ಇರಿಸಿದರೆ ಅದು ಅಲ್ಲಿಯೇ ಸ್ಥಿರವಾಗಿರುತ್ತದೆ, ಮತ್ತು ಅದನ್ನು ಗಾಳಿಯಲ್ಲಿ ಹಾರಿಸಿದರೆ ಅದು ಹಾರುತ್ತದೆ. ಯಾವುದರ ಮೇಲಾದರೂ ಎಷ್ಟೇ ಸಮಯದವರೆಗೆ ಏಕಾಗ್ರತೆಯನ್ನು ಕೇಂದ್ರೀಕರಿಸಬಲ್ಲೆ ಎಂಬ ಭಾವನೆ ಇದರಲ್ಲಿರುತ್ತದೆ. ದೇಹವು ಸುಸ್ತಾಗುವುದಿಲ್ಲ, ಮನಸ್ಸು ದಣಿಯುವುದಿಲ್ಲ; ನೀವು ಸಂಪೂರ್ಣವಾಗಿ ಸಮರ್ಥರಾಗಿರುವಂತೆ (ಫಿಟ್ ಆಗಿರುವಂತೆ) ಭಾವಿಸುತ್ತೀರಿ ಮತ್ತು ಇದು ಅತ್ಯಂತ ಉಲ್ಲಾಸದಾಯಕವಾಗಿರುತ್ತದೆ. ಶಮಥವು ಮನಸ್ಸಿನ ಅತ್ಯಂತ ಉಲ್ಲಾಸಭರಿತ, ಉತ್ಸಾಹವರ್ಧಕ ಮತ್ತು ಆನಂದಮಯ ಸ್ಥಿತಿಯಾಗಿರುತ್ತದೆ. ಆದರೆ ಇದು ಚಲನಚಿತ್ರಗಳಲ್ಲಿ ತೋರಿಸುವಂತೆ ಬೀದಿಯಲ್ಲಿ ಹಾಡುತ್ತಾ, ಕುಣಿಯುತ್ತಾ ಓಡುವಂತಹ ಆನಂದವಲ್ಲ. ಶಮಥದ ಸ್ಥಿತಿಯಲ್ಲಿ ಮನಸ್ಸು ಅತ್ಯುತ್ತಮ ತರಬೇತಿ ಪಡೆದ ಕ್ರೀಡಾಪಟುವಿನಂತೆ ಸಂಪೂರ್ಣವಾಗಿ ಸನ್ನದ್ಧವಾಗಿರುತ್ತದೆ.
ವಿಪಶ್ಯಾನ ಮಾನಸಿಕ ಸ್ಥಿತಿಯು ಶಮಥದ ಸ್ಥಿತಿಗೆ ಹೆಚ್ಚುವರಿಯಾಗಿ ಬರುವಂತಹದ್ದು ಎಂಬುದನ್ನು ಸ್ಪಷ್ಟಪಡಿಸುವುದು ಮುಖ್ಯ. 'ಶಮಥ' ಅಭ್ಯಾಸದಿಂದ ಲಭಿಸುವ ಪರಿಪೂರ್ಣ ಏಕಾಗ್ರತೆ ಮತ್ತು ಮಾನಸಿಕ ಸನ್ನದ್ಧತೆಯ ಜೊತೆಗೆ, 'ವಿಪಶ್ಯಾನ' ಅಭ್ಯಾಸವು ಮತ್ತೊಂದು ಹಂತದ ಸನ್ನದ್ಧತೆಯನ್ನು ಸೇರಿಸುತ್ತದೆ. ಇದು ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳಲು ಮತ್ತು ವಿವೇಚಿಸಲು ಮನಸ್ಸು ಸಿದ್ಧವಾಗಿರುವ ಸ್ಥಿತಿಯಾಗಿರುತ್ತದೆ.
ಇನ್ನೊಂದು ಬಗೆಯ ಧ್ಯಾನವೂ ಇದೆ, ಇದನ್ನು ಸಾಮಾನ್ಯವಾಗಿ "ನೋಟದ ಧ್ಯಾನ" ಎಂದು ಕರೆಯಲಾಗುತ್ತದೆ. ನಾವು ನಿರ್ದಿಷ್ಟ ಧ್ಯಾನದ ಅಭ್ಯಾಸದಲ್ಲಿ ತೊಡಗಿರುವಾಗ, ಆಗಾಗ್ಗೆ ಸಂಪೂರ್ಣ ಬೌದ್ಧ ಮಾರ್ಗವನ್ನು ಅವಲೋಕಿಸಬೇಕಾಗುತ್ತದೆ. ನಮ್ಮ ನಿರ್ದಿಷ್ಟ ಧ್ಯಾನದ ವಿಷಯವು ಒಟ್ಟಾರೆ ಮಾರ್ಗದಲ್ಲಿ ಎಲ್ಲಿ ಹೊಂದಿಕೊಳ್ಳುತ್ತದೆ ಎಂಬುದನ್ನು ನೆನಪಿಸಿಕೊಳ್ಳುವುದು ಇದರ ಉದ್ದೇಶ; ಇದರಿಂದಾಗಿ ನಾವು ಒಂದು ವಿಷಯಕ್ಕೆ ಅತಿಯಾದ ಒತ್ತು ನೀಡಿ, ಇನ್ನೊಂದನ್ನು ಬಿಟ್ಟುಬಿಡುವುದು ಅಥವಾ ನಿರ್ಲಕ್ಷಿಸುವುದು ತಪ್ಪುತ್ತದೆ. ಆದ್ದರಿಂದ, ನೋಟದ ಧ್ಯಾನ ಎಂದರೆ ಸಂಪೂರ್ಣ ಮಾರ್ಗವನ್ನು ಅವಲೋಕಿಸುವುದು ಎಂದರ್ಥ; ಇದು ಒಂದು ರೀತಿಯ ಪುನರ್ಪರಿಶೀಲನೆಯಾಗಿರುತ್ತದೆ.
ಬಹಳಾ ವರ್ಷಗಳ ಹಿಂದೆ, ನಾನು ಪರಮಪೂಜ್ಯ ದಲೈ ಲಾಮಾ ಅವರ ವೈಯಕ್ತಿಕ ವೈದ್ಯರಾಗಿದ್ದ ಡಾ. ಟೆನ್ಜಿನ್ ಚೋಡ್ರಾಕ್ ಅವರೊಂದಿಗೆ ಮಾಸ್ಕೋಗೆ ಭೇಟಿ ನೀಡಿದ್ದೆ. ಚೆರ್ನೋಬಿಲ್ ವಿಕಿರಣಕ್ಕೆ ತುತ್ತಾದವರಿಗೆ ಸಹಾಯ ಮಾಡಲು ಟಿಬೆಟಿಯನ್ ವೈದ್ಯಕೀಯ ಪದ್ಧತಿಯನ್ನು ಬಳಸುವ ಯೋಜನೆಯೊಂದರಲ್ಲಿ ನಾವು ಕೆಲಸ ಮಾಡುತ್ತಿದ್ದೆವು. ನಾವು ಅತ್ಯುತ್ತಮ ಹೋಟೆಲ್ಗಳಲ್ಲಿ ಉಳಿದುಕೊಂಡಿದ್ದೆವು ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳು ನಮಗೆ ಅಧಿಕೃತವಾಗಿ ಮಾರ್ಗದರ್ಶನ ನೀಡುತ್ತಿದ್ದರು. ಆಗಾಗ್ಗೆ ನಮ್ಮನ್ನು ರಷ್ಯಾದ ಪ್ರಸಿದ್ಧ 'ಸೆವೆನ್-ಕೋರ್ಸ್' ಔತಣಕೂಟಗಳಿಗೆ ಕರೆದೊಯ್ಯಲಾಗುತ್ತಿತ್ತು. ಡಾ. ಟೆನ್ಜಿನ್ ಚೋಡ್ರಾಕ್ ಅವರು ಟಿಬೆಟ್ ತೊರೆದು ಭಾರತಕ್ಕೆ ಬರುವ ಮೊದಲು ಚೀನಾದ ಬಂಧನ ಶಿಬಿರವೊಂದರಲ್ಲಿ ಇಪ್ಪತ್ತು ವರ್ಷಗಳನ್ನು ಕಳೆದಿದ್ದರು. ಹೀಗಾಗಿ, ಆ ಭೋಜನಕೂಟದ ಏಳು ಬಗೆಯ ಭಕ್ಷ್ಯಗಳಲ್ಲಿ ಮೊದಲ ಹಂತದ ಭೋಜನೆಯನ್ನು ಬಡಿಸುವಾಗ, ನಾವು ಅವರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ, ಅವರು ಮೊದಲ ಬಗೆಯ ಭಕ್ಷ್ಯವನ್ನೇ ಸಾಧ್ಯವಾದಷ್ಟು ಹೆಚ್ಚು ತಿಂದುಬಿಡುತ್ತಿದ್ದರು. ಮುಂದಿನ ಒಂದು ವಾರದವರೆಗೆ ಅವರಿಗೆ ಸಿಗುವ ಏಕೈಕ ಊಟ ಇದೊಂದೇ ಎಂಬಂತೆ ಅವರು ವರ್ತಿಸುತ್ತಿದ್ದರು. ಆಗ ಅವರ ಹೊಟ್ಟೆ ಎಷ್ಟು ತುಂಬಿಹೋಗುತ್ತಿತ್ತೆಂದರೆ, ನಂತರ ಬಡಿಸಲಾಗುವ ಉಳಿದ ಆರು ಬಗೆಯ ಭಕ್ಷ್ಯಗಳಲ್ಲಿ ಯಾವುದನ್ನೂ ಅವರಿಂದ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ನೋಟದ ಧ್ಯಾನದ ಮೂಲಕ ನಾವು ತಪ್ಪಿಸಲು ಬಯಸುವ ಪರಿಸ್ಥಿತಿಗೆ ಇದೊಂದು ಉದಾಹರಣೆಯಾಗಿದೆ. ನಾವು ಆ ಏಳು ಬಗೆಯ ಭಕ್ಷ್ಯಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ ನೆನಪಿನಲ್ಲಿಟ್ಟುಕೊಳ್ಳಲು ಬಯಸುತ್ತೇವೆ; ಇದರಿಂದಾಗಿ ನಾವು ಒಂದೇ ವಿಷಯದ ಮೇಲೆ ಅತಿಯಾಗಿ ಧ್ಯಾನ ಮಾಡುವ 'ಅತಿಯಾದ ಸೇವನೆ'ಯನ್ನು ತಪ್ಪಿಸಬಹುದು. ಇಲ್ಲದಿದ್ದರೆ, ಅದು ಮೊದಲ ಭಕ್ಷ್ಯವನ್ನೇ ಅತಿಯಾಗಿ ತಿಂದು, ಉಳಿದ ಊಟವನ್ನು ಕಳೆದುಕೊಂಡಂತಾಗುತ್ತದೆ.
ಇಲ್ಲಿಯವರೆಗೆ ನಾನು ಮನಸ್ಸಿನ ಒಂದು ನಿರ್ದಿಷ್ಟ ಸ್ಥಿತಿಯನ್ನು ಬೆಳೆಸಿಕೊಳ್ಳುವ ಬಗೆಯ ಧ್ಯಾನದ ಬಗ್ಗೆ ವಿವರಿಸುತ್ತಿದ್ದೆ; ಆದರೆ ಬೌದ್ಧಧರ್ಮದಲ್ಲಿ ಆಚರಿಸಲಾಗುವ ಧ್ಯಾನದ ವಿಧಾನ ಇದೊಂದೇ ಆಗಿಲ್ಲ. ಉದಾಹರಣೆಗೆ, ಮನಸ್ಸಿನ ಸ್ವರೂಪದ ಕುರಿತಾದ ಕೆಲವು 'ಕಗ್ಯು' ಧ್ಯಾನ ಪದ್ಧತಿಗಳು ಅಥವಾ ಕೆಲವು 'ಝೆನ್' ಆಚರಣೆಗಳಲ್ಲಿ ವಿಭಿನ್ನವಾದ ವಿಧಾನವನ್ನು ಅನುಸರಿಸಲಾಗುತ್ತದೆ. ಇಲ್ಲಿ ಮನಸ್ಸಿನ ಸ್ಥಿತಿಯನ್ನು ಬೆಳೆಸಿಕೊಳ್ಳುವ ಬದಲು, ಪ್ರೀತಿ ಅಥವಾ ಮನಸ್ಸಿನ ಸ್ಪಷ್ಟತೆಯಂತಹ ನಮ್ಮ ಮನಸ್ಸಿನ ಸಹಜ ಗುಣಗಳನ್ನು ಕಂಡುಕೊಳ್ಳಲು ಮತ್ತು ಅವುಗಳನ್ನು ಅನುಭವಕ್ಕೆ ತಂದುಕೊಳ್ಳಲು, ನಾವು ಮನಸ್ಸನ್ನು ಶಾಂತಗೊಳಿಸುವ ಸ್ಥಿತಿಗೆ ತಲುಪುತ್ತೇವೆ. ಆದರೆ ಈ ರೀತಿಯ ಧ್ಯಾನವನ್ನು ಮಾಡುವಾಗಲೂ ಸಹ, ಮೊದಲು ಸೂಚನೆಗಳನ್ನು ಕೇಳಿಸಿಕೊಳ್ಳುವುದು ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವವರೆಗೆ ಅವುಗಳ ಬಗ್ಗೆ ಆಲೋಚಿಸುವುದು ಅತ್ಯಗತ್ಯ. ಅಲ್ಲದೆ, ನಾವು ಯಾವ ಮನಸ್ಸಿನ ಸ್ಥಿತಿಯತ್ತ ಮನಸ್ಸನ್ನು ಶಾಂತಗೊಳಿಸುತ್ತಿದ್ದೇವೆ, ಅದರಿಂದ ಏನು ಸಾಧಿಸಲಿದ್ದೇವೆ ಹಾಗೂ ಮೊದಲಿಗೆ ಏನು ಮಾಡಬೇಕು, ನಂತರ ಏನು ಮಾಡಬೇಕು ಇತ್ಯಾದಿ ವಿಷಯಗಳ ಬಗ್ಗೆಯೂ ನಮಗೆ ಅರಿವಿರಬೇಕು. 'ಮನಸ್ಸನ್ನು ಶಾಂತಗೊಳಿಸುವ' ಧ್ಯಾನದ ರಚನೆಯು 'ಮನಸ್ಸಿನ ಸ್ಥಿತಿಯನ್ನು ಬೆಳೆಸಿಕೊಳ್ಳುವ' ಧ್ಯಾನದ ರಚನೆಯಂತೆಯೇ ಇರುತ್ತದೆ.
ಧ್ಯಾನಕ್ಕೆ ಅತ್ಯಂತ ಸೂಕ್ತವಾದ ಪರಿಸರ
ಧ್ಯಾನದ ಅವಧಿಯನ್ನು ಹೇಗೆ ಸಿದ್ಧಪಡಿಸುವುದು, ಧ್ಯಾನದ ಸ್ಥಳವನ್ನು ಹೇಗೆ ವ್ಯವಸ್ಥಿತಗೊಳಿಸುವುದು, ನೆಲವನ್ನು ಗುಡಿಸಿ ಕೋಣೆಯನ್ನು ಹೇಗೆ ಸ್ವಚ್ಛಗೊಳಿಸುವುದು, ಹಾಗೂ ಸಾಷ್ಟಾಂಗ ನಮಸ್ಕಾರ ಮಾಡುವುದು ಮತ್ತು ಕಾಣಿಕೆಗಳನ್ನು ಅರ್ಪಿಸುವುದು ಮುಂತಾದ ವಿಷಯಗಳ ಬಗ್ಗೆ ವಿಸ್ತೃತವಾದ ಸೂಚನೆಗಳಿವೆ. ಧ್ಯಾನಕ್ಕೆ ಪೂರಕವಾದ ಪರಿಸರವನ್ನು ನಿರ್ಮಿಸಲು ಇವೆಲ್ಲವೂ ಬಹಳ ಮುಖ್ಯವಾಗಿವೆ. ಧ್ಯಾನಕ್ಕೆ ಪೂರಕವಾದ ಸನ್ನಿವೇಶಗಳು ಮತ್ತು ಸೂಕ್ತ ಪರಿಸರ - ವಿಶೇಷವಾಗಿ ಸರಿಯಾದ ಆಸನ ಹಾಗೂ ಶಾಂತ ಮತ್ತು ಸ್ವಚ್ಛವಾದ ವಾತಾವರಣ - ಇರುವುದು ಮುಖ್ಯವಾದರೂ, ನಮ್ಮ ಸುತ್ತಲೂ ಅದ್ದೂರಿಯಾದ ವ್ಯವಸ್ಥೆಗಳಿರಬೇಕಾದ ಅಗತ್ಯವಿಲ್ಲ. ಚಿನ್ನದ ಅಲಂಕಾರಿಕ ವಸ್ತುಗಳು, ಧೂಪದ್ರವ್ಯ, ಹಿನ್ನೆಲೆಯಲ್ಲಿ ನ್ಯೂ ಏಜ್ ಸಂಗೀತ ಮುಂತಾದವುಗಳಿಗಾಗಿ ನಾವು ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಮಿಲರೇಪರ ಬಳಿ ಇವೆಲ್ಲವೂ ಇರಲಿಲ್ಲವಾದರೂ, ಅವರು ತಮ್ಮ ಧ್ಯಾನ ಸಾಧನೆಯಲ್ಲಿ ಅತ್ಯಂತ ಯಶಸ್ವಿಯಾಗಿದ್ದರು! ನಾವು ನಮ್ಮ ಧ್ಯಾನದ ಸ್ಥಳವನ್ನು ಸಾಧ್ಯವಾದಷ್ಟು ಸುಂದರವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತೇವೆ, ಆದರೆ ಕೇವಲ ಪ್ರದರ್ಶನಕ್ಕಾಗಿ ಅತಿಯಾಗಿ ಅದ್ದೂರಿಯಾಗಿರಬಾರದು.
ಅಲ್ಲದೆ, ನಾವು ಎಲ್ಲಿಯಾದರೂ ಧ್ಯಾನ ಮಾಡಲು ಸಾಧ್ಯವಾಗಬೇಕು. ನಾವು ರೈಲಿನಲ್ಲಿ ದೀರ್ಘ ಪ್ರಯಾಣ ಕೈಗೊಂಡಾಗ, "ನನ್ನ ಬಳಿ ನೀರಿನ ಪಾತ್ರೆಗಳಿಲ್ಲ, ಧೂಪವನ್ನು ಹಚ್ಚಲು ಸಾಧ್ಯವಿಲ್ಲ, ಸಾಷ್ಟಾಂಗ ನಮಸ್ಕಾರ ಮಾಡಲು ಆಗುವುದಿಲ್ಲ" ಎಂಬ ಕಾರಣಗಳನ್ನು ನೀಡಿ ಧ್ಯಾನ ಮಾಡಲಾಗುವುದಿಲ್ಲ ಎಂದು ಹೇಳಬಾರದು. ವಾಸ್ತವದಲ್ಲಿ, ನಾವು ಸ್ವಲ್ಪ ಪರಿಣತಿಯನ್ನು ಪಡೆದ ನಂತರ ರೈಲಿನಲ್ಲಿ ಅಥವಾ ಸರತಿಯಲ್ಲಿ ನಿಂತಿರುವಾಗ ಹೀಗೆ ಎಲ್ಲಿಯಾದರೂ ಧ್ಯಾನ ಮಾಡಬಹುದು. ನಮ್ಮ ದೈನಂದಿನ ಜೀವನದಲ್ಲಿಯೂ ಸಹ, ಔಪಚಾರಿಕ ಧ್ಯಾನದ ಅವಧಿಗಳ ನಡುವೆ ಇತರರನ್ನು ಪ್ರೀತಿ ಮತ್ತು ಸಹಾನುಭೂತಿಯಿಂದ ಕಾಣಲು ಪ್ರಯತ್ನಿಸಬಹುದು - ಇದೂ ಕೂಡ ಧ್ಯಾನವೇ ಅಲ್ಲವೇ?
ನೆನಪಿರಲಿ, ಧ್ಯಾನದ ಮುಖ್ಯ ಉದ್ದೇಶವೆಂದರೆ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು - ಅವುಗಳನ್ನು ನಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಳ್ಳುವುದು, ಇದರಿಂದಾಗಿ ನಾವು ಅವುಗಳನ್ನು ದೈನಂದಿನ ಜೀವನದಲ್ಲಿ ಬಳಸಬಹುದು. ಆದರೆ ಧ್ಯಾನವು ನಮ್ಮ ದೈನಂದಿನ ಜೀವನದಿಂದ ಸಂಪೂರ್ಣವಾಗಿ ಪ್ರತ್ಯೇಕವಾದಾಗ, ಅದು ಕೇವಲ ಒಂದು ಹವ್ಯಾಸವಾಗುತ್ತದೆ. ವಿಶೇಷವಾಗಿ, ನಮ್ಮ ಧ್ಯಾನವು ವಿಶಿಷ್ಟವಾದ ತಾಂತ್ರಿಕ ದೃಶ್ಯೀಕರಣಗಳನ್ನು ಒಳಗೊಂಡಿದ್ದಾಗ, ಅದು ಸುಲಭವಾಗಿ ಡಿಸ್ನಿಲ್ಯಾಂಡ್ ಪ್ರವಾಸದಂತೆ ಅಥವಾ ನಮ್ಮ ದೈನಂದಿನ ಜೀವನಕ್ಕೆ ಯಾವುದೇ ಸಂಬಂಧವಿಲ್ಲದ ಕಾಲ್ಪನಿಕ ಲೋಕದ ಅನುಭವದಂತೆ ಆಗಬಹುದು. ನಾವು ಆ ಹಾದಿಯಲ್ಲಿ ಸಾಗಿದರೆ, ಮಾನಸಿಕವಾಗಿ ಅಸ್ಥಿರರಾಗುತ್ತೇವೆ ಮತ್ತು ಧ್ಯಾನವು ನಮ್ಮ ದೈನಂದಿನ ಜೀವನದ ಮೇಲೆ ಬಹಳ ಕಡಿಮೆ ಪರಿಣಾಮ ಬೀರುತ್ತದೆ. ನೆನಪಿಡಿ, ಧ್ಯಾನದ ಮೂಲ ಉದ್ದೇಶವೇ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿರುತ್ತದೆ.
ಮತ್ತು ನಾವು ಎಲ್ಲೇ ಇದ್ದರೂ, ಧ್ಯಾನಿಸುವ ಮೊದಲು ನಮ್ಮ ಪ್ರೇರಣೆಯನ್ನು ನಿಗದಿಪಡಿಸಿಕೊಳ್ಳಬೇಕು, ಅದನ್ನು ದೃಢಪಡಿಸಿಕೊಳ್ಳಬೇಕು ಮತ್ತು ಏಕಾಗ್ರತೆಯಿಂದ ಧ್ಯಾನ ಮಾಡುವ ಸಂಕಲ್ಪವನ್ನು ಹೊಂದಿರಬೇಕು. ನಮ್ಮ ಮನಸ್ಸು ಅಲೆದಾಡಿದರೆ, ಅದನ್ನು ಮತ್ತೆ ಧ್ಯಾನದ ಕಡೆಗೆ ತರಬೇಕು. ನಮಗೆ ನಿದ್ದೆ ಬಂದರೆ, ನಾವೇ ಎಚ್ಚೆತ್ತುಕೊಳ್ಳಬೇಕು. ಅಂತಿಮವಾಗಿ, ನಾವು ಗಳಿಸಿದ ಸಕಾರಾತ್ಮಕ ಶಕ್ತಿಯನ್ನು ಅರ್ಪಿಸುವ ಹಂತ ಬರುತ್ತದೆ. ಧ್ಯಾನದ ಮೂಲಕ ನಾವು ಸೃಷ್ಟಿಸಿದ ಸಕಾರಾತ್ಮಕ ಶಕ್ತಿಯನ್ನು ನಾವು ಅರ್ಪಿಸದಿದ್ದರೆ, ನಮ್ಮ ಧ್ಯಾನದ ಪ್ರಯತ್ನಗಳು ಕೇವಲ ನಮ್ಮ ಸಂಸಾರಿಕ (ಲೌಕಿಕ) ಪರಿಸ್ಥಿತಿಗಳನ್ನು ಸುಧಾರಿಸುವುದಕ್ಕೆ ಮಾತ್ರ ಸೀಮಿತವಾಗುತ್ತವೆ. ನಾವು ಆ ಸಕಾರಾತ್ಮಕ ಶಕ್ತಿಯನ್ನು ಜ್ಞಾನೋದಯಕ್ಕಾಗಿ ಮತ್ತು ಎಲ್ಲರ ಒಳಿತಿಗಾಗಿ ಅರ್ಪಿಸುವಂತೆ ಬಯಸಬೇಕು.
ವೈಯಕ್ತಿಕ vs ಸಾಮೂಹಿಕ ಧ್ಯಾನ
ಕೆಲವರು ವೈಯಕ್ತಿಕವಾಗಿ ಧ್ಯಾನ ಮಾಡುತ್ತಾರೆ. ವಾಸ್ತವದಲ್ಲಿ, ಟಿಬೆಟಿಯನ್ನರು ಹೆಚ್ಚಾಗಿ ವೈಯಕ್ತಿಕ ಧ್ಯಾನವನ್ನೇ ಮಾಡುತ್ತಾರೆ; ಅವರು ಸಾಮೂಹಿಕ ಧ್ಯಾನವನ್ನು ಮಾಡುವುದಿಲ್ಲ. ಆದಾಗ್ಯೂ ಮಠಗಳಲ್ಲಿ ಭಿಕ್ಷುಗಳು ಮತ್ತು ಭಿಕ್ಷುಣಿಯರು ಒಟ್ಟಾಗಿ ಪ್ರಾರ್ಥನೆಗಳು ಮತ್ತು ಧಾರ್ಮಿಕ ಪಠ್ಯಗಳನ್ನು ಪಠಿಸುತ್ತಾರೆ. ಆದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ನಾವು ಸಾಮೂಹಿಕ ಧ್ಯಾನದ ಪದ್ಧತಿಯನ್ನು ಬೆಳೆಸಿಕೊಂಡಿದ್ದೇವೆ. ಹೆಚ್ಚಿನ ಜನರಿಗೆ, ಸಾಮೂಹಿಕ ಧ್ಯಾನದ ಅತಿದೊಡ್ಡ ಪ್ರಯೋಜನವೆಂದರೆ ಶಿಸ್ತು. ನಾವು ಒಬ್ಬರೇ ಇದ್ದಾಗ, ಸುಮ್ಮನೆ ಕುಳಿತು ಧ್ಯಾನ ಮಾಡುವ ಶಿಸ್ತು ನಮ್ಮಲ್ಲಿರುವುದಿಲ್ಲ. ಧ್ಯಾನದ ಅವಧಿಯನ್ನು ಮುಗಿಸಲು ನಾವು ನಿರ್ಧರಿಸಿದ್ದ ಸಮಯಕ್ಕಿಂತ ಬಹಳ ಮುಂಚೆಯೇ ನಾವು ಎದ್ದುಬಿಡುತ್ತೇವೆ; ಆದರೆ ನಮ್ಮ ಸುತ್ತಲೂ ಇತರ ಜನರಿದ್ದಾಗ, ನಮ್ಮಲ್ಲಿ ಹೆಚ್ಚಿನ ಶಿಸ್ತು ಇರುತ್ತದೆ. ಇತರರ ಮುಂದೆ ಅಸಹಜವಾಗಿ ಚಲಿಸಲು ಅಥವಾ ಚಡಪಡಿಸಲು ಮುಜುಗರವಾಗುವುದರಿಂದ, ನಾವು ಅಂತಹ ಚಟುವಟಿಕೆಗಳನ್ನು ಕಡಿಮೆ ಮಾಡುತ್ತೇವೆ.
ಕೆಲವರಿಗೆ ಸಾಮೂಹಿಕ ಧ್ಯಾನವೆಂದರೆ ಆಗುವುದಿಲ್ಲ, ಇದು ಅತ್ಯಂತ ಕಿರಿಕಿರಿ ಉಂಟುಮಾಡುವ ವಿಷಯವಾಗಿರಬಹುದು, ಏಕೆಂದರೆ ಇತರ ಜನರ ಉಪಸ್ಥಿತಿಯಿಂದಾಗಿ ಗಮನವು ಬೇರೆಡೆಗೆ ಸರಿಯುತ್ತದೆ. ವಿಶೇಷವಾಗಿ ಯಾರಾದರೂ ಕೆಮ್ಮುತ್ತಿದ್ದರೆ ಅಥವಾ ಚಡಪಡಿಸುತ್ತಿದ್ದರೆ, ಅದು ಧ್ಯಾನಕ್ಕೆ ಅಡ್ಡಿಯಾಗುತ್ತದೆ ಎಂದು ಭಾವಿಸಿ, ಅನೇಕರು ಏಕಾಂಗಿಯಾಗಿ ಧ್ಯಾನ ಮಾಡಲು ಬಯಸುತ್ತಾರೆ. ಅದರಲ್ಲೂ, ಗುಂಪಿನಲ್ಲಿ ಎಲ್ಲರೂ ಒಟ್ಟಾಗಿ ಏನನ್ನಾದರೂ ಜೋರಾಗಿ ಪಠಿಸುತ್ತಿರುವಾಗ, ಕೆಲವರು ನಾವು ಸಾಮಾನ್ಯವಾಗಿ ಮಾಡುವ ವೇಗಕ್ಕಿಂತ ತುಂಬಾ ನಿಧಾನವಾಗಿ ಪಠಿಸುತ್ತಿದ್ದರೆ, ನಮಗೆ ತೀವ್ರ ಬೇಸರ ಮತ್ತು ಕೋಪ ಉಂಟಾಗುತ್ತದೆ. ಹಾಗೆಯೇ, ಅದು ತುಂಬಾ ವೇಗವಾಗಿ ನಡೆದರೂ ನಮಗೆ ಕೋಪ ಬರುತ್ತದೆ.
ವೈಯಕ್ತಿಕ ಧ್ಯಾನ ಅಥವಾ ಗುಂಪು ಧ್ಯಾನ - ಇವುಗಳಲ್ಲಿ ಯಾವುದು ನಮಗೆ ಸೂಕ್ತ ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬೇಕು. ಆದಾಗ್ಯೂ, ಸಣ್ಣ ಗುಂಪಿನಲ್ಲಿ (ಅಂದರೆ ಒಂದೆರಡು ಜನರೊಂದಿಗೆ) ಧ್ಯಾನ ಮಾಡುವಾಗ ನಾನು ಒಂದು ಕುತೂಹಲಕಾರಿ ವಿಷಯವನ್ನು ಗಮನಿಸಿದ್ದೇನೆ. ಇತರರೊಂದಿಗೆ ನಿಕಟ ಬಾಂಧವ್ಯ ಮತ್ತು ಸಂಪರ್ಕವಿದ್ದಾಗ ಹಾಗೂ ಅವರೊಂದಿಗೆ ಸಾಮರಸ್ಯದ ಭಾವನೆ ಮೂಡಿದಾಗ ಧ್ಯಾನವು ಅತ್ಯಂತ ಯಶಸ್ವಿಯಾಗಬಹುದು. ಆಗ ನಿಮ್ಮ ಶಕ್ತಿಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ. ಅವರೊಂದಿಗೆ ಧ್ಯಾನಿಸುವುದರಿಂದ ನಿಮಗೆ ಹೆಚ್ಚಿನ ಶಕ್ತಿ ಮತ್ತು ಸ್ಪಷ್ಟತೆ ದೊರೆಯುತ್ತದೆ. ಆದರೆ ಸಣ್ಣ ಗುಂಪಿನಲ್ಲಿ ಧ್ಯಾನ ಮಾಡುವ ವ್ಯಕ್ತಿಗಳ ಶಕ್ತಿಗಳು ಪರಸ್ಪರ ಸಂಘರ್ಷಕ್ಕೊಳಗಾದಾಗ, ಅದರ ಪರಿಣಾಮವು ತದ್ವಿರುದ್ಧವಾಗಿರುತ್ತದೆ: ಅದು ಕಿರಿಕಿರಿಯನ್ನು ಉಂಟುಮಾಡುತ್ತದೆ ಮತ್ತು ಮನಸ್ಸನ್ನು ಮಂದಗೊಳಿಸುತ್ತದೆ. ಆದ್ದರಿಂದ, ನೀವು ಇತರರೊಂದಿಗೆ ಧ್ಯಾನ ಮಾಡುವುದಾದರೆ, ಯಾರೊಂದಿಗೆ ಧ್ಯಾನ ಮಾಡುತ್ತಿದ್ದೀರಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಪಟ್ಟುಬಿಡದ ಪ್ರಯತ್ನದ ಮಹತ್ವ
ಕೊನೆಯದಾಗಿ ನೀಡುವ ಸಲಹೆಯು ಅತ್ಯಂತ ಪ್ರಮುಖವಾದುದು; ಸಂಸಾರದ ಸ್ವಭಾವವೇ ಏಳು-ಬೀಳುಗಳಿಂದ ಕೂಡಿದೆ. ಹಾಗಾಗಿ, ಸಹಜವಾಗಿಯೇ ನಮ್ಮ ಧ್ಯಾನವೂ ಏರಿಳಿತಗಳಿಗೆ ಒಳಗಾಗುತ್ತದೆ. ಇದು ಪ್ರತಿದಿನವೂ ಸುಧಾರಿಸುತ್ತಾ ಹೋಗುವ ಸರಳವಾದ ನೇರ ಪ್ರಕ್ರಿಯೆಯಾಗಿರುವುದಿಲ್ಲ. ಕೆಲವು ದಿನಗಳಲ್ಲಿ ಧ್ಯಾನ ಚೆನ್ನಾಗಿ ನಡೆಯಬಹುದು, ಮತ್ತೆ ಕೆಲವು ದಿನಗಳಲ್ಲಿ ಚೆನ್ನಾಗಿ ನಡೆಯದಿರಬಹುದು. ಕೆಲವು ದಿನಗಳಲ್ಲಿ ಧ್ಯಾನ ಮಾಡಲು ಮನಸ್ಸಾಗಬಹುದು, ಇನ್ನು ಕೆಲವು ದಿನಗಳಲ್ಲಿ ಧ್ಯಾನ ಮಾಡುವ ಆಸಕ್ತಿಯೇ ಇರುವುದಿಲ್ಲ. ಇದು ಸಂಪೂರ್ಣವಾಗಿ ಸಹಜ ಮತ್ತು ಸಾಮಾನ್ಯ - ಇದೇ ಸಂಸಾರದ ಸ್ವಭಾವ. ಮುಖ್ಯವಾದ ವಿಷಯವೇನೆಂದರೆ, ನಿಮಗೆ ಏನೇ ಅನಿಸಿದರೂ, ನೀವು ಪಟ್ಟುಬಿಡದೆ ಪ್ರಯತ್ನವನ್ನು ಮುಂದುವರಿಸಬೇಕು. "ನನಗೆ ಧ್ಯಾನ ಮಾಡಲು ಮನಸ್ಸಾಗುತ್ತಿಲ್ಲ" ಎಂಬ ಆಲೋಚನೆ ಬಂದರೂ ಪರವಾಗಿಲ್ಲ - ಆದರೂ ಧ್ಯಾನ ಮಾಡಿ. ನಿರಂತರತೆಯನ್ನು ಕಾಪಾಡಿಕೊಳ್ಳಿ; ಕೇವಲ ಎರಡು ಅಥವಾ ಮೂರು ನಿಮಿಷಗಳಾದರೂ ಸರಿ, ಪ್ರತಿದಿನವೂ ಧ್ಯಾನ ಮಾಡಿ. ಆಧ್ಯಾತ್ಮಿಕ ಪಥದಲ್ಲಿ ಸ್ಥಿರತೆಯನ್ನು ಪಡೆಯಲು ಆ ನಿರಂತರತೆಯು ಅತ್ಯಂತ ಮುಖ್ಯವಾಗಿದೆ.
ಅಲ್ಲದೆ, ಧ್ಯಾನದ ಅವಧಿಯನ್ನು ಅತಿಯಾಗಿ ದೀರ್ಘಗೊಳಿಸಬೇಡಿ, ವಿಶೇಷವಾಗಿ ಆರಂಭದಲ್ಲಿ. ಮೂರರಿಂದ ಐದು ನಿಮಿಷಗಳು ಸಾಕು. ಇಲ್ಲದಿದ್ದರೆ, "ಇದು ಯಾವಾಗ ಮುಗಿಯುತ್ತದೋ" ಎಂದು ನೀವು ಯೋಚಿಸುತ್ತೀರಿ ಮತ್ತು ನಂತರ ಮತ್ತೆ ಧ್ಯಾನಕ್ಕೆ ಮರಳಲು ಇಷ್ಟಪಡುವುದಿಲ್ಲ. ಧ್ಯಾನವನ್ನು ಮುಂದುವರಿಸಲು ಇನ್ನೂ ಮನಸ್ಸಿದ್ದಾಗಲೇ ಅದನ್ನು ಮುಕ್ತಾಯಗೊಳಿಸಿದರೆ, ಮತ್ತೆ ಅದಕ್ಕೆ ಮರಳಲು ನಿಮಗೆ ಸಂತೋಷವಾಗುತ್ತದೆ. ಇದು ಒಬ್ಬ ವ್ಯಕ್ತಿಯೊಂದಿಗೆ ಸಮಯ ಕಳೆಯುವಂತೆಯೇ ಇರುತ್ತದೆ; ಅವರೊಂದಿಗೆ ಇನ್ನೂ ಸ್ವಲ್ಪ ಸಮಯ ಕಳೆಯಲು ಬಯಸುತ್ತಿರುವಾಗಲೇ ಬೇರ್ಪಟ್ಟರೆ, ಅವರನ್ನು ಮತ್ತೆ ಭೇಟಿಯಾಗಲು ನೀವು ಇಷ್ಟಪಡುತ್ತೀರಿ. ಆದರೆ ಅವರು ಅತಿಯಾದ ಸಮಯವನ್ನು ನಿಮ್ಮೊಂದಿಗೆ ಕಳೆದರೆ, ನೀವು ಅವರಿಂದ ಬೇಸತ್ತು ಅವರು ಯಾವಾಗ ಹೋಗುತ್ತಾರೋ ಎಂದು ಬಯಸುವಂತಾದರೆ, ಅವರನ್ನು ಮತ್ತೆ ನೋಡಲು ನಿಮಗೆ ಅಷ್ಟೊಂದು ಸಂತೋಷವಾಗುವುದಿಲ್ಲ.
ಅಂತಿಮವಾಗಿ, ಧ್ಯಾನದ ಅವಧಿಯನ್ನು ಕ್ರಮೇಣ ಹೆಚ್ಚಿಸುವುದು ಮುಖ್ಯ. ಹೊಂದಿಕೊಳ್ಳುವ ಸ್ವಭಾವವನ್ನು ರೂಢಿಸಿಕೊಳ್ಳಿ – ಹೊಂದಿಕೊಳ್ಳುವ ಗುಣ ಬಹಳ ಮುಖ್ಯ. ನಾನು ಹೇಳಿದಂತೆ: ಒಂದು ದಿನವೂ ಧ್ಯಾನವನ್ನು ತಪ್ಪಿಸಬೇಡಿ. ಪ್ರತಿದಿನ ಧ್ಯಾನ ಮಾಡುವುದರಿಂದ ನೀವು ಸ್ಥಿರತೆ, ವಿಶ್ವಾಸಾರ್ಹತೆ ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತೀರಿ. ಆದರೆ ಹೊಂದಿಕೊಳ್ಳುವ ಮನಸ್ಥಿತಿ ಇರಲಿ: ಕೆಲವೊಮ್ಮೆ ನೀವು ಬಯಸಿದಂತೆ ಪೂರ್ಣ ಪ್ರಮಾಣದ ಧ್ಯಾನವನ್ನು ಮಾಡಬಹುದು, ಮತ್ತು ಸಮಯವಿಲ್ಲದಿದ್ದಾಗ ಅದರ ಸಂಕ್ಷಿಪ್ತ ರೂಪವನ್ನು ಮಾಡಬಹುದು. ಆದರೆ ಕನಿಷ್ಠಪಕ್ಷ ಪ್ರತಿದಿನ ಏನನ್ನಾದರೂ ಮಾಡಿ. ಅತಿಯಾದ ಕಟ್ಟಾಭಿಮಾನಿಯಾಗಬೇಡಿ; ನಿಮ್ಮ ಮೇಲೆ ಅತಿಯಾದ ಒತ್ತಡ ಹೇರಿಕೊಳ್ಳಬೇಡಿ. ನನ್ನ ನೆಚ್ಚಿನ ಝೆನ್ ಕೋನ್ ಹೀಗಿದೆ: "ಸಾವು ಯಾವುದೇ ಕ್ಷಣದಲ್ಲಿ ಬರಬಹುದು. ಆರಾಮವಾಗಿರಿ (ರಿಲ್ಯಾಕ್ಸ್ ಆಗಿರಿ)!"